ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ ।
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್॥
'ವೇದ' ಎಂದರೆ 'ಜ್ಞಾನ' ಅವುಗಳು ಭಾರತದ ಅತ್ಯಮೂಲ್ಯ ಸಂಪತ್ತುಗಳು. ಸಂಪತ್ಭರಿತ ಭಾರತವನ್ನು ಹಲವಾರು ಲೂಟಿಕೊರರು ಹಲವಾರು ರೀತಿಯಲ್ಲಿ ಲೂಟಿ ಮಾಡಿದ್ದರೂ ಜ್ಞಾನವನ್ನು ಲೂಟಿಮಾಡಲು ಸಾಧ್ಯವಾಗಿರಲಿಲ್ಲ. ಬ್ರಿಟಿಷರು ಜ್ಞಾನವನ್ನು ಲೂಟಿ ಮಾಡದಿದ್ದರೂ ನಮ್ಮ ಜ್ಞಾನ, ಪರಂಪರೆ, ಸಂಸ್ಕೃತಿಯ ಮೇಲೆ ನಮಗೇ ಕೀಳರಿಮೆ ಬರುವಂತೆ ಮಾಡಿ ಹೋಗಿದ್ದಂತೂ ಸತ್ಯ. ಹಾಗಾಗಿಯೇ ಈ ಪ್ರಗತಿಪಪರು, ಬುದ್ದಿಜೀವಿಗಳು ಎನಿಸಿಕೊಳ್ಳುವವರು ಹುಟ್ಟಿಕೊಂಡು ಆ ಶಬ್ದಗಳಿಗಿರುವ ಸಾತ್ವಿಕ ಅರ್ಥಗಳನ್ನೇ ಇಲ್ಲದಂತಾಗಿಸಿದ್ದಾರೆ.
ಆದರೆ ಭಾರತೀಯ ವೇದಶಾಸ್ತ್ರಗಳ ಜ್ಞಾನಗಳಲ್ಲಿ ಹೊಸ ತಲೆಮಾರಿನ ವಿದೇಶಿಯರೂ ಆಸಕ್ತಿ ತೋರಿಸುವಂತೆ ಮಾಡಿದ್ದು ಮಾತ್ರ ಆದಿಶಂಕರರ 'ಅದ್ವೈತ ಸಿದ್ದಾಂತ' ಎಂದರೆ ಅದು ಅತಿಶಯೋಕ್ತಿಯಾಗಲಾರದು.
ನಾನು ಯಾರು? ನನ್ನ ಜನ್ಮದ ಉದ್ದೇಶವೇನು? ನನಗೂ ಈ ಜಗತ್ತಿಗೂ ಇರುವ ಸಂಬಂಧವೇನು?
ನಾವು ನೋಡುವ, ಅನುಭವಿಸುವ ಈ ಜಗತ್ತು ಎಲ್ಲಿಂದ ಬಂತು? ಯಾರ ಸೃಷ್ಟಿಯಿದು? ಇತ್ಯಾದಿ ಆಧುನಿಕ ವಿಜ್ಞಾನವನ್ನೂ ಕಾಡುವ ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸವನ್ನು ವೇದಗಳು ಮಾಡುತ್ತವೆ. ಈ ಭೌತಿಕ ಜಗತ್ತನ್ನು ಹೊರತುಪಡಿಸಿ ಇನ್ನೊಂದು ಜಗತ್ತಿದೆ ಎಂಬ ಅರಿವನ್ನು ಮೂಡಿಸುವುದು ವೇದಗಳ ಗುರಿ.
ಸಕಲ ಚರಾಚರ ಜಗತ್ತಿಗೆ ಮೂಲವಾದ “ಬ್ರಹ್ಮ” ಎಂಬ ತತ್ವವಿದೆ. ಅದೇ ಪರಮತತ್ವ. ಪರಮಾರ್ಥವೂ ಅದೇ ಆಗಿರುತ್ತದೆ. ಹಾಗೂ “ಬ್ರಹ್ಮ ಒಂದೇ ಸತ್ಯ; ಕಾಣುವ ಈ ಜಗತ್ತು ಮಿಥ್ಯಾ” ಎಂಬ ರಹಸ್ಯವನ್ನು ವೇದಾಂತ ತಿಳಿಸುತ್ತದೆ.
ಈ ಬ್ರಹ್ಮವನ್ನು ಅರಿತಾಗಲೇ ಸಂಸಾರದ ಭವ ಬಂಧನದಿಂದ ಮುಕ್ತಿ ಸಾಧ್ಯ. “ನಾನು ಯಾವಾಗಲೂ ಸುಖಿಯಾಗಿರಬೇಕು ನನಗೆಂದೂ ದುಃಖಬರಬಾರದು” ಎಂಬುದು ಪ್ರತಿಯೊಬ್ಬ ಜೀವಕೋಟಿಯ ಆಕಾಂಕ್ಷೆ. ಸುಖಕ್ಕಾಗಿಯೇ ಮನುಷ್ಯ ಯತ್ನಿಸುತ್ತಾನೆ. ಕಷ್ಟಪಡುತ್ತಾನೆ. ಕಪಿಯೊಂದು ಆಹಾರಕ್ಕಾಗಿ ಮರದಿಂದ ಮರಕ್ಕೆ ಹಾರಾಡುವಂತೆ ಮಾನವನ ಮನಸ್ಸು ಸುಖವನ್ನು ಲೌಕಿಕ ವಸ್ತುಗಳಲ್ಲಿ ಹುಡುಕುತ್ತಾ ಅಲೆದಾಡುತ್ತಾ ಕೊನೆಗೂ ನಿಜವಾದ ಸುಖವನ್ನು ಹೊಂದದೇ ಬಳಲುತ್ತದೆ. ಆದರೆ “ಸುಖ” ಹೊರಗಿನ ವಸ್ತುವಿನಲ್ಲಿಲ್ಲ, ಅದು ಅಂತರಾತ್ಮದಲ್ಲಿಯೇ ಇದೆ. ಬ್ರಹ್ಮಸಾಕ್ಷಾತ್ಕಾರದಿಂದಲೇ ನಿರತಿಶಯ ಆನಂದ ಲಭ್ಯ” ಎನ್ನುವುದನ್ನು ವೇದಾಂತ ಸ್ಪಷ್ಟಪಡಿಸುತ್ತದೆ. ವೇದಾಂತವು ಬ್ರಹ್ಮವಿಚಾರಕ್ಕೆ ಪ್ರಾಶಸ್ತ್ಯಕೊಡುತ್ತದೆ. ಶ್ರುತಿ,ಸ್ಮೃತಿ, ಬ್ರಹ್ಮಸೂತ್ರವೆಂದು ಪ್ರಸ್ಥಾನತ್ರಯ ವೇದಾಂತದ ಆಧಾರಸ್ತಂಭ. ವೇದಾಂತಗಳಲ್ಲೆಲ್ಲಾ “ಅದ್ವೈತ “ ಸಿದ್ಧಾಂತವು ಭಾರತಾದ್ಯಂತ ವ್ಯಾಪಕವಾಗಿದೆ. ಅದ್ವೈತ ಸಿದ್ದಾಂತಾವೇ ಪ್ರಾಚೀನದಿಂದಲೂ ವೇದಾಂತವೆಂದು ಪರಿಗಣಿಸಲ್ಪಟ್ಟಿದ್ದು, ಇತರ ಶಾಸ್ತ್ರಕಾರರು ಮಾಡುವ ವೇದಾಂತಿಮತ ಖಂಡನವೆಂದರೆ ಅದ್ವೈತ ಮತ ಖಂಡನವೇ ಆಗಿತ್ತು. ಈಗಲೂ ಮುಂದೂ ಸಹ ಅದರ ಜ್ಯೇಷ್ಠತೆ-ಶ್ರೇಷ್ಠತೆಗೆ ವ್ಯತ್ಯಾಸವಾಗಲು ಸಾಧ್ಯವಿಲ್ಲ.
ನಮಗೆ ಕಾಣಿಸುವ ಜಗತ್ತು ಕೇವಲ ಭ್ರಮೆ. ಇದರ ಮೂಲ ರೂಪ ಬೇರೆಯೇ ಇದೆ. ಅದು ಮನಸ್ಸು ಇಂದ್ರಿಯಗಳಿಗೆ ಗೋಚರವಾಗದ ತತ್ವ; ಬ್ರಹ್ಮತತ್ವ.
“ತತ್ತ್ವಮಸಿ”,
“ಅಹಂಬ್ರಹ್ಮಾಸ್ಮಿ”,
“ಏಕಮೇವಾದ್ವಿತೀಯಂ ಬ್ರಹ್ಮ”,
“ನೇಹನಾನಾಸ್ತಿಕಿಂಚನ”
“ಅದ್ವೈತಂ ಪರಮಾರ್ಥತಃ”
ಇತ್ಯಾದಿ ಶ್ರುತಿಸ್ಮೃತಿಗಳ ವಾಕ್ಯಗಳ ಬಲದಿಂದ ಪರಬ್ರಹ್ಮವೊಂದೇ ನಿತ್ಯ-ಸತ್ಯ. ಮತ್ತೆಲ್ಲವೂ ಇರುವಂತೆ ಭಾಸವಾಗುತ್ತವೆ ಎಂದು ಪ್ರತಿಪಾದಿಸಲಾಗಿದೆ. ಹಗ್ಗವನ್ನು ಹಾವೆಂದು ತಿಳಿಯುವಂತೆ ಈ ಜಗತ್ತು ಕಾಣಿಸುತ್ತದೆ- ಎಂಬ ಅದ್ವೈತ ತತ್ತ್ವವನ್ನು ಆದಿಶಂಕಕರು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳೆಂಬ ಪ್ರಸ್ಥಾನತ್ರಯಕ್ಕೆ ಭಾಷ್ಯ ಬರೆಯುವ ಮೂಲಕ ಜಗತ್ತಿಗೆ ಸಾರಿದ ಮಹಾನ್ ವಿಭೂತಿಪುರುಷರು.
ವಿವೇಕ ಚೂಡಾಮಣಿ ಮುಂತಾದ ಸ್ವತಂತ್ರ ಮೌಲಿಕ ಗ್ರಂಥಗಳಿಂದಲೂ ಅದ್ವೈತ ಸಿದ್ಧಾಂತವನ್ನವರು ಶ್ರುತಪಡಿಸಿದರು. ಶ್ರೀಗೌಡಪಾದರ ಮಾಂಡೂಕ್ಯಕಾರಿಕೆಯಲ್ಲಿ ಅದ್ವೈತ ಸಿದ್ಧಾಂತದ ಮೂಲಸೆಲೆ ಕಂಡು ಬರುವುದಾದರೂ, ಶ್ರುತಿ ಮತ್ತು ಯುಕ್ತಿಗಳಿಂದ ಅದಕ್ಕೆ ಪರಿಪೂರ್ಣರೂಪ ಕೊಟ್ಟವರು ಆದಿಶಂಕರರು. ಇತರ ಮತಗಳನ್ನು ಖಂಡಿಸಿ, ತನ್ನ ಮತವನ್ನು ಸಮರ್ಥಿಸುವಲ್ಲಿ ಆದಿಶಂಕರರ ಪ್ರತಿಭೆ ಪರಿಪೂರ್ಣ.
ವ್ಯಕ್ತಿ-ವ್ಯಕ್ತಿಗಳಲ್ಲಿ, ವಸ್ತು-ವಸ್ತುಗಳಲ್ಲಿ ಭೇದ ನಮ್ಮ ದಿನನಿತ್ಯ ಜೀವನದಲ್ಲಿ ಹಾಸುಹಿಕ್ಕಾಗಿ ಕ್ಷಣ-ಕ್ಷಣಕ್ಕೂ ತೋರಿ ಬರುತ್ತಿರುವಾಗ, ಅನಾದಿ ಕಾಲದಿಂದ ಬಂದ ಈ ಸಂಸಾರ ನಿತ್ಯ, ಸತ್ಯವೆಂಬ ಅನುಭವವಿರುವಾಗ ಅದ್ವೈತವನ್ನು ಸ್ಥಾಪಿಸುವುದು ಅಸಾಮಾನ್ಯ ಕಾರ್ಯ. ದ್ವೈತದಲ್ಲೇ ವ್ಯವಹರಿಸುವ ಎಲ್ಲ ಜನರನ್ನೂ ಅದ್ವೈತದತ್ತ ಸೆಳೆದುಕೊಳ್ಳುವ ಹಾಗೂ ದ್ವೈತವನ್ನು ಪ್ರತಿಪಾದಿಸುವ ಇತರ ಶಾಸ್ತ್ತ್ರಕಾರರನ್ನು ಸಮರ್ಥವಾಗಿ ಎದುರಿಸುವ ಪಾಂಡಿತ್ಯ ಆದಿಶಂಕರರದಾಗಿತ್ತು. ಆದ್ದರಿಂದಲೇ ಇದೇ ತಳಹದಿಯ ಮೇಲೆ ಇಂದಿನ ವೈಜ್ಞಾನಿಕ ಯುಗದಲ್ಲೂ ಅದ್ವೈತ ಸಿದ್ಧಾಂತವೇ ಪ್ರಸಿದ್ಧಿ ಹೊಂದುತ್ತಾ, ಅಚ್ಚಳಿಯದೆ ಉಳಿದಿದೆ.
ನಾನು ಎಂಬ ವ್ಯವಹಾರದಿಂದಲೇ “ಆತ್ಮ” ಸ್ವಯಂ ಸಿದ್ಧನಾಗುತ್ತಾನೆ. ಪ್ರಪಂಚದಲ್ಲಿ “ನಾನು ಇಲ್ಲ” ಎಂಬ ವ್ಯವಹಾರವೇ ಇಲ್ಲಾ. ಆತ್ಮ ಒಬ್ಬ ಇದ್ದಾನೆಯೇ? ಅಥವಾ ಇಲ್ಲವೇ? ಎಂಬ ಚರ್ಚೆಗೆ ಇಲ್ಲಿ ಆಸ್ಪದವೇ ಇಲ್ಲ. ಚಾರ್ವಾಕ ದೇಹಕ್ಕಿಂತ ಭಿನ್ನವಾದ ಆತ್ಮನನ್ನು ಒಪ್ಪುವುದಿಲ್ಲ. ಇಂದ್ರಿಯ ಅಥವಾ ಮನಸ್ಸೇ “ಆತ್ಮ” ಎಂಬುದು ಕೆಲವರ ವಾದ. ದೇಹ, ಇಂದ್ರಿಯ, ಮನಸ್ಸುಗಳಿಗಿಂತ ಭಿನ್ನವಾಗಿ ಚೈತನ್ಯರೂಪಿ “ಆತ್ಮ” ಇದ್ದಾನೆ. ಆಧ್ಯಾತ್ಮದ ಆಳಕ್ಕೆ ಹೋದಂತೆ ಅದರ ಅರಿವು ಚೆನ್ನಾಗಿಯೇ ಆಗುತ್ತದೆ.
ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿ ಈ ಮೂರು ಅವಸ್ಥೆಗಳು ನಮಗೆ ತಿಳಿಯುತ್ತವೆ. ಜಾಗ್ರತ್ತಿನಲ್ಲಿ ಹೊರಗಿನವಸ್ತುಗಳು ಅರಿವಾಗುತ್ತವೆ. ಸ್ವಪ್ನದಲ್ಲಿ ಆಂತರಿಕ ಕಲ್ಪನೆಗಳು ಮೂಡಿಬರುತ್ತವೆ. ಸುಷುಪ್ತಿಯಲ್ಲಿ ಶುದ್ಧ ಅರಿವು ಇರುತ್ತದೆ. ಕಾರಣ “ಗಾಢ ನಿದ್ರೆಯಿಂದ ಎಚ್ಚತ್ತ ವ್ಯಕ್ತಿ” “ಚೆನ್ನಾಗಿ ನಿದ್ರಿಸಿದೆನು”ಎನ್ನುತ್ತಾನೆ. ನಿದ್ರಿಸುವಾಗಲೂ ಜ್ಞಾನ ಅಥವಾ ಚೈತನ್ಯ ಇರುತ್ತದೆ- ಎನ್ನುವುದು ಇದರಿಂದ ತಿಳಿಯುತ್ತದೆ. ಇದರಿಂದ ಆತ್ಮನ ಅಸ್ತಿತ್ವ ಸ್ವಯಂ ಸಿದ್ಧ ಎಂದ ಮೇಲೆ ಬ್ರಹ್ಮತತ್ವವೂ ಸ್ವಯಂ ಸಿದ್ಧವೇ ಎಂಬುದಕ್ಕೆ
“ಆತ್ಮಾಚ ಬ್ರಹ್ಮ”
“ಸರ್ವಂಖಲ್ಪಿದಂ ಬ್ರಹ್ಮ”
”ಬ್ರಹ್ಮವಿದಾಪ್ನೋತಿಪರಮ್”
ಇತ್ಯಾದಿ ಶ್ರುತಿವಾಕ್ಯಗಳ ಪ್ರಮಾಣದಿಂದ “ಅದ್ವೈತ”ವು ಸಿದ್ಧವಾಗುತ್ತದೆ.
‘ಅದ್ವೈತ’ ಸಿದ್ದಾಂತದ ಬಹುಮುಖ್ಯ ಸ್ಲೋಕಗಳಲ್ಲಿ ಒಂದಾದ ನಿರ್ವಾಣ ಶಟಕವು ‘ನಾನು ಯಾರು?’
ಎಂಬ ಪ್ರಶ್ನೆಗೆ ಉತ್ತರಿಸುವ ಕೆಲಸ ಮಾಡುತ್ತದೆ ಅದರ ಸಾಲುಗಳನ್ನು ಗಮನಿಸೋಣ
ಮನೋಬುದ್ಧ್ಯಹಂಕಾರ ಚಿತ್ತಾನಿನಾಹಂ, ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ | ನ ಚ ವ್ಯೋಮ ಭೂಮಿರ್ನತೇಜೋ ನ ವಾಯಃ, ಚಿದಾನಂದರೂಪಃ ಶಿವೋಹಂ ಶಿವೋಹಂ ||
(ನಾನಲ್ಲ ಮನಸ್ಸು, ಬುದ್ಧಿ, ಅಹಂಕಾರ, ಅಥವಾ ಚಿತ್ತ. ನಾನಲ್ಲ ಪಂಚೇಂದ್ರಿಯ, ನಾನಲ್ಲ ಭೂಮಿ, ಆಕಾಶ, ಅಗ್ನಿ, ಅಥವಾ ವಾಯು (ಪಂಚಭೂತ ಗಳು). ನಾನು ಮಂಗಳಕರನಾದ (ಶಿವ) ಚಿದಾನಂದ ರೂಪನು.)
ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ, ನ ವಾ ಸಪ್ತಧಾತುಃ ನ ವಾ ಪಂಚಕೋಶಃ | ನ ವಾಕ್ಪಾಣಿಪಾದೌ ನ ಚೋಪಸ್ಥಪಾಯು, ಚಿದಾನಂದರೂಪಃ ಶಿವೋಹಂ ಶಿವೋಹಂ ||
(ನಾನಲ್ಲ ಉಸಿರು (ಪ್ರಾಣ), ಪಂಚ ವಾಯು ಕೂಡ ನಾನಲ್ಲ, ನಾನಲ್ಲ ಸಪ್ತ ಧಾತು, ಪಂಚ ಕೋಶ ನಾನಲ್ಲ, ಕೈ, ಕಾಲು, ಬಾಯಿ ಕೊಡ ನಾನಲ್ಲ. ನಾನು ಮಂಗಳಕರನಾದ (ಶಿವ) ಚಿದಾನಂದ ರೂಪ )
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ, ಮದೋ ನೈವ ಮೇ ನೈವ ಮಾತ್ಸರ್ಯಭಾವಃ | ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ, ಚಿದಾನಂದರೂಪಃ ಶಿವೋಹಂ ಶಿವೋಹಂ ||
(ನನ್ನಲ್ಲಿ ರಾಗದ್ವೇಷಗಳಿಲ್ಲ, ಲೋಭಮೋಹಗಳೂ ಇಲ್ಲ. ಮದಮಾತ್ಸರ್ಯಗಳೂ ಇಲ್ಲ. ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥಗಳೂ ನಾನಲ್ಲ. ನಾನು ಮಂಗಳಕರನಾದ (ಶಿವ) ಚಿದಾನಂದ ರೂಪನು.)
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಖಂ, ನ ಮನ್ತ್ರೊ ನ ತೀರ್ಥೋ ನ ವೇದಾ ನ ಯಜ್ಞ | ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ, ಚಿದಾನಂದರೂಪಃ ಶಿವೋಹಂ ಶಿವೋಹಂ ||
(ಪುಣ್ಯವು ಅಲ್ಲ ಪಾಪವು ಅಲ್ಲ, ಸುಖ ದುಖಃ ವು ಅಲ್ಲ. ಮಂತ್ರ ತೀರ್ಥ ವೇದ ಶಾಸ್ತ್ರ ಯಜ್ಞ ವು ಅಲ್ಲ. ನಾನು ಅನುಭವವಲ್ಲ ಅನುಭವಿಸಿದವನೂ ಅಲ್ಲ. ನಾನು ಮಂಗಳಕರನಾದ (ಶಿವ) ಚಿದಾನಂದ ರೂಪ)
ನ ಮೇ ಮೃತ್ಯುಶಂಕಾ ನ ಮೇ ಜಾತಿಭೇದಃ, ಪಿತಾ ನೈವ ಮೇ ನೈವ ಮಾತಾ ನ ಜನ್ಮಃ | ನ ಬಂಧುರ್ನಮಿತ್ರಂ ಗುರುರ್ನೈವ ಶಿಷ್ಯಃ, ಚಿದಾನಂದರೂಪಃ ಶಿವೋಹಂ ಶಿವೋಹಂ ||
(ನನಗೆ ಮೃತ್ಯು ಭಯವೂ ಇಲ್ಲ ಜಾತಿ ಬೇಧವು ಇಲ್ಲ. ತಂದೆ ತಾಯಿ ಜೊತೆಗೆ ಹುಟ್ಟು ಕೂಡ ಇಲ್ಲ. ಗುರು ಶಿಷ್ಯ ಬಂಧು ಬಳಗವಿಲ್ಲದ, ನಾನು ಮಂಗಳಕರನಾದ (ಶಿವ) ಚಿದಾನಂದ ರೂಪ)
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ, ವಿಭುತ್ವಾಚ ಸರ್ವತ್ರ ಸರ್ವೇನ್ದ್ರಿಯಾಣಾಮ್ | ನ ಚಾ ಸಂಗತ ನೈವ ಮುಕ್ತಿರ್ನ ಮೇಯಃ, ಚಿದಾನಂದರೂಪಃ ಶಿವೋಹಂ ಶಿವೋಹಂ ||
(ನಾನು ನಿರ್ಗುಣ ನಿರಾಕಾರಿ, ಸರ್ವಾಂತರ್ಯಾಮಿ, ಬಂಧಿಯೂ ಅಲ್ಲದ ಮುಕ್ತಿಯು ಅಲ್ಲದ, ನಾನು ಮಂಗಳಕರನಾದ (ಶಿವ) ಚಿದಾನಂದ ರೂಪ)
‘ಅದ್ವೈತ’ವೇದಾಂತದ ಸಕಲ ತಾತ್ಪರ್ಯವೂ ಈ ಸ್ಲೋಕಗಳಲ್ಲಿಯೇ ಇವೆ. ಈ ಸ್ಲೋಕಗಳನ್ನು ಕೇಳಿದ ಯಾರೇ ಆದರೂ ತಿಂತನೆಗೆ ಒಳಗಾಗುವುದು ನಿಶ್ಚಿತ.
ಇಂದಿನ ಯುಗದಲ್ಲಿಯೂ ಅದೂ ಪಾಶ್ಚಿಮಾತ್ಯ ವಿಜ್ಞಾನಿಗಳು ಪ್ರತಿಪಾಧಿಸಿರುವ ಹಲವಾರು ವೈಜಾನಿಕ ಅನ್ವೇಷಣೆಗಳೂ ಅದ್ವೈತಸಾರವನ್ನು ಎತ್ತಿ ಹಿಡಿಯುತ್ತವೆ.
ಉದಾಹರಣೆಗೆ;
Mr. Neils Bohr ತಮ್ಮ atomic structure and quantum theory ಗೆ ಸಂಭಂದ ಪಟ್ಟ ಸಂಶೋಧನೆಗಳಿಗಾಗಿ 1922 ರಲ್ಲಿ ನೊಬೆಲ್ ಪಡೆದ ವಿಜ್ಞಾನಿ 'Reality is merely an illusion' 'ಜಗತ್ತು ಮಿಥ್ಯ' ಎಂಬ ವಾದವನ್ನು ಮುಂದಿಟ್ಟು ಹಲವರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಗ್ಯಾಲಕ್ಸಿಗಳಿಂದ ಹಿಡಿದು ಕಣ್ಣಿಗೆ ಕಾಣುವ ಯಾವ ವಸ್ತುಗಳನ್ನು ತೆಗೆದುಕೊಂಡು ವಿಭಾಗಿಸುತ್ತಾ ಹೋದರೂ ಕೊನೆಗೆ ಸಿಗುವುದು ಅಣುಗಳು, ಜಗತ್ತಿನ ಸಲಕ ಚರಾಚರ ವಸ್ತುಗಳೂ ಮಾಡಲಪಟ್ಟಿದ್ದು ಅದೇ ಅಣುಗಳಿಂದ, ಅಂದರೆ ಸಕಲ ವಸ್ತುಗಳ ಚೈತನ್ಯ ಸ್ವರೂಪವೂ ಒಂದೆ ಭೇದವಿಲ್ಲದ ಅಣುಗಳು. ಹಾಗಿದ್ದ ಮೇಲೆ ಬೇಧವೆಲ್ಲಿಂದ? ದ್ವೈತವೆಲ್ಲಿಂದ? ಹಾಗಾಗಿಯೇ ವಿಜ್ಞಾನವೂ
“ಸರ್ವಂಖಲ್ಪಿದಂ ಬ್ರಹ್ಮ”,
“ಅಹಂಬ್ರಹ್ಮಾಸ್ಮಿ”,
“ತತ್ತ್ವಮಸಿ”
ಮುಂತಾದ ತತ್ವಗಳನ್ನು ಒಪ್ಪಿದ್ದು. ಭೂಮಿಯ ಹುಟ್ಟಿನಿಂದ ಹಿಡಿದು ಇಂದಿನವರೆಗೆ ಯಾವುದೇ ಬದಲಾವಣೆಗಳು ಕಂಡರೂ ಅದು ಕೇವಲ ಮೇಲ್ನೋಟಕ್ಕೆ ಮಾತ್ರ! ನಷಿಸಿದ ಡೈನಾಸಾರ್ಗಳು ಉಸಿರಾಡಿ ಬಿಟ್ಟ ಗಾಳಿಯನ್ನೇ ನಾವೂ ಉಸಿರಾಡುತ್ತಿದ್ದೇವೆ! ವರ್ಷಗಳ ಹಿಂದೆ ಕುಡಿದು ವಿಸರ್ಜಿಸಿದ ನೀರನ್ನೇ ಇಂದು ಪುನಃ ಕುಡಿಯುತ್ತೇವೆ! ಅವುಗಳ ದೇಹಗಳು ನಿರ್ಮಿತವಾದ ಅಣುಗಳಿಂದಲೇ ನಮ್ಮ ದೇಹಗಳೂ ನಿರ್ಮಿತವಾಗಿವೆ, ಹಲವಾರು ವರ್ಷಗಳ ಹಿಂದೆ ನನ್ನ ದೇಹದಲ್ಲಿದ್ದ ಅಣುಗಳು ಇಂದು ನಿಮ್ಮ ದೇಹಗಳಲ್ಲಿವೆ! ನಮ್ಮ ತಾತ ಮುತ್ತಾತನ ದೇಹದ ಅಣುಗಳೂ ನನ್ನಲ್ಲಿ, ನಿಮ್ಮಲ್ಲಿಯೂ ಇರಬಹುದು! ಹೀಗಿರುವಾಗ ಎಲ್ಲಿಯ ಜಾತಿ, ಎಲ್ಲಿಯ ಕುಲ, ಎಲ್ಲಿಯ ಬೇಧ!, ಹಾಗಾಗಿಯೇ ಆದಿಶಂಕರರು ಚಾಂಡಾಲನನ್ನೂ ಗುರು ಎಂದು ಕರೆದು ಕಾಲಿಗೆ ಎರವಿದ್ದು.
ಇದರಿಂದಾಗಿಯೇ ಆದಿಶಂಕರರ 'ಅದ್ವೈತ' ತತ್ವವು ನಿತ್ಯ-ಸತ್ಯವಾಗಿ ಆಧುನಿಕ ಯುಗದಲ್ಲಿಯೂ ಜೀವಂತವಾಗಿರುವುದು.
-ಜಿತೋಸ್ಮಿ Photo Credit: deviantart
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.