ಇಳೆಗಿಳಿಯಿತು
ವರ್ಷಧಾರೆ
ಕೊಳೆಯನೆಲ್ಲಾ ಕಳೆಯಿತು |
ಕಳೆಗುಂದಿದ
ಮರಗಿಡಗಳ
ಮಳೆಹನಿ ಸಂತೈಸಿತು ||
ಮೋಹದಿಂದ
ಜಾರಿಬಂದು
ನದಿಮೂಲವನರಸಿತು |
ಬತ್ತಿ ಹೋದ
ಹೊಳೆಗಳೆಲ್ಲ
ಜುಳು ಜುಳು ದನಿ ಮಾಡಿತು ||
ಭೂಮಿಯೊಳಗೆ
ಕುದಿಯುತಿದ್ದ
ಜ್ವಾಲೆಯನ್ನು ತಣಿಸಿತು |
ಜ್ವಲಿಸುತಿದ್ದ
ರವಿತಾಪವ
ಕರುಣೆ ತೋರಿ ಇಳಿಸಿತು ||
ಬಯಲಿನಲ್ಲಿ
ಪ್ರಾಣಿಪಕ್ಷಿ
ನೀರ ಕೊಳವ ಪಡೆಯಿತು |
ಸುಡುಬಿಸಿಲಿನ
ಒತ್ತಡವನು
ತೊರೆದು ನಲಿದಾಡಿತು ||
ನೆಲದ ಮೇಲೆ
ಹಚ್ಚ ಹಸುರು
ಹೊದಿಕೆಯಂತೆ ಹಬ್ಬಿತು |
ಜೀವಿಗಳ
ಕಣ್ಣುಗಳು
ತಂಪುಗೊಂಡು ನಲಿಯಿತು ||
ವರ್ಷಧಾರೆ
ಇಳೆಗದುವೆ
ಜೀವ ಕೊಡುತ ಹಾಡಿತು |
ವೈಭವದ
ಮೆರವಣಿಗೆ
ಪ್ರಕೃತಿಯಲಿ ನಡೆಯಿತು ||
-ಶ್ರೀಸುತ
Photo Credit: Farms
2016 ರ ಯುಗಪುರುಷ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಗೊಂಡ ಕವಿತೆ.
ಚೆಂದದ ಕವಿತೆ :)
ReplyDeleteಧನ್ಯವಾದಗಳು... to anonymous
Delete