ಸಾಯಿಗೀತೆ - ೧
ರಚನೆ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಶರಣು ಸಾಯಿನಾಥ - ತ್ರಿವುಡೆ ತಾಳ
ರಾಗ: ಹಂಸಾನಂದಿ
ಶರಣು ಶಿರಡೀನಾಥ ದೇವಗೆ ನಮಿಪೆ ಮಂಗಳಮೂರ್ತಿಯೇ
ಶರಣು ಸದ್ಗುರು ಭಯವಿನಾಶಗೆ ನಮೋ ಎನ್ನುವೆ ದೀಪವೇ
ಶರಣು ದ್ವಾರಕಮಯಿ ಸುಲೋಚನ ಸತ್ಯದರ್ಶಕ ಶಕ್ತಿಯೇ
ಶರಣು ದತ್ತವತಾರಿರೂಪನೆ ನಮೋ ಎನ್ನುವೆ ದೀಪವೇ ||೧||
ದೋಷ ಕಳೆದೆಮಗೊಂದು ಸದ್ಗತಿ ತೋಷದಲಿ ಕೊಡು ನಾಥನೇ
ಕ್ಲೇಶ ತಡೆಯುತ ಹರಸು ಭಕ್ತರ ಬಿಡದೆ ನಿನ್ನನು ನಂಬುವೆ
ಶೇಷಶಯನನೆ ನೀಡು ಸನ್ಮತಿ ಪೋಷಿಸುತ್ತಲಿ ದೇವನೇ
ಕೇಶವನು ನೀ ಈಶನೂ ನೀ ನೀನೆ ಸಕಲವು ಎನ್ನುವೆ ||೨||
ಹರುಷದಲಿ ಕೊಂಡಾಡುತಲಿ ನಾ ಹರಿಸುವೆನು ಮನ ನಿನ್ನಲೀ
ವರರಥದಲಿ ನಾ ನಿನ್ನ ಕೂರಿಸಿ ಸಾಗುವೆನು ಅತಿ ಹರುಷದಿ
ನಿರತ ಕೀರ್ತನೆ ನಿನ್ನ ಸೇವನೆ ಧರಿಪೆ ನಾಮವ ಭಕುತಿಲೀ
ಕರದಿ ಅಭಯವ ನೀಡು ದೇವನೆ ತಾಯಿ ತಂದೆಯ ರೂಪದಿ ||೩||
ಸಾಯಿನಾಥನೆ ಜಯತು ಜಯಜಯ ಮಾಯೆಯಲಿ ನೀ ನಿಲುವೆಯಾ
ನ್ಯಾಯಮೂರುತಿ ಸತ್ಯ ಸಾರಥಿ ಸಚ್ಚಿದಾನಂತನಂತನೇ
ಸಾಯಿ ಶ್ರೀಸುತ ನಿನ್ನ ಮಹಿಮೆಯ ಜೀಯ ಪೊಗಳುವೆ ಬರುವೆಯಾ
ಸಾಯಿ ಶಿರಡೀ ಸಾಯಿಬಾಬನೆ ಕರುಣಿಸತ್ಪರಿಪಾಲನೇ ||೪||
-ಶ್ರೀಸುತ
Photo Credit: shirdisaibabaexperiences
ಸೂಪರ್ ಕವನ....😍
ReplyDeleteಧನ್ಯವಾದಗಳು ಪಂಕಜಾ ಮೇಡಮ್
ReplyDelete