ಹಾರಿತೇಕೆ ಬಿಳಿ ಹಕ್ಕಿ?


ಹಕ್ಕಿ ಹಾರುತಿದೆ ಗರಿ ಬಿಚ್ಚಿ
ಶಾಂತಿ ಸಂಕೇತದ ಬಿಳಿ ಹಕ್ಕಿ
ಬುವಿಯ ಬಂಧ ತೊರೆದು
ಇರದಿರಲಿಲ್ಲಿ ಪ್ರೀತಿ ವಿಶ್ವಾಸ

ಆ ಧರ್ಮ ಈಧರ್ಮ ವೆನುತ
ಹೊಡೆತ ಬಡಿತವು ಇಲ್ಲಿ ನಿತ್ಯ
ಸ್ವಾರ್ಥ ಭೋಗ ಲಾಲಸೆಗಳಲಿ
ಶಾಂತಿಗೆ ನೆಲೆಯಿಲ್ಲವಿದು ಸತ್ಯ.

ರಕ್ತಪಿಪಾಸುಗಳಿವರು ನೆತ್ತರ
ಹೊಳೆಹರಿದರೂ ತೀರದ ದಾಹ
ಅಕ್ಕರೆಯ ಅಂತಃಕರಣ ಒಳಗಿಲ್ಲ
ಬಡಜೀವಗಳಿಗೆ ಬೆಲೆಯೇ ಇಲ್ಲ.

ಮಾಡುವರು ಹತ್ತಾರು ಹೋರಾಟ
ಇದು ಬರಿದೆ ರಾಜಕೀಯ ಗುದ್ದಾಟ
ಅಧಿಕಾರ ಮದತುಂಬಿದ ಹಾರಾಟ
ಸಿಗದ ಸೌಲಭ್ಯಕೆ ರೈತರ ಗೋಳಾಟ.

ಒಳಗೊಳಗೆ ಕಶ್ಮಲವ ತುಂಬುತ
ನಡೆವರು ದುರ್ಗಂಧವ ಬೀರುತ್ತ
ಸ್ನೇಹಸೌಹಾರ್ದ ಎಂದುಸುರುತ್ತ
ಮಾಡುವರು ಕಪಟ ಹೀನ ಕೃತ್ಯ.

ಆಳುವವರ ಮನದಿ ಮಮತೆ
ಆತ್ಮಾರ್ಥತೆಯು ಇಲ್ಲದಿರಲು
ಹಾರಿಹೋಗುತಿದೆ ಬಿಳಿ ಹಕ್ಕಿ
ನೆಲೆಸಲಾರದೆ ಕಪಟಮನದೊಳಗೆ.

                             -ಅನ್ನಪೂರ್ಣ, ಬೆಜಪ್ಪೆ

Photo Credit: thomasschoenberger.com

Author image
About the Author
ಹೆಸರು: ಶ್ರೀಮತಿ ಅನ್ನಪೂರ್ಣ.
ಕಿದೂರು ಸಮೀಪದ ಬೆಜಪ್ಪೆ ನಿವಾಸಿಯಾದ ಶ್ರೀಮತಿ ಅನ್ನಪೂರ್ಣ ಇವರು ಸಾಹಿತ್ಯ ಪ್ರಿಯರಾಗಿದ್ದು ಬರವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹವ್ಯಾಸಿ ಬರಹಗಾರರಾಗಿ ಅನೇಕ ಕವಿತೆಗಳನ್ನು ಬರೆದಿದ್ದು ಅವರ ಬರಹಗಳನ್ನು ನಮ್ಮ ಜಾಲದಲ್ಲಿ ಓದಬಹುದು.

Please share and support me

1 comment:

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.