ಎಷ್ಟು ಸರಿ, ಎಷ್ಟು ತಪ್ಪು?


          ವಧೆಗಾಗಿ ದನಕರುಗಳನ್ನು ಮಾರದಂತೆ ಪ್ರತಿಬಂಧಿಸುವ 'ವಿಶೇಷ ಅಧಿಸೂಚನೆ'ಗೆ ಸಹಿ ಹಾಕಿದ್ದಕ್ಕೆ ಉತ್ತರವಾಗಿ ನಮ್ಮ ಒಬ್ಬರು ಲೇಖಕರು ಬರೆದ ಅತ್ಯುತ್ತಮ ವೈಜ್ಞಾನಿಕ ಲೇಖನವನ್ನು ಓದಿ, ಅವರು ಯಾವ ಕಾಲದಲ್ಲಿ ಆ ಲೇಖನ ಬರೆದಿದ್ದರು!? ಎಂಬುದೇ ದೊಡ್ಡ ಪ್ರಶ್ನೆಯಾಗಿ ನನ್ನನ್ನು ಕಾಡುತ್ತಿದೆ. ಅವರು ದನಗಳನ್ನು ಮನುಷ್ಯ ಎಷ್ಟು ಅವಲಂಭಿಸಿದ್ದಾನೆ ಎಂಬುದನ್ನು ಬಹು ಉತ್ತಮವಾಗಿ ಬರೆದಿದ್ದಾರೆ. ಮನುಷ್ಯ ದನಗಳಿಂದ ಇಷ್ಟೊಂದು ಉಪಯೋಗ ಪಡೆಯುತ್ತಾ ಇದ್ದರೂ ದನಗಳಿಗೆ ಗೌರವ ಕೊಡುವ ಮಾತನ್ನು ಅವರೇ ಅಲ್ಲಗಳೆಯುವುದು ಆಶ್ಚರ್ಯ. ಇನ್ನು ಅವರು ಸಂಪೂರ್ಣ ಲೇಖನದಲ್ಲಿ ಪ್ರಾಣಿಮೂಲದ ಎಲ್ಲಾ ವಸ್ತುಗಳಲ್ಲಿಯೂ ಬಲವಂತವಾಗಿ ದನವನ್ನು ತುರುಕಲು ಪ್ರಯತ್ನಿಸಿದ್ದಾರೆಯೇ ಹೊರತು ಎಲ್ಲಿಯೂ ಅಪ್ಪಿ ತಪ್ಪಿಯೂ ಈ ಎಲ್ಲಾ ಉತ್ಪನ್ನಗಳನ್ನು ಪಡೆಯಬಹುದಾದ ಕುರಿ, ಹಂದಿ, ಒಂಟೆ, ಕುದುರೆಯಂತಹ ಪ್ರಾಣಿಗಳ ಹೆಸರನ್ನು ಬರೆದಿಲ್ಲ. ಇದು ಅವರು ಬಲವಂತವಾಗಿ ಜನರಲ್ಲಿ ಗೋ ವಧೆಯನ್ನು ಸಮರ್ಥಿಸುವ ಮನೊಭಾವ ಭರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಇನ್ನು ಅವರೇ ಬರೆದ ಪ್ರಾಣಿಮೂಲಗಳಿಂದ ಪಡೆಯಲಾಗುತ್ತದೆ ಎನ್ನುವ ಪ್ರತಿಯೊಂದು ವಸ್ತುಗಳ ಬಗ್ಗೆ ಒಂದೊಂದಾಗಿ ಗಮನ ಹರಿಸೋಣ.

         ಮೊದಲು ಅವರು ಸಕ್ಕರೆ ಬೆಳ್ಳಗಾಗಲು ಬೋನ್ ಚಾರ್ ಎಂಬ ಫಿಲ್ಟರ್ ಮೂಲಕ ಬೆಲ್ಲವನ್ನು ಸೋಸಿ ಸಕ್ಕರೆ ಮಾಡುತ್ತಾರೆ ಎಂಬ ಮಾತನ್ನು ಹೇಳಿದ್ದಾರೆ. ಬೋನ್ ಚಾರ್ ಮೂಲಕ ಸಕ್ಕರೆಯನ್ನು ಸೋಸುವ ಪದ್ದತಿಯನ್ನು ಮನುಷ್ಯ ಶತಮಾನಗಳ ಹಿಂದೆಯೆ ತಿಳಿಸಿದ್ದಾನೆ. ಈಗ ಆಧುನಿಕ ಯಂತ್ರಗಳ ಮೂಲಕ ಅದರಲ್ಲೂ ಲಿಂಬೆಹಣ್ಣನ್ನು ಬಳಸಿ ಅಂದರೆ Citric Acid ನ ಮೂಲಕ ಶುದ್ಧಮಾಡಲಾಗುತ್ತದೆಯೇ ಹೊರತು ಬೋನ್ ಚಾರ್ ನಿಂದ ಅಲ್ಲ. ಇನ್ನೂ ಕೆಲವರು ಬೋನ್ ಚಾರನ್ನೇ ಬಳಸಿ ಶುದ್ಧಮಾಡುತ್ತಾರೆ ಎಂದು ಪರಿಗಣಿಸಿದರೂ ಮೂಳೆಗಳು ಕೇವಲ ದನಗಳಿಗೆ ಮಾತ್ರ ಇರುವುದೇ!? ಎಂಬ ಸಾಮಾನ್ಯ ಪ್ರಜ್ಞೆಯೂ ಬೇಕಾಗುತ್ತದೆ.

         ವಾಹನದ ಟಯರ್ ಗಡುಸಾಗಲು ಸ್ಟೀರಿಕ್ ಆಸಿಡ್ ಹಾಕುತ್ತಾರೆ ಎಂಬುದು ಅವರ ವಾದ. ಆದರೆ ವಾಸ್ತವವಾಗಿ ರಬ್ಬರ್ ಗೆ ಕಾರ್ಬನ್ ಹಾಕುವುದರಿಂದ ಟಯರ್ ಗಡುಸಾಗುತ್ತದೆಯೆ ಹೊರತು ಆ ಆಸಿಡ್ ನಿಂದ ಅಲ್ಲ. ಕಾರ್ಬನ್ ಅನ್ನು ರಬ್ಬರ್ ಜೊತೆಗೆ ಸೇರಿಸಿ ಮಾಡಿದ ಕಾರಣಕ್ಕಾಗಿಯೇ ಟಯರುಗಳು ಕಪ್ಪು ಬಣ್ಣವನ್ನು ಹೊಂದಿವೆ. ಹೈಡ್ರೋಲಿಕ್ ಬ್ರೇಕ್ ಗೆ ಬಳಸುವ ಎಣ್ಣೆಯೂ ದನದ ದೇಹದಿಂದ ತೆಗೆದಿದ್ದು ಎನ್ನುವ ಮಾತು ಸರ್ವಥಾ ಒಪ್ಪಲು ಸಾಧ್ಯವಿಲ್ಲ, ವಾಹನಕ್ಕೆ ಬಳಸುವ ಎಲ್ಲ ಎಣ್ಣೆಗಳೂ ಹೈಡ್ರೋ ಕಾರ್ಬನ್ ಉತ್ಪನ್ನಗಳು ಅದಕ್ಕೂ ದನಗಳಿಗೂ ಯಾವುದೇ ಸಂಭಂದವಿಲ್ಲ. ಉಕ್ಕು ಗಟ್ಟಿಯಾಗಲು ಮೂಳೆಯ ಪುಡಿಯನ್ನು ಹಾಕುವುದು ಅವೈಜ್ಞಾನಿಕ. ಉಕ್ಕನ್ನು ಗಟ್ಟಿಯಾಗಿಸಲು ಅದಕ್ಕೆ ಇಂಗಾಲವನ್ನು ಬೆರೆಸಲಾಗುತ್ತದೆಯೇ ಹೊರತು ಮೂಳೆಯ ಪುಡಿಯಲ್ಲ. ಇನ್ನು ಮಳೆಯೇ ಬೇಕು ಅಂತಾದರೂ ಮೊದಲೇ ಹೇಳಿದಂತೆ ಮೂಳೆಗಳು ಕೇವಲ ದನಗಳಿಗೆ ಮಾತ್ರವೇ ಇಲ್ಲ.

         ಇನ್ನು ಅಂಟನ್ನು ದನದ ಪ್ರೋಟೀನ್ ನಿಂದ ತಯಾರಿಸಲಾಗುತ್ತದೆ ಎಂಬ ಮಾತು ನಿಮ್ಮನ್ನು ಎಷ್ಟೋ ವರ್ಷ ಹಿಂದೆ ಕರೆದುಕೊಂಡು ಹೋಗುತ್ತದೆ. ಪ್ರಾಣಿಮೂಲಗಳಿಂದ (ಕೇವಲ ದನಗಳಿಂದ ಅಲ್ಲ) ಅಂಟನ್ನು ಉತ್ಪಾದಿಸುವ ಕಾರ್ಯವನ್ನು ಎರಡನೇ ಮಹಾಯುದ್ಧದ ಕಾಲದಲ್ಲಿಯೇ ನಿಲ್ಲಿಸಲಾಗಿದೆ. ಕಾರಣ ಇಷ್ಟೆ, ಅವು ವಾಟರ್ ಪ್ರೂಫ್ ಆಗಿರಲಿಲ್ಲಾ ಎಂಬ ಉದ್ದೇಶಕ್ಕೆ. ಈಗ ತಯಾರಾಗುವ ಎಲ್ಲಾ ಅಂಟುಗಳಲ್ಲಿ ಹಲವಾರು ಸಸ್ಯಮೂಲವಾಗಿದ್ದು ಇನ್ನು ಕೆಲವನ್ನು ಕೃತಕವಾಗಿ ಲ್ಯಾಬ್ ಗಳಲ್ಲಿ ಉತ್ಪಾದಿಸುತ್ತಾರೆ. ಅಗ್ನಿಶಾಮಕ ಸಿಲಿಂಡರ್ ನಲ್ಲಿ ಇರುವುದು ದನದ ರಕ್ತದಿಂದ ತೆಗೆದ ಬೆಂಕಿನಿರೋಧಕ ರಾಸಾಯನಿಕವಲ್ಲ. ಬದಲಾಗಿ Carbon Dioxide ಬಳಸಲಾಗುತ್ತದೆ. ಇನ್ನೂ ಕೆಲವು ಸಿಲಿಂಡರ್ ಗಳಲ್ಲಿ ನೀರು ಹಾಗು ಸೋಡಿಯಂ ಬೈ ಕಾರ್ಬೋನೇಟ್ ಅಂದ್ರೆ ಅಡುಗೆ ಸೋಡಾವನ್ನು ಬಳಸುತ್ತಾರೆ. ಗ್ಲಿಸರೀನ್ ಎನ್ನುವುದು "saponification" ಎನ್ನುವ ಕ್ರಿಯೆಯಿಂದ ವನಸ್ಪತಿ ಎಣ್ಣೆಗಳನ್ನು ಬಳಸಿ ಸಾಬೂನು ತಯಾರಿಸುವಾಗ ಸಿಗುವ ಉಪ ಉತ್ಪನ್ನವಾಗಿದೆ. ಇದಕ್ಕೂ ದನಕ್ಕೂ ಯಾವುದೇ ಸಂಬಂಧವಿಲ್ಲ. ಡಾಂಬರು ಪೇಟ್ರೊಲಿಯಂ ನ ಉಪ ಉತ್ಪನ್ನವಾಗಿದೆ. ಪೇಟ್ರೊಲಿಯಂನಿಂದ ಪೆಟ್ರೋಲ್ ತೆಗೆಯುವ ಕ್ರಿಯೆಯಲ್ಲಿ ಉಪ ಉತ್ಪನ್ನವಾಗಿ ಡಾಂಬರು ಹೊರಬರುತ್ತದೆ. ಇದು ಕಾರ್ಬನ್ ನ ಉತ್ಪನ್ನವಾಗಿರುವ ಕಾರಣ ನೈಸರ್ಗಿಕವಾಗಿಯೆ ಅಂಟಾಗಿದ್ದು ಅದಕ್ಕೆ ಯಾವುದೇ ಕೊಬ್ಬಿನ ಅವಶ್ಯಕತೆ ಇಲ್ಲ. ಪ್ಲೈವುಡ್ ಗೆ ಬಣ್ಣ ಬಳಿಯಲು ಹಲವಾರು ರಾಸಾಯನಿಕಗಳಿವೆ. ಕೇವಲ ದನದ ರಕ್ತದ ಪುಡಿ ಮಾತ್ರವಲ್ಲ. ಈಗ ದನದ ರಕ್ತದ ಪುಡಿಯನ್ನು ಬಳಸಿಯೇ ಬಣ್ಣ ಬಳಿದಿದ್ದಾರೆ ಎಂದೇ ಭಾವಿಸೋಣ, ಆಗ ಕೇವಲ ಕಂದು ಅಥವ ಕೆಂಪು ಬಣ್ಣ ಪಡೆಯಬಹುದು. ಉಳಿದ ಬಣ್ಣಗಳು ಎಲ್ಲಿಂದ ಬಂದವು!? ಇನ್ನು ಉಳಿದ ಬಣ್ಣಗಳನ್ನು ಕೃತಕವಾಗಿ ತಯಾರಿಸುವವರಿಗೆ ಕೇವಲ ಕೆಂಪುಬಣ್ಣ ತಯಾರಿಸುವುದು ದೊಡ್ಡ ವಿಷಯವೆ!?? ಇನ್ನೂ ಒಂದು ಅಂಶ ಏನಪ್ಪಾ ಅಂದ್ರೆ ರಕ್ತಗಳೂ ಕೆವಲ ದನಕ್ಕೆ ಮಾತ್ರವಲ್ಲ ಇನ್ನುಳಿದ ಎಲ್ಲ ಸಕಲ ಪ್ರಾಣಿಗಳಲ್ಲಿಯೂ ಇದೆ ಅಲ್ಲವೇ!?

        ರಂಜಕ ಹಾಗು ಕ್ಯಾಲ್ಸಿಯಂಗಳನ್ನು ಗೊಬ್ಬರಕ್ಕೆ ಬಳಸಲು ದನದ ಮೂಳೆಗಳಿಂದ ತೆಗೆಯುತ್ತಾರೆ ಎನ್ನುವ ಮಾತು ನಂಬಲು ಸಾಧ್ಯವೇ!?? ಕೇವಲ ದನವಲ್ಲ, ಪ್ರತಿಯೊಂದು ಜೀವಿಯ ಮೂಳೆಗಳಲ್ಲಿ ಕ್ಯಾಲ್ಸಿಯಂ ಹಾಗೂ ರಂಜಕ ಇರುವುದೆನೋ ಹೌದು, ಆದರೆ ಜೀವಿಯ ಹೊರತಾಗಿಯೂ ರಂಜಕ ಹಾಗು ಕ್ಯಾಲ್ಸಿಯಂ ಪಡೆಯಲು ಸಾಧ್ಯ ಎಂಬ ಮಾತು ಅಷ್ಟೇ ಸತ್ಯ. ರಂಜಕವನ್ನು ಜ್ವಾಲಾಮುಖಿಗಳಿಂದ ಪಡೆಯಲಾಗುತ್ತದೆಯೇ ಹೊರತು ಜೀವಿಗಳಿಂದಲ್ಲ. ಇನ್ನು ಕ್ಯಾಲ್ಸಿಯಂ ಭೂಮಿಯಲ್ಲಿ ಹಲವಾರು ಕಡೆಗಳಲ್ಲಿ ಸಿಗುತ್ತದೆ. ಕಲ್ಲುಗಳಲ್ಲಿಯೂ ಕ್ಯಾಲ್ಸಿಯಂ ಇದೆ.  ಕೇವಲ ಪ್ರಾಣಿಗಳ ಮೂಳೆಗಳಲ್ಲಿ ಮಾತ್ರವಲ್ಲ. ಲೇಖಕರ ಅಭಿಪ್ರಾಯ ಹೇಗಿದೆ ಅಂದ್ರೆ ಸಕಲ ಜೀವ ಸಂಕುಲವೂ ಇಂಗಾಲದಿಂದ ಆಗಿದೆ ಎಂಬ ಕಾರಣಕ್ಕೆ ಇಂಗಾಲ ಕೇವಲ ಜೀವಿಗಳ ದೇಹದಲ್ಲಿ ಮಾತ್ರವೇ ಸಿಗುತ್ತದೆ, ಹೊರಗೆ ಇಂಗಾಲದ ಒಂದು ಅಣುವೂ ಇಲ್ಲ ಎಂದು ವಾದ ಮಾಡಿದಂತಿದೆ. ಕಬ್ಬಿಣದ ಅಂಶದ ಮಾತ್ರೆಗಳಲ್ಲಿ ದನದ ರಕ್ತದಿಂದ ತೆಗೆದ ಕಬ್ಬಿಣದ ಅಂಶ ಇರುತ್ತದೆ ಎಂಬ ಮಾತು ಸಕಲರೂ ನಗುವಂತೆ ಮಾಡಿದೆ. ಕಬ್ಬಿಣದ ಅಂಶ ನೀವು ಕುಡಿಯುವ ನೀರಿನಲ್ಲಿಯೂ ತಿನ್ನುವ ಸಕಲ ಸೊಪ್ಪುಗಳಲ್ಲಿಯೂ ಇದೆ. ಅದಕ್ಕೆ ದನದ ರಕ್ತದ ಅವಷ್ಯಕತೆ ಇದೆ ಎನ್ನುವುದು ನನಗೆ ಅವರ ವಿಜ್ಞಾನದ ಜ್ಞಾನವನ್ನು ಪ್ರಶ್ನಿಸುವಂತೆ ಮಾಡಿದೆ.ಹಲವಾರು ಔಷಧಗಳಲ್ಲಿ ದನಗಳ ಮೂಲದಿಂದ ಬಂದ ವಸ್ತುಗಳನ್ನು ಬಳಸುತ್ತಾರೆ ಎನ್ನುವುದು ಲೇಖಕರ ವಾದ. ಆದರೆ ಲೇಖಕರು ಬಲವಂತವಾಗಿ 'ಪ್ರಾಣಿ' ಎನ್ನುವ ಶಬ್ದವನ್ನು ತೆಗೆದು 'ದನ' ಎನ್ನುವ ಶಬ್ದವನ್ನು ತುರುಕಲು ಪಟ್ಟ ಸಾಹಸ ಎದ್ದು ಕಾಣುತ್ತದೆ. ಹಲವಾರು ಔಷಧಗಳಲ್ಲಿ ಪ್ರಾಣಿಗಳ ಮೂಲದ ಉತ್ಪನ್ನ ಬಳಸುತ್ತಿದ್ದರು ಎನ್ನುವ ಮಾತು ನಿಜ. ಆದರೆ ಈಗ ಅಲ್ಲ, ಹಲವಾರು ವರ್ಷಗಳ ಹಿಂದೆ. ಈಗ ಆಧುನಿಕ ವೈದ್ಯಶಾಸ್ತ್ರದಲ್ಲಿ ಅಗತ್ಯವಿರುವ ಎಲ್ಲ ವಸ್ತುಗಳನ್ನು ಕೃತಕವಾಗಿಯೆ ತಯಾರಿಸುತ್ತಾರೆಯೇ ಹೊರತು ಇಗಲೂ ಈ ನವಯುಗದಲ್ಲಿಯೂ ಮನುಷ್ಯ ಪ್ರಾಣಿಗಳನ್ನೇ ಅವಲಂಭಿಸಿಲ್ಲ. ನಮ್ಮ ಲೇಖಕರು ಮಧುಮೇಹ ಚಿಕಿತ್ಸೆಗೆ ಬಳಸುವ ಇನ್ಸುಲಿನ್ ಗೆ ದನವೇ ಮೂಲ ಎಂಬ ತಮ್ಮ ಅತ್ಯುನ್ನತ ವಾದವನ್ನು ಮಂಡಿಸಿದ್ದಾರೆ. ಆದರೆ ಇನ್ಸುಲಿನ್ ಗಾಗಿ ಪ್ರಾಣಿಯನ್ನು ಮನುಷ್ಯ ಅವಲಂಭಿಸಿಲ್ಲ. ಪ್ರಾಣಿಮೂಲದಿಂದ ಇನ್ಸುಲಿನ್ ತಯಾರಿಸುವುದನ್ನು 30 ವರ್ಷಗಳ ಹಿಂದೆಯೇ ನಿಲ್ಲಿಸಲಾಗಿದೆ. ಕಾರಣ ಇಷ್ಟೇ, ಇನ್ಸುಲಿನ್ ಅನ್ನು ಹಂದಿಯ ಮೂಲಕ ತಯಾರಿಸಲಾಗುತ್ತಿತ್ತು. ಅದು ಹಲವರಲ್ಲಿ ಅಲರ್ಜಿಯನ್ನು ಉಂಟುಮಾಡುತ್ತಿತ್ತು. ಹಾಗಾಗಿ ಹಂದಿಯ ಉತ್ಪನ್ನದಲ್ಲಿ ಅಲರ್ಜಿಹೊಂದಿದ ವ್ಯಕ್ತಿಗಳು ಮಾತ್ರ ದನದ ಮೂಲದ ಇನ್ಸುಲಿನ್ ಬಳಸುತ್ತಿದ್ದರು. ಆದರೆ ದನದ ಮೂಲದ ಇನ್ಸುಲಿನ್ ಹಂದಿಯಷ್ಟು ಮನುಷ್ಯನ ದೇಹಕ್ಕೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಈಗ ಅವೆರಡನ್ನು ಬಿಟ್ಟು ಲ್ಯಾಬ್ ಗಳಲ್ಲಿ ಕೃತಕವಾಗಿ ತಯಾರಿಸಿದ ಇನ್ಸುಲಿನ್ ಬಳಸಲಾಗುತ್ತದೆ. ಇಲ್ಲಿ ಲೇಖಕರು ಪರ್ಯಾಯವಾಗಿ ಬಳಸುವ ದನದ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಪ್ರಮುಖವಾಗಿ ಬಳಸುತ್ತಿದ್ದ ಹಂದಿಯ ಬಗ್ಗೆ ಬರೆದಿಲ್ಲ.

         ಲೇಖಕರು ಕೊಲಾಜೆನ್ ಎನ್ನುವ ಅಂಟು ಪದಾರ್ಥವನ್ನು ಚರ್ಮದ ಚಿಕಿತ್ಸೆಗೆ, ಮೂತ್ರ ನಿಯಂತ್ರಣಕ್ಕೆ ಹೀಗೆ ಹಲವಾರು ಸಮಸ್ಯೆಗೆ ಬಳಸುತ್ತಾರೆ, ಅದನ್ನೂ ದನದ ಚರ್ಮವನ್ನು ಸುಲಿದೇ ತಯಾರಿಸುತ್ತಾರೆ ಎಂಬ ಮಾತನ್ನು ವ್ಯಕ್ತಪಡಿಸಿದ್ದಾರೆ. ಕೊಲಾಜೆನ್ ಸಕಲ ಜೀವಿಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಪ್ರೋಟೀನ್. ಅದನ್ನು ಕೇವಲ ದನದ ಮೂಲಕವೇ ತೆಗೆಯುವ ಅಗತ್ಯವಿಲ್ಲ. ಕಾರ್ಖಾನೆಗಳಲ್ಲಿ ಮೊದಲು ಕೊಲಾಜೆನ್ ಗಳನ್ನು ಮೀನಿನ ಮೂಲಕ ತೆಗೆಯುತ್ತಿದ್ದರೇ ಹೊರತು ಕೇವಲ ದನಗಳಿಂದ ಅಲ್ಲ. ಈಗಂತೂ ಮನುಷ್ಯ ಕೊಲಾಜೆನ್ ಗಾಗಿ ಯಾವ ಪ್ರಾಣಿಯನ್ನೂ ಅವಲಂಭಿಸಿಲ್ಲ. ಎಲ್ಲವೂ ಕೃತಕವಾಗಿಯೇ ತಯಾರಿಸಲಾಗುತ್ತದೆ. ಕಾರಣ ಇಷ್ಟೇ, ಕೇವಲ ಪ್ರಾಣಿಮೂಲಗಳಿಂದ ಪಡೆಯುವ ಅತ್ಯಲ್ಪ ಪ್ರಮಾಣದ ಕೊಲಾಜೆನ್ ಈಗಿನ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲಾ. ಮೇಣದಬತ್ತಿ, ಶೇವಿಂಗ್ ಕ್ರೀಮ್, ಸಾಬೂನುಗಳಲ್ಲಿ ದನದ ಕೊಬ್ಬನ್ನು ಬಳಸುತ್ತಾರೆ ಎನ್ನುವುದು ತಪ್ಪು. ಮೇಣದಬತ್ತಿ ಕ್ರಯಾನ್ ಗಳಲ್ಲಿ ಹೈಡ್ರೋ ಕಾರ್ಬನ್ ನ ಉಪ ಉತ್ಪನ್ನವಾದ ಮೇಣವನ್ನು ಬಳಸುತ್ತಾರೆಯೇ ಹೊರತು ಪ್ರಾಣಿ ಮೂಲದ ಕೊಬ್ಬನ್ನಲ್ಲ. ಹಾಗೆಯೇ ಶೇವಿಂಗ್ ಕ್ರೀಮ್ ಹಾಗೂ ಸಾಬೂನುಗಳಲ್ಲಿ ವನಸ್ಪತಿ ಎಣ್ಣೆಯನ್ನು ಬಳಸುತ್ತಾರೆ. ಯಾವುದೇ ಪ್ರಾಣಿಮೂಲದ ಕೊಬ್ಬಿನ ಬಳಕೆ ಇಲ್ಲ. ಹಲವಾರು ಲೆದರ್ ಉತ್ಪನ್ನಗಳಲ್ಲಿ ದನದ ಚರ್ಮ ಬಳಸಲಾಗುತ್ತದೆ ಎಂಬ ಮಾತೂ ಸತ್ಯವಲ್ಲ, ಕೇವಲ ದನದ ಚರ್ಮದಿಂದ ಮಾತ್ರವೇ ಚರ್ಮದ ಉದ್ಯಮ ನಿಂತಿಲ್ಲ, ಹಲವಾರು ಪ್ರಾಣಿಯ ಚರ್ಮದ ಬಳಕೆ ಮಾಡಲಾಗುತ್ತದೆ. ಆದರೆ ಈಗ ಚರ್ಮದ ಬಳಕೆ ದುಬಾರಿ ಎನ್ನುವ ಕಾರಣಕ್ಕೆ ಚರ್ಮದ ಬದಲು ಚರ್ಮದ ಪರ್ಯಾಯವಾಗಿ Synthetic Leather ಎನ್ನುವ ಕೃತಕ ಉತ್ಪನ್ನವನ್ನು ಬಳಸಲಾಗುತ್ತದೆ. ಇದು ಚರ್ಮದ ಉತ್ಪನ್ನ ಗಳಿಗಿಂತ ಅಗ್ಗವಾಗಿದ್ದು ಧೀರ್ಘ ಬಾಳಿಕೆಯೂ ಬರುತ್ತದೆ ನೋಡಲು ಚರ್ಮಗಳಂತೆಯೆ ಕಾಣುತ್ತದೆ. ಅತೀ ಹೆಚ್ಚಾಗಿ ಸ್ಪೋಟಕಗಳಲ್ಲಿ ಹಾಗೆಯೆ ಆಹಾರ ಪದಾರ್ಥಗಳಲ್ಲಿಯೂ ಬಳಸಲ್ಪಡುವ ಜಿಲಾಟಿನ್ ಎನ್ನುವುದು ದನದ ಮೂಲದ್ದು ಎನ್ನುವ ಮಾತು ಅರ್ಧ ಸತ್ಯ, ಜಿಲಾಟಿನ್ ಗಾಗಿ ಮನುಷ್ಯ ಕೇವಲ ದನವನ್ನು ಅವಲಂಭಿಸಿಲ್ಲಾ. ಹಂದಿ, ಕೋಳಿ, ಕುರಿ, ಮೀನು ಹಾಗೆಯೆ ದನವೂ ಕೂಡಾ. ಆದರೇ ಅತೀ ಹೆಚ್ಚಾಗಿ ಜಿಲಾಟಿನ್ ಉತ್ಪಾದಿಸಲ್ಪಡುವುದು ಮೀನುಗಳಿಂದಲೆ ಹೊರತು ದನಗಳಿಂದಲ್ಲ. ಕಾರಣ ದನಗಳಿಂದ ಉತ್ಪಾದಿಸಿದ ಜಿಲಾಟಿನ್ ಗಳಿಗಿಂತ ಮೀನಿನ ಮೂಲಕ ಪಡೆದ ಜಿಲಾಟಿನ್ ಶಕ್ತಿಯುತವಾಗಿರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಇವೆಲ್ಲವನ್ನು ಗೋವುಗಳು ತಾನಾಗಿಯೇ ಸತ್ತಮೆಲೂ ಪಡೆಯಬಹುದು ಎಂಬ ಮಾತು ತಪ್ಪು. ಚದುರಿದ ಯಾವುದೋ ಊರುಗಳಲ್ಲಿ ಪ್ರಾಣ ಬಿಡುವ ಪ್ರಾಣಿಗಳಿಂದ ಇದನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಸ್ಥಳದಲ್ಲಿ ದಿನಕ್ಕೆ ಸಾವಿರ ದನಗಳನ್ನು ಕಡಿದು ಉತ್ಪಾದಿಸಬೆಕಾಗುತ್ತದೆ." ಎಂಬ ಅತ್ಯಮೂಲ್ಯ ಮಾತನ್ನು ಹೊರಗೆ ಹಾಕಿದ್ದಾರೆ.

       ಹಾಗಾದರೆ ಈಗ ನನ್ನದೂ ಒಂದು ಪ್ರಶ್ನೆಯಿದೆ... "ಹಲವಾರು ಜನರು ತಮ್ಮ ದೇಹವನ್ನೂ, ಕಿಡ್ನಿಯನ್ನೂ, ಇನ್ನು ಕೆಲವರು ಕಣ್ಣನ್ನೂ ತಾನು ಸತ್ತ ನಂತರ ಇತರರಿಗೆ ದಾನಮಾಡುವುದಾಗಿ ಸಹಿ ಹಾಕಿರುತ್ತಾರೆ. ಈಗ ಲೇಖರಕದ್ದೇ ಅಭಿಪ್ರಾಯದ ಪ್ರಕಾರ ಯೊಚಿಸುವುದಾದರೆ, ಆ ರೀತಿ ವ್ಯಕ್ತಿ ಎಲ್ಲೋ ಸತ್ತರೆ ಆತನ ಅಂಗಗಳನ್ನು ಸಂಗ್ರಹಿಸುವುದು ಕಷ್ಟ. ಹಾಗಾಗಿ ಆತನನ್ನು ಮೊದಲೇ ಆಸ್ಪತ್ರೆಯಲ್ಲಿಯೇ ಸಾಯಿಸಿ ಅಂಗಗಳನ್ನು ಪಡೆಯುವುದು ಉತ್ತಮ ಎಂಬುದು ನಿಮ್ಮ ಅಭಿಪ್ರಾಯವೇ!?".... ಯೋಚಿಸಿ.

                                                                                                                                    -ಜಿತೋಸ್ಮಿ
Photo Credit: 3dcoaching

Author image
About the Author
ಹೆಸರು:ಶ್ರೀ ಕೆ ಎಸ್ ಸತ್ಯನಾರಾಯಣ.
▪ಶ್ರೀ ಕೆ ಎಸ್ ಸತ್ಯನಾರಾಯಣ ಇವರು ಮೂಲತಃ ಹೊನ್ನಾವರ ನಿವಾಸಿಯಾಗಿದ್ದು ಪ್ರಸ್ತುತ ಉಡುಪಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂಲ್ಕಿ ವಿಜಯ ಕಾಲೇಜಿನಲ್ಲಿ B.C.A ಪದವಿ ವ್ಯಾಸಾಂಗವನ್ನು ಪೂರ್ಣಗೊಳಿಸಿ ಇದೀಗ ಸ್ನಾತಕೋತ್ತರ M.C.A ವ್ಯಾಸಾಂಗ ಮಾಡುತ್ತಿದ್ದಾರೆ. ಕಂಪ್ಯೂಟರ್ ತಾಂತ್ರಿಕ ವಿಷಯದಲ್ಲಿ ಹೊಸ ಹೊಸ ಪರೀಕ್ಷೆಗಳನ್ನು ನಡೆಸುವ ಇವರು ಎಡಿಟಿಂಗ್, ಕೋಡಿಂಗ್ ಮುಂತಾದವುಗಳಲ್ಲಿ ಪರಿಣತಿ ಹೊಂದಿದ್ದಾರೆ. ಚಿತ್ರಕಲೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದು ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದವರು. ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡ ಇವರು ಅಂಕಣ ಬರೆಯುವುದಲ್ಲಿ ಅತಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇವರ ಲೇಖನ ಬರಹಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.
ದೂರವಾಣಿ:7760402010

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.