ಕುಸುಮ ದರ್ಪಣ - ಸಂಚಿಕೆ ೧


ಕುಸುಮ ಷಟ್ಪದಿಯ ಲಘುಕವಿತೆಗಳು

ಕುಸುಮ ದರ್ಪಣ ೦೦೧
ಸಹಜ

ಮಹಡಿ ಮೂರರ ಮನೆಯ
ಮಹದಾದ ಸಂಸಾರ
ಬಹುವಾಗಿ ನೆಮ್ಮದಿಯ ಹುಡುಕುತಿತ್ತು |
ಬಹಳ ಕಷ್ಟದ ಮನೆಯ
ಸಹಜ ನಿರ್ಮಲ ಚದರ
ಸಿಹಿಯಾಗಿ ಜೀವನವ ಕಳೆಯುತಿತ್ತು ||

ಕುಸುಮ ದರ್ಪಣ ೦೦೨
ಮತ್ಸರವ ಬಿಡು

ಬಿಡು ನೀನು ಮತ್ಸರವ
ಅಡಿಗಡಿಗೆ ಹಾರುತಲಿ
ಪಡು ತೋಷ ನಮ್ಮವರ ಜಯವ ಕಂಡು |
ಕೊಡು ನೀನು ಪ್ರೋತ್ಸಾಹ
ನುಡಿ ಮಧುರ ಸಲಹಗೆಳ
ನಡೆ ಮುಂದೆ ಎಲ್ಲವರ ಸೇರಿಕೊಂಡು ||

ಕುಸುಮದರ್ಪಣ ೦೦೩
ಬಾಳು ಹೀಗೆ

ಡಂಬವನು ಮಾಡದಿರು
ಇಂಬು ಕೊಡದಿರು ನಶೆಗೆ
ಡಿಂಭದಂತೆಯೆ ಬಾಳು ಕಪಟವಿರದೇ |
ನಂಬುಗೆಯ ಮುರಿಯದಿರು
ಜಂಭ ಪಡದಿರು ಜತೆಗೆ
ಗುಂಬ ನೀಡದೆ ಬಾಳು ಗುಂಭವಿರದೇ ||

ಕುಸುಮ ದರ್ಪಣ ೦೦೪
ಭಕುತಿ

ದಿನದೊಳಗೆ ನೂರೊಂದು
ಘನಜಪವ ಮಾಡುವಗೆ
ತನುಭಕುತಿಯಿಲ್ಲದೊಡೆ ಫಲವೆಲ್ಲಿದೆ |
ಮನದಿ ಭಕುತಿಯನಿಟ್ಟು
ಜನಿಸಿದೊಡೆ ಭಾವಲಯ
ಘನಫಲವು ಖಚಿತವದು ಮನಶುದ್ಧಿಗೆ ||

ಕುಸುಮ ದರ್ಪಣ ೦೦೫
ದೋಚುವವರು

ಜಗದೊಳಗೆ ಮುಗ್ಧತೆಯ
ಅಗೆದಗೆದು ಸೀಳುತಿಹ
ಸುಗುಣರಂತಿರ್ಪರೇ ದೋಚುವವರು |
ದುಗುಡ ದುಮ್ಮಾನಗಳ
ಬಗೆಹರಿಸಲೆಂದೆನುತ
ಮುಗಿವ ಕೈಗಳ ಹಿಡಿದು ಎಳೆಯುವವರು ||

                                              -ಶ್ರೀಸುತ

■ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು


[ಕಠಿಣ ಪದಗಳ ಅರ್ಥ:
ಡಂಬ= ಮೋಸ
ಇಂಬು= ಎಡೆ
ಡಿಂಭ= ಎಳೆಯ ಶಿಶು
ಗುಂಬ= ಸಮಸ್ಯೆ
ಗುಂಭ= ಗುಟ್ಟು]

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.