ಧನ್ಯತೆ


ಕಾಲವದು ಸಾಗುತಿತ್ತು
ಯಾರನೂ ಕಾಯದೆ
ಯೋಚನೆಗಳು ಹರಿಯತಿತ್ತು
ಪರಿಸ್ಥಿತಿಯ ನೋಡದೆ

ಸಂಗಕ್ಕಾಗಿ ಕಾದುಕುಳಿತಿತ್ತು
ಭರವಸೆಯಲಿ ಒಂಟಿ ಹಕ್ಕಿ
ಯೋಚನೆಯಲ್ಲೇ ಮುಳುಗಿತ್ತು
ಬರುವುದೆಂದು ಇನ್ನೊಂದು ಹಕ್ಕಿ

ಏಕಾಂಗಿಯಾಗಿ ಪಯಣಿಸುತಿತ್ತು
ಹೊಸ ಪ್ರಪಂಚದ ವೀಕ್ಷಣೆಗೆ
ಅನಿರೀಕ್ಷಿತವಾಗಿ ಜೊತೆಯಾಗಿತ್ತು
ನವ ಜೀವನದ ಸಂಭ್ರಮಗಳಿಗೆ

ವಿನಿಮಯವಾಗಿದ್ದವು
ಪರಸ್ಪರ ಕುಶಲೋಪರಿಗಳು
ಭರದಿ ಸಾಗಿದ್ದವು
ಸಂಭ್ರಮದ ಮಾತುಗಳು

ಒಂಟಿ ಹಕ್ಕಿಗೆ ದೊರಕಿತು
ಗೆಳೆತನದ ಆಶ್ರಯ
ಮನದಲ್ಲೇ ದೇವರಿಗೆ ಸಲ್ಲಿಸಿತು
ಚಿರಕಾಲ ಉಳಿಸುವ ಆಶಯ

ಪರಿಪಕ್ವತೆಯ ಮಾತುಗಳು
ಸಹಜ ಸುಂದರ ನಗುವು
ಹೊಸ ಬಗೆಯ ಕನಸುಗಳು
ಮನದಲ್ಲಿ ಮನೆ ಮಾಡಿದ್ದವು

ಸಂಭ್ರಮದ ದಿನಗಳು
ಕಲೆತಿತ್ತು ನವ್ಯ ಸಂಬಂಧದಲ್ಲಿ
ಬಯಸದೇ ಮಾತುಗಳು
ಕ್ಷಣಮಾತ್ರ ಸಾಗಿತ್ತು ಮೌನದಲ್ಲಿ

ತಪ್ಪನರಿತುಕೊಂಡ ಒಂಟಿ ಹಕ್ಕಿ
ಯಾಚಿಸಿತ್ತು ಮನಪೂರ್ಣ ಕ್ಷಮೆಯ
ಬೇಸರದಿ ತತ್ತರಿಸಿದ್ದ ಇನ್ನೊಂದು ಹಕ್ಕಿ
ಮನದಲ್ಲೇ ಕ್ಷಮಿಸಿತ್ತು ಗೆಳತಿಯ

ವಿನಯತೆಯಲ್ಲಿ ಧನ್ಯತೆಯ ಕಂಡ ಹಕ್ಕಿಗಳು
ಸಹನೆಯಲ್ಲಿ ಸಾಗಿಸಿತ್ತು ಗೆಳೆತನವ
ತರ್ಕವ ಹುಡುಕಿ ಹೊರಟ ಹಕ್ಕಿಗಳು
ಕಂಡುಕೊಂಡಿದ್ದವು ದುರ್ಗೆಯ ಆಶೀರ್ವಾದವ.

                                       - ಸಹನಾ ಪಿ ಎಸ್

Photo Credit: FineArtAmerica

Author image
About the Author
ಹೆಸರು:ಕುಮಾರಿ ಸಹನಾ ಪಿ ಎಸ್.
▪ಕುಮಾರಿ ಸಹನಾ ಪಿ ಎಸ್ ಇವರು ಎಳೆಯ ವಯಸ್ಸಿನಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡವರು. ಲೇಖನ, ನುಡಿಮುತ್ತು ಮುಂತಾದ ಬರಹಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿಯಾದ ಇವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಾಂಗವನ್ನು ಮಾಡುತ್ತಿದ್ದಾರೆ. ಉತ್ತಮ ಕ್ರೀಡಾಪಟುವಾದ ಇವರು ಜಿಲ್ಲಾ, ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಪಂದ್ಯಾಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಶ್ರೀ ಗಣರಾಜ ಕುಂಬ್ಳೆ ಇವರ ಬಳಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆಯನ್ನು ಕಲಿತು ಹಲವಾರು ತಾಳಮದ್ದಳೆ ಕೂಟಗಳಲ್ಲಿ ಅರ್ಥ ಹೇಳಿ ಸೈ ಎನಿಸಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿ, ಪುತ್ತೂರಿನ ಪಾಂಚಜನ್ಯ ರೇಡಿಯೋ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ತನ್ನ ಪ್ರತಿಭೆಯನ್ನು ಹೊರಚೆಲ್ಲಿದ್ದು 2012 ರಲ್ಲಿ ಸುಳ್ಯದಲ್ಲಿ ನಡೆದ ತಾಲ್ಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿ "ಅತ್ಯುತ್ತಮ ಅಭಿನೇತ್ರಿ" ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಮ್ಮ ಜಾಲತಾಣದಲ್ಲಿ ಇವರ ಬರಹಗಳನ್ನು ಓದಬಹುದು

Please share and support me

2 comments:

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.