೧. ಅಡ್ಡಿಗಳ ಎದುರಿಸು
ಬೆಳೆಗಳಿಗೆ ಬಹುವಾಗಿ ರೋಗ ಬಾಧಿಪುದು
ಬೆಳೆಯದ ಕಳೆಗಳಿಗೆ ರೋಗಗಳು ಬರದು
ಇದು ಪ್ರಕೃತಿಯಲಿ ಕಾಣುವ ನಿತ್ಯ ಸತ್ಯ
ಬದುಕಿನ ಸವಾಲುಗಳನೆದುರಿಸುವುದಗತ್ಯ
೨. ಸಾಸಿವೆಯಲ್ಲಿ ಸಾಗರ
ಬಾಲ ಕೃಷ್ಣನ ತೆರೆದ ಪುಟ್ಟ ಬಾಯಿಯಲ್ಲಿ
ತಾಯಿ ಯಶೋದೆ ಕಂಡಳು ಬ್ರಹ್ಮಾಂಡವೆಲ್ಲ
ಆಯ್ದ ಚೊಕ್ಕ ನಾಲ್ಕೇ ನಾಲ್ಕು ಸಾಲುಗಳಲ್ಲಿ
ಸಾಗರದರ್ಥವಿದೆ, ಚುಟುಕ ಸಾಸಿವೆಯಲ್ಲಿ.
೩. ಏಕಾಂಗಿ
ಬಂದದ್ದು ಏಕಾಂಗಿ
ಹೋಗುವುದು ಒಬ್ಬಂಟಿಯಾಗಿ
ನಡುವೆ ಬಂದು ಹೋಗಿ
ಮರೆಯಾಗುವರು, ಚಿಂತೆ, ಏಕಾಗಿ?
೪.ಪರಸ್ಪರ ಗೌರವಿಸಿ
ಕವಿಗೆ ಕವಿ ಮುನಿವಂ
ಮಾತು ಮರೆಯಾಗಿ ಕವಿಗೆ
ಕವಿ ಪ್ರೀತಿ ತೋರುವಂ
ಮೆಚ್ಚುವಂ ಆದರೆ ಹೇಗೆ?
೫. ಗುಬ್ಬಿ ಎಲ್ಲಿ?
ಗುಬ್ಬಿ ಅವಸಾನದಂಚಿನಲ್ಲಿ
ಮರೆಯಾದರೂ ಕಾಣಬಹುದು ಚಿತ್ರದಲ್ಲಿ
ಅಜ್ಜಿಯ ಕಾಗಕ್ಕ ಗುಬ್ಬಕ್ಕ ಕಥೆಯಲ್ಲಿ
ಗುಬ್ಬೀ ... ಗುಬ್ಬೀ ...
ನೀನೆಲ್ಲಿರುವೆ ಸುಬ್ಬೀ ಸುಬ್ಬೀ ?
ನೀನಳಿವಿನಂಚನ್ನು ತಬ್ಬಿ!
೬. ಚಳಿ ಮಾಯ
ಕರಾವಳಿಯಲ್ಲಿ
ನಿನ್ನೆ ಮೊನ್ನೆ ವರೆಗೆ ಇದ್ದ
ಕಚಗುಳಿಯಿಡುತ್ತಿದ್ದ
ಚಳಿ ಎಲ್ಲಿ?
ಬೆವರಿನ ಓಳಿ
ಮಾಮೂಲು ಸುರುವಾಯಿತಿಲ್ಲಿ
ಇದ್ದಿದ್ದರೆ ಚಳಿ
ಇದ್ದೇ ಇದೆಯಲ್ಲ ಕಂಬಳಿ
ಹಾಗೂ ನಲ್ಲೆಯ ಕೆನ್ನೆಯ ಗುಳಿ.
೭. ನನ್ನೊಳಗಿನ ಕತ್ತಲು
ನನ್ನೊಳಗಿನ ಕತ್ತಲನು ನೀಗು ಭಗವಂತ
ಎಂದು ನಾವು ಭಕ್ತಿಯಲಿ ಬೇಡಿದರೆ ಆತ
ತಮದಂಧಕಾರ ಕಳೆದು ದಾರಿ ತೋರಬಲ್ಲ
ಸುವಿಚಾರ ಅನುಸಂಧಾನ ಸವಿಯಬೆಲ್ಲ.
೮. ಗಾರುಡಿಗ
ದ.ರಾ.ಬೇಂದ್ರೆಯವರು ಶಬ್ದಗಳ ಗಾರುಡಿಗ
ಕಾವ್ಯ ಭಕ್ತರು ಇವರ ಸ್ಮರಣೆಯ ಆಗಾಗ
ಮಾಡುವರು, ಅವರು ಕಾವ್ಯ ರಸಋಷಿ
ಜಾನಪದ ಸೊಗಡಿನವರ ಕವನ ಓದಲು ಖುಷಿ.
-ಶ್ರೀ ಗುಣಾಜೆ ರಾಮಚಂದ್ರ ಭಟ್
ಗುಣಾಜೆ ಚಂದ್ರಮ - ೬ ನ್ನು ಓದಲು ಮುಂದಿನ ಲಿಂಕ್ ಗೆ ಭೇಟಿ ನೀಡಿ - ಚಂದ್ರಮ ೬
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.