ಹಾಡುವೆ ಬಡಿದೆಬ್ಬಿಸೆ ಬಿಡುಗಡೆಯ
ಬೇಡಿಯ ಕವಿತೆ
ಪೊಡಮಡುವೆ ನಿನ್ನಡಿಗೆ ವಿಖ್ಯಾತೆ
ಓ ಭಾರತ ಮಾತೆ
ಸ್ವಯಮೇವ ಮೃಗೇಂದ್ರತಾ ಓ ಭಾರತದ ಪೌರುಷ
ಇಂದು ನಿರ್ಭಂಧದ ಪರ್ವವು ಚಿಮ್ಮಿದೆ ಅಮಿತ ಹರುಷ...
ಉತ್ತರೆತ್ತರದಿ ಬಿತ್ತರಕೆ ಹಬ್ಬಿದೆ ತುಹಿನಗಿರಿ
ಸಾಲು ಸಾಲು...
ಮಕುಟಮಣಿ ಕಾಶ್ಮೀರವು ಅರುಣಾಚಲವು,
ನಮ್ಮ ಪಾಲು...
ಎಡಬಲ ತಲದಲಿ ನೀಲ ನೀಳ ಆಳ
ಮೊರೆಯುವ ಕಡಲು...
ಕೇಳಿದೆ ಸಂಕಲೆಯ ಸಂಕಟವನಳಿಸೆ
ಪ್ರಾಣ ತೆತ್ತ ಹೆತ್ತವರ ಅಳಲು...
ಯೋಧರ ರುಧಿರತೈಲದಲಿ ಸ್ವಾತಂತ್ರ್ಯ
ಜ್ಯೋತಿ ಬೆಳಗಿದೆ
ಸಾಧಕರ ನರಗಳ ಎಳೆದು ಹೊಸೆದು
ಬತ್ತಿಯಾಗಿ ಉರಿದಿದೆ
ಯಜ್ಞದೀಕ್ಷೆಯಲಿ ನೆತ್ತರೊತ್ತರಿಸಿ ಮಣ್ಣಲ್ಲಿ ಬೆರೆತಿದೆ
ಶಸ್ತ್ರ ಶಾಸ್ತ್ರಗಳು ನಮ್ಮ ಸೂತ್ರಗಳು
ಭಾರತ ಮೆರೆದಿದೆ
ನಮ್ಮ ನೆಲ ಜಲ ಉಸಿರ ಕಸಿಯೆ, ಕಾದಿಹರು ಭೂದಾಹಿಗಳು...
ಗಡಿಯಲ್ಲಿ ಅಡಿಗಡಿಗೆ, ಗಟ್ಟಿಯಾಗಲಿ
ನಮ್ಮ ರಟ್ಟೆತೋಳು
ಏನೇ ಇರಲಿ ಬರಲಿ, ನಾವು ವಿಶ್ವನಾಯಕರಾಗಬೇಕು...
ಎದೆ ಮುಟ್ಟಿ ತೋಳ್ತಟ್ಟಿ ವೈರಿಗಳ ಅಟ್ಟಾಡಿಸಿ,
ಹುಡಿ ಹುಡಿಗಟ್ಟಿ ನಾವು ಶಿರವೆತ್ತಿ ನಿಂತರೆ ಸಾಕು...
-ಗುಣಾಜೆ ರಾಮಚಂದ್ರ ಭಟ್
Photo Credit: webdunia
ದಿನಾಂಕ 15-08-2017ರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳೂರಿನ ರಾಧಾಕೃಷ್ಣ ಸಭಾಂಗಣದಲ್ಲಿ ಜರಗಿದ ದೇಶಪ್ರೇಮ-2017ರ ಕವಿಗೋಷ್ಠಿಯಲ್ಲಿ ಶ್ರೀ ಗುಣಾಜೆ ರಾಮಚಂದ್ರ ಭಟ್ ಇವರು ವಾಚಿಸಿದ ಕವಿತೆ "ಬಿಡುಗಡೆಯ ಕವಿತೆ"...
ಮತ್ತೆ ಮತ್ತೆ ಓದಬೇಕೆನಿಸುವ ಕವನ,ಚುಟುಕುಗಳು.
ReplyDelete