ಅಪ್ಪನೆಂದರೆ ಹಲವು ಭಾವನೆಗಳ ಸಮಾಗಮ. ಆತನನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡುವುದಂಕ್ಕಿಂತಲೂ ಒಬ್ಬ ತಂದೆಯಾಗಿ ನೋಡುವಾಗ ಮನಸ್ಸಿಗೆ ಒಂದು ತೆರನಾದ ಸಂತೃಪ್ತಿ. ಒಂದು ಮಗು ಹುಟ್ಟಿದ ಜೊತೆಜೊತೆಗೇ ಒಬ್ಬ ತಂದೆಯೂ ಹುಟ್ಟುತ್ತಾನೆ, ಮಗುವಿನೊಂದಿಗೆ ಮಗುವಾಗಿ ಹೋಗುತ್ತಾನೆ. ಪ್ರತಿಯೊಬ್ಬ ತಂದೆಗೂ ತನ್ನ ಕೈಗಳಲ್ಲಿ ಪುಟ್ಟಕಂದಮ್ಮನನ್ನು ಸ್ಪರ್ಶಿಸುವ ಸಮಯ, ಕಂದನ ತೊದಲು ಮಾತಿನಲ್ಲಿ ಮೊದಲಬಾರಿ ಅಪ್ಪ ಎನಿಸಿಕೊಳ್ಳುವ ಸಮಯ ಅತೀವ ಸಂತಸದಾಯಕ ಹಾಗೂ ಅದು ಅತ್ಯಮೂಲ್ಯವಾಗಿರುತ್ತದೆ. ಮಗುವಿನ ಲಾಲನೆ ಪಾಲನೆಯಲ್ಲಿ ತಾಯಿಯಷ್ಟೇ ಜವಾಬ್ದಾರಿ ತಂದೆಯದ್ದಾಗಿರುತ್ತದೆ. ಆತ ಪ್ರೀತಿಯೆಂಬ ಸವಿಯನ್ನು ಮಕ್ಕಳಿಗೆ ಹಂಚುವ ಜನುಮದಾತ. ಪ್ರತಿಯೊಬ್ಬ ತಂದೆಯೂ ಮಕ್ಕಳ ನೋಟಕ್ಕೆ ಓರ್ವ ವಿಭಿನ್ನ ಕಥಾನಾಯಕನಾಗಿರುತ್ತಾನೆ. ಅದರಲ್ಲೂ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಅಪ್ಪನೆಂದರೆ ವಿಶೇಷ ಅಕ್ಕರೆ, ಪ್ರೀತಿ ಹಾಗೂ ಒಬ್ಬ ಸ್ನೇಹಿತನ ರೀತಿ ಹೆಗಲುಕೊಟ್ಟು ನಿಲ್ಲುವ ಆದರ್ಶ ಪುರುಷ. ತಮ್ಮ ಜೊತೆ ಅಪ್ಪನೆಂಬ ದೇವರು ಸದಾ ಇರುತ್ತಾನೆಂಬ ಆತ್ಮವಿಶ್ವಾಸದಲ್ಲಿ ಮಕ್ಕಳು ಯಾವ ಅಡೆತಡೆಗಳನ್ನೂ ಲೆಕ್ಕಿಸದೆ, ಎಷ್ಟು ಕಷ್ಟ ಬಂದರೂ ಛಲಬಿಡದೆ, ಆಕಾಶದ ಎಲ್ಲೆಯನ್ನು ಮೀರಿ ಸಾಧನೆಯ ಶಿಖರವನ್ನು ತಲುಪುತ್ತಾರೆ. ಕಾರಣ ತಮ್ಮ ಜೊತೆ ಅಪ್ಪನ ಶಕ್ತಿ ಇದೆ ಎಂಬ ಅತೀವವಾದ ನಂಬಿಕೆ, ವಿಶ್ವಾಸ, ಭರವಸೆ ಅದೆಲ್ಲದಕ್ಕಿಂತ ಮುಖ್ಯವಾಗಿ ಅಪ್ಪನ ಪ್ರೀತಿಯ ಮೇಲೆ ಇರಿಸಿದ ಶ್ರದ್ಧೆ.
ತಂದೆಯ ಪ್ರೀತಿ, ತ್ಯಾಗ, ಸಹನೆ, ತಾಳ್ಮೆ, ಧೈರ್ಯ ಎಲ್ಲವೂ ಮಕ್ಕಳಿಗೆ ಪ್ರಿಯವಾದುದು. ಅಪ್ಪ ಗದರಿದಾಗ ಆತನ ಮೇಲೆ ಕೊಂಚ ಸಿಟ್ಟು ಬಂದರೂ, ಸ್ವಲ್ಪ ಯೋಚಿಸಿ ನೋಡಿದಾಗ ಆತನಿಗೆ ನಮ್ಮ ಮೇಲಿರುವ ಕಾಳಜಿ, ನಮ್ಮ ಸುರಕ್ಷತೆಯ ಬಗೆಗಿನ ಆತಂಕದ ಛಾಯೆಯು ತೋರುವುದಂತೂ ಖಂಡಿತ. ಅಪ್ಪನ ಪ್ರೀತಿ, ಕೊಡುಗೆಗಳು ಜಗತ್ತಿನ ಹೊರವಲಯದಲ್ಲಿ ಕೆಲವೊಮ್ಮೆ ತೋರ್ಪಡದಿದ್ದರೂ ಮಕ್ಕಳಿಗಾಗಿ ಅವರು ಹಾಕಿಕೊಡುವ ಶಿಸ್ತು-ಸಂಯಮಗಳ ಬುನಾದಿಯಲ್ಲಿ, ಮಕ್ಕಳ ಸಾಧನೆಯಲ್ಲಿ, ಸಂಸ್ಕಾರದಲ್ಲಿ ಅಪ್ಪನು ನೀಡಿದ ಅತ್ಯುನ್ನತ ಮಾರ್ಗದರ್ಶನವು ವ್ಯಕ್ತವಾಗುತ್ತದೆ. ಮಕ್ಕಳು ಎಡವಿದಾಗ ತಿಳುವಳಿಕೆ ಹೇಳಿ ಅವರನ್ನು ಸರಿದಾರಿಯಲ್ಲಿ ನಡೆಸುವುದು ಸಹ ಪ್ರತಿಯೊಬ್ಬ ತಂದೆಯ ಕರ್ತವ್ಯವಾಗಿರುತ್ತದೆ. ಅದರಲ್ಲೂ ಕರ್ತವ್ಯಲೋಪವೆಸಗದೆ ತನಗಾದ ಅನುಭವಗಳ ರಾಶಿಯನ್ನು ಮಕ್ಕಳೆದುರು ಬಿಚ್ಚಿಡುತ್ತಾ ಮಕ್ಕಳ ಏಳಿಗೆಯನ್ನು ಕಾಣುವ ಹಂಬಲದಲ್ಲಿ ತಂದೆಯು ಪರಿತಪಿಸುತ್ತಿರುತ್ತಾನೆ ಮತ್ತು ಅದಕ್ಕಾಗಿ ಆತ ಅಷ್ಟೇ ಶ್ರಮವನ್ನೂ ಪಡುತ್ತಾನೆ. ಸಮಾಜದಲ್ಲಿ ಆಗುವ ನೋವು-ಅವಮಾನಗಳನ್ನು ತನ್ನ ಕುಟುಂಬಕ್ಕಾಗಿ ಮರೆತು ಅಥವಾ ಎದುರಿಸಿ, ನಾಲ್ವರ ಮುಂದೆ ತಲೆ ಎತ್ತಿ ನಡೆಯುತ್ತಾನೆ. ತನಗಿಂತ ತನ್ನ ಮಕ್ಕಳು ಜೀವನದಲ್ಲಿ ಮುಂದುವರೆದಾಗ ಆತನ ಕಣ್ಣಲ್ಲಿ ಸಾರ್ಥಕತೆಯ ಚಿಲುಮೆ ಚಿಮ್ಮುತ್ತಿರುತ್ತದೆ ಹಾಗೂ ಇದು ಎಂದಿಗೂ ನಿಷ್ಕಲ್ಮಶವಾದ ಸತ್ಯವಾಕ್ಯ. ಮಕ್ಕಳ ಆರೋಗ್ಯ ಸ್ವಲ್ಪ ಹದಗೆಟ್ಟರೂ ಅದರ ನೂರು ಪಟ್ಟು ನೋವನ್ನು ಆತ ಅನುಭವಿಸುತ್ತಾನೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೇಗೆ ಒಬ್ಬಳು ಸ್ತ್ರೀ ಇರುತ್ತಾಳೆಯೋ ಹಾಗೆಯೇ ಪ್ರತೀ ಯಶಸ್ವಿ ಮಕ್ಕಳ ಹಿಂದೆ ಅವರನ್ನು ನಂಬುವಂತಹ, ವಿಶ್ವಾಸ ಹೊಂದಿರುವಂತಹ ಪೋಷಕರು ಇರುತ್ತಾರೆ ಎಂಬುದನ್ನು ಎಲ್ಲಾ ಮಕ್ಕಳು ಅರಿತುಕೊಂಡು ಹೆತ್ತವರನ್ನು ತಮ್ಮ ಮಕ್ಕಳಂತೆ ನೋಡಿಕೊಂಡಲ್ಲಿ ಈ ವೃದ್ಧಾಶ್ರಮಗಳೇ ಬೇಕಾಗಿ ಬರುವುದಿಲ್ಲ. ಆ ಮೂಲಕ ಸುಭಧ್ರವಾದ, ಸುಭಿಷ್ಟವಾದ, ಆರೋಗ್ಯದಾಯಕ ದೇಶದ ನಿರ್ಮಾಣಕ್ಕೆ ಅದು ಪೂರಕವಾಗುತ್ತದೆ. ಅಪ್ಪನ ಕಿರುಬೆರಳನ್ನು ಹಿಡಿದು ನಡೆಯುವ ಸಂದರ್ಭ, ಅಪ್ಪನ ಕೈತುತ್ತು ಹಾಕಿಸಿಕೊಳ್ಳುವ ಸಂದರ್ಭ, ಅಪ್ಪನ ಹೆಗಲ ಮೇಲೆ ಕೂತು ಜಗತ್ತನ್ನು ಕಾಣುವ ಸಂದರ್ಭಗಳಲ್ಲಿ ಸಿಗುವ ಉಲ್ಲಾಸ ಬೇರೆಲ್ಲೂ ದೊರೆಯದು. ಅಪ್ಪನೆಂದರೆ ಹಾಗೆಯೇ... ಫಲಾಪೇಕ್ಷೆಗಳಿಲ್ಲದೆ, ಹಗಲಿರುಳೆನ್ನದೆ, ವಿಶ್ರಮಿಸದೆ ತನ್ನ ಮಕ್ಕಳ ಉನ್ನತಿಗಾಗಿ ದುಡಿಯುವ ಕಾಯಕಯೋಗಿ. ನೇಗಿಲಯೋಗಿ ಜೀವದ ಬಂಧುವಾದರೆ ಈ ಕಾಯಕಯೋಗಿ ಜೀವನದ ಬಂಧು. ಏಕೆಂದರೆ ಜೀವನವನ್ನು ಕಲಿಸುವ ಅಧ್ಯಾಪಕನೇ ಜಗತ್ತಿನಲ್ಲಿ ಅಪ್ಪ ಎಂಬ ದೇವರೂಪ.
ನನ್ನ ಈ ಲೇಖನಕ್ಕೆ ನನ್ನ ತಂದೆಯೇ ಸ್ಪೂರ್ತಿ. ನನ್ನ ಪ್ರತೀ ನಡೆಯ ಹಿಂದೆಯೂ ಅವರ ಸಹಕಾರ, ಹಾರೈಕೆ, ಆಶೀರ್ವಾದ ಸದಾ ಇರುತ್ತದೆ ಎಂಬುದನ್ನು ನಾನು ಬಲವಾಗಿ ನಂಬಿಕೊಂಡು ಬಂದವಳು. ನನ್ನ ತಂದೆಯೇ ನನ್ನ ಪ್ರಪಂಚ. ಪ್ರಪಂಚಮುಖದಲ್ಲಿ ನನ್ನ ತಂದೆಯೇ ನನಗೆ ದೇವರು. ಆ ದೇವರ ಸಾಕ್ಷಾತ್ಕಾರದೊಳಗೆ ದೊರೆಯುವ ಅಪ್ಪನ ಅಪ್ಪುಗೆಯ ಸಿಹಿಗೆ ಮುಪ್ಪೆಂಬುದೇ ಇಲ್ಲ. ನನ್ನ ಈ ಲೇಖನ ನನ್ನ ಪ್ರೀತಿಯ ಅಪ್ಪನಿಗೆ ಹಾಗೂ ಜಗತ್ತಿನ ಎಲ್ಲಾ ಅಪ್ಪಂದಿರ ಮನಸ್ಸುಗಳಿಗೆ ಅರ್ಪಣೆ.
-ಮಾನಸ ಡಿ. ಎಸ್
Photo Credit: Pinterest
ಉತ್ತಮವಾಗಿದೆ
ReplyDeleteಧನ್ಯವಾದಗಳು...
Deleteಬಾಲ್ಯದ ದಿನಗಳ ಕಣ್ಮುಂದೆ ತರಿಸಿ ತಂದೆ-ಮಕ್ಕಳ ಸಂಬಂಧವನ್ನು ಗಟ್ಟಿ ಮಾಡುವಂತಹ ಲೇಖನ
ReplyDeleteಧನ್ಯವಾದಗಳು...
Deleteಪ್ರತಿಯೊಬ್ಬರೂ ಓದಬೇಕಾದಂತಹ ಲೇಖನ.
ReplyDeleteಧನ್ಯವಾದಗಳು
Delete