ಆ ಹ(ಹೆ)ಣ್ಣಿನ ಲೋಕ


ಚಿತ್ರಕವನ ೪:

ಕಿತ್ತು ತಿನ್ನುವ ಬಡತನದಿ
ಕಂಡವರ ಬದುಕಿಗೆ
ಕರುಬದೇ ಕೊರಗದೇ
ಕಾಯಕದಿ ಕರಗುತ
ಕೈಲಾಸವರಸುವ
ಕಣ್ಣಿಗೆ ಕಂಡಿತವಳಿಗೆ
ಕಿತ್ತಳೆ ಹಣ್ಣಿನ ರಾಶಿ

ಒಟ್ಟಂದದಲಿ
ಒಂದರಲ್ಲೊಂದ
ಒಪ್ಪವಾಗಿಡುತ
ಓಲೈಸುತಲೇ
ಒಂದಷ್ಟು ಗಳಿಸಿ
ಒಪ್ಪೊತ್ತಿಗೆ ಸಿಕ್ಕಿ
ಓಡಾಡಿ ಹೆಣ್ಣಿಗೆ ಖುಷಿ

ಹರೆಯವಲ್ಲದಿದ್ದರೂ
ಹೊರೆಯಲೇ ಬೇಕು
ಹೊಟ್ಟೆಯ ಬಿಡಲಾಗದು
ಹಣ್ಣು ಯಾವುದಾದರೇನು
ಹೆಸರಿನಲ್ಲೇನಿದೆಯೆಂದು
ಹೆಚ್ಚುಗಾರಿಕೆ ಹಣವಿರಬೇಕಷ್ಟೆ
ಹೆಣವನೆತ್ತಬೇಕಾದರೂ

                   -ಗಣೇಶಪ್ರಸಾದ ಪಾಂಡೇಲು

Author image
About the Author
ಹೆಸರು:ಶ್ರೀ ಗಣೇಶಪ್ರಸಾದ ಪಾಂಡೇಲು.
▪ಶ್ರೀಯುತ ಗಣೇಶಪ್ರಸಾದ ಪಾಂಡೇಲು ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಕನ್ನಡ, ಹವಿಗನ್ನಡ ಹಾಗೂ ತುಳು ಭಾಷೆಗಳಲ್ಲಿ ಬಹಳ ಸೊಗಸಾಗಿ ಕಾವ್ಯ ರಚನೆ ಮಾಡುವ ಇವರದ್ದು ಅತ್ಯಂತ ಸವಿಯಾದ ಸಾಹಿತ್ಯ. ಪ್ರಸ್ತುತ ಉಡುಪಿಯ ಮಣಿಪಾಲದಲ್ಲಿ ವಾಸವಾಗಿರುವ ಪಾಂಡೇಲು ಇವರು ವೃತ್ತಿಯಲ್ಲಿ ಪತ್ರಕರ್ತರು. ಉದಯವಾಣಿ ದೈನಿಕ ಪತ್ರಿಕೆಯ ಹಿರಿಯ ಉಪಸಂಪಾದಕರಾಗಿರುವ ಇವರು ಓರ್ವ ಅನುಭವಿ ಪತ್ರಕರ್ತ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಶ್ರೀ ಗಣೇಶಪ್ರಸಾದ ಪಾಂಡೇಲು ಇವರು ಸಾಹಿತ್ಯದಲ್ಲಿ ಮಾಡಿದ ಕೃಷಿ ಅತ್ಯಂತ ಫಲದಾಯಕವಾದುದಾಗಿದ್ದು ಇದುವರೆಗೆ ೧೬ ಕನ್ನಡ ಸಂಕಲನಗಳನ್ನು ಬೆಳಕಿಗೆ ತಂದಿದ್ದಾರೆ. ಅವುಗಳಲ್ಲಿ ೮ ಕವನ ಸಂಕಲನ, ೨ ಚುಟುಕು ಸಂಕಲನ, ೨ ಹನಿಗವನ ಸಂಕಲನ, ೨ ಕಥಾ ಸಂಕಲನ ಹಾಗೂ ೨ ಲೇಖನ ಬರಹಗಳ ಸಂಕಲನಗಳು ಇವರ ಸಾಹಿತ್ಯ ಲೋಕದ ಮಣಿಸರಗಳು. ೨ ಕವನ ಸಂಕಲನಗಳು ಶೀಘ್ರದಲ್ಲೇ ಪ್ರಕಟವಾಗುತ್ತಿದ್ದು ಸಿದ್ಧತಾ ಹಂತದಲ್ಲಿದೆ. ಕೇವಲ ಕನ್ನಡ ಸಾಹಿತ್ಯ ಮಾತ್ರವಲ್ಲದೆ ತುಳು ಸಾಹಿತ್ಯದಲ್ಲೂ ಇವರದು ಎತ್ತಿದ ಕೈ. ಒಟ್ಟು ೫ ತುಳು ಸಂಕಲನಗಳನ್ನು ರಚಿಸಿದ್ದು ತುಳು ಭಾಷೆಯ ನವಿರಾದ ಜ್ಞಾನವನ್ನು ಹೊಂದಿದ್ದಾರೆ. ಅಷ್ಟು ಮಾಡಿದರೂ ಅವರು ಹೇಳುವುದು "ನಾನು ಪತ್ರಿಕಾರಂಗ ಹಾಗೂ ಸಾಹಿತ್ಯ ರಂಗಕ್ಕೆ ವಿದ್ಯಾರ್ಥಿ" ಎಂಬುದಾಗಿ. ಈ ಮಾತುಗಳು ಅವರ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಶ್ರೀಯುತರು ನಗುಮುಖದ ಸ್ನೇಹಜೀವಿಯಾಗಿದ್ದು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡವರು. ವಿಟ್ಲ ತುಳು ಕೂಟೋ ಇಟ್ಟೆದಲ್ ನ ಸ್ಥಾಪಕಾಧ್ಯಕ್ಷರಾದ ಇವರು ತುಳು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದವರು. ಅದೇ ರೀತಿ ಚುಟುಕು ಸಾಹಿತ್ಯ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಘಟದ ಮಾಜಿ ಅಧ್ಯಕ್ಷರೂ ಆಗಿದ್ದರು. ಪ್ರತಿದಿನವೂ ಹೊಸದೆಂಬಂತೆ ಪ್ರತಿಕ್ಷಣವೂ ಸಾಹಿತ್ಯಾಸಕ್ತಿಯನ್ನು ಹೊರಚೆಲ್ಲುವ ಇವರು ಹಲವು ಶೈಲಿಗಳಲ್ಲಿ ಕಾವ್ಯರಚನೆಯನ್ನು ಸದಾ ಉತ್ಸಾಹದಿಂದ ಮಾಡುತ್ತಿರುತ್ತಾರೆ. ಚೊಕ್ಕ ಸಂಸಾರದಲ್ಲಿ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ಮಣಿಪಾಲದಲ್ಲಿ ವಾಸ್ತವ್ಯವನ್ನು ಹೊಂದಿದ್ದಾರೆ. ಇದು ಪಾಂಡೇಲು ಅವರ ಬಗೆಗೆ ಒಂದಿಷ್ಟು... ಇವರ ಬರಹಗಳನ್ನು ನಮ್ಮ ಜಾಲತಾಣದಲ್ಲಿ ಒದಬಹುದು.

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.