ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಉಸಿರಾಡುವ ಗಾಳಿಯಂತೆ ಕಲೆತುಕೊಂಡಿರುತ್ತದೆ. ಅದು ಯಾವುದೇ ಕ್ಷೇತ್ರದಲ್ಲಿ ಆಗಿರಬಹುದು. ಆ ಪ್ರತಿಭೆ ಬೆಳಕಿಗೆ ಬರಬೇಕಾದರೆ ಆ ವ್ಯಕ್ತಿಯ ಪರಿಶ್ರಮ ಎಷ್ಟು ಮುಖ್ಯವಾಗುತ್ತದೆಯೋ ಅಷ್ಟೇ ಮುಖ್ಯವಾಗಿ ಬೇಕಾದದ್ದು ಹೆತ್ತವರ ಪ್ರೋತ್ಸಾಹ ಹಾಗೂ ಪ್ರತಿಭೆಗೆ ತಕ್ಕುದಾದ ವೇದಿಕೆಗಳ ಹಂದರ. ಶ್ರದ್ಧೆ, ಏಕಾಗ್ರತೆ, ಸಾಧನೆಯ ತವಕ, ಅದೇ ರೀತಿ ಹಿಂದೊಬ್ಬ ಗುರು-ಮುಂದೊಂದು ಗುರಿ; ಇವಿಷ್ಟು ನಿಶ್ಚಲವಾಗಿ ನಮ್ಮೊಳಗೆ ಮನೆಮಾಡಿ ನಿಂತದ್ದೇ ಆದಲ್ಲಿ ಆ ಸಾಧನೆಗೆ ಪೂರಕವಾದ ಪ್ರತಿಫಲದ ಮಳೆ ಖಚಿತವೇ ಸರಿ. ಈ ನಿಟ್ಟಿನಲ್ಲಿ ಕಾಣುವಾಗ ನಮ್ಮ ಕಣ್ಣ ಮುಂದೆ ಬರುವ ಒಬ್ಬಾಕೆ ಯುವಪ್ರತಿಭೆ ಕುಮಾರಿ ಜ್ಞಾನ ಐತಾಳ್. 05 ಡಿಸೆಂಬರ್ 2000 ದಂದು ಜನಿಸಿದ ಈಕೆ ಮಂಗಳೂರಿನ ಕೊಟ್ಟಾರ ಚೌಕಿ ನಿವಾಸಿಗಳಾದ ಶ್ರೀಮತಿ ಚಿತ್ರಾ ಎನ್ ಐತಾಳ್ ಹಾಗೂ ಶ್ರೀ ನಾಗೇಂದ್ರ ಐತಾಳ್ ಇವರ ಮುದ್ದಿನ ಸುಪುತ್ರಿ. ಎಳವೆಯಿಂದಲೇ ಈಕೆಯಲ್ಲಿ ನೃತ್ಯದ ಬಗೆಗೆ ಹೆಚ್ಚಿನದಾದಂತಹ ಆಸಕ್ತಿ ಬೆಳೆದಿದ್ದು ತಂದೆ ನಾಗೇಂದ್ರ ಐತಾಳರ ಸಂಪೂರ್ಣ ಬೆಂಬಲ ಆಕೆಗೆ ದೊರೆತ ಕಾರಣ ಇಂದು ಆಕೆಯ ನೃತ್ಯದ ಕಂಪು ಜನಮಾನಸದಲ್ಲಿ ಹಸಿರಾಗಿ ನಿಂತಿದೆ. ಸಣ್ಣ ವಯಸ್ಸಿನಲ್ಲಿಯೇ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡ ಜ್ಞಾನ ಮುಂದೆ ಹೆಜ್ಜೆ ಇಟ್ಟದ್ದು ರಿಯಾಲಿಟಿ ಶೋಗಳ ಪ್ರಪಂಚಕ್ಕೆ. 2008ರಲ್ಲಿ ಝೀಃ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕುಣಿಯೋಣು ಬಾರ" ನೃತ್ಯ ಸ್ಪರ್ಧೆಯಲ್ಲಿ ಸಮಸ್ತ ಪ್ರೇಕ್ಷಕರ ಹೃದಯವನ್ನು ಗೆದ್ದು ಪ್ರಥಮ ಸ್ಥಾನದೊಂದಿಗೆ ಕುಣಿತದ ಛಾಪನ್ನು ಮೂಡಿಸಿದ ಈಕೆಗೆ ಅದು ಅಪಾರ ಅಭಿಮಾನಿ ವರ್ಗವನ್ನು ಅದಾಗಲೇ ಸೃಷ್ಠಿಸಿ ಕೊಟ್ಟಿತ್ತು. ತದನಂತರ ಅದೇ ವಾಹಿನಿಯಲ್ಲಿ ಸಂಪನ್ನಗೊಂಡ "ಮಹಾಗುರು-ಸೂಪರ್ ಶಿಷ್ಯ" ಸ್ಪರ್ಧೆಯಲ್ಲೂ ಭಾಗವಹಿಸಿ ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡಳು. ಅದೇ ರೀತಿ ರಾಷ್ಟ್ರಮಟ್ಟದ ರಿಯಾಲಿಟಿ ಶೋಗಳಾದ ಝೀಃ ಟಿವಿ ಯ " DID Little Masters" ಹಾಗೂ ಸ್ಟಾರ್ ಪ್ಲಸ್ ನ "India's Dancing Super Star" ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಹೆಜ್ಜೆ ಗುರುತನ್ನು ನವಿರಾಗಿ ಮೂಡಿಸಿದ್ದಾಳೆ. ಜ್ಞಾನ ಎಂಬುದು ಈಗ ನೃತ್ಯಕ್ಷೇತ್ರದ ಒಂದು ಹಸಿರಾದ ಹೆಸರಾಗಿ ನಿಂತಿದೆ ಎಂದರೆ ಆಕೆಯ ಸಾಧನೆಯ ಮೆಟ್ಟಿಲುಗಳ ಪ್ರಬಲತೆ, ಶ್ರದ್ಧೆ ಹಾಗೂ ಪರಿಶ್ರಮವೇ ಕಾರಣ ಎಂದರೆ ತಪ್ಪಾಗಲಾರದು.
ಜ್ಞಾನಾಳ ನೃತ್ಯ ಕ್ಷೇತ್ರದಲ್ಲಿ ಗುರುವಾಗಿ ಆಕೆಯನ್ನು ರಂಗದಲ್ಲಿ ಬೆಳೆಸುತ್ತಿರುವವರು ಹಿರಿಯ ನೃತ್ಯ ಗುರುಗಳಾದ ಶ್ರೀ ಬಾಲಕೃಷ್ಣ ಮಂಜೇಶ್ವರ ಇವರು. ಮಂಜೇಶ್ವರದ ನಾಟ್ಯನಿಲಯಂ ಸಂಸ್ಥೆಯ ವಿದ್ಯಾರ್ಥಿಯಾದ ಜ್ಞಾನಾಳಿಗೆ ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಜಾನಪದ ನೃತ್ಯ, ಪಾಶ್ಚಾತ್ಯ ಶೈಲಿಯ ನೃತ್ಯ ಮೊದಲಾದ ನೃತ್ಯಪ್ರಕಾರಗಳು ಪಾದದೊಳಗೇ ಕಲೆತುಕೊಂಡಿದೆ. ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ವಿಭಾಗಗಳಲ್ಲೂ ಈಕೆಯ ಆಸಕ್ತಿಯ ನಡೆ ಮೆಚ್ಚುವಂಥದ್ದು. ಇದುವರೆಗೆ ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳೊಂದಿಗೆ ಸಾವಿರಕ್ಕೂ ಹೆಚ್ಚಿನ ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಈಕೆ ಬೆಂಗಳೂರಿನ ಡಿ.ಜೆ ಸ್ಟೂಡಿಯೋ ಹಮ್ಮಿಕೊಂಡಿದ್ದ "ಇಂಪಲ್ - 2012" ನೃತ್ಯಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ. ದೂರದರ್ಶನ, ರೇಡಿಯೋಗಳಲ್ಲಿ ತನ್ನ ಕಾರ್ಯಕ್ರಮವನ್ನು ನೀಡಿದ ಈಕೆಯದು ಬಹು ನಯವಾದ ಮನಸ್ಸು. "ನಾನು ಈಗಷ್ಟೇ ನೃತ್ಯಕ್ಷೇತ್ರದಲ್ಲಿ ಚಿಗುರು. ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ. ಎಲ್ಲರ ಪ್ರೋತ್ಸಾಹ, ತಂದೆ-ತಾಯಿಯರ ಹಾಗೂ ಗುರುಗಳ ಪ್ರೀತಿ ಆಶೀರ್ವಾದಗಳು ನನ್ನ ಜೊತೆ ಇರುವಾಗ ಸಾಧಿಸಬೇಕು ಎಂಬ ಛಲವಿದೆ..." ಎಂದು ನುಡಿಯುವ ಜ್ಞಾನ ಈ ಮಾತುಗಳಿಂದಲೇ ತನ್ನ ಮನಸ್ಸು ಯಾವ ರೀತಿ ವಿನಯಪೂರ್ವಕವಾದುದು ಎಂಬುದನ್ನು ಸಮಾಜಮುಖಕ್ಕೆ ತೋರಿಸಿಕೊಡುತ್ತಾಳೆ. ಈ ಮಾತುಗಳನ್ನು ಸ್ವತಃ ಆಕೆಯೇ ನನ್ನ ಬಳಿಯಲ್ಲಿ ಹೇಳಿಕೊಂಡುದರಿಂದ ಬಹಳ ಹೆಮ್ಮೆಯಿಂದ ಇಲ್ಲಿ ಪದಜೋಡಿಸುತ್ತಿದ್ದೇನೆ.
ಇನ್ನು ಈಕೆಯ ವಿದ್ಯಾಭ್ಯಾಸದ ಕುರಿತು ಹೇಳುವುದಾದರೆ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಓದಿನಲ್ಲೂ ತಾನು ಮುಂದಿದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದ್ದಾಳೆ. ತನ್ನ ಪ್ರಾಥಮಿಕ ಹಂತದ ಶಿಕ್ಷಣವನ್ನು ಮಂಗಳೂರಿನ ಕೆನರಾ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪೂರ್ಣಗೊಳಿಸಿ, ಪ್ರೌಢ ಶಿಕ್ಷಣವನ್ನು ಕೆನರಾ ಸಿ.ಬಿ.ಎಸ್.ಇ ಪ್ರೌಢಶಾಲೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣಳಾಗಿದ್ದಾಳೆ. ಪ್ರಸಕ್ತ ವರ್ಷ 2017ರಲ್ಲಿ ಈಕೆ ಕೇಂದ್ರ ಪ್ರೌಢಶಿಕ್ಷಣ ಮಂಡಳಿ(C.B.S.E)ಯ 10ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 10ಕ್ಕೆ 10 ಸಿ.ಜಿ.ಪಿ.ಎ ಅಂಕಗಳನ್ನು ಗಳಿಸುವುದರ ಮುಖೇನ ಪಠ್ಯೇತರ ಚಟುವಟಿಕೆಗಳಲ್ಲಿ ಮಾತ್ರವಲ್ಲ, ಪಠ್ಯಪೂರಕ ಚಟುವಟಿಕೆಗಳಲ್ಲೂ ತಾನು ಒಳ್ಳೆಯ ರೀತಿಯ ಕಾರ್ಯವನ್ನು ಎಸಗಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಇದೀಗ ಈಕೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯ (PCMS) ವನ್ನು ಅಭ್ಯಸಿಸುತ್ತಿದ್ದು ಕಲಿಕೆಯೊಂದಿಗೆ ನಿರಂತರ ಕಲಾಸೇವೆಯಲ್ಲಿ ತನ್ನನ್ನು ತಾನು ಬಹು ಉತ್ಸಾಹದಿಂದ ತೊಡಗಿಸಿಕೊಂಡಿದ್ದಾಳೆ.
- 2008ರ ಕುಣಿಯೋಣು ಬಾರ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ.
- 2007ರಲ್ಲಿ ಬೆಂಗಳೂರಿನಲ್ಲಿ "ವಿಶ್ವಕಲಾರತ್ನ" ಪ್ರಶಸ್ತಿ.
- 2009ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ.
- 2010ರಲ್ಲಿ ಎಂ.ಎಂ.ಸಿ.ಎ ಯಿಂದ ಕೊಡಮಾಡಲ್ಪಟ್ಟ "ಕಲಾರತ್ನ" ಪ್ರಶಸ್ತಿ.
- 2008, 2009, 2010 ರಲ್ಲಿ ಎಂ.ಎಂ.ಸಿ.ಎ ಇಂದ ಸತತ ಮೂರು ಬಾರಿ "ಉತ್ತಮ ನೃತ್ಯಗಾರ್ತಿ" ಪ್ರಶಸ್ತಿ.
- 2010 ಹಾಗೂ 2012 ರಲ್ಲಿ ಮಂಗಳೂರು ರೋಟರಿ ಕ್ಲಬ್ ವತಿಯಿಂದ "ಯುವ ಸಾಧಕಿ" ಪ್ರಶಸ್ತಿ.
- 2011ರಲ್ಲಿ "ನೃತ್ಯರತ್ನ" ಪ್ರಶಸ್ತಿ.
- 2011ರಲ್ಲಿ ಕರ್ನಾಟಕ ಬಾಲಭವನ ಸೊಸೈಟಿಯಿಂದ ಕೊಡಮಾಡಿದ "ಬಾಲ ಪ್ರತಿಭಾಶ್ರೀ" ಪ್ರಶಸ್ತಿ.
ಪರಿಶ್ರಮವೊಂದೇ ಸಾಧನೆಯ ಶಿಖರವನ್ನು ಏರಲು ಸಹಕಾರಿಯಾದ ಮಾರ್ಗವಾಗಿದೆ. ಕೇವಲ ಕ್ಷಣಿಕ ಕಾಲದಲ್ಲಿ ಸಾಧನೆ ಎಂಬುದು ವ್ಯಕ್ತಿಯ ಮುಡಿಗೇರುವುದಿಲ್ಲ. ಅದಕ್ಕೆ ಧೀರ್ಘ ಕಾಲದ ತಪಸ್ಸು ಬೇಕಾಗುತ್ತದೆ. ಆ ರೀತಿ ತಪಸ್ಸು ಮಾಡಲು ಅಷ್ಟೇ ಮುಖ್ಯವಾಗಿ ಏಕಾಗ್ರತೆ ಎಂಬುದು ಬೇಕಾಗುತ್ತದೆ. ಆ ಏಕಾಗ್ರತೆ ಎಂಬುದನ್ನು ಪಡೆಯಲು ಶ್ರದ್ಧೆ ಎಂಬುದು ಬೇಕಾಗುತ್ತದೆ. ಈ ಶ್ರದ್ಧೆ ನಮ್ಮಲ್ಲಿ ಮೂಡಬೇಕಾದರೆ ನಮ್ಮ ಮನಸ್ಸು ಆ ದಾರಿಯಲ್ಲಿ ನಡೆಯಬೇಕಾಗುತ್ತದೆ. ಮನಸ್ಸು ಆ ದಾರಿಯಲ್ಲಿ ನಡೆಯಬೇಕಾದರೆ ಇಂದ್ರಿಯಗಳನ್ನು ತನ್ನೊಂದಿಗೆ ನಡೆಸಬೇಕಾಗುತ್ತದೆ. ಇಷ್ಟೆಲ್ಲಾ ಹಂತಗಳನ್ನು ದಾಟಿದ ಒಬ್ಬ ಸಾಧಕನ ಮುಂದೆ ಇನ್ನೂ ಅನಂತವಾದಂತಹ ವ್ಯಾಪ್ತಿ ಕಣ್ಣೆದುರು ತೋರುತ್ತದೆ ಎಂದಾದರೆ ನಾವು ಅರಿಯಬೇಕಾದುದು ಇಷ್ಟೇ- 'ಸಾಧನೆ ಎಂಬುದು ನಿತ್ಯ ನಿರಂತರ. ಎಷ್ಟು ಸಾಧಿಸಿದರೂ ಸಾಧಿಸದೇ ಉಳಿವುದು ಅನಂತಕ್ಕಿಂತಲೂ ಮಿಗಲು'. ಆ ದಾರಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೂ ಮನುಷ್ಯರಾದ ನಾವುಗಳು ಆ ಬಗೆಗೆ ಹೆಮ್ಮೆಯಿರಿಸಬೇಕು. ಇದೇ ರೀತಿ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ನಮ್ಮ ಕರಾವಳಿಯ ಕೂಸು ಕುಮಾರಿ ಜ್ಞಾನ ಐತಾಳ್... ಈಕೆಯ ಬಗೆಗೆ ಒಂದಿಷ್ಟನ್ನು ಬರೆಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆಕೆಯ ವಿವಿಧ ನೃತ್ಯ ಕಾರ್ಯಕ್ರಮಗಳ ಚಿತ್ರಗಳನ್ನು ಓದುಗರು ಇಲ್ಲಿ ವೀಕ್ಷಿಸಬಹುದು. ಅಲ್ಲದೇ ಆಕೆಯ ಕೆಲವೊಂದು ನೃತ್ಯಪ್ರದರ್ಶನಗಳ ವೀಡಿಯೋ ತುಣುಕುಗಳ ಕೊಂಡಿಯನ್ನು ಇಲ್ಲಿ ಹಾಕಲಾಗಿದ್ದು ಕಲಾಸಕ್ತರು ನೋಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ. ಪ್ರತಿಭಾ ಕುವರಿಯನ್ನು ಪ್ರೋತ್ಸಾಹಿಸಿ ಎಂಬುದು ಈ ಲೇಖನದ ಆಶಯ.
'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬ ಗಾದೆ ಮಾತಿನಂತೆ ಈಕೆಯ ಬೆಳವಣಿಗೆಯ ಗತಿ ಇದೇ ರೀತಿ ಸಾಗುತ್ತಾ ಇರಲಿ ಎಂಬುವುದು ನಮ್ಮ ಆಶಯ. ಈಗಷ್ಟೇ ಪ್ರೌಢ ಶಿಕ್ಷಣವನ್ನು ಪೂರೈಸಿ ಪದವಿ ಪೂರ್ವ ಶಿಕ್ಷಣಕ್ಕೆ ಕಾಲಿರಿಸಿದ ಈಕೆಗೆ ಇನ್ನೂ ಅನೇಕ ಅವಕಾಶಗಳು ಒದಗಿ ಬಂದು ಮುಂದೆ ನಮ್ಮ ನಾಡಿನ ಕೀರ್ತಿಯನ್ನು ಬೆಳಗುವಲ್ಲಿ ಈಕೆಯ ಪಾತ್ರ ಮಹತ್ವದ್ದಾಗಲಿ ಎಂದು ಹಾರೈಸುತ್ತೇನೆ. ಇಷ್ಟು ಚೆಂದದಲ್ಲಿ ಪ್ರೋತ್ಸಾಹವಿತ್ತು ಈಕೆಯ ಪ್ರತಿಭೆಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿದ ಈಕೆಯ ಹೆತ್ತವರನ್ನೂ, ಗುರುಗಳನ್ನೂ ಈ ಸಂದರ್ಭದಲ್ಲಿ ಅಭಿನಂದಿಸುತ್ತಿದ್ದೇನೆ. ಸಾಧನೆಯ ಹಾದಿಯಲ್ಲಿ ಈಕೆಯ ಪಯಣ ನಿರಂತರ ಸುಖಮಯವಾಗಲಿ, ಅಡೆತಡೆಗಳನ್ನು ಮೀರಿ ನಿಲ್ಲುವ ಶಕ್ತಿ ಈಕೆಗೊದಗಲಿ, ಹೆತ್ತವರ ಕಣ್ಣುಗಳಲ್ಲಿ ಬೆಳಕು ಚೆಲ್ಲುವ ಹೊಳಪು ಈಕೆಯ ವದನವನ್ನು ಸೇರಲಿ ಎಂಬ ಪ್ರೀತಿಪೂರ್ವಕ ಹಾರೈಕೆಗಳೊಂದಿಗೆ...
-ಶ್ರೀಸುತ
ಹೆಜ್ಜೆನಾದ ನೃತ್ಯ ತಂಡದ ಸಂಪರ್ಕಕ್ಕಾಗಿ...
ಜ್ಞಾನ ಐತಾಳ್ ರ ನೃತ್ಯ ಪ್ರದರ್ಶನದ ಒಂದು ವೀಡಿಯೋ ತುಣುಕು...
ಸಾಧಕಿ ಜ್ಞಾನ ಳಿಗೆ ಅಭಿನಂದನೆಗಳು.ಭವಿಷ್ಯ ಉಜ್ವವವಾಗಲಿ.
ReplyDeleteಧನ್ಯವಾದಗಳು ಅನ್ನಪೂರ್ಣ ಅವರಿಗೆ... ಪ್ರೋತ್ಸಾಹ ಸದಾ ಇರಲಿ.
Deleteall the best
DeleteGreat talent to reach newer heights and excel in field of dance.all the best for future endeavours....
ReplyDeleteThanks for your encouragement..
Deleteಜ್ಞಾನ ರಿಗೆ ಅಭಿನಂದನೆಗಳು
ReplyDeleteಪ್ರೋತ್ಸಾಹಕ್ಕೆ ಧನ್ಯವಾದಗಳು
Deleteಧನ್ಯವಾದಗಳು
ReplyDelete