ನೀನಿಲ್ಲದೆ ನಾ ಹೇಗಿರಲಿ?


ತುಂತುರು ಮಳೆ ಸುರಿಯುತಿರೆ
ತಂಪು ಗಾಳಿಯು ಬೀಸಿದೆ
ಮನವಿಂದು ನಲಿದಾಡುತಿರೆ
ಇನಿಯನಪ್ಪುಗೆಯ ಬಯಸಿದೆ

ದಿನಕ್ಕೊಮ್ಮೆಯಾದರೂ ಅವನ ನೆನಪು
ಮನದ ಪುಟದಲ್ಲಿ ಹಾದುಹೋಗುವುದು
ಮೈಮನ ತುಂಬವುದು ಸಂತಸದ ಹುರುಪು
ಇನಿಯನ ನೆನೆವೆನೆಂಬ ಆಸೆಯ ಹೊಸೆದು

ಎನ್ನ ಮನದ ತುಮುಲ ತಿಳಿಯದೆ ನಿನಗೆ
ಹೃದಯವ ನೀಡುವೆ ಬಳುವಳಿಯಾಗಿ
ನಿನ್ನೊಲುಮೆಯ ದೇಣಿಗೆ ಬಯಸಿ ಬಂದೆ
ಕಾದುಕುಳಿತಿಹೆ ನಾ ಮೋಹದಿ ನಿನಗಾಗಿ

ನಿದಿರೆಯೇ ತುಸು ಮುನಿಸಿಕೊಂಡಂತಿದೆ
ನಿನ್ನ ನೋಡಿದ ಆ ಮಧುರ ಕ್ಷಣದಿಂದ
ಮನವೆಚ್ಚೆತ್ತು ಕೂತು ಪರಿತಪಿಸುತಿದೆ
ಆದರಿಸಿ ಬಾ ನೀನು ಪ್ರೀತಿಯಿಂದ

ನನಗರಿಯದಂತೆ ನೀ ನನ್ನ ಸೆಳೆದೆ
ನೀನಿರುವುದೇ ನನಗಾಗೆಂದು ತಿಳಿದೆ
ಮನದಾಳದ ಭಾವಗಳನ್ನೆಂತು ಅಡಗಿಸಲಿ...
ಹೇಳು... ನೀನಿಲ್ಲದೆ ನಾ ಹೇಗಿರಲಿ???

                                      -ಸ್ವಾತಿ ಎಸ್. ಭಟ್

Photo Credit: asiedua.com

Author image
About the Author
ಹೆಸರು : ಸ್ವಾತಿ ಎಸ್. ಭಟ್
▪ಕುಮಾರಿ ಸ್ವಾತಿ ಎಸ್ ಭಟ್ ಇವರು ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು ಎಳವೆಯಿಂದಲೇ ಕಲೆಯ ಒಡನಾಡಿಯಾಗಿ ಬೆಳೆದುಬಂದವರು. ಉಡುಪಿಯ ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ಇವರು ತಮ್ಮ ಶಾಲಾ ದಿನಗಳಲ್ಲಿ ಸಂಗೀತ, ನೃತ್ಯ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹತ್ತನೆಯ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತಲೂ ಹೆಚ್ಚಿನ ಅಂಕವನ್ನು ಗಳಿಸಿದ ಇವರು ಮುಂದೆ ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಲ್ಲಿಯೂ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ವಿದ್ಯಾರ್ಥಿ ಜೀವನದಲ್ಲೇ ಕಲೆ, ಸಂಸ್ಕೃತಿಯ ನಂಟನ್ನು ಬೆಳೆಸಿಕೊಂಡು ಬಂದ ಕುಮಾರಿ ಸ್ವಾತಿ ಇವರು ಉಡುಪಿಯ ಶ್ರೀಮತಿ ವನಿತಾ ಆಚಾರ್ಯ ಇವರ ಬಳಿ ಸಂಗೀತ ಪಾಠವನ್ನೂ ಅಭ್ಯಸಿಸಿ ಜ್ಯೂನಿಯರ್ ಹಂತವನ್ನು ಮುಗಿಸಿದ್ದಾರೆ. ಉತ್ತಮ ಸ್ವರಮಧುರತೆಯನ್ನು ಹೊಂದಿದ್ದು ಅನೇಕ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. NMAM Institute of Technology ಯಲ್ಲಿ ಇಂಜಿನಿಯರಿಂಗ್ ವ್ಯಾಸಾಂಗವನ್ನು ಪೂರ್ಣಗೊಳಿಸಿರುವ ಇವರು ಈಗಾಗಲೇ ಐ.ಟಿ ಕಂಪೆನಿಯೊಂದರಲ್ಲಿ ಉದ್ಯೋಗವನ್ನೂ ಪಡೆದುಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಅನಾರವರಣಗೊಳಿಸಿದ್ದಾರೆ. ಇದೀಗ ಇವರ ಸಾಹಿತ್ಯ ಕೃಷಿಯೂ ಫಲ ಕೊಡುತ್ತಿದ್ದು ಕವಿತೆಗಳನ್ನು ಬರೆಯುವಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲ್ಲಿ ಎಂಬುದು ನಮ್ಮ ಆಶಯ. ಇವರು ಬರೆದಂತಹ ಒಂದು ಕವಿತೆಯು ಶ್ರೀಸುತದಲ್ಲಿ ಪ್ರಕಟಿಸಲಾಗಿದೆ. ಓದಿ ಪ್ರೋತ್ಸಾಹಿಸಿ.

Please share and support me

3 comments:

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.