■ ಸೌರಾಷ್ಟ್ರ-ತ್ರಿವುಡೆ ■
ಶೇಡಿಗುಮ್ಮೆಯೊಳುದಿಸಿ ಹರುಷದಿ|
ಕೂಡಿಕೊಂಡರೊಳಿನಿದು ಕುಲವನು|
ಪಾಡಿ ಸಕಲರು ತುತ್ತನಿಟ್ಟರು ಬಾಡದೊಳಗೇ||೧||ಜನಕ ನಾರಾಯಣರು ಸುಗುಣರು|
ಜನನಿ ದೇವೀ ಸಿರಿ ಸರಸ್ವತಿ|
ತನುಜನಾಗಿಹ ವಾಸುದೇವರು ವಿನುತರೆಂದೂ||೨||
■ ವಾರ್ಧಿಕ ■
ಕಲಿತು ವಿದ್ಯೆಯನಪ್ಪಿ ಕುಂಬಳೆಯ ಶಾಲೆಯಲಿ|
ಒಲುಮೆಯಾ ತೇರಿನಲಿ ಬೆಳೆದಿರೀ ಸೀಮೆಯಲಿ|
ಎಳವೆಯಲ್ಲೇಯಣ್ಣ ಗುರು ಕೃಷ್ಣ ಭಟ್ಟರೊಳು ಭಾಗವತಿಕೆಯ ಕಲಿತಿರೀ|
ಕಲೆಯನಪ್ಪುತ ಸಾಗಿಯೇರಿದಿರಿ ರಂಗವನು|
ಒಲಿದು ಬಂತಾಗ ವಿಘ್ನೇಶ್ವರ ಕಲಾ ಸಂಘ|
ದೊಳಗೆ ಜಾಗಟೆಯೆತ್ತಿ ಬೆಳೆಸಿದರಿ ಹಲವರನು ಪರಿಶುದ್ಧ ಮಾರ್ಗದೊಳಗೇ||
■ ಕೇದಾರಗೌಳ - ಅಷ್ಟ ■
ಸತಿ ಲೀಲಾವತಿ ಗುಣವತಿಯು ಸುಮತಿಯಾಗಿ| ಶೃತಿಯಾಗಿ ಮೇಳೈಸಲು||
ಹಿತವಾಗಿ ಕೃಷ್ಣಪ್ರದೀಪ ಮಹೇಶರು|
ದ್ಯುತಿಯಾಗಿ ಮೆರೆದಿರಲು||೧||
ಸಾಹಿತ್ಯ ಸಾರಥ್ಯ ವಾಹಿನಿಯಾಗಿಂದು|
ನೇಹವ ನೀವಿತ್ತಿರಿ|
ಗೇಹದಿ ತಾ ಕೃಷಿಯಾ ಹೊತ್ತು ಸಾಗುತ್ತಾ| ಲೋಹದಂತಾಗಿರ್ಪಿರಿ||೨||
■ ಭಾಮಿನಿ ■
ಹಾಡುವಿರಿ ಸೌರಾಷ್ಟ್ರ ಚೆಂದದಿ
ನಾದವನು ಕೇದಾರಗೌಳದಿ
ನೀಡುವಿರಿ ರಾಗ ತಾಳಗಳ ವಿಶೇಷ ಮಟ್ಟುಗಳಾ|
ಕೂಡಿ ಕಲೆತಿರಲು ಸುಜ್ಞಾನವು
ಮೂಡುತಿರೆ ಕಾವ್ಯ ಭಂಡಾರವು
ನೀಡಿದಿರಿ ಯಕ್ಷಕುಸುಮಾಂಭುಧಿಯೆಂಬ ಮುತ್ತುಗಳಾ||
■ ಸುರುಟಿ - ಏಕ ■
ಭಾಗವತೋತ್ತಮರೇ|ವರಸುತ|
ಶ್ರೀ ಗುರು ಸದ್ಗುಣರೇ||
ಸಾಗುತಲನುದಿನ|ರಾಗದಿ ಜೀವನ|
ವಾಗುತ ಸುರುಚಿರ|ರಾಗುತ ಬಾಳಿರಿ||೧|| ವಂದಿಸುತಲಿ ಮುದದೀ|ನಿಮ್ಮನು|
ಚೆಂದದಿ ಈ ತೆರದಿ||
ಮುಂದಕೆ ನಿಮಗಾ|ನಂದವು ಒದಗಲಿ|
ಯೆಂದೆನು ತಲಿ ಈ|ವಂದನೆ ಗುರುವೇ ||೨||
-ಶ್ರೀಸುತ
ರಚನೆ : ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
■ ಯಕ್ಷಧ್ರುವ ಪಟ್ಲ ಫೌಂಡೇಷನ್(ರಿ.)
ಮಂಗಳೂರು
■ ಕುಂಬಳೆ ಘಟಕದ ವಿಸ್ತರಣಾ ಸಭೆ ■
ದಿನಾಂಕ 17-08-2017ರ ಗುರುವಾರದಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್(ರಿ.) ಇದರ ಕುಂಬಳೆ ಘಟಕದ ವಿಸ್ತರಣಾ ವಿಷಯದ ಅಂಗವಾಗಿ ಶ್ರೀಯುತ ಪಟ್ಲ ಸತೀಶ್ ಶೆಟ್ಟಿಯವರ ಅಭಿಲಾಶೆಯಂತೆ ಕುಂಬಳೆಯ ಶ್ರೀ ಸದ್ಗುರು ನಿತ್ಯಾನಂದ ಮಠದಲ್ಲಿ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಕುಂಬಳೆ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಹಿರಿಯ ಭಾಗವತರೂ, ಪ್ರಸಂಗಕರ್ತರೂ ಆಗಿರುವ "ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ಟ"ರನ್ನು ಗಣ್ಯರೊಡಗೂಡಿ ಗೌರವಿಸಿ ಸನ್ಮಾನಿಸಲಾಯಿತು. ಇವರ "ಯಕ್ಷಕುಸುಮ" ಪ್ರಸಂಗ ಪುಸ್ತಕಕ್ಕೆ 2016ನೆ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿಯ ಪುಸ್ತಕ ಪ್ರಶಸ್ತಿ ದೊರೆತಿದ್ದು ನಿರಂತರ ಯಕ್ಷಗಾನ, ಸಾಹಿತ್ಯ ಕೃಷಿಯನ್ನು ಮಾಡುತ್ತಾ ಬರುತ್ತಿದ್ದಾರೆ.
ಇಂದಿನ ಸನ್ಮಾನ ಸಮಾರಂಭಕ್ಕೆ ಅವರ "ಸನ್ಮಾನ ಪತ್ರ" ವನ್ನು ಬರೆಯುವ ಅವಕಾಶವನ್ನು ನನಗೆ ಒದಗಿಸಿಕೊಟ್ಟಂತಹ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಕೃತಜ್ಞತೆಗಳು. ಅದೇ ರೀತಿ ಬರೆಯುವಾಗ ತಿದ್ದಿ ತೀಡಿ ಪ್ರೋತ್ಸಾಹಿಸಿದ ದೊಡ್ಡಪ್ಪ ದಿವಾಣ ಶಿವಶಂಕರ ಭಟ್ಟರಿಗೂ ನನ್ನ ವೈಯಕ್ತಿಕ ನಮನಗಳು. ಮುಖ್ಯವಾಗಿ ನನ್ನ ಛಂದೋ ಗುರುಗಳಾದ ಶ್ರೀ ರಾಮರಂಜನ್ ಕನ್ನೆಪ್ಪಾಡಿಯವರಿಗೆ ಈ ಸಂಧರ್ಭದಲ್ಲಿ ನಾನು
ಧನ್ಯವಾದಗಳನ್ನು ಅರ್ಪಿಸುತ್ತಾ ಇದ್ದೇನೆ. ಅದೇ ರೀತಿ ಸನ್ಮಾನವನ್ನು ಸ್ವೀಕರಿಸಿದ ಹಿರಿಯರೂ ಪ್ರೀತಿಪಾತ್ರರೂ ಆದಂತಹ ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಧನ್ಯವಾದಗಳನ್ನು ಅರ್ಪಿಸುತ್ತಾ ಇದ್ದೇನೆ. ಅದೇ ರೀತಿ ಸನ್ಮಾನವನ್ನು ಸ್ವೀಕರಿಸಿದ ಹಿರಿಯರೂ ಪ್ರೀತಿಪಾತ್ರರೂ ಆದಂತಹ ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಚಿತ್ರಕೃಪೆ: ಶ್ರೀ ಅವಿನಾಶ ಎಮ್ ಕಾರಂತ
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.