ಶಿಕ್ಷಣದಲ್ಲಿ ಮೌಲ್ಯಗಳ ಹಿನ್ನಡೆ


          ಮನುಷ್ಯನ ಜೀವನದಲ್ಲಿ ಇಂದು ಶಿಕ್ಷಣ ವಹಿಸುತ್ತಿರುವ ಪಾತ್ರ ಬಹಳ ದೊಡ್ಡದು. ಜಗತ್ತಿನ ಯಾವ ಮೂಲೆಗೆ ಹೋದರೂ ಶಿಕ್ಷಣದ ಕೊರತೆ ಹೊಂದಿದ ವ್ಯಕ್ತಿ ತನ್ನನ್ನು ತಾನು ಕೀಳರಿಮೆಗೆ ದೊಡಿಕೊಳ್ಳುತ್ತಿದ್ದಾನೆ. ಇಲ್ಲಿ ಶಿಕ್ಷಣವೆಂದರೆ ಶಾಲಾ-ಕಾಲೇಜುಗಳಲ್ಲಿ ನಾಲ್ಕು ಗೋಡೆಗಳೊಳಗೆ ಸಿಗುವ ಶಿಕ್ಷಣ ಮಾತ್ರವಲ್ಲ, ಸಾಮಾಜಿಕವಾಗಿ ಪರಿಸರದ ಆಗುಹೋಗುಗಳಿಂದ ಪಡೆಯುವ ಶಿಕ್ಷಣವಾಗಿರಬಹುದು, ತಮ್ಮ ತಮ್ಮ ವೈಯಕ್ತಿಕ ಅನುಭವಗಳಿಂದ ಪಡೆದುಕೊಳ್ಳುವ ಶಿಕ್ಷಣವಾಗಿರಬಹುದು... ಇವೆಲ್ಲವೂ ಒಂದು ರೀತಿಯ ಶಿಕ್ಷಣವೇ ಸರಿ. ಹಾಗಾಗಿ ಶಿಕ್ಷಣ ಎನ್ನುವಂಥದ್ದು ಎಲ್ಲಾ ವಿಷಯ ಸಂಪನೂಲಗಳನ್ನು ಒಳಗೊಂಡಿರುತ್ತದೆ ಎಂದರೆ ತಪ್ಪಾಗಲಾರದು.

          ಮಗುವೊಂದು ಹುಟ್ಟಿ ಬೆಳೆದು ಶಾಲೆಗೆ ಸೇರಿದ ನಂತರ ಅಲ್ಲಿ ನೀಡುವ ಶಿಕ್ಷಣ ಮಗುವಿನ ದೈಹಿಕ ಹಾಗೂ ಬೌದ್ಧಿಕ ಗುಣಮಟ್ಟವನ್ನು ಉತ್ತಮ ರೀತಿಯಲ್ಲಿ ಮೂಡಿಸುವಂಥ ಕೆಲಸವನ್ನು ಮಾಡುತ್ತದೆ. ಅದೇ ರೀತಿ ಬಾಹ್ಯ ಸಂಪರ್ಕದ ಮೂಲಕ ಪರಿಸರ, ಸಮಾಜದ ಮೂಲಕ ಕಲಿತುಕೊಳ್ಳುವ ಸ್ವಯಂ ಶಿಕ್ಷಣವು ಮತ್ತೊಂದು ರೀತಿಯಲ್ಲಿ ಮಗುವನ್ನು ವಿಕಾಸಗೊಳಿಸುತ್ತದೆ. ಆದರೆ ಇವೆರಡರಲ್ಲಿಯೂ ಮಗುವಿಗೆ ಸಿಗಬೇಕಾದ ಅರ್ಥಪೂರ್ಣ ಮೌಲ್ಯಗಳಿವೆಯೇ ಎಂಬುದು ಈಗ ನಮ್ಮ ಮುಂದೆ ಇರುವ ಯಕ್ಷಪ್ರಶ್ನೆ. ನನ್ನ ಅಭಿಪ್ರಾಯದ ಪ್ರಕಾರ ಖಂಡಿತವಾಗಿಯೂ ಇಲ್ಲ. ಇಂದು ಮಕ್ಕಳು ಪಡೆಯುತ್ತಿರುವಂತಹ ಶಿಕ್ಷಣವು ಗುಣಮಟ್ಟವನ್ನು ಕಳೆದುಕೊಂಡ ಅಕ್ಕಿಯಂತಾಗಿದೆ, ಅಂದರೆ ಹೊರಗಿನ ಕವಚ ಹೊಸತಾದರೂ ಒಳಗಿನ ವಸ್ತು ಹಳೆಯದೂ, ಸತ್ವವಿಲ್ಲದೂ ಆಗಿದೆ.


           ಇಂದು ಹೆಚ್ಚಿನ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಎನ್ನುವುದು ಮಾರುಕಟ್ಟೆಯ ರೀತಿ ತನ್ನ ವ್ಯವಹಾರದ ಮುಖವನ್ನು ಅಲಂಕರಿಸಿಕೊಳ್ಳುತ್ತಿದೆ. ಯಾವುದೇ ಪರಿಶ್ರಮವಿಲ್ಲದೇ ವಿದ್ಯೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು ಎಂಬ ಹುಂಡು ಅಭಿಪ್ರಾಯ ಹೆಚ್ಚಿನ ಜನರೊಳಗೆ ಹೊಕ್ಕಿಕೊಂಡಿದೆ. ಶಿಕ್ಷಣದಲ್ಲಿ ಕೆಲವೆಡೆ ಮೌಲ್ಯಾಧಾರಿತ ಅಂಶಗಳಿದ್ದರೂ ಸಹ ಅದನ್ನು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳ ಮನಸ್ಸಿಲ್ಲಿ ಹಚ್ಚುವ ಕಾರ್ಯವು ಹದವಾಗಿ ಕುಂಠಿತಗೊಳ್ಳುತ್ತಿರುವುದು ಶಿಕ್ಷಣಕ್ಷೇತ್ರಕ್ಕೆ ಮಹತ್ತರ ಸವಾಲಾಗಿದೆ. ಉದಾಹರಣೆಗೆ ಶಾಲಾ ವಿದ್ಯಾರ್ಥಿಗಳ ಪರೀಕ್ಷಾ ಪದ್ಧತಿಯನ್ನು ತೆಗೆದುಕೊಂಡರೆ ಸರಿಯಾಗಿ ಅರ್ಥವಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಬರುವಂತಹ ನಿರ್ದಿಷ್ಟ ವಿಚಾರಗಳಲ್ಲಿ ಮಾತ್ರ ತೊಡಗಿಸಿಕೊಳ್ಳುವುದು ಈ ಸಮಸ್ಯೆಗೆ ಮುಖ್ಯ ಕಾರಣ. ಇದರಿಂದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಂಕಗಳ ಸಾಂದ್ರತೆ ಹೆಚ್ಚುವುದಾದರೂ ಎಲ್ಲೋ ಒಂದು ಭಾಗದಲ್ಲಿ ವಿದ್ಯಾರ್ಥಿಗಳಿಗೆ ತಿಳುವಳಿಕೆಯ ಕೊರತೆ ಉಂಟಾಗುತ್ತಿದೆ ಎಂಬುದಂತೂ ಸ್ಪಷ್ಟ. ಪುಸ್ತಕವನ್ನು ಸರಿಯಾಗಿ ಓದದೇ ಶಿಕ್ಷಕರು ಕೊಟ್ಟಂತಹ ವಿಷಯಾಂಶಗಳನ್ನು ಮಾತ್ರ ಮಸ್ತಕದಲ್ಲಿಟ್ಟುಕೊಂಡು ಪರೀಕ್ಷಾ ಕೊಠಡಿಯಿಂದ ಹೊರಬಂದ ತಕ್ಷಣ ಚೀಲದಿಂದ ಪುಸ್ತಕವನ್ನೂ, ಮಸ್ತಕದಿಂದ ಎಲ್ಲವನ್ನೂ ಕಿತ್ತೆಸೆಯುವ ಮಕ್ಕಳು ಒಂದು ಕ್ಷಣಕ್ಕೆ ಸಂತಸ ಪಟ್ಟರೂ ಅದರ ಹಿಂದಿನ ಅಂಧಕಾರದ ಮೋಡ ಕಾಲಾನಂತರದಲ್ಲಿ ಗೋಚರವಾಗುತ್ತದೆ. ಹೇಳುತ್ತಾ ಹೋದರೆ ಇನ್ನೂ ಅನೇಕ ಸಮಸ್ಯೆಗಳು, ಹಿನ್ನಡೆಗಳು ಕಾಣಸಿಗುತ್ತವೆ.

           ಶಾಲಾ ಕಾಲೇಜುಗಳಿಂದ ಹೊರನಡೆದು ಬಂದೆವೆಂದಾದರೆ ಬಾಹ್ಯ ಪರಿಸರ, ಸಾಮಾಜಿಕ ಜಾಲತಾಣಗಳು, ಮನೆಯ ವಾತಾವರಣ ಮುಂತಾದವುಗಳಿಂದ ಕಲಿತುಕೊಳ್ಳುವ ಶಿಕ್ಷಣವೂ ಸಹ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವಂತಹ ಭ್ರಷ್ಟಾಚಾರ, ಕೋಮುಗಲಭೆ, ಅನೈತಿಕ ವ್ಯವಹಾರಗಳಿಂದ ಉದ್ಭವಿಸುವ ವಿಷಪೂರಕ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ಗಾಢವಾದಂತಹ ಪರಿಣಾಮವನ್ನುಂಟುಮಾಡುತ್ತದೆ. ಅಲ್ಲದೇ ಸಮಾಜಿಕ ಜಾಲತಾಣಗಳು ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಬೆಳೆದು ನಿಂತಿದ್ದು ಅದರಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಲು ಅಶಕ್ತರಾಗಿರುವುದು ಶೋಚನೀಯ ಪರಿಸ್ಥಿತಿಯೇ ಸರಿ. ಮೋಡಗಳು ಹೆಚ್ಚಾಗಿ ನೀಲಿ ಆಕಾಶವು ಮರೆಯಾಗುವಂತೆ ಪರಿಸರದಲ್ಲಿ ಕೆಟ್ಟ ಕಲ್ಮಷಗಳು ಹೆಚ್ಚಿ ಸವ್ಯ-ಸಾಧು-ಸಭ್ಯ ವಿಚಾರಗಳ ವಿಶ್ಲೇಷಣೆ-ವಿವರಣೆ-ಅನುಸರಣೆ ಹಾಗೂ ಅನುಕರಣೆ ತೀವ್ರ ಮಟ್ಟಿನಲ್ಲಿ ಕುಸಿಯುತ್ತವೆ. ಹೀಗಿರುವಾಗ ಮಕ್ಕಳು ಮನೆಯಲ್ಲಿ ಅಥವಾ ಶಾಲೆಯಲ್ಲಿ ನೈತಿಕ-ಸಾಮಾಜಿಕ ಮೌಲ್ಯಗಳನ್ನು ಪಡೆಯದೇ ಹೋದಲ್ಲಿ ಮುಂದೆ ಯಾವೆಲ್ಲಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದೇ ಒಂದು ಚಿಂತಿತ ಪ್ರಶ್ನೆಯಾಗಿ ಕಾಡುತ್ತಿದೆ.
          ಶಿಕ್ಷಣವು ಮಾನವನ ಉನ್ನತಿಗೆ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಗತ್ಯ. ಹಾಗಿರುವಾಗ ಶಿಕ್ಷಣದಲ್ಲಿ ಮಾನವೀಯ, ಸಾಮಾಜಿಕ ಹಾಗೂ ಇನ್ನಿತರ ಅವಶ್ಯಕ ಮೌಲ್ಯಬಿತ್ತನೆಯ ಕೊರತೆಯಾದಲ್ಲಿ ವಿದ್ಯಾರ್ಥಿಗಳು ಸತ್ವವಿಲ್ಲದ ತತ್ತ್ವವನ್ನು ಸತ್ಯವನ್ನಾಗಿಸಿದಂತಾಗುತ್ತದೆ. ಶಿಕ್ಷಣದ ಮೂಲಕ ಮಕ್ಕಳನ್ನು ದೇಶದ ಭವಿಷ್ಯಕ್ಕೋಸ್ಕರ ರೂಪುಗೊಳಿಸುವ ಸರಕಾರ ಇದರ ಬಗೆಗೆ ಹೆಚ್ಚಿನ ಕಾಳಜಿ ತೋರಿಸದೇ ಇರುವಂಥದ್ದು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ಇದಕ್ಕೆ ಸೂಕ್ತ ಪರಿಹಾರವೆಂದರೆ ನಾವುಗಳು ನಮಗೆ ನಾವೇ ಜೀವನಕ್ಕಗತ್ಯವಾದ ಮೌಲ್ಯಾಂಶಗಳನ್ನು ಅರಿತು ಕಲಿತು ಅದರ ಕುರಿತು ಜೀವನದಲ್ಲಿ ಬದ್ಧತೆಯನ್ನು ತಾಳವುದು. ಸ್ವಯಂಪ್ರೇರಿತರಾಗಿ ಶಾಲಾ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕಮ್ಮಟಗಳಲ್ಲಿ ಭಾಗವಹಿಸಿ ತಮ್ಮನ್ನು ತಾವು ಸಾಮಾಜಿಕವಾಗಿ, ಬೌದ್ಧಿಕವಾಗಿ ವೃದ್ಧಿಗೊಳಿಸುವ ಮೂಲಕ ವಿಷಯ ಸಂಪನ್ಮೂಲಗಳ ಕಲಿಕೆಯತ್ತ ಮನ ಮಾಡಿದರೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ತೃಪ್ತಿದಾಯಕ ಫಲವನ್ನು ಪಡೆಯಬಹುದು ಎಂಬ ಅಭಿಪ್ರಾಯ ನನ್ನದು...

-ಶ್ರೀಸುತ

Photo Credit: Tumlare



▪2 ವರ್ಷಗಳ ಹಿಂದೆ ಮೇ 2015ರಂದು "ಅನಂತಪ್ರಕಾಶ" ಕನ್ನಡ ಮಾಸಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದ್ದು ಇದೀಗ ಶ್ರೀಸುತದಲ್ಲಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ. ಓದಿ... ಅಭಿಪ್ರಾಯಗಳನ್ನು ಈ ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಬರೆಯಿರಿ. ಧನ್ಯವಾದಗಳು.

Please share and support me

2 comments:

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.