ಚಿತ್ರಕವನ ೨:
ಎಲ್ಲಿ ಹುಡುಕಲಿ ನನ್ನ
ಅಮ್ಮನನು ನಾನಿಂದು
ಇರುಳ ಹಗಲಾಗಿಸುವ
ಈ ಸಂತೆಯೊಳಗೆ
ತೊರೆದು ಹೋಗಿಹಳು
ನನ್ನಮ್ಮ ನನ್ನನು
ಹೊಸ ಕನಸುಗಳ
ಹುಡುಕಲೆಂದೇ
ಬಾಳೆಂಬ ಸಂತೆಯಲಿ
ಬದುಕ ಹೊಸೆಯಲು ತಾತ
ಸಂತೆ ಸಂತೆಯ ತಿರುಗಿ
ಸಾಗುತಿರಲು
ಕನಸುಕಂಗಳ ಅಮ್ಮ
ಹುಡುಕಿದಳು ಕನಸುಗಳ
ಅರಿವಿಲ್ಲದ ಹದಿಹರೆಯದಲ್ಲಿ
ಹಿಂದುಮುಂದನರಿಯದೆ
ತನುಮನವನೊಪ್ಪಿಸಲು
ಹೊಸಕಿಹೋಯಿತಮ್ಮನ
ಚೆಲುವ ಬದುಕು
ಧರೆಗಳಿದೆನು ನಾನು
ಕನಸುಗಳ ದಾರವನು
ಕಡಿದೆಸೆದು ಕ್ರೂರನಂತೆ
ಮುಗ್ಧ ಮನವನು ಅಮ್ಮ
ಅರಿಯಲಾರದೆ ಅಂದು
ತೊರೆದು ಹೋದಳು ನನ್ನ
ಮರೆತು ಚಿಂತೆ
ಅಪ್ಪ ಬಿಟ್ಟಿಹ ಮಗುವು
ಅಮ್ಮ ಎಸೆದಿಹ ಶಿಶುವು
ಮರಳಿ ಸಂತೆಯ ನಡುವೆ ಬಂದೆ
ತಾತನ ವಾತ್ಸಲ್ಯ ಧಾರೆಯಲಿ
ತೋಯುತಲಿ ಮಮತೆಯ
ಮಡಿಲಿನ ಸಿಹಿಯ ಸವಿದೆ
ಹೆಪ್ಪುಗಟ್ಟಿದ ನೋವ
ಎದೆಯಲಿರಿಸುತ ತಾತ
ನನಗಾಗಿ ನಗುವನು
ಕಹಿಯ ಮರೆತು
ಆಟಿಕೆಯ ನೀಡುತಲಿ
ಆಟವನು ನೋಡುತಲಿ
ಹುಡುಕುವನು ನನ್ನಲಿ
ತನ್ನ ಬಾಳ ಕನಸು
ಕನಸ ನನಸಾಗಿಸುವೆ ನಾ
ತಾತನ ಕಣ್ಣೊರೆಸಿ
ಕೃತಕ ಬೆಳಕೀವ ಈ
ಸಂತೆ ದಾಟಿ
ಸಹಜತೆಯ ಬೆಳಕಿನಲಿ
ಬದುಕನ್ನು ಹೊಸೆಯುವೆನು
ಬಂದ ಬವಣೆಗಳನೆಲ್ಲ
ಬದಿಗೆ ನೂಕಿ
-ಪ್ರಸನ್ನಾ ವಿ ಚೆಕ್ಕೆಮನೆ
ಶ್ರೀಕೃಷ್ಣ ಶರ್ಮ ಹಳೆಮನೆ.
ReplyDeleteತಂದೆ ತಾಯಿಯ ಪ್ರೀತಿ,ಮಮತೆಯಿಂದ ವಂಚಿತನಾದ ಮಗುವಿಗೆ ಅಜ್ಜನ ಆಸರೆ. ಮಗುವಿನ ಮನಸ್ಸಿನ ಭಾವನೆಗಳು ಕವನದಲ್ಲಿ ಉತ್ತಮವಾಗಿ ಮೂಡಿ ಬಂದಿದೆ
sksharmah07@gmail.com
ಧನ್ಯವಾದಗಳು... ಲೇಖಕರ ಬಗೆಗಿನ ಪ್ರೋತ್ಸಾಹದ ನುಡಿಗಳಿಗೆ.
Deleteಉತ್ತಮ ಕವನ.
ReplyDeleteಧನ್ಯವಾದಗಳು...
Delete