About Me

ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

ನಾನು ಮೂಲತಃ ಬಂಟ್ವಾಳ ತಾಲ್ಲೂಕಿನ ದಿವಾಣ ಮನೆತನದವನು. ಎರಡು ಮೂರು ತಲೆಮಾರುಗಳ ಹಿಂದೆ ಹಿರಿಯರು ದಿವಾಣದಿಂದ ಹೊರಟು ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಾಗಾಗಿ ನನ್ನ ಅಜ್ಜನ ಮನೆ ಕುಂಬಳೆ ಸೀಮೆ ಎಂದರೆ ತಪ್ಪಾಗಲಾರದು. 13 ಮಾರ್ಚ್ 1995ರ ಸೋಮವಾರದಂದು ಕಾಸರಗೋಡಿನ ಸರಕಾರಿ ಆಸ್ಪತ್ರೆಯಲ್ಲಿ ನನ್ನ ಜನನ. ತಂದೆ ರವಿರಾಜ ದಿವಾಣ, ತಾಯಿ ಶ್ರೀಮತಿ ಜ್ಯೋತಿ ರವಿರಾಜ ದಿವಾಣ ಹಾಗೂ ತಂಗಿ ಅನುಷಾ ದಿವಾಣ. ನಮ್ಮ ಮನೆ ಇರುವುದು ಮಂಗಳೂರಿನ ಕಟೀಲಿನಲ್ಲಿ. ಶ್ರೀದುರ್ಗಾಪರಮೇಶ್ವರೀ ದೇವರ ಸನ್ನಿಧಾನದಲ್ಲಿ ನಮ್ಮ ವಾಸವಿದ್ದ ಕಾರಣ ನನಗೆ ದುರ್ಗಾಪ್ರಸಾದ ಎಂಬ ಹೆಸರನ್ನಿರಿಸಿ ಕರೆದರು ನನ್ನ ಹೆತ್ತವರು.

         ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಕಟೀಲು ಕಾಲೇಜಿನಲ್ಲೇ ಪೂರೈಸಿದೆ. ಪ್ರೌಢಶಿಕ್ಷಣದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆಯಾಗಿ ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗವನ್ನು(ಗಣಕವಿಜ್ಞಾನ) ಆಯ್ಕೆ ಮಾಡಿಕೊಂಡು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣನಾದೆ. ಆನಂತರ ಪದವಿ ವ್ಯಾಸಾಂಗಕ್ಕಾಗಿ ಸಮೀಪದ ಮುಲ್ಕಿ ವಿಜಯಾ ಕಾಲೇಜನ್ನು ಆರಿಸಿಕೊಂಡು ಅಲ್ಲಿ B.Sc. ಶಿಕ್ಷಣವನ್ನು ವಿಶಿಷ್ಟ ಶ್ರೇಣಿಯಲ್ಲಿ ಪೂರೈಸಿದೆ.

ಶೈಕ್ಷಣಿಕ ವಿದ್ಯಾರ್ಥಿ ಜೀವನದ ಹಾದಿಯಲ್ಲಿ ಹಲವು ಬಾರಿ ಶಾಲಾ ನಾಯಕತ್ವವನ್ನು ವಹಿಸಿದ ಸಂತಸ...
* 2007-08 ನೇ ಸಾಲಿನ ಶ್ರೀದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ನಾಯಕತ್ವ.
* 2007-12 ರ ವರೆಗೆ 6 ವರ್ಷಗಳ ಕಾಲ ಕಟೀಲು ಕಾಲೇಜಿನ ಕಬಡ್ಡಿ ತಂಡದ ನಾಯಕ.
* 2012-13 ನೇ ಸಾಲಿನ ಶ್ರೀದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ಶಾಲಾ ನಾಯಕತ್ವ.
* 2012-13ರಲ್ಲಿ ಶ್ರೀದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನಿಂದ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್.
* 2016-17ನೇ ಸಾಲಿನ ಮುಲ್ಕಿ ವಿಜಯ ಕಾಲೇಜು ಇಲ್ಲಿಯ  ರಾಷ್ಟ್ರೀಯ ಸೇವಾ ಯೋಜನಾ(N.S.S) ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಲಲಿತಕಲಾ (FINE ARTS ASSOCIATION) ಸಂಘದ ನಾಯಕತ್ವ.
*2016-17ನೇ ಸಾಲಿನ ಮುಲ್ಕಿ ವಿಜಯ ಕಾಲೇಜು ಕಬಡ್ಡಿ ತಂಡದ ನಾಯಕತ್ವ.
ನನ್ನ ಎಲ್ಲಾ ಗುರುಗಳಿಗೆ ಈ ಸಮಯದಲ್ಲಿ ಕೃತಜ್ಞತೆಗಳನ್ನು ಅರ್ಪಿಸುತ್ತಾ ಇದ್ದೇನೆ.
ಇವಿಷ್ಟು ನನ್ನ ವಿದ್ಯಾರ್ಥಿ ಜೀವನದ ಮೆಟ್ಟಿಲುಗಳು.

          ನನ್ನ ಅತ್ಯಂತ ಪ್ರೀತಿಯ ಕ್ಷೇತ್ರ ಯಕ್ಷಗಾನ. ರಕ್ತಗತವಾಗಿ ಬಂದ ಕಲೆಯಾದ ಕಾರಣ ಅದರಲ್ಲಿ ಬಹಳಷ್ಟು ಆಸಕ್ತಿ. 2006ರಲ್ಲಿ 6ನೇ ತರಗತಿ ಕಲಿಯುತ್ತಿದ್ದ ಸಂದರ್ಭ ಯಕ್ಷಗಾನ ಹಿಮ್ಮೕಳದ ಚೆಂಡೆ ಮದ್ದಳೆ ಕಲಿಕೆಯನ್ನು ಗುರುಗಳಾದ ಶ್ರೀ ದೇವಿಪ್ರಸಾದ ಐ ಕಟೀಲು ಇವರ ಬಳಿ ಕಲಿಯಲು ಪ್ರಾರಂಭಿಸಿ ತದನಂತರ ಅವರ ಸಹೋದರನಾದಂತಹ ಶ್ರೀ ರಾಜೇಶ್ ಐ ಕಟೀಲು ಇವರ ಬಳಿ ಕಲಿಕೆ ಮುಂದುವರಿಸಿದೆ. 2008ರ ಹೊತ್ತಿಗೆ ಕಟೀಲಿನಲ್ಲಿ ಶ್ರೀ ದುರ್ಗಾಮಕ್ಕಳ ಮೇಳ ಹಾಗೂ ಯಕ್ಷಗಾನ ಕೇಂದ್ರ ಪ್ರಾರಂಭವಾದ ನಂತರ ಕೇಂದ್ರದ ಪ್ರಥಮ ಬ್ಯಾಚ್ ಗೆ ಹಿಮ್ಮೇಳ ತರಗತಿಗೆ ಸೇರಿಕೊಂಡೆ. ಅಲ್ಲಿ ನನಗೆ ಗುರುಗಳಾಗಿ ಸಿಕ್ಕವರು ಹಿರಿಯ ಕಲಾವಿದರಾದ ಶ್ರೀ ಹರಿನಾರಾಯಣ ಬೈಪಡಿತ್ತಾಯರು. ಅವರ ಬಳಿ ಸುಮಾರು 3 ವರುಷಗಳ ಕಾಲ ಯಕ್ಷಗಾನ ಹಿಮ್ಮೇಳದ ಅಧ್ಯಯನವನ್ನು ಮಾಡಿ ಕೇಂದ್ರದಿಂದ ತೇರ್ಗಡೆಗೊಂಡೆ. ಕೆಲ ಸಮಯಗಳ ಕಾಲ ಹಿರಿಯ ಗುರು ಮಾಂಬಾಡಿ ಸುಭ್ರಮಣ್ಯ ಭಟ್ ಇವರ ಬಳಿ ಯಕ್ಷಗಾನ ಭಾಗವತಿಗೆಯ ಬಾಲಪಾಠವನ್ನೂ ಅಭ್ಯಾಸ ಮಾಡಿದ್ದೇನೆ. ಯಕ್ಷಗಾನ ನಾಟ್ಯಾಭ್ಯಾಸವನ್ನು ಸ್ವಲ್ಪ ಮಟ್ಟಿಗೆ ಶ್ರೀ ಹರಿರಾಜ್ ಶೆಟ್ಟಿಗಾರ್ ಇವರ ಬಳಿ ಕಲಿತು ಅವಕಾಶ ಸಿಕ್ಕಾಗ ಬಣ್ಣವನ್ನೂ ಹಚ್ಚಿದ್ದೇನೆ. ಕೆಲ ಸಮಯಗಳ ಕಾಲ ಉಳ್ಳಾಲ ಚೀರುಂಭಾ ಭಗವತೀ ಯಕ್ಷಗಾನ ಮಂಡಳಿ ಹಾಗೂ ಕಳವಾರು ಶ್ರೀ ಭೆಂಕಿನಾಥೇಶ್ವರ ಯಕ್ಷಗಾನ ಮೇಳಗಳಲ್ಲಿ ಹಿಮ್ಮೇಳ ವಾದಕನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ಸಧ್ಯಕ್ಕೆ ಹವ್ಯಾಸಿ ಯಕ್ಷಗಾನ ಕಲಾವಿದ ಅಷ್ಟೇ...

         ಕ್ರೀಡಾ ಕ್ಷೇತ್ರದಲ್ಲಿ ಚಿಕ್ಕವಯಸ್ಸಿನಲ್ಲಿಯೇ ಆಸಕ್ತಿ ಹೆಚ್ಚಿದ್ದು ಅದಕ್ಕೆ ಪೂರಕವಾಗಿ ಬೆನ್ನು ತಟ್ಟಿದ್ದು ನನ್ನ ಗುರುಗಳಾದ ಶ್ರೀ ಕೃಷ್ಣ ಸರ್ ಇವರು. ಇವರ ಮಾರ್ಗದರ್ಶನದಲ್ಲಿ ಹಲವಾರು ಕಬಡ್ಡಿ ಪಂದ್ಯಾಟ ಹಾಗೂ ಅಥ್ಲೆಟಿಕ್ ಪಂದ್ಯಗಳಲ್ಲಿ ಭಾಗವಹಿಸಿದ್ದು ಅದರ ಸಿಹಿನೆನಪುಗಳು ಈಗಲೂ ಸಿಹಿಯಾಗಿಯೇ ಇವೆ. 2006, 2007 ರಲ್ಲಿ ಎರಡು ಬಾರಿ ಅಂತರ್ ಶಾಲಾ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ವೈಯಕ್ತಿಕ ಚಾಂಪಿಯನ್ ಶಿಪ್ (Individual Championship) ಹಾಗೂ ಮಂಗಳೂರು ತಾಲ್ಲೂಕು ಕಬಡ್ಡಿ ಪಂದ್ಯಾಟದಲ್ಲಿ ಅತ್ಯುತ್ತಮ ದಾಳಿಗಾರ (Best Rider) ಹಾಗೂ ಅತ್ಯುತ್ತಮ ಸವ್ಯಸಾಚಿ (Best All rounder) ಬಹುಮಾನ ಸಿಕ್ಕಿದ್ದು ನನ್ನ ಸಂತಸದ ಕ್ಷಣಗಳಲ್ಲಿ ಕೆಲವು.

        ಇನ್ನು ಹೇಳುವುದಾದರೆ ಸಾಹಿತ್ಯ ಕ್ಷೇತ್ರ. ನನ್ನ ಅಜ್ಜ ದಿವಂಗತ ಗಣಪತಿ ದಿವಾಣರ ಬಹುದೊಡ್ಡ ಬಳುವಳಿ. ಹೋಬಳಿ, ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗೋಷ್ಟಿಯಲ್ಲಿ ನಾನು ಕವನ ವಾಚನ ಮಾಡಿದ್ದು, ನಾನು ಬರೆದ "ವಿರಸ ವಿಲಾಸ" ಕವಿತೆ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಇದರಡಿಯಲ್ಲಿ ನಡೆದ ರಾಜ್ಯಮಟ್ಟದ ಕವಿತಾ ಕಮ್ಮಟದಲ್ಲಿ ಆಯ್ಕೆಗೊಂಡಿರುತ್ತದೆ. ಇದುವರೆಗೆ ಭಾಗವಹಿಸಿದ ಸಮ್ಮೇಳನಗಳು...
■ 07-03-2014ರಲ್ಲಿ ಮಂಗಳೂರಿನಲ್ಲಿ ನಡೆದ "ಮಂಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ" (ಸಮ್ಮೇಳನಾಧ್ಯಕ್ಷರು: ಡಾ. ವಸಂತಕುಮಾರ ಪೆರ್ಲ)
■ 02-08-2014 ಹಾಗೂ 03-08-2014ರ ವರೆಗೆ ಎರಡು ದಿನಗಳ ಕಾಲ ಪೊಳಲಿಯಲ್ಲಿ ನಡೆದ "19ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ"
(ಸಮ್ಮೇಳನಾಧ್ಯಕ್ಷರು: ನಾಡೋಜ ಪ್ರೊ. ಕೆ.ಪಿ. ರಾವ್)
■ 09-08-2014 ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ "ರಾಜ್ಯ ಮಟ್ಟದ ಕವಿಗೋಷ್ಟಿ"
(ಕವಿಗೋಷ್ಟಿ ಅಧ್ಯಕ್ಷರು : ಡಾ. ನಾ. ದಾಮೋದರ ಶೆಟ್ಟಿ)
■ 28-08-2015 ರಿಂದ 30-08-2015ರ ವರೆಗೆ 3 ದಿನಗಳ ಕಾಲ ಕಟೀಲಿನಲ್ಲಿ ನಡೆದ "20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ" (ಸಮ್ಮೇಳನಾಧ್ಯಕ್ಷರು: ಡಾ. ಎನ್. ಸುಕುಮಾರ ಗೌಡ)
■ 05-01-2017 ರಂದು ಮೂಲ್ಕಿಯಲ್ಲಿ ನಡೆದ "ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ"
(ಸಮ್ಮೇಳನಾಧ್ಯಕ್ಷರು: ಡಾ. ಶೈಲಜಾ ಏತಡ್ಕ)
■ 03-06-2017ರಂದು ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆದ ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ
(ಸಮ್ಮೇಳನಾಧ್ಯಕ್ಷರು: ಶ್ರೀಮತಿ ಶಕುಂತಳಾ ಭಟ್ ಹಳೆಯಂಗಡಿ)
        ಮಂಗಳೂರು ಆಕಾಶವಾಣಿಯಲ್ಲೂ ಯಕ್ಷಗಾನ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದೇನೆ.
ಇದುವರೆಗೆ ಆಕಾಶವಾಣಿಯಲ್ಲಿ ನಾನು ನೀಡಿದ ಕಾರ್ಯಕ್ರಮಗಳು:
■ 14-10-2012ರಂದು ಮಂಗಳೂರು ಆಕಾಶವಾಣಿಯಲ್ಲಿ "ಯುವವಾಣಿ - ಕಲಾಸಂಜೆ" ಕಾರ್ಯಕ್ರಮ
■ 20-10-013ರಂದು ಮಂಗಳೂರು ಆಕಾಶವಾಣಿಯಲ್ಲಿ "ಸಂಗೀತ ರಸಮಂಜರಿ" ಕಾರ್ಯಕ್ರಮ
■ 2014ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ "ಯಕ್ಷಗಾನ ಪದವೈಭವ" ಕಾರ್ಯಕ್ರಮ
(ಪ್ರಸಂಗ: ಭಸ್ಮಾಸುರ ಮೋಹಿನಿ)
■ 21-11-2015ರಂದು ಮಂಗಳೂರು ಆಕಾಶವಾಣಿಯಲ್ಲಿ "ಯುವವಾಣಿ-ಸಾಹಿತ್ಯ ಸಂಜೆ" ಕಾರ್ಯಕ್ರಮ
■ 19-06-2016ರಂದು ಮಂಗಳೂರು ಆಕಾಶವಾಣಿಯಲ್ಲಿ "ಯಕ್ಷಗಾನ ಪದವೈಭವ" ಕಾರ್ಯಕ್ರಮ.
(ಪ್ರಸಂಗ: ರಾಜಹಂಸ ವಿಜಯ)
■ 23-07-2017ರಂದು ಮಂಗಳೂರು ಆಕಾಶವಾಣಿಯಲ್ಲಿ "ಯಕ್ಷಗಾನ ಪದವೈಭವ" ಕಾರ್ಯಕ್ರಮ.
(ಪ್ರಸಂಗ: ಕಾಮದಹನ)
■ 05-08-2017ರಂದು ಮಂಗಳೂರು ಆಕಾಶವಾಣಿಯಲ್ಲಿ "ಯುವವಾಣಿ-ಸಾಹಿತ್ಯಸಂಜೆ" ಕಾರ್ಯಕ್ರಮ.
■ 26-08-2018ರಂದು ಮಂಗಳೂರು ಆಕಾಶವಾಣಿಯಲ್ಲಿ "ಯಕ್ಷಗಾನ ಪದವೈಭವ" ಕಾರ್ಯಕ್ರಮ.
(ಪ್ರಸಂಗ: ಚೂಡಾಮಣಿ)
■ 08-09-2018ರಂದು ಮಂಗಳೂರು ಆಕಾಶವಾಣಿಯಲ್ಲಿ "ಯುವವಾಣಿ-ಸಾಹಿತ್ಯಸಂಜೆ" ಕಾರ್ಯಕ್ರಮ.
■ 23-07-2019ರಂದು ಮಂಗಳೂರು ಆಕಾಶವಾಣಿಯಲ್ಲಿ "ಯುವವಾಣಿ-ಸಾಹಿತ್ಯಸಂಜೆ" ಕಾರ್ಯಕ್ರಮದಲ್ಲಿ ಕನ್ನಡ ಭಾಷಣ.(ವಿಷಯ: ಹಸಿವು ಎಂಬ ನೋವು; ಆಹಾರದ ಪ್ರಾಮುಖ್ಯ)
         ನನ್ನ ಸಾಹಿತ್ಯಕ್ಷೇತ್ರಕ್ಕೆ ನನಗೆ ಹೆಗಲಾಗಿ ನಿಂತವರು ನನ್ನ ತಂದೆಯವರಾದ ಶ್ರೀ ರವಿರಾಜ ದಿವಾಣ ಹಾಗೂ ಚಿಕ್ಕಪ್ಪನಾದ ಶ್ರೀರಾಮ ದಿವಾಣ ಇವರು. ವಿದ್ಯಾಭ್ಯಾಸದ ಸಮಯದಲ್ಲಿ ನನ್ನ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದವರು ನನ್ನ ಗುರುಗಳಾದ ಶ್ರೀಮತಿ ವನಿತಾ ಜೋಷಿ, ಹಿರಿಯ ಸಾಹಿತಿಗಳಾದ ಶ್ರೀ ಸುರೇಶ್ ಮರಿಣಾಪುರ (ಮಸುಮ), ಶ್ರೀಮತಿ ದಮಯಂತಿ ಹಾಗೂ ಶ್ರೀಮತಿ ಶೈಲಜಾ ಪುದುಕೋಳಿ.

        ಅದೇ ರೀತಿಯಲ್ಲಿ ಶಾಲಾ ದಿನಗಳಲ್ಲಿ "ಪ್ರತಿಭಾ ಕಾರಂಜಿ"ಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಿರಂತರ ಭಾಗವಹಿಸುತ್ತಿದ್ದು 2 ಬಾರಿ ಜಿಲ್ಲಾ ಮಟ್ಟದ ಬಹುಮಾನವನ್ನು ಪಡೆದಿದ್ದೇನೆ. ತದನಂತರ ಕಾಲೇಜು ಹಂತದಲ್ಲಿರುವ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ "ಪ್ರತಿಭಾ ಕಾರಂಜಿ" ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಹಲವು ಬಾರಿ ನಿರ್ಣಾಯಕನಾಗಿ ಪಾಲ್ಗೊಂಡಿದ್ದು ನನ್ನ ಸಂತಸದ ದಿನಗಳಲ್ಲಿ ಕಲೆತಿದೆ.

        ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇದ್ದು ನನ್ನದೇ ಹಾಡುಗಳಿಗೆ ರಾಗ ಸಂಯೋಜನೆ ಮಾಡುವ ಒಂದು ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಇದುವರೆಗೆ ಕೆಲವು ಸಣ್ಣಪುಟ್ಟ ರಾಗಸಂಯೋಜನೆ ಮಾಡಿದ್ದು ನನ್ನ ಯೂಟ್ಯೂಬ್ ಖಾತೆಯಲ್ಲಿ ನೀವು ಕಾಣಬಹುದು.
ಹಾಗೆಯೇ ಕಳೆದ ಕೆಲ ಸಮಯಗಳಿಂದ ಮೈಸೂರಿನ ವಿದ್ವಾನ್ ಎ ವಿ ದತ್ತಾತ್ರೇಯ ಇವರ ಬಳಿ ಶಾಸ್ತ್ರೀಯ ಮ್ಯಾಂಡೋಲಿನ್(Mandolin) ಹಾಗೂ ಗಿಟಾರ್ (Guitar) ವಾದನವನ್ನು ಕಲಿಯುತ್ತಿದ್ದೇನೆ. 

       ಪ್ರಸ್ತುತ ನಾನು ಮೈಸೂರಿನ ಇನ್ಫೋಸಿಸ್ ನಲ್ಲಿ ವೃತ್ತಿ ಜೀವನವನ್ನು ನಡೆಸುತ್ತಿದ್ದು ಮೈಸೂರಿನಲ್ಲೇ ವಾಸ್ತವ್ಯವನ್ನು ಹೂಡಿದ್ದೇನೆ. 

       ನನ್ನ ಈ ಶ್ರೀಸುತ ಎಂಬ ಅಂತರ್ಜಾಲ ಸಾಹಿತ್ಯಿಕ ತಾಣಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವನ್ನು ಬಯಸುತ್ತಿದ್ದೇನೆ.

ಧನ್ಯವಾದಗಳು.

ಇವಿಷ್ಟು ನನ್ನ ಬಗ್ಗೆ ಕೆಲವು ಸಾಲುಗಳು.
ನನ್ನ ಬಗ್ಗೆ ನಾನು ಹೇಳಿಕೊಂಡದ್ದು ಅಲ್ಲ...
ನನ್ನ ಪರಿಚಯವನ್ನು ವಿಸ್ತರಿಸಿದ್ದು ಅಷ್ಟೇ.
ತಿಳಿದುಕೊಳ್ಳುವಾಗ ಸ್ಪಷ್ಟತೆ ಇದ್ದರೆ ಒಳ್ಳೆಯದಲ್ಲವೇ?