ನೆಲದೆಡೆಗೆ ದೃಷ್ಟಿ ಹರಿಸದೆ
ತಲೆಯೆತ್ತಿ ಕಂಗಳನೆ
ದಿಟ್ಟಿಸಿ ನೋಡು ಗೆಳತಿ ನೀನು
ನಾ ಅಬಲೆಯಲ್ಲ ನಿರ್ಭಯೆ
ಎಂದು ಜಗಕೆ ಸಾರು ನೀನು
ಏಕೆಂದರೆ ನೀನು ಸ್ತ್ರೀಯಾಗಿರುವೆ
ಶಕ್ತಿ ಸ್ವರೂಪಿಣಿಯು ನೀನು
ಮಮತಾಮಯಿ ಮಾತೆಯೂ ನೀನೇ
ನೋವು ನೀಡುವವರನೂ ಹೃದಯದಲಿಟ್ಟು
ಪೂಜಿಸುವ ಒಲವಿನ ಜಲಧಿಯೂ ನೀನಲ್ಲವೇ
ಪುರಾಣೇತಿಹಾಸಗಳಲಿ ನಿನ್ನ ಕಥೆಗಳು
ಸಾವಿರಾರಿವೆ ಗೆಳತೀ
ಬಿಸಿಲಿಗೆ ಕರಗುವ ಮಂಜಲ್ಲ ನೀನು
ಕ್ಷಣದಲ್ಲೇ ಒಡೆದು ಕಣ್ಮರೆಯಾಗುವ
ನೀರ್ಗುಳ್ಳೆಯಲ್ಲ
ಅಂಬೆಯಾಗಿ ಭೀಷ್ಮನನು ಶರಶಯ್ಯೆಗೆ
ಏರಿಸಿದವಳು ನೀನೇ
ತನ್ನ ಶಪಥದ ಮೂಲಕ ಕುರುವಂಶವ
ನಾಶಗೈದ ದ್ರೌಪದಿಯು ನೀನಲ್ಲವೇ
ಪುತ್ರಶೋಕದ ತಾಪದಲಿ ಶಾಪವಿತ್ತು
ಯದುಕುಲವನೇ ನಿರ್ನಾಮಗೈದ
ಗಾಂಧಾರಿಯೂ ನೀನೇ ಗೆಳತೀ
ಆದರೂ ತನ್ನದಲ್ಲದ ತಪ್ಪಿಗೆ
ಶಿಲೆಯಾಗಿ ಹೋದೆಯಲ್ಲಾ...
ಪತಿಯೊಡನೆ ವನವಾಸಕೆ ತೆರಳಿದರೂ
ಕೊನೆಗೊಬ್ಬ ರಜಕನ ಮಾತಿಗೆ
ಬಲಿಯಾಗಿ ಅಡವಿ ಪಾಲಾದೆಯಲ್ಲಾ..
ಗೆಳತೀ... ಏಕೆಂದರೆ ನೀನು ಹೆಣ್ಣು
ಇಂದು ಕೂಡಾ ಶೋಷಣೆಗೊಳಗಾಗುತಿರುವೆ
ಪತಿ ಪುತ್ರ ಬಂಧು ಬಾಂಧವರಿಂದ
ದಿಟ್ಟೆ ಧೀರೆ ಶಕ್ತಿ ಚೈತನ್ಯ ನೀನೆಂದು
ಹೊಗಳಿಸಿಕೊಂಡರೂ ದಮನಿಸಲ್ಪಡುತಿರುವೆ ನೀನು
ನಿನ್ನಂತರಂಗದತ್ತ ದೃಷ್ಟಿ ಹರಿಸು ಗೆಳತೀ
ನಿನ್ನ ಸುತ್ತಲಿರುವ ಅದೃಶ್ಯ ಕೋಟೆಗಳನು
ಕಿತ್ತೆಸೆದು ಮುನ್ನುಗ್ಗು ನೀನು
ಏಕೆಂದರೆ ನೀನು ದೇವಿಯಾಗಿರುವೆ
ನಿನ್ನನು ಮೂಲೆಗಟ್ಟುತಿರುವ ಅಸುರರನು
ದುರ್ಗೆಯಾಗಿ ಎದುರಿಸು ನೀನು
ನಲಿವ ಪ್ರಕೃತಿಯೂ ಜೀವದಾಯಿನಿ
ಪೃಥ್ವಿಯೂ ನೀನಲ್ಲವೇ
ಕುಸಿದು ಹೋಗದಂತೆ ಎದ್ದು ನಿಲ್ಲು
ಗೆಳತಿ ನೀನು
ಏಕೆಂದರೆ ನೀನು ಅಬಲೆಯಲ್ಲ
ನಿರ್ಭಯೆಯಾಗಿರುವೆ...
-ಪ್ರಸನ್ನಾ ವಿ ಚೆಕ್ಕೆಮನೆ
Photo Credit: Pinterest
ಪುರಾಣ ಇತಿಹಾಸಗಳ ಉದಾಹರಣೆಗಳೊಂದಿಗೆ,ಹೆಣ್ಣು ಅಬಲೆಯಲ್ಲ ಎಂಬ ದೈರ್ಯ ನೀಡುವ ಕವನ ಉತ್ತಮವಾಗಿ ಮೂಡಿ ಬಂದಿದೆ
ReplyDeleteಶ್ರೀಕೃಷ್ಣ ಶರ್ಮ ಹಳೆಮನೆ
ಸೂಪರ್ ಕವನ ಪ್ರಸನ್ನ
ReplyDeleteಪುರಾಣ ಇತಿಹಾಸಗಳ ಉದಾಹರಣೆಗಳೊಂದಿಗೆ,ಹೆಣ್ಣು ಅಬಲೆಯಲ್ಲ ಎಂಬ ದೈರ್ಯ ನೀಡುವ ಕವನ ಉತ್ತಮವಾಗಿ ಮೂಡಿ ಬಂದಿದೆ
ReplyDelete