ಜೀವನ: ಇದು ಮುಗಿಯದ ಪಯಣ


          ಜೀವನ/ಬದುಕು... ಇದು ಕೇಳಲು ಬಹಳ ಬೋರ್ ಅಂತ ಅನ್ಸುತ್ತೆ. ಆದರೆ ಇದರ ನೈಜ, ಅಷ್ಟೇ ವಾಸ್ತವಿಕವಾದ ಗೋಚರ ವಿಷಯ ವಸ್ತುವನ್ನು ಬರೆಯಲು ನನ್ನ ಮನ ಪ್ರೇರೇಪಿಸುತ್ತಿದೆ. ನಾವೆಲ್ಲರೂ ಜೀವನ ಅಂತ ಮಾತಾಡ್ತಾ ಬರ್ತೇವೆ. ಕಾಣಲು ಕೇವಲ ಮೂರೇ ಮೂರು ಅಕ್ಷರಗಳಿದ್ದರೂ ಇದರ ಆಳ ಬಹಳಷ್ಟು. ಇದರಲ್ಲಿ ಮೂಡುವ, ಅದು ನೀಡುವ ಅನುಭವ ಅನನ್ಯ ಹಾಗೂ ಸ್ವೀಕರಿಸಬೇಕಾದುದು ಅನಿವಾರ್ಯ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ, ಅವನು ಜೀವಿಸುವ ಬಗೆಯಿಂದ ರೂಪಿತಗೊಳ್ಳುತ್ತದೆ. ಅವನ ಉನ್ನತಿ ಹಾಗೂ ಅವನತಿಗಳೆರಡೂ ಆತ ಅರ್ಥೈಸಿಕೊಂಡ, ಪಾಲನೆ ಮಾಡಿದ, ಬದುಕನ್ನು ಈ ಜೀವನವೆಂಬ ಸಾಗರದಲ್ಲಿ ಕಟ್ಟಿಕೊಂಡ ಬಗೆಗಳ ಒಂದು ಭಾಗವೇ ಆಗಿದೆ. ಅನೇಕ ಏಳು ಬೀಳು. ಆದಿ- ಅಂತ್ಯ, ಸಂಘರ್ಷ, ಹೋರಾಟ ಇರುವಂತಹ ಈ ಜಗತ್ತಿನಲ್ಲಿ ಅದನ್ನೆಲ್ಲಾ ಸೃಷ್ಟಿಸಿಕೊಳ್ಳುವ ಜೀವನವೆಂಬ ವಾಸ್ತವ ಸಂಗತಿಯೇ ಅತ್ಯಮೂಲ್ಯ ವಿಷಯ. ಆದುದರಿಂದ ನಾವು ಜೀವನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

         ಜನರು ತಮ್ಮ ಈ ಮೂರಕ್ಷರದ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಾಣಬಹುದು. ಆದರೆ ಅವರ ಏಳುಗಳು ಹಾಗೂ ಬೀಳುಗಳು ತಾವು ರೂಪಿಸಿದ ಜೀವನದ ದಿಕ್ಕನ್ನು ಅವಲಂಬಿಸಿರುತ್ತದೆ. ಹಲವಾರು ಜನ ಇನ್ನೇನು ನನ್ನ ಬದುಕೇ ನಿಂತು ಹೋಯಿತು ಎಂಬ ಕ್ಷಣದಲ್ಲಿದ್ದಾಗ, ನಾನೇಕೆ ಹೀಗೆ ಮಾಡಿದೆ? ನನ್ನ ಬದುಕನ್ನು ಕಳೆದುಕೊಂಡು ನಾನು ಮಾಡಲು ಹೊರಟ ಸಾಧನೆಯಾದರೂ ಏನು? ಎಂಬುದಾಗಿ ಇದಕ್ಕೆಲ್ಲ ಉತ್ತರ ಕೊಡಲು, ಧನಾತ್ಮಕವಾಗಿ ನಾನೇನು ಮಾಡಬಲ್ಲೆ? ನನ್ನ ಸಾಮರ್ಥ್ಯ ಎಂಥದ್ದು? ನನ್ನ ಗುರಿಯನ್ನು ತಲುಪುತ್ತೇನೆ., ಈಗಿರುವ ಸ್ಥಿತಿ ದುಸ್ಥಿರವಾಗಿರಬಹುದು ಆದರೆ ನಾನು ಬದುಕಬೇಕು, ಬದುಕುತ್ತೇನೆ, ಎಲ್ಲಾ ನೆನಪುಗಳನ್ನ erase ಮಾಡಿ  ಮುಂದೆ ನನ್ನನ್ನ ಇದೇ ಪರಿಸ್ಥಿತಿ ಹಕ್ಕಿಯಾಗಿ ಹಾರಾಡುವ, ಉಜ್ವಲ ಭವಿಷ್ಯ ರೂಪಿಸುವ ಹಾಗೆ ಮಾಡುತ್ತೇನೆ ಎಂಬ ಛಲದಿಂದ ಮರುಜೀವನವನ್ನು ಸೃಷ್ಟಿಸಿಕೊಂಡು ಜೀವನದಲ್ಲಿ ಸಫಲತೆಯನ್ನು ಕಂಡುಕೊಂಡವರು ಅನೇಕ ಮಂದಿ ಇದ್ದಾರೆ. ಕಹಿನೆನಪುಗಳ ಕೊರಗಿನಲ್ಲಿ, ಪಡೆಯಲಾಗದ ಬಯಕೆಗಳನ್ನು ಮರೆತು, ಮುಂದಿನ  ಬಾಳಿನಲ್ಲಿ ನಾನಂದುಕೊಂಡದ್ದನ್ನು ಸಾಧಿಸುತ್ತೇನೆ ಎಂದುಕೊಂಡ ಅನೇಕ ಉದಾಹರಣೆಗಳು ನಮ್ಮ ಮುಂದೆ ಸಿಗುತ್ತದೆ. Reliance ಸಂಸ್ಥಾಪಕ ಧೀರೂಭಾಯ್ ಅಂಬಾನಿ. ಪೆಟ್ರೋಲ್ ಬಂಕ್‍ಗಳಲ್ಲಿ ಪೆಟ್ರೋಲ್ ಹಾಕಿ ಸಾಮಾನ್ಯ ಬಡತನದ ಜೀವನ ಸಾಗಿಸುತ್ತಿದ್ದ ಆತ ಮುಂದಕ್ಕೆ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು ದೇಶದ ಟಾಪ್ ಸಂಸ್ಥೆಯಾದ Reliance ನ ಮಾಲೀಕನಾಗಿ ಜೀವನದ ದಿಕ್ಕನ್ನೇ ಬದಲಿಸಿದ. ಅಮೇರಿಕಾದ 'ಗ್ರೇಟ್ ಡಿಪ್ರೆಶನ್' ಕಾಲದಲ್ಲಿ ಎಲ್ಲವನ್ನು ಕಳೆದುಕೊಂಡು ಒಂದು ಕುಟುಂಬ ಭಿಕಾರಿಯಾಗಿ ಬೀದಿಗೆ ಬಂದಿತ್ತು. ಅದರಲ್ಲಿ ಓರ್ವ ನ್ಯೂಯಾರ್ಕ್ ನ ಸಾರ್ವಜನಿಕ ಸ್ಥಳದಲ್ಲಿ ಕೂತು ಏನೋ ಯೋಚನೆ ಮಾಡಿ ತನ್ನ ಮುಂದಿದ್ದ ಬೃಹತ್ ಕಟ್ಟಡವೊಂದನ್ನು ದಿಟ್ಟಿಸಿನೋಡುತ್ತಾ  ಕುಳಿತು ಆಲೋಚಿಸತೊಡಗಿದ್ದ. ಜನ ಈತನನ್ನು ವಿಚಾರಿಸಲಾಗಿ ಏನನ್ನು ಯೋಚಿಸುತ್ತಿರುವೆ ಎಂದಾಗ, ತನ್ನ ಮುಂದೆ ಕಾಣುತ್ತಿರುವ ಕಟ್ಟಡದಂತೆ ನಾನೂ ಮುಂದೊಂದು ದಿನ ಇದೇ ತರಹದ ದೊಡ್ಡ ಹೋಟೇಲೊಂದರ ಮಾಲೀಕನಾಗಬೇಕೆಂದು ಹೇಳಿದ. ನೆರೆದಿದ್ದ ಜನ ಈತನ ಈ ಕನಸನ್ನು ಹಿಯ್ಯಾಳಿಸತೊಡಗಿದರು. ಆದರೆ ಆತನೇ ಇಂದು ಬಹುತೇಕ ದೇಶಗಳಲ್ಲಿ ತನ್ನ branch ಗಳನ್ನು ಹೊಂದಿರುವ ಅತಿ ದೊಡ್ಡ ಹೋಟೇಲಾದ McDonald ಹೋಟೇಲಿನ ಮಾಲೀಕನಾಗಿ ಬೆಳೆದ. ಇದಕ್ಕೇ ಅನ್ನುವುದು determination ಅಂತ ಅಲ್ವಾ...

          ಈ ಸಾಲಿನಲ್ಲಿ ಹೇಳಲೇಬೇಕಾದ ಇನ್ನೊರ್ವ ಮಹಿಳೆ "ಅರುಣಿಮಾ ಸಿನ್ಹಾ". ರಾಷ್ಟ್ರೀಯ ಸ್ಥರದ ವಾಲೀಬಾಲ್ ಆಟಗಾರ್ತಿಯಾದ ಈಕೆ 2011ರಲ್ಲಿ ಲಕ್ನೋದಿಂದ ದಿಲ್ಲಿಗೆ ಜನರಲ್ ಕಂಪಾರ್ಟಮೆಂಟ್ ನಲ್ಲಿ ಚಲಿಸುತ್ತಿದ್ದಾಗ ಆಕೆಯ ಕತ್ತಲ್ಲಿದ್ದ ಬಂಗಾರದ ಚೈನ್ ಅನ್ನ ದರೋಡೆ ಮಾಡಲು ಹೋದ ಯುವಕರ ಗುಂಪೊಂದು ಆಕೆಯನ್ನು ಚಲಿಸುತ್ತಿದ್ದ ರೈಲ್ ನಿಂದ ತಳ್ಳಿದರು. ದುರಾದೃಷ್ಟವಶಾತ್ ಇನ್ನೊಂದು ಬದಿಯ track ನಲ್ಲಿ ವೇಗವಾಗಿ ಬರುತ್ತಿದ್ದ ಮತ್ತೊಂದು ರೈಲ್ ಗೆ ಡಿಕ್ಕಿಹೊಡೆದು ತೀವೃವಾಗಿ ಗಾಯಗೊಂಡು ಆಕೆಯ ಎಡಗಾಲು ಛಿದ್ರಗೊಂಡು ಬಿದ್ದಿತ್ತು. ಅಕ್ಕ ಪಕ್ಕದಲ್ಲಿ ಯಾರೂ ಇರಲಿಲ್ಲವಾದ್ದರಿಂದ ಆಕೆಯ ರೋಧನವನ್ನು ಕೇಳುವವರು ಯಾರೂ ಇರಲಿಲ್ಲ. ಇಲಿಗಳು ಆಕೆಯ ರಕ್ತದ ಮಡುವಿನಲ್ಲಿ ಬಿದ್ದು ತಾನು ಧರಿಸಿದ್ದ ಜೀನ್ಸ ಪ್ಯಾಂಟ್ ನಲ್ಲಿ ತುಂಡಾಗಿ ಸಿಲುಕಿಕೊಂಡಂತಾಗಿದ್ದ ಕಾಲನ್ನು ತಿನ್ನಲಾರಂಭಿಸಿತು . ಏಳಲೂ ಅಶಕ್ತಳಾದ ಅರುಣಿಮಾಗೆ ಇದನ್ನು ತಡೆಯಲಾಗಲಿಲ್ಲ. ಮಾರನೇ ದಿನ ಬೆಳಿಗ್ಗೆ ಆಕೆಯನ್ನ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಹೇಗೂ ನ್ಯಾಷನಲ್ ಆಟಗಾರ್ತಿಯಾದದ್ದರಿಂದ ಪತ್ರಿಕೆಗಳು ಅರುಣಿಮಾ suicide ಮಾಡಿದ್ದಾಳೆ. ಎಲ್ಲಾ ವಿಚಾರಗಳು ಹಬ್ಬಿತು. ಆದರೆ ತಾನು ಕುಳಿತಿದ್ದ ಸ್ಥಳದಲ್ಲಿಯೇ ನಿಶ್ಚಯ ಮಾಡಿದಳು. ಈ ಟೀಕೆಗಳಿಗೆ ಉತ್ತರವನ್ನು ಕೊಡಲೇಕು. ನಾನು ನನ್ನ ಕಾಲನ್ನು ಕಳೆದುಕೊಂಡರೂ ಏನನ್ನಾದರೂ ಸಾಧನೆ ಮಾಡಿ ನನ್ನ ಜೀವನವನ್ನು ಬದಲಿಸಬೇಕೆಂದು ನಿರ್ಧರಿಸಿದವಳೇ "ಎವರೆಸ್ಟ್" ಏರುವ ತೀರ್ಮಾನ ತೆಗೆದುಕೊಂಡಳು. ಇಷ್ಟೆಲ್ಲಾ ಊನತೆಯನ್ನು ಹೊಂದಿರುವ ಇಂಥ ಪರಿಸ್ಥಿತಿಯಲ್ಲಿ ಇದನ್ನು ಹೇಗೆ ಸಾಧಿಸುವುದು ಅಂದುಕೊಂಡವಳೇ ಸೂಕ್ತ ಮಾರ್ಗದರ್ಶಕರ ಸಹಾಯ ಪಡೆದು ತನ್ನ ಸಹ ಯಾತ್ರಿಕರ ನೆರವು ಪಡೆದು ಎವರೆಸ್ಟ್ ಏರಿ ತುತ್ತ ತುದಿಯಿಂದಲೇ ಟೀಕಾಕಾರರಿಗೆ ಸಂದೇಶ ನೀಡಿದಳು. ಇದು ಅನೇಕ ಮಂದಿ ಹತಾಶರಾದವರಿಗೆ, “ನಿನ್ನ ಜೀವನ ಇಲ್ಲಿಗೇ ಕೊನೆಗೊಂಡಿಲ್ಲ, ಸಾಧಿಸಬೇಕಾದರೆ ಹೇಗೂ ಸಾಧಿಸಬಹುದು” ಎಂಬ ಮಾರ್ಮಿಕವಾದ ಸಂದೇಶ ನೀಡುವಂತಿತ್ತು. ಇದು ಎಷ್ಟೋ ಜನರಿಗೆ ಸ್ಫೂರ್ತಿಯಾಯಿತು. ಸದಾ ಆಗುತ್ತಿರುತ್ತದೆ. ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದಲ್ಲವೇ ?

        ಈ ಪಟ್ಟಿಯಲ್ಲಿ ಬರುವ ಮತ್ತೋರ್ವ ಅಗ್ರಜ “ಕೋಲೋನೆಲ್ ಸ್ಯಾಂಡರ್ಸ್”. ಈತ ತನ್ನ ಇಳಿ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡವನು. ತಾಯಿಗೆ ಮನೆಯಲ್ಲಿ ಅಡುಗೆ ಕೆಲಸದಲ್ಲಿ ನೆರವಾಗತೊಡಗಿದ. ನಾನಾ ಕೆಲಸಗಳಲ್ಲಿ ತೊಡಗಿ ತದನಂತರ ಅದನ್ನು ಬಿಟ್ಟು ಕೆಂಟುಕಿ ನಗರದಲ್ಲಿ ತನ್ನ ಚಿಕನ್ ರೆಸಿಪಿ ಯನ್ನು ತನ್ನ 45ನೇ ವಯಸ್ಸಿನಲ್ಲಿ ಉಣಬಡಿಸಿದ. ವ್ಯಾಪಾರ ತುಸು ಚೇತರಿಸಿದಾಗ ಸ್ವಂತ ರೆಸ್ಟೋರೆಂಟ್ ಅನ್ನು ಸ್ಥಾಪಿಸಿದ. ತನ್ನ ಚಿಕನ್ ರೆಸಿಪಿ ಸ್ವಾದಕ್ಕಾಗಿ ಅಲ್ಲಿನ ಗವರ್ನರ್ “ಕೆಂಟುಕಿ ಕೊಲೊನೆಲ್” ಎಂದು ನಾಮಾಂಕಿತ ಮಾಡಿದರು. ಆದರೆ 1950ರ ಹೊತ್ತಿನಲ್ಲಿ ಹಲವಾರು ಕಾರಣಗಳಿಂದ ಆತನ ವ್ಯಾಪಾರ ಗಣನೀಯವಾಗಿ ಕುಸಿತಗೊಂಡು ಅವನ ರೆಸ್ಟೋರೆಂಟ್ ಮಾರುವ ಸ್ಥಿತಿಗೆ ಬಂದು ಮುಟ್ಟಿತು. ಆದರೆ ಆತ ಧೃತಿಗೆಡಲಿಲ್ಲ. ಅಮೇರಿಕಾದಲ್ಲಿ ಎಂದಾದರೂ ಚಿಕನ್‍ಗೆ ಮಾರುಕಟ್ಟೆ ಬಂದೇ ಬರುತ್ತದೆಂದು ನಂಬಿದ್ದ. ಇದೇ ಧನಾತ್ಮಕ ನೆಲೆಯಲ್ಲಿ ಅನೇಕ ಕಡೆಗಳಿಗೆ ಸಂದರ್ಶನ ನೀಡಿದ. ಸಾವಿರಾರು ಮಂದಿ ಅವನ ಬಿಳಿ ಪ್ಯಾಂಟ್, ಬಿಳಿ ಅಂಗಿ ಹಾಗೂ ಟೈ ನೋಡಿ ಹಿಯ್ಯಾಳಿಸುತ್ತಿದ್ದರು. ಬರೋಬ್ಬರಿ 1000ಕ್ಕೂ ಮಿಕ್ಕಿ ಪ್ರದೇಶಗಳಿಗೆ ತಾನು ತನ್ನ ಚಿಕನ್ ರೆಸಿಪಿಗೆ ಮಾರುಕಟ್ಟೆ ಹುಡುಕತೊಡಗಿದ. ಕೊನೆಗೆ ಸಾಲ್ಟ್ ಲೇಕ್ ಸಿಟಿಯ ಉತಾಹ್ ನಗರಕ್ಕೆ ತಲುಪಿದ. ಅಲ್ಲಿ ಮೊದಲೇ ತಿಳಿದಿದ್ದ “ಪೆಟೆ ಹಾರ್ಮನ್” ಎಂಬ ಇನ್ನೋರ್ವ ರೆಸ್ಟೋರೆಂಟ್ ಮಾಲೀಕನನ್ನು ಭೇಟಿಯಾಗುತ್ತಾನೆ. ತದನಂತರ ಸ್ಯಾಂಡರ್ಸ್ ತನ್ನ ರೆಸಿಪಿಯನ್ನು ಹಾರ್ಮನ್ ನ ಮನೆಯಲ್ಲಿ ಪರಿಚಯಿಸುವ ಇಚ್ಚೆ ವ್ಯಕ್ತಪಡಿಸಿ ತಯಾರಿಸುತ್ತಾನೆ. ಈ ಸ್ವಾದವನ್ನು ಹಾರ್ಮನ್ ಮೆಚ್ಚಿ ಇದನ್ನು ಅವನ ರೆಸ್ಟೋರೆಂಟ್ ನಲ್ಲಿ ಪರಿಚಯಿಸಿದಾಗ ಜನ ಸ್ಯಾಂಡರ್ಸ್ ನ ಚಿಕನ್ ರೆಸಿಪಿ ಸ್ವಾದಿಸಲು ಕಿಕ್ಕಿರಿದರು. ಈ ಬದಲಾವಣೆ ಸ್ಯಾಂಡರ್ಸ್ ನ ಜೀವನದಲ್ಲಿ ಅವನು ಕಂಡ ಗೆಲುವು. ಇದೀಗ ಕೆ.ಎಫ್.ಸಿ. ಚಿಕನ್ ಅನ್ನು ಕೇಳದಿರುವ ಜನರೇ ಇಲ್ಲ. 60ರ ವಯಸ್ಸಿನಲ್ಲಿ ಯೂ ಸ್ಯಾಂಡರ್ಸ್ ಜೀವನದಲ್ಲಿ ಕಳೆದು ಹೋದ ಸಂತೋಷವನ್ನು ಮರುಪಡೆದು ನವ ಜೀವನ ಆರಂಭಿಸಿದ. ಸಾಧನೆಗೆ ವಯಸ್ಸಿನ ಅಡೆತಡೆಯೇಕೆ? ಸಾಧನೆ ಯಾವಾಗಲೂ ಮಾಡಬಹುದು, ಆದರೆ ಸಾಧಿಸುವ ಛಲವೊಂದಿದ್ದರೆ ಸಾಕಷ್ಟೇ. 90ರ ವಯಸ್ಸಿನಲ್ಲಿ “ಕೋಲೋನೆಲ್” ಮೃತವನ್ನಪ್ಪಿದ. ಆದರೆ ಇವರಿಬ್ಬರೂ ಆತ್ಮೀಯ ಗೆಳೆಯರಾಗಿ ಉಳಿದುಬಿಟ್ಟರು. ಇದೀಗ 39 ದೇಶಗಳಲ್ಲಿ ಕೆ.ಎಫ್.ಸಿ ತನ್ನ ಬ್ರಾಂಚ್ ಅನ್ನು ಹೊಂದಿದೆ. ಏನ್ ಜೀವನ ಕಣ್ರೀ ಅಲ್ವಾ...

          ಈ ಪಟ್ಟಿಯಲ್ಲಿ ಬರುವ ಇನ್ನೋರ್ವರ ಹೆಸರೆಂದರೆ "ಜ್ಯಾಕ್ ಮಾ". ಚೈನೀ ನಾಗರೀಕನಾದ ಜ್ಯಾಕ್ ತಾನೊಬ್ಬ ಇಂಗ್ಲೀಷ್ ಅಧ್ಯಾಪಕ. ತಾನು ಪ್ರತಿಷ್ಠಿತ ಹಾರ್ವಾರ್ಡ್ ವಿಶ್ವವಿದ್ಯಾನಿಲಕ್ಕೆ 10 ಬಾರಿ ಅಧ್ಯಾಪಕ ಸ್ಥಾನಕ್ಕೆ ಅರ್ಜಿ ಸಲ್ಲಿಸಿ reject ಆಗಲ್ಪಟ್ಟ ತದನಂತರ 30 ನಾನಾ ಉದ್ಯೋಗಕ್ಕೆ ಪ್ರಯತ್ನಿಸಿದರೂ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಂಚಿತನಾಗಿದ್ದು ಕೇವಲ ಒಂದೇ ಕಾರಣಕ್ಕೆ!!! ಅದೇನೆಂದರೆ “You are no good…?!!!” ಆದರೆ ಈತ ಜಗತ್ತಿನಲ್ಲಿ 1995ರಲ್ಲಿ ಇಂಟರ್ನೆಟ್ ವೇಗವಾಗಿ ಹರಿದಾಡುತ್ತಿದ್ದ ಕಾಲದಲ್ಲಿ , ಮೊದಲ ಬಾರಿ “online marketing” ಎಂಬ E-Commerce ವಿಧಾನವನ್ನು ಪರಿಚಯಿಸಿ “ಆಲಿಬಾಬಾ” ಎಂಬ ಮೊದಲ “online marketing” ಚೈನಾದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ವ್ಯಕ್ತಿ ಇಂದು ಮಿಲಿಯನೇರ್ ವ್ಯಕ್ತಿಗಳಲ್ಲಿ ಒಬ್ಬ. ಈತ ತಾನು ಬದುಕಿನ ದಿಕ್ಕನ್ನು ಬದಲಿಸಿದ ರೀತಿ ಸ್ಫೂರ್ತಿದಾಯಕವಲ್ಲದೆ ಮತ್ತೇನು ಅಲ್ವಾ? ಏನನ್ನೂ ಸಾಧಿಸಲಾಗದು ಎಂಬವರಿಗೆ ಇಂಥಹ ಆದರ್ಶಪ್ರಾಯ ವ್ಯಕ್ತಿಗಳ ಸಾಧನೆಗಳು ಹೊಸ ಚೈತನ್ಯ ಮೂಡುವುದಂತೂ ಖಂಡಿತ. ಹೀಗೆ ಜೀವನದಲ್ಲಿ ಎಂದಿಗೂ ಧನಾತ್ಮಕವಾಗಿ ನೋಡುತ್ತಾ ತಾನು ಬಯಸಿದ ಕನಸುಗಳನ್ನು ಈಡೇರಿಸುವತ್ತಾ ಪ್ರಯತ್ನಿಸಬೇಕು. ಕೊನೆವರೆಗೂ ಉದ್ಧೇಶ ಈಡೇರಿಸುವಿಕೆಯತ್ತ ಪ್ರಯತ್ನ ಸಾಗಬೇಕು.ನಂತರದ ವಿಷಯ ನಮ್ಮ ಹಿಡಿತಕ್ಕೆ ನಿಲುಕದ್ದು, ಅಲ್ಲಿವರೆಗೂ ಪ್ರಯತ್ನ ಸಾಗುತ್ತಿರಬೇಕು. ಆದರೆ ಕೊನೆಗೆ ಏನೇ ಸಿಗಲಿ, ಏನೇ ಜೀವನದಲ್ಲಿ ಲಭಿಸಲಿ, ಸಂತೋಷದಿಂದ as it is... ಸ್ವೀಕಾರ ಮಾಡುವ ಮನೋಸ್ಥೈರ್ಯ ಇರಬೇಕು. ಹಾಗಿದ್ದಲ್ಲಿ ಮಾತ್ರ ನಾವು ನಮ್ಮ ವೈಯುಕ್ತಿಕ ಜೀವನದಲ್ಲಿ ನಡೆದ ಘಟನೆಗಳಿಂದ ಹತಾಶರಾಗುವುದಿಲ್ಲ. ಯಾವುದೇ ನಿರೀಕ್ಷೆಯನ್ನು ಜೀವನದುದ್ದಕ್ಕೂ ಇಡಲೇ ಬಾರದು. ಯಾಕೆಂದರೆ ನಮ್ಮ ನಿರೀಕ್ಷೆಗಳೇ ಯಾವತ್ತೂ ನಮ್ಮನ್ನು ಹತಾಶರನ್ನಾಗಿ ಮಾಡುತ್ತದೆ. "Always expectations leads to disappointments” ಹಾಗಾದ್ದರಿಂದ ಏನನ್ನೂ ನಿರೀಕ್ಷಿಸದೇ, ಹೀಗೇ ಆಗಬೇಕು ಜೀವನದಲ್ಲಿ ನಾನೇನಂದುಕೊಂಡಿದ್ದೇನೋ ಅದೇ ನಡೀಬೇಕು ಮತ್ತು ಹಾಗೇ ನಡೆಯುತ್ತೆ ಎಂದು ಅತಿಯಾದ ಆಶಾಭಾವ ಇಡಬಾರದು. ಈ ತರಹದ ಅತೀ ನಿರೀಕ್ಷೆಗಳು ನಮ್ಮನ್ನ ಅತೀ ಹತಾಶರನ್ನಾಗಿಸುತ್ತದೆ. ಇದು ಹೌದು ಕೂಡಾ. ನಾವು ಏನೋ ಆಗಬೇಕೆಂದಿರುತ್ತೇವೆ, ನನ್ ಜೀವನ ಹೀಗಿರುತ್ತೆ, ಹಾಗಿರುತ್ತೆ ಎಂದು ಅತಿಯಾದ ಆಸೆಯನ್ನು ಇಟ್ಟುಕೊಂಡು ಕನಸನ್ನು ಕಂಡರೆ ಅದು ಹಾಗೆ ಆಗದೇ ಎಲ್ಲವೂ ತದ್ವಿರುದ್ಧವಾಗಿ ನಡೆದುಬಿಟ್ಟಾಗ ಪಡೆವ ನೋವು ಬಹಳ. ಆದ್ದರಿಂದ ನಾವಂದುಕೊಂಡ ನಿರೀಕ್ಷೆಗಳಲ್ಲಿ ಕೆಲವು ಆಗಬಹುದು ಇನ್ನೂ ಕೆಲವು ಆಗದೇ ಇರಬಹುದು. ನಾವಂದುಕೊಂಡ ಹಾಗೆ ಎಲ್ಲವೂ ಆಗಿದ್ದಲ್ಲಿ ಈ ಜೀವನ ಎಂಬ ಪದಕ್ಕೆ ಅರ್ಥವೇ ಇರುತ್ತಿರಲಿಲ್ಲ. ಆದರೆ ಇಲ್ಲಿ ಎಮೋಷನ್, ಅದರಲ್ಲೂ ಅತಿಯಾದ ಒಬ್ಬರನ್ನು ಅಥವಾ ಒಂದು ವಿಷಯವನ್ನು ಹಚ್ಚಿಕೊಂಡರೆ ಕೊನೆಗೆ ಅದು ದಕ್ಕದೇ ಇದ್ದಾಗ ಅದು ಕೊಡುವ ನೋವುಗಳೇ ಸ್ಲೋ ಪಾಯಿಸನ್ ಇದ್ದ ಹಾಗೆ. ಹೀಗಾಗಿ ಮೊದಲೇ ನಮಗಾಗಿ ದೇವರು ಪ್ಲಾನ್ ಮಾಡಿರುತ್ತಾರೆ. ಅದರ ಪ್ರಕಾರವಾಗಿಯೇ ಎಲ್ಲವೂ ನಡೆಯುತ್ತದೆಯೇ ವಿನಃ ನಾವಂದುಕೊಂಡಾಗೆ ಅಲ್ಲ. ಇದೊಂದು ನಿರಂತರ ಚಲನ ಪ್ರಕ್ರಿಯೆ. ನಾವೆಲ್ಲರೂ ಪಾತ್ರಧಾರಿಗಳಷ್ಟೇ. ನಿರ್ದೇಶಕ ಹೇಳಿದ ಹೇಳಿದ ರೀತಿಯಲ್ಲಿ ನಡೆಯುತ್ತದೆ ಜೀವನದ ಎಂಬ ನಾಟಕ ರಂಗದಲ್ಲಿ ಪಾತ್ರಧಾರಿಗಳ ಅಭಿನಯ. ಯಾವಾಗ ಆ ಪಾತ್ರದ ಅವಶ್ಯಕತೆಯಿರುವುದಿಲ್ಲ ಅಂತ ನಿರ್ದೇಶಕನಿಗನಿಸುತ್ತೋ ಅಂದು ಆ ಜೀವನದಲ್ಲಿ ಆ ಪಾತ್ರ ನೆನಪಾಗಿ ಉಳಿದು ಸಾವನ್ನಪ್ಪುತ್ತದೆ. ಅಂದರೆ ಅವರ ಜೀವನದಲ್ಲಿ ಇನ್ನು ಆ ಪಾತ್ರದ ಅವಶ್ಯಕತೆಯಿಲ್ಲ ಎಂದು ಅನಿಸಿದಾಗ, ಅದರ ಅಭಿನಯ ಮುಗಿಯಿತು ಅಥವಾ ಅವರ ಜೀವನದಲ್ಲಿ ಈ ಪಾತ್ರದ ಪ್ರವೇಶ ಕೊನೆಗೊಂಡಿತು ಎಂದರ್ಥ.

         ಒಂಥರಾ ಈ ಜೀವನ ಅನ್ನುವಂತದ್ದು ರೈಲು ಗಾಡಿಯಿದ್ದಂತೆ, ನಾವೆಲ್ಲರೂ ಪ್ರಯಾಣಿಕರು, ನಮ್ಮ ನಮ್ಮ stop ಬಂದಾಗ ನಾವು ಇಳಿಯುತ್ತೇವೆ. ಕೆಲವರು ಪ್ರಯಾಣದುದ್ದಕ್ಕೂ ಜೊತೆಗಿರುತ್ತಾರೆ. ಇದರಲ್ಲಿ ನಾವೂ ಒಬ್ಬವರಾಗಿರುತ್ತೇವೆಂದರೆ ಅದು ತಪ್ಪಲ್ವಾ... ಇರಲೂ/ಇಲ್ಲದಿರಲೂಬಹುದು. ಹಾಗೆಂದ ಮಾತ್ರಕ್ಕೆ ಜೀವನವು ನಮಗೆ ಕೊಟ್ಟ ನೋವಿನಿಂದಾಗಿ ನರಳುವುದಲ್ಲ. ಬದಲಾಗಿ ಅವರ ಜೀವನದಲ್ಲಿ ನಮ್ಮ ಪಾತ್ರ ಇಷ್ಟೇ ಎಂದು ತಿಳಿದು ಇದ್ದದ್ದನ್ನು ಇದ್ದಹಾಗೇ ಸ್ವೀಕರಿಸಬೇಕು. ತುಸು ಕಷ್ಟಾನೇ, ಆದರೂ ನಮ್ಮದಾದ ಜೀವನವನ್ನು ನಾವೇ ಕಂಡುಕೊಂಡು, ನಮ್ಮ ದಾರಿಯಲ್ಲೂ ಅವರ ಪಾಲು ಅಷ್ಟೇ ಎಂದು ತಿಳಿದು ಮುಂದೊಂದು ದಿನ ನಿಶ್ಚಿತವಾದ ನಮ್ಮ ಗೆಲುವನ್ನು ಆಚರಿಸಬೇಕು. ಕಾರಣವಿಲ್ಲದೇ ಯಾವುದೇ ಘಟನೆಗಳು, ವಿಚಾರಗಳು ಸಂಭವಿಸಲಾರದು. ಎಲ್ಲವೂ ಒಂದು ಒಳ್ಳೆಯ ಕಾರಣವಿದ್ದುಕೊಂಡೇ ನಡೆಯುತ್ತದೆ ಎಂದು ತಿಳಿದು ನಮ್ಮ destination ಅನ್ನು ತಲುಪಲು ಪ್ರಯತ್ನಿಸಬೇಕು. ಇದೇ ಜೀವನ... ಊಹಿಸಲಾಗದ್ದು. ಯಾವಾಗ ಏನು ಬೇಕಾದರೂ ಆಗಬಹುದು. ಸಹಿಸಿಕೊಳ್ಳುವ ಧೈರ್ಯ, ತಾಳ್ಮೆ ಇರಬೇಕಷ್ಟೇ. ಜೀವನದಲ್ಲಿ ಈಜಿ ದಡ ತಲುಪಬಹುದು. ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು ಸದಾ.., ಎಂದಿಗೂ ಗೆಲುವೆಂಬುದು ಅನಿಶ್ಚಿತ ಆದರೆ ಗೆಲುವು ಮಾತ್ರ ಖಚಿತ. ಯಾವಾಗ ನಾವು ನಮ್ಮ ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ ಆದರೆ ಆ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿರ್ತಿಸಿಕೊಂಡಲ್ಲಿ ಗೆಲುವು ನಿಶ್ಚಿತ. ಆದುದರಿಂದ ಅವಕಾಶಗಳನ್ನು ಸೃಷ್ಟಿಸಿಕೊಂಡು ಮತ್ತೆ ಜೀವನದಲ್ಲಿ ಗೆದ್ದು ಬಂದಾಗ ಆ ಗೆಲುವಿನ ಧನ್ಯತೆಯ ಖುಷಿ ಇದ್ಯಲ್ಲಾ ಅದು ಅಪಾರ. ಹಾಗಾಗಿ ನಿರ್ಧಾರಗಳನ್ನು ಕೈಗೊಳ್ಳುವಾಗಲೂ ಅಷ್ಟೇ, ಸ್ವ ಹಿತಾಸಕ್ತಿಗಾಗಿ ನಿರ್ಧಾರಗಳನ್ನು ಕೈಗೊಳ್ಳದೇ ಎಲ್ಲರ ಮನಸ್ಸನ್ನು ಗಣನೆಗೆ ತೆಗೊಂಡು ತೆಗೆದುಕೊಳ್ಳಿ ಏಕೆಂದರೆ ನಿಮ್ಮನ್ನು ನಂಬಿ ಇನ್ನೊಂದು ಜೀವವಿದೆ ಎಂಬುದನ್ನು ಮರೆಯದಿರಿ. ಅದಕ್ಕಾಗುವ ನೋವನ್ನು ಯಾವುದೇ ರೀತಿಯಿಂದ ಗುಣಪಡಿಸಲಾಗದು. ಹೀಗೆ ತನ್ನ ಏಳಿಗೆಗಾಗಿ ಜೀವನದಲ್ಲಿ ಪ್ರತಿಯೊಬ್ಬನಿಗೂ ಅವಕಾಶಗಳು  ಸಿಗುತ್ತಾ ಇರುತ್ತವೆ. ಇದರ ಬಳಕೆ ಮಾಡಬೇಕೇ ವಿನಃ ಕಾಲ ಕಳೆದು ಹೋದ ಮೇಲೆ ಆ ಅವಕಾಶಗಳನ್ನು ಕಳೆದುಕೊಂಡು ಪಶ್ಚಾತಾಪ ಪಡುವುದರಲ್ಲಿ ಏನೂ ಅರ್ಥವಿಲ್ಲ ಮತ್ತು ಯಾವ  ಪ್ರಯೋಜನವೂ ಇಲ್ಲ ಕೂಡಾ. ಹೀಗೆ ಜೀವನದಲ್ಲಿ ಯಾರೂ ಕಳೆದುಕೊಂಡೆ ಎಂದು ಹತಾಶರಾಗಬೇಡಿ. ನಿಮ್ಮ ಜೀವನದಲ್ಲಿ ಏನು ನಿಮ್ಮದೂಂತ ಬರೆದಿದೆಯೋ ಅದು ನಿಮಗೆ ಸಿಕ್ಕೇ ಸಿಗುತ್ತದೆ. ಅದನ್ನು ಇದ್ದ ಹಾಗೆ ಯಾವುದೇ ನಿರೀಕ್ಷೆ, ಆಸೆ ಆಕಾಂಕ್ಷೆಗಳನ್ನು ಇರಿಸದೇ ಇದ್ದಲ್ಲಿ ನೆಮ್ಮದಿಯ ಜೀವನವನ್ನು ತನ್ನದಾಗಿಸಿಕೊಳ್ಳಬಹುದಲ್ವಾ?

          ಎಷ್ಟೋ ಜನ ಬಡವರಿಲ್ಲವೇ? ಕೆಲಸ ಕಳೆದುಕೊಂಡ ನಿರ್ಗತಿಕರಿಲ್ಲವೇ? ಏನೋ ಆಗಬೇಕೆಂದು ಇದ್ದು ಇನ್ನೇನೋ ಆಗಲಿಲ್ಲವೇ? ಯಾವುದನ್ನು ತನ್ನ ಜೀವನದಲ್ಲಿ ಪಡೆಯುತ್ತೇನೆಂದು ಹಂಬಲಿಸಿ ಇನ್ನೇನೋ ಆಗಬಹುದಲ್ಲವೇ? ಇದೆಲ್ಲಾ ನಾವಂದುಕೊಂಡದ್ದಾ? ಇಲ್ಲ ಖಂಡಿತಾ ಇಲ್ಲ. ಆದರೆ ಇದು ಬದುಕು. ಅನಿರೀಕ್ಷಿ, ನಾವಂದುಕೊಂಡಂತೆ ಯಾವುದೂ ನಡೆಯೋದಿಲ್ಲ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದರೆ ಈ ವಿಷಯದ ಬಗೆಗಿನ ಚರ್ಚೆ ಏಕಪಕ್ಷೀಯವಾಗಿಬಿಡುತ್ತಿತ್ತು. ಯಾವ ಕಷ್ಟಗಳೇ ಇರದ ಜೀವನದಲ್ಲಿ ಕಹಿನೆನಪುಗಳು ಮೂಡಲು ಹೇಗೆ ತಾನೆ ಸಾಧ್ಯ ಅಲ್ವಾ... ಕಷ್ಟಗಳನ್ನೆದುರಿಸದೇ ಇದ್ದಲ್ಲಿ  ಸುಖದ ಸ್ವಾದ ನಮಗೆ ತಿಳಿಯುತ್ತಿರಲಿಲ್ಲ. ಹಾಗಾಗಿ ತಾವಂದುಕೊಂಡ ರೀತಿಯಲ್ಲಿ ಜೀವನ ಆಗಲಿಲ್ಲ ಎಂದು ಕೊರೆದುಕೊಳ್ಳುವುದಕ್ಕಿಂತಲೂ, ಬಂದ ಪಾಲನ್ನು ಸಂತೋಷದಿಂದ (ಮನಸ್ಸಿಗೆ ಕಷ್ಟವಾದರೂ) ಸ್ವೀಕರಿಸಿ ಜೀವನವೆಂಬ ಹಬ್ಬವನ್ನು ಆಚರಿಸೋಣ...

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೆಗೋ, ಮಸಣಕೋ ಹೋಗೆಂದಕಡೆ ಹೋಗು
ಪದಕುಸಿಯೆ ನೆಲವಿಹುದು ಮಂಕುತಿಮ್ಮ
ಪದಕುಸಿಯೆ ನೆಲವಿಹುದು ಮಂಕುತಿಮ್ಮ
                                                  -ಡಿ.ವಿ.ಜಿ

ಲೇಖನಕ್ಕೆ ಸ್ಪೂರ್ತಿ ನೀಡಿದ ನನ್ನ ಗೆಳತಿಗೆ ಇದು ಅರ್ಪಣೆ.


-ಶ್ರೀ ಹರೀಶ್ ರಾವ್

Photo Credit: QuirkyByte

Author image
About the Author
ಹೆಸರು:ಶ್ರೀ ಹರೀಶ್ ರಾವ್.
▪ಹರೀಶ್ ರಾವ್ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಪರಿಸರದವರು. 2012ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡ ಇವರು ಕಳೆದ 5 ವರ್ಷದಿಂದ ಪೂತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳು ಅನೇಕ ಬಾರಿ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಸಾಹಿತ್ಯವನ್ನು ತನ್ನ ಒಂದು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯಕೃಷಿಯನ್ನು ಬಹು ಉತ್ಸಾಹದಿಂದ ಮಾಡುತ್ತಾ ಬರುತ್ತಿದ್ದಾರೆ. ಇವರ ಬರಹಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.
ದೂರವಾಣಿ: +91 7892983672
ಮಿಂಚಂಚೆ: harshabhatdpl@gmail.com

Please share and support me

3 comments:

  1. Sir ji.. Kamaal kar diyaa.. Inspirational one.. Request you for more...

    ReplyDelete
    Replies
    1. Sure ..Will get back to you soon with Another one.thank you for reading

      Delete
    2. Thank you for supporting or writer... We need you support always. Thank you.

      Delete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.