ಶಿಕ್ಷಣ ಸಾಗುತ್ತಿರುವ ದಿಕ್ಕು ಬದಲಾಗಲಿ


          ಕಲಿಕೆ ಹಾಗೂ ಬೋಧನೆ... ಶಿಕ್ಷಣ ಕ್ಷೇತ್ರಗಳ ಅದರಲ್ಲೂ ಶಿಕ್ಷಕನ ಪ್ರಮುಖ ಕರ್ತವ್ಯವೆಂದು ತಿಳಿದಿರುವಂತೆ ಇಂದಿನ ಆಧುನಿಕ ಕಲಿಕಾ ವಿಧಾನ ಹಾಗೂ ಪ್ರಾಚೀನ ಕಲಿಕಾ ವಿಧಾನಗಳಿಗೆ ಹೋಲಿಸಿದಾಗ ಪ್ರಾಚೀನ ಕಾಲದ ಕಲಿಕೆ ಕೇವಲ ಶಿಕ್ಷಣ ಮಾತ್ರವಲ್ಲದೇ ಮಾನವೀಯ ಮೌಲ್ಯಗಳು, ನೈತಿಕ ನಡವಳಿಕೆಗಳು ಕಲಿಕೆಯ ಒಂದು ಭಾಗವಾಗಿ ಮಾರ್ಪಾಡಾಗಿತ್ತು, ಮತ್ತು ಹಾಗೇ ಇರಬೇಕಾದದ್ದು ಕೂಡ. ಹೀಗಾಗಿ ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಮನದಲ್ಲಿ ಇದ್ದಾಗ ಮಾತ್ರ ಶಿಕ್ಷಣ ಎನ್ನುವುದು ಪರಿಪೂರ್ಣವಾಗಲು ಸಾಧ್ಯ.

         ಕೇವಲ ಸಿಲ್ಲೇಬಸ್ ದೃಷ್ಟೀಕರಿಸಿಕೊಂಡು ನೀಡುವಂತಹ ಶಿಕ್ಷಣ ಬರೀ ಪರೀಕ್ಷೆಗಳಲ್ಲಿ ಪಾಸ್ ಆಗೋದನ್ನು ತಿಳಿಸಿಕೊಡುತ್ತದೆಯೇ ವಿನಃ ಜೀವನದಲ್ಲಿ ಪ್ರತಿಯೊಬ್ಬನೂ ಅಳವಡಿಸಿ-ಕೊಳ್ಳಬೇಕಾದ ಮಾನವೀಯ ಮೌಲ್ಯಗಳನ್ನು ಒದಗಿಸಿಕೊಡುವುದಿಲ್ಲ. ವ್ಯವಹಾರ ಜ್ಞಾನವನ್ನು, ಲೋಕಾಭಿರಾಮ ತಿಳುವಳಿಕೆಗಳನ್ನು ಇಂದಿನ ಶಿಕ್ಷಣವು ನೀಡಲು ವಿಫಲವಾಗಿದೆಯೆಂದರೆ ಇದು ಈ ಕ್ಷೇತ್ರದಲ್ಲಾದ ವಿಪರ್ಯಾಸವೇ ಸರಿ. ವಿದ್ಯಾರ್ಥಿಗಳನ್ನು ಸಮಾಜದ ಜ್ವಲಂತ ಸಮಸ್ಯೆಗಳ ಸಾಂವಿಧಾನಿಕ ಹಾಗೂ ಪ್ರಸ್ತುತ ಸಿದ್ದಾಂತಗಳ ತಾಕಲಾಟಗಳ, ಶೋಷಣೆಗಳ, ಜಾತಿ-ಧರ್ಮಗಳ ಸಂಘರ್ಷಗಳ ವಿರುದ್ಧ ತಯಾರು ಮಾಡಿದರೆ ಇಂದು ಶಿಕ್ಷಣವು ಸಾರ್ಥಕ. ಯಾಕೆಂದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ದಾಸ್ಯತನವು ಎದುರಾಗುತ್ತಿದೆ. ಮುಖ್ಯವಾಗಿ ಸಮಾಜ ವಿಜ್ಞಾನ ಎಂಬ ಮಾನವಿಕ ಅಧ್ಯಯನ ವಿಭಾಗದಡಿಯಲ್ಲಿ ವಿಧ್ಯಾರ್ಥಿಗಳ ಮನಸ್ಸಿನಲ್ಲಿ ಮಾನವೀಯತೆಯನ್ನು ಬಿತ್ತಿದ್ದೇವೆಯೇ? ಎಷ್ಟು humanize ಮಾಡಿದ್ದೇವೆ? ಮತ್ತು ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂಬುದನ್ನು ಮಾನವಿಕ ವಿಭಾಗದಲ್ಲಿ ಪಾಠ ಮಾಡ್ತಾ ಬಂದಿರುವ ನಾವೆಲ್ಲರೂ ಕೂಡಾ ಅವಲೋಕಿಸಬೇಕಾಗಿದೆ. ಒಂದು ಕಡೆ ತನಗೆಲ್ಲಾ ತಿಳಿದಿದೆ, ಯಾವುದೋ ಒಂದು ವಿಶ್ವವಿದ್ಯಾನಿಲಯ ಒಂದು teaching curriculum ಕೊಟ್ಟಿದೆ, ಜೊತೆಗೆ ಪಾಠ ಮಾಡಲಿಕ್ಕೆ ಪುಸ್ತಕವನ್ನೂ ನೀಡಿದೆ ಮತ್ತು ತನಗೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ ಎಂದುಕೊಂಡು
ಪುಸ್ತಕದಲ್ಲಿರುವ ಹಾಗೆ ಬೋಧಿಸುತ್ತೇನೆ ಎನ್ನುವ ಒಂದು ವರ್ಗ ಒಂದೆಡೆಯಾದರೆ, ಪಾಠ ಮಾಡುವುದೇ ಒಂದು ದೊಡ್ಡ ತಲೆನೋವು, ಅದೊಂದು ದೊಡ್ಡ burden ಅಂತ ತಿಳಿದುಕೊಂಡು ಕೇವಲ ಪುಸ್ತಕದ ಎರಡು ಸಾಲುಗಳನ್ನು ವಿದ್ಯಾರ್ಥಿಗಳು ಪ್ರಶ್ನೆ ಕೇಳಬಾರದೆಂದು ತನ್ನ ಪಾಡಿಗೆ ಕೆಲಸ ಮುಗಿಸಿ ಸಂಬಳ ತೆಗೆದುಕೊಳ್ಳುವವರೂ ಇದ್ದಾರೆ. ಹೀಗಿರುವಾಗ ನಾವು ಮಾನವಿಕ ವಿಭಾಗದಲ್ಲಿ ಇದ್ದುಕೊಂಡು ವಿಧ್ಯಾರ್ಥಿಗಳಿಗೆ ಏನನ್ನು ಹೇಳಿಕೊಟ್ಟಿದ್ದೇವೆ ಎನ್ನುವುದು ನೋವಿನ ಸಂಗತಿ. ಪಠ್ಯಪುಸ್ತಕದ ಪಾಠ ಮಾಡುವುದು ಒಂದು ಭಾಗ ಮಾತ್ರ. ಅದನ್ನು ಮಕ್ಕಳೇ ಓದಲು ಅರ್ಹರಿರುತ್ತಾರೆ. ಆದರೆ ಅದು ಅವನ ಕೆಲಸವಲ್ಲ. ಶಿಕ್ಷಕ ಓರ್ವ ಮಾರ್ಗದರ್ಶಕ. ಯು.ಜಿ.ಸಿ ಹೇಳಿರುವಂತೆ ಶಿಕ್ಷಕನು ಒಬ್ಬ ಮಾರ್ಗದರ್ಶಕನಾಗಿದ್ದು ಮಾನವೀಯ ಮೌಲ್ಯಗಳನ್ನು ತಿಳಿಸಿ ಜೀವನದ ದೃಷ್ಠಾಂತಗಳನ್ನು ಹಾಗೂ ವಾಸ್ತವಿಕ ಸಂಗತಿಗಳನ್ನು ತಾನು ಕಲಿಸುವ ಪಾಠದೊಂದಿಗೆ ಮಿಶ್ರಣ ಮಾಡಿ ಒಂದು ಮಸಾಲೆ ಪದಾರ್ಥವನ್ನು ಮಕ್ಕಳ ಮನಸ್ಸಲ್ಲಿ ತುಂಬುವವನು. ಆದರೆ ಅದು ಯಾಕೋ ಆಗುತ್ತಿಲ್ಲ ಎಂಬುದು ಒಬ್ಬ ವೃತ್ತಿಯಲ್ಲಿ ಅದ್ಯಾಪಕನಾಗಿರುವ ನನ್ನನ್ನೂ ಕೂಡಾ ಸೇರಿಕೊಂಡು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ.


         ಕೌಟಿಲ್ಯನ ಬಗ್ಗೆ ಮಾತಾಡುತ್ತಾ ಬಂದರೆ, ಆತ ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞ, ರಾಜಕೀಯ ಚಿಂತಕ ಎಂದು ಪಾಠ ಮಾಡುತ್ತಿರುವಾಗಲೇ ಆತ ಅತ್ಯಂತ ಅದ್ಭುತ ರೀತಿಯ ವಾಸ್ತುಶಿಲ್ಪತಜ್ಞ ಎಂದರೆ ತಪ್ಪಾಗಲಾರದು. ಆತನ ಬಗ್ಗೆ ಓದುತ್ತಾ ಹೋದ ಹಾಗೆ ರಾಜ್ಯದಲ್ಲಿ ಹಣ ಅನ್ನುವಂಥದ್ದು periodically ಬದಲಾವಣೆಗೊಳ್ಳಬೇಕು ಮತ್ತು ಆ ನಾಣ್ಯಗಳು ಹೇಗಿರಬೇಕೆಂದರೆ ಅದರ ಮೇಲೆ ಅಚ್ಚು ಹಾಕಿದ ನಾಣ್ಯದ ಮುಖ ಬೆಲೆ ಯಾವುದೇ ಚೂಪಾದ ಮೊನೆ ಬಳಸಿ ಗೀಚಿದರೂ ಅದರ ಅಚ್ಚು, ಸ್ವರೂಪ ಬದಲಾಗಬಾರದು. ಅಂತಹ ಲೋಹವನ್ನು ಬಳಸಬೇಕೆಂದು specify ಮಾಡಿದ್ದ. ಬಹಳ ದೊಡ್ಡ ದುರಂತ ಅಂದ್ರೆ ನಾವು ನಮ್ಮ ನೋಟುಗಳ ಮೇಲೆ ನಂಬರ್ ಗಳನ್ನು, ಚಿತ್ರಗಳನ್ನು ಬಿಡಿಸಿಕೊಂಡು ನಮ್ಮ ಹಣದ ಮೌಲ್ಯವನ್ನು ನಾವೇ destroy ಮಾಡಿದ್ದೇವೆ. ಕೌಟಿಲ್ಯ ಮುಂದುವರೆಸುತ್ತಾ... ರಾಜ್ಯದ currency ವ್ಯವಸ್ಥೆ ಹೇಗಿರಬೇಕೆಂದರೆ ಅದು ಎಂದಿಗೂ destroy ಆಗಕೂಡದು. ಅಂತಹ ನಾಣ್ಯಗಳನ್ನು ಮಾಡಬೇಕೆಂದು ತಿಳಿಸಿದ್ದ. ಅವನ ಪ್ರಕಾರ ರಾಜನ ಅರಮನೆಗೆ ಮೆಟ್ಟಿಲುಗಳೇ ಇರಬಾರದೆಂದು ಹೇಳುತ್ತಾನೆ. ಆದರೆ ನಾವು ನಮ್ಮ ಮನೆಗಳಿಗೆ ಇಂಥದ್ದೇ ಮಾರ್ಬಲ್ ಗಳನ್ನು ಬಳಸಿ ಕಟ್ಟಿದ ಮೆಟ್ಟಿಲುಗಳಿರಬೇಕು ಎಂದು ಅಂದುಕೊಳ್ಳುತ್ತೇವೆ. ಆದರೆ ಶತ್ರುಗಳಿಂದ ಬರುವ ಪ್ರಾಣಾಪಾಯದಿಂದ ಪಾರಾಗಲು ಅರಮನೆಗೆ ಮೆಟ್ಟಿಲುಗಳೇ ಇರಬಾರದು ಎಂದು ಹೇಳುತ್ತಾನೆ. ರಾಜನ ಖಡ್ಗವೂ ಕೂಡಾ ಹೇಗಿರಬೇಕೆಂದರೆ, ಅದು ಯಾವುದೇ ಕಾರಣದಿಂದ ತುಂಡಾಗಬಾರದು. ಅಂತಹ ಕತ್ತಿಯನ್ನು ಯಾವ ಲೋಹ ಬಳಸಿ ಮಾಡಬೇಕೆಂದು ಸೇನಾ ದಂಡನಾಯಕರಿಗೆ ಸೂಚಿಸಿದ್ದ. ಹೀಗಾಗಿ ನಾವು ಅಂದರೆ ಅಧ್ಯಾಪನ ವೃತ್ತಿಯಲ್ಲಿರುವ ಅಧ್ಯಾಪಕರು ಆತ ಕೇವಲ ರಾಜಕೀಯ ಚಿಂತಕ, ಅರ್ಥಶಾಸ್ತ್ರಜ್ಞ ಎಂದು ಹೇಳಿಕೊಟ್ಟಿದ್ದೇವೆಯೇ ಹೊರತು ಆತ ಅತ್ಯುತ್ತಮ ವಾಸ್ತುಶಿಲ್ಪ ತಜ್ಞ, ಯುದ್ಧ ಕಲೆ ನಿಪುಣ ಎಂಬುದನ್ನು ಹೇಳದೇ ಏಕಮುಖವಾಗಿ ಕೌಟಿಲ್ಯನನ್ನು ಕಟ್ಟಿಕೊಟ್ಟಿದ್ದೇವೆ... ಇದೇ ದೊಡ್ಡ ದುರಂತ ಎಂದರೆ ತಪ್ಪಾಗಲಾರದು. ಇದನ್ನು ಹೇಳಿ ಮಕ್ಕಳ ಮನಸ್ಸಲ್ಲಿ ಪ್ರಶ್ನೆ ಮಾಡಲು ಸಾಧ್ಯವಾಗದೇ ಇರುವ ಹಾಗೆ ದುರ್ಬಲ ವ್ಯಕ್ತಿತ್ವವನ್ನು ನಾವು ಇಂದಿನ ಯುವ ಪೀಳಿಗೆಗೆ ಕೊಡ್ತಾ ಇದ್ದೇವೆ.

         ವಿವೇಕಾನಂದರ ಬಗ್ಗೆ ಹೇಳುತ್ತಾ ಬಂದಾಗ ಕೇವಲ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಭಾಷಣದಲ್ಲಿ ಪ್ರಭಾವ ಬೀರಿದ ಮಾತುಗಳನ್ನಷ್ಟೇ ಹೇಳಿ, ವಿವೇಕಾನಂದರನ್ನು ಒಬ್ಬ ಕಟ್ಟಾ ಹಿಂದೂ ಧಾರ್ಮಿಕ ಗುರು ಎಂದು ಅವರನ್ನು ಒಂದು ಧರ್ಮಕ್ಕೆ tag ಮಾಡಿಬಿಟ್ಟಿದ್ದೇವೆ. ನಿಜವಾಗಿ ವಿವೇಕಾನಂದರನ್ನು ನೋಡುತ್ತಾ ಬಂದಾಗ ಒಂದು ವಿಶೇಷವಾದ ಜ್ಞಾನಭಂಡಾರವೇ ಸಿಗುತ್ತದೆ. ಅದು ಅವರು ತನ್ನ ವೈಚಾರಿಕ ನೆಲೆಯಲ್ಲಿ ಬರುತ್ತಿದ್ದಂತಹ ಮಾನವತೆಯ ಅಭಿವೃದ್ಧಿ ಹಾಗೂ ಇಡೀ ಮನುಕುಲದ ಬಗ್ಗೆ ಅವರಿಗಿದ್ದ ಪ್ರೇಮವನ್ನು ತಿಳಿಸಿಕೊಡುತ್ತದೆ. ಆದರೆ ಯಾವ ಅಧ್ಯಾಪಕನೂ ಸಹ ಪ್ರತಿಯೊಂದು ದೃಷ್ಟಿಯಿಂದ ಒಬ್ಬ ವ್ಯಕ್ತಿಯನ್ನು ವಿಷದೀಕರಿಸದೇ ಏಕಮುಖವಾಗಿ, ಅಂದರೆ ತನಗೆಷ್ಟು ಬೇಕೋ ಅಷ್ಟು ಮಾತ್ರ priority basis ನಲ್ಲಿ ಬೋಧನೆ ಮಾಡುತ್ತಿರುವುದನ್ನು ನಾನೂ ಕಂಡಿದ್ದೇನೆ. ಹಾಗೇ ಸಮಾಜದ ಬಗ್ಗೆ ನಾವು ಓದುತ್ತಾ ಬಂದಾಗ ಅಮೇರಿಕಾದ ಸಮಾಜಕ್ಕೆ ಸಂಬಂಧಿಸಿದ ವ್ಯಾಖ್ಯಾನವನ್ನು ಇಂದಿಗೂ ನಾವು ಕಲೀತಾ ಬರ್ತಿದ್ದೇವೆ. ಆದರೆ ಇಲ್ಲಿ ಪ್ರಶ್ನೆ ಮಾಡಬೇಕಾದುದು ನಮ್ಮ ಭಾರತೀಯ ಸಮಾಜ ಹಾಗಿದೆಯಾ ಎನ್ನುವುದು. ನಮ್ಮಲ್ಲಿ ಜಾತಿ, ಧರ್ಮ ಹಾಗೂ ಅನೇಕ ವಿವಿಧತೆಗಳು, ವೈವಿಧ್ಯಮಯ ಸಂಸ್ಕೃತಿಗಳು ಬೆಳದುಕೊಂಡು ಬಂದಿವೆ. ಆದರೆ ಇದನ್ನು ಹೇಳದೆ "ಮಕ್ಕಳೇ, ನಮ್ಮಲ್ಲಿ ಜಾತಿ ಸಂಘರ್ಷಗಳಿವೆ, ಕೋಮು ಗಲಭೆಗಳಿವೆ, ಇಲ್ಲಿರುವ ಜಾತಿ ವ್ಯವಸ್ಥೆ ಬಹಳ ಜಟಿಲವಾದ ವ್ಯವಸ್ಥೆ" ಎಂದು ಹೇಳ್ತಾ ಹೇಳ್ತಾ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೆ ಭಾರತೀಯ ಜಾತಿ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ. ಮತ್ತದೇ ಉತ್ತರವೆಂಬಂತೆ ಪ್ರತಿಯೊಂದು ವಿಚಾರವನ್ನು ಧರ್ಮ, ಜಾತಿಯ ಮುಖವಾಡವನ್ನು ಬಳಸಿಕೊಂಡೇ ಮಕ್ಕಳನ್ನು ಅದೇ ನಿಟ್ಟಿನಲ್ಲಿ ಯೋಚಿಸಲು ಪ್ರೇರೇಪಿಸುತ್ತೇವೆ.


          ಹಾಗಾದರೆ ಮಾನವಿಕ ವಿಭಾಗದಲ್ಲಿದ್ದುಕೊಂಡು ನಾವು ಏನನ್ನು humanize ಮಾಡಿದ್ದೇವೆ, ಏನನ್ನು ನಮ್ಮ ಮಕ್ಕಳಲ್ಲಿ ಬೆಳೆಸಿದ್ದೇವೆ, ಯಾವ ನೈತಿಕ ನೆಲೆಯಲ್ಲಿ ಮೌಲ್ಯಗಳನ್ನು ಜೀವನದಲ್ಲಿ ತುಂಬಿದ್ದೇವೆ ಎನ್ನುವುದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಇವಾಗ ತರಗತಿಗೆ ಬರುವಾಗ ಒಂದು ಪುಸ್ತಕದ ಭಾಗವನ್ನು ಓದಿಕೊಂಡು ಬಂದು ಕ್ಲಾಸ್ ರೂಂನಲ್ಲಿ vomit ಮಾಡ್ತೇವೆ. ಏನು ಹೇಳ್ತಾ ಇದ್ದಾರೆ ಎಂದು ವಿದ್ಯಾರ್ಥಿಗಳಿಗೂ ಗೊತ್ತಾಗೋದಿಲ್ಲ, ಮತ್ತು ತಾನು ಏನು ಹೇಳ್ತಾ ಇದ್ದೇನೆ ಎನ್ನುವುದು ಅಧ್ಯಾಪಕನಿಗೂ ಗೊತ್ತಿಲ್ಲ. ಹೀಗೆ ಅತ್ಯಂತ ಕ್ಲಿಷ್ಟಕರವಾದ ಸಂಗತಿಗಳನ್ನು ಕಿರಿದಾದ ಲಘುಸಾಲುಗಳಲ್ಲಿ ವರ್ಣಿಸಿ ವಿದ್ಯಾರ್ಥಿಗಳು ಪ್ರಶ್ನೆ ಮಾಡದೇ ಇರುವ ಹಾಗೆ ಮಾಡಿ ತಮ್ಮ ಪಾಡಿಗೆ ತಾವು ಯಾರೂ ಪ್ರಶ್ನೆಗಳನ್ನು ಕೇಳಲಿಲ್ಲವಾದ್ದರಿಂದ ಎಲ್ಲಾ ತಿಳಿದಿದ್ದಾರೆ, ತನ್ನ, ತಾನು ಮಾಡಿದ ಪಾಠ ಅದ್ಭುತವೆಂದು ತಿಳಿದುಕೊಂಡುಬಿಟ್ಟು ಉಪನ್ಯಾಸಕರ ಕೊಠಡಿಗೆ ತೆರಳುತ್ತಾರೆ. ಈ ಕಾರಣದಿಂದ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವ, ಅವರ ಹೃದಯವನ್ನು ಕಲಕುವ, ಮನಸ್ಸನ್ನು ಗದ್ಗದಿತಗೊಳಿಸುವ, ಜಿಜ್ಞಾಸೆ ಮೂಡಿಸುವ ಗೋಜಿಗೆ ಯಾರೂ ಹೋಗಲೇ ಇಲ್ಲ . ಆದ್ದರಿಂದಲೇ ವಿದ್ಯಾರ್ಥಿಗಳಿಗೆ ಯಾವುದೇ ವಿಚಾರವನ್ನು ತೆಗೆದುಕೊಂಡು ಹೋದಾಗ ಧರ್ಮದ ಆಧಾರದಲ್ಲೇ ನೋಡುವ ವಿದ್ಯಾರ್ಥಿಗಳನ್ನು ಇಂದು ನಾವು ಕಾಣಸಿಗುತ್ತೇವೆ. ಈ ಕಾರಣದಿಂದ ಇನ್ನಷ್ಟು ಮಕ್ಕಳನ್ನು, ಅವರ ತಲೆಯಲ್ಲಿ ಜಾತಿ, ಧರ್ಮ ವ್ಯವಸ್ಥೆಯ ಕಹಿ ನೆರಳನ್ನು ತುಂಬುತ್ತಾ ಒಂದು ರೀತಿಯ ಮತಾಂಧ ವಿದ್ಯಾರ್ಥಿಗಳನ್ನು ಸೃಷ್ಟಿಸಿಕೊಂಡುಬಿಟ್ಟಿದ್ದೇವೆ. ಇದೇ ರೀತಿ ಮುಂದುವರೆದಲ್ಲಿ ಸಮಾಜ ವಿಜ್ಞಾನ ಅದರಲ್ಲೂ ರಾಜ್ಯಶಾಸ್ತ್ರ, ಮುಂದೊಂದು ದಿನ waste product ಆಗಿಬಿಡಬಹುದು. ಆದುದರಿಂದ ಆ productನ ಅವಶ್ಯಕತೆ ಇನ್ನಿಲ್ಲ ಎನ್ನಬಹುದು. ಹೀಗಾದಾಗ ಸಮಾಜ ವಿಜ್ಞಾನ ಅಥವಾ ಮಾನವಿಕ ವಿಭಾಗಗಳು ನಾಶಗೊಳ್ಳುವುದಂತೂ ಖಂಡಿತ. ಒಬ್ಬ ವಿದ್ಯಾರ್ಥಿ ಬೋಧಕನ ಬೋಧನೆಯಿಂದ, ತನ್ನೆಲ್ಲಾ ವಿಚಾರಗಳನ್ನು ತನ್ನ ಜಾತಿ, ಧರ್ಮದ ಕಟ್ಟಲೆಗೊಳಪಡಿಸದೇ beyond religionನ ಬಗ್ಗೆ ಯೋಚನೆ ಮಾಡಲು ಆರಂಭಿಸಿದರೆ ನಿಜಕ್ಕೂ ಮಾನವಿಕ ಶಾಸ್ತ್ರಗಳ ಇರುವಿಕೆಗೆ ಮತ್ತು ಅದರ ಕಲಿಕೆಗೆ ನಿಜವಾದ ಅರ್ಥ ಬರುತ್ತದೆ. ಇದನ್ನೆಲ್ಲಾ ನಮ್ಮಂಥಹ ಅಧ್ಯಾಪಕರುಗಳು ಮಾಡಬೇಕಾಗಿದೆ. ಬರೀ syllabus ನಲ್ಲಿ ಏನಿದೆ ಅದು ಮಾತ್ರವಲ್ಲ, ಬದಲಾಗಿ ಇತರ ಮೌಲ್ಯಯುತ ವಿಚಾರಗಳನ್ನು, ಪಠ್ಯೇತರ ವಿಷಯ ಸಂಗತಿಗಳನ್ನು ತಿಳಿಸಿದಾಗ ಮಾತ್ರ ವಿದ್ಯಾರ್ಥಿಯ ಮನದಲ್ಲಿ ಪ್ರಶ್ನೆಮಾಡುವ ಮನಸ್ಸನ್ನು ನಾವು ಸೃಷ್ಟಿಸಬಹುದಾಗಿದೆ. ಡಾ। ಅಬ್ದುಲ್ ಕಲಾಂರವರನ್ನು ನಮ್ಮ ಮೇಷ್ಟ್ರುಗಳು ನಮಗೆ ಪರಿಚಯಿಸಿದ್ದು, ಹಾಗೂ ಈಗಿನ ಕೆಲವು ಶಿಕ್ಷಕ ವೃತ್ತಿಯಲ್ಲಿರುವ ಗೌರವಾನ್ವಿತರು 'ಕೇವಲ ಕಲಾಂ ಒಬ್ಬ ಅಣು ವಿಜ್ಞಾನಿ, ಭಾರತೀಯ ಅಣು ವಿಜ್ಞಾನದ ಪಿತಾಮಹ' ಎಂದು ಮಾತ್ರ ಪರಿಚಯ ಮಾಡಿಸಿದ್ದರೇ ಹೊರತು ಕಲಾಂ ಒಬ್ಬ ಅದ್ಭುತ ಮಾನವತಾವಾದಿ ಎಂಬುದನ್ನು ಪರಿಚಯ ಮಾಡಿಕೊಡಲೇ ಇಲ್ಲ. ಅವರು syllabus ಏನನ್ನು ಹೇಳಬೇಕು ಎಂದು guidelines ಇದೆಯೋ ಅದನ್ನು ಮಾತ್ರ ಹೇಳಿಕೊಟ್ಟಿದ್ದರೇ ಹೊರತು ಯಾವತ್ತೂ ಮಾನವತಾವಾದ ಮತ್ತು ವಿಜ್ಞಾನ ಇವೆರಡನ್ನೂ ಸಮ್ಮಿಶ್ರಣ ಮಾಡಿದ ಬಗೆಯನ್ನು ಹೇಳಿಕೊಡಲೇ ಇಲ್ಲ. ಕಲಾಂರವರ ಏಕಮುಖವನ್ನು ಪರಿಚಯಿಸಿದರೇ ಹೊರತು ಇನ್ನೇನನ್ನೂ ಮಾಡಿಲಿಲ್ಲ. ಹೀಗಾಗಿ ಅರ್ಧ ಬೆಂದ ಮಾಂಸದ ಹಾಗೆ ಆಗಿಬಿಟ್ಟಿತು ನಮ್ಮ ಮೆದುಳು. ಮತ್ತು ಇದನ್ನೇ ಎಲ್ಲಾ ಜನರು ಮಾಡುತ್ತಿದ್ದಾರೆಯೇ ಎಂಬ ಕಳವಳ, ಸಂಶಯ ನನ್ನಲ್ಲಿ ಮೂಡುತ್ತಿದೆ. ಇದನ್ನೇ teaching beyond curriculum ಅಂತ ಹೇಳುವುದು. ಅದರ ವಿಫಲತೆಯಿಂದಲೇ ವಿಧ್ಯಾರ್ಥಿಗಳಲ್ಲಿ ಮಾನವಿಕ ಮೌಲ್ಯಗಳನ್ನು ಬಿತ್ತಬೇಕಾದ ಗುರುತರ ಜವಾಬ್ದಾರಿಯನ್ನು ಹೊತ್ತಿರುವ, ಹೊತ್ತ ಮಾನವಿಕ ವಿಭಾಗಗಳು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳನ್ನು humanize ಮಾಡಿದ್ದಾರೆ ಎಂಬುದು ಪ್ರಶ್ನೆ. ಒಂದು ವೇಳೆ ಹಾಗೇ ಆಗಿರುತ್ತಿದ್ದರೆ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಖಂಡಿತವಾಗಿಯೂ ಅತ್ಯಂತ ಸುಲಭ ರೀತಿಯಲ್ಲಿ ಕಂಡುಹಿಡಿಯಬಹುದಾಗಿತ್ತು. ಮೊದಲಿಗೆ ನಾವೆಲ್ಲಾ  ಮಾನವರು. ಆ ಕಾರಣದಿಂದಲೇ ನಾವಿಲ್ಲಿದ್ದೇವೆ ವಿನಃ ಯಾವುದೇ, ಜಾತಿ, ಧರ್ಮ, ಪಂಗಡಗಳಿಂದಲ್ಲ. ಹಾಗಾಗಿ ಅಧ್ಯಾಪಕರು ತಮ್ಮ ಈ ಸೀಮಿತ ದೃಷ್ಟಿಕೋನವನ್ನಿರಿಸಿ ವಿಷಯ ಪ್ರಸ್ತುತಿಯನ್ನು ಮಾಡುವುದರ ಬದಲು ವಿದ್ಯಾರ್ಥಿಗಳ ಮನಸ್ಸಲ್ಲಿ ಪ್ರಶ್ನೆಗಳನ್ನು ಸೃಷ್ಟಿಸುವ ಹಾಗೆ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಅಧ್ಯಾಪಕರ ಮೇಲಿದೆ ಹಾಗೂ ಆ ಪ್ರಯತ್ನವನ್ನು ಇಂದು ಅಧ್ಯಾಪಕರು ಮಾಡಬೇಕಿದೆ.

-ಹರೀಶ್ ರಾವ್

Photo Credit: Noticias Unsam, LinkedIn, med.cap


Author image
About the Author
ಹೆಸರು:ಶ್ರೀ ಹರೀಶ್ ರಾವ್.
▪ಹರೀಶ್ ರಾವ್ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಪರಿಸರದವರು. 2012ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡ ಇವರು ಕಳೆದ 5 ವರ್ಷದಿಂದ ಪೂತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳು ಅನೇಕ ಬಾರಿ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಸಾಹಿತ್ಯವನ್ನು ತನ್ನ ಒಂದು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯಕೃಷಿಯನ್ನು ಬಹು ಉತ್ಸಾಹದಿಂದ ಮಾಡುತ್ತಾ ಬರುತ್ತಿದ್ದಾರೆ. ಇವರ ಬರಹಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.
ದೂರವಾಣಿ: +91 7892983672
ಮಿಂಚಂಚೆ: harshabhatdpl@gmail.com

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.