ಅಂತ್ಯ

             
       ಮುಸ್ಸಂಜೆಯ ಕೆಂಪಡರಿದ ಬಾನಲಿ ಮುಳುಗಲಾರಂಭಿಸಿದ ರವಿತೇಜ, ಗೂಡು ಸೇರಲು ಕಾತರಿಸಿರುವ ಹಕ್ಕಿಗಳ ಗುಂಪು, ವೇಗವಾಗಿ ಚಲಿಸುತಿರುವಂತೆ ಕಾಣುವ ಹೊಲ - ಗದ್ದೆಗಳು, ಗಿಡ - ಮರಗಳ ಸಾಲು, ಏಕತಾನತೆ ಕಾಯ್ದುಕೊಳ್ಳುವ ರೈಲಿನ ಚುಕುಬುಕು ಸದ್ದು...ಎಲ್ಲ ಬೆರೆತು ಒಂದು ಹೊಸ ತೆರನಾದ ವಾತಾವರಣ ಸೃಷ್ಟಿಯಾಗಿತ್ತು. ಆ ಬೋಗಿಯಲ್ಲಿದ್ದವರೆಲ್ಲ ತಮ್ಮದೇ ಆದ ಆಲೋಚನಾ ಸಾಗರದಲ್ಲಿ ಈಜಾಡುತ್ತಿದ್ದರು. ಹಲವರ ಮೊಗದಲ್ಲಿ ಸಂತಸದ ಕಳೆ ಮನೆ ಮಾಡಿತ್ತು. ರೈಲು ಮಾತ್ರ ಅದಾವದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ವೇಗವಾಗಿ ಚಲಿಸುತ್ತಲೇ ಇತ್ತು. ಅದರೊಂದಿಗೆ ಕುಳಿತವರ ಯೋಚನಾಲಹರಿಯೂ ಕೂಡಾ.....
      "ಹಲೋ " ಎಂದು ಸನಿಹದಲ್ಲೇ ತೇಲಿಬಂದ ಇಂಪಾದ ಸ್ವರ ಮೌನದ ಅಭೇದ್ಯ ಕೋಟೆಯನ್ನು ಸೀಳುವಲ್ಲಿ ಯಶಸ್ವಿಯಾಯಿತು. ಸುಮಾರು ಇಪ್ಪತ್ತೈದು ವರ್ಷದ ಸುಂದರ ಯುವತಿಯೊಬ್ಬಳು ತನ್ನ ಪಕ್ಕದಲ್ಲಿ ಕುಳಿತಿದ್ದವಳನ್ನು ಮಾತಿಗೆ ಕರೆದಳು. ಮೊಬೈಲ್ ನಲ್ಲೇ ಮುಳುಗಿಹೋಗಿದ್ದ ಯುವತಿ ನಿಧಾನವಾಗಿ ಕತ್ತೆತ್ತಿ " ಹಾಯ್.. " ಎಂದುತ್ತರಿಸಿದಳು. ನಿಧಾನವಾಗಿ ಮಾತುಕತೆ ಆರಂಭವಾಯಿತು. ಬಾನಂಚಿನಿಂದ ಸೂರ್ಯ ಅದಾಗಲೇ ಮರೆಯಾಗಿ ಹೋಗಿದ್ದ. ಗಮ್ಯದತ್ತ ಪಯಣ ಸಾಗುತ್ತಲಿತ್ತು. ವಿಚಾರ ವಿನಿಮಯಗಳು ಇದೀಗ ತಾನೇ ಆರಂಭವಾಗಿತ್ತು.  ಇಪ್ಪತ್ತೈದರ ಸುಂದರ ತರುಣಿಯ ಮುದ್ದಾದ ಹೆಸರು ಸ್ಪಂದನಾ. ಇನ್ನೊಬ್ಬಳ ಹೆಸರು ಪ್ರಕೃತಿ. ಮಾತು ಆರಂಭಿಸಿದ್ದು ಸ್ಪಂದನಾ ಆದರೂ ಹೆಚ್ಚು ಮಾತನಾಡತೊಡಗಿದ್ದು ಮಾತ್ರ ಪ್ರಕೃತಿ. ಪ್ರಕೃತಿಗೆ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕಿದ್ದರಿಂದ ಆಕೆ ಪಾಟ್ನಾಕ್ಕೆ ಹೊರಟಿದ್ದಳು. ಆಕೆಯೇ ಮೊದಲು ತನ್ನ ಕತೆಯನ್ನು ಪಟಪಟನೆ ಹೇಳಲಾರಂಭಿಸಿದಳು.
      "ಅಪ್ಪ - ಅಮ್ಮನ ಮುದ್ದು ಮಗಳು ನಾನು. ಮನೆಯಲ್ಲಿ ಬಡತನವಿದ್ದರೂ ಮನಸಲ್ಲಿ ಪ್ರೀತಿಗೆ ಎಂದೂ ಬಡತನವಿರಲಿಲ್ಲ. ಅತಿಯಾದ ಅಕ್ಕರೆಯಲ್ಲಿ ಬೆಳೆದ ನನಗೆ ಕಷ್ಟಗಳೆಂದರೆ ಏನೆಂದು ಅಷ್ಟಾಗಿ ಅರ್ಥವಾಗಿರಲಿಲ್ಲ. ಸರ್ಕಾರಿ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಮುಗಿಸಿದೆ. ಅಪ್ಪನ ಆರೋಗ್ಯ ಸರಿಯಿರಲಿಲ್ಲ. ಕೆಲಸ ಮಾಡುವುದು ಅನಿವಾರ್ಯ ಎಂಬ ಪರಿಸ್ಥಿತಿ. ಹಾಗಾಗಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದೆ. ಅಲ್ಲಿ ಕೆಲಸ ಹುಡುಕಲಾರಂಭಿಸಿದೆ. ಕಷ್ಟ ಎಂದರೇನು ಅಂತ ಆಗ ಅರಿವಿಗೆ ಬಂತು. ಎಷ್ಟೋ ಬಾರಿ ಇಂಟರ್ ವ್ಯೂಗಳಲ್ಲಿ ಕೊನೆಯ ರೌಂಡ್ ನಲ್ಲಿ ಹೊರಬಂದೆ. ಉಳಿದುಕೊಂಡ ಪಿ.ಜಿ.ಯ ಬಾಡಿಗೆ ಕಟ್ಟಲು ಮನೆಯಲ್ಲಿ ಹಣ ಕೇಳುವಂತಿರಲಿಲ್ಲ. ಹೇಗೋ ಪಾರ್ಟ್ ಟೈಮ್ ಕೆಲಸ ಮಾಡಿ ಸಂಪಾದಿಸಿ ದಿನದೂಡುತ್ತಿದ್ದೆ. ಅಂತೂ ಐದು ತಿಂಗಳ ನಂತರ ಈಗ ನನಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ಮೂವತ್ತೈದು ಸಾವಿರ ಸಂಬಳ. ನಾಡಿದ್ದಿನಿಂದ ಕೆಲಸ ಶುರು.  ಕೊನೆಗೂ ನನ್ನ ಕಾಲ ಮೇಲೆ ನಾನು ನಿಂತ ನೆಮ್ಮದಿ. ಜೊತೆಗೆ ಮನೆಗೂ ಹಣ ಕಳಿಸಿ ಅವರನ್ನು ನೋಡಿಕೊಳ್ಳುವ ಅವಕಾಶ. ತುಂಬಾ ಖುಷಿಯಾಗುತ್ತದೆ. ನಂಬಿದ ದೇವರು ಎಂದೂ ಕೈಬಿಡಲಾರ ಅನಿಸ್ತಿದೆ. ರೈಲು ಮುಂದಿನ ನಿಲ್ದಾಣಕ್ಕೆ ಸಾಗಿದಂತೆ ನನ್ನ ಬದುಕೂ ಮುಂದೆ ಸಾಗುತ್ತಿದೆ ಎಂಬ ಭಾವನೆಯೇ ನನ್ನ ಖುಷಿಯನ್ನು ದುಪ್ಪಟ್ಟು ಮಾಡುತ್ತಿದೆ ಸ್ಪಂದನಾ... ಅಯ್ಯೋ ಉತ್ಸಾಹದಲ್ಲಿ ನಿನಗೆ ಮಾತಾಡಲೂ ಅವಕಾಶ ಕೊಡದೇ ನನ್ನ ಕತೆಯೆಲ್ಲಾ ಹೇಳಿಬಿಟ್ಟೆ. ನಿಜವಾಗಿ ಹೇಳಬೇಕೆಂದರೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ನನಗೆ ಒಬ್ಬ ವ್ಯಕ್ತಿ ಬೇಕಿತ್ತು. ಅದು ಯಾರಾದರೂ ಸರಿ ಎಂದು ಮನ ಹೇಳುತ್ತಿತ್ತು. ಅದಕ್ಕೆ ಏನೋ ಒಂದರ್ಧ ಗಂಟೆಯಲ್ಲೇ ನೀನು ನನಗೆ ಹತ್ತಿರದವಳು ಎನಿಸಲಾರಂಭಿಸಿದ್ದು. ಥಾಂಕ್ಯೂ ಸ್ಪಂದನಾ ನನ್ನ ಮಾತುಗಳನ್ನ ಕೇಳಿದ್ದಕ್ಕೆ. ಈಗ ನಿನ್ನ ಬಗ್ಗೆ ಹೇಳು. ಇಷ್ಟ ಇದ್ರೆ ಮಾತ್ರ.... " ಎಂದು ಪ್ರಕೃತಿ ಮಾತು ಮುಗಿಸಿದಳು. ಸ್ಪಂದನಾಗೆ ಪ್ರಕೃತಿಯ ಮಾತುಗಳಿಂದಲೇ ಅವಳ ವ್ಯಕ್ತಿತ್ವದ ಬಗ್ಗೆ ಒಂದು ಕಲ್ಪನೆ ಮೂಡಿತ್ತು. ಪ್ರಕೃತಿ ಭಾವಜೀವಿ. ತನ್ನನ್ನು ತಾನು ಬೇಗನೆ ತೆರೆದುಕೊಳ್ಳುತ್ತಾಳೆ. ಮಾತು ಸ್ಪಷ್ಟ ಹಾಗೂ ನಿರರ್ಗಳ. ಆಕೆಯ ಮಾತೇ ಒಂದು ಕಾವ್ಯ... ಸ್ಪಂದನಾ ತನ್ನ ಬಳಿ ಕುಳಿತವಳನ್ನು ಹೆಮ್ಮೆಯಿಂದ ನೋಡಿ, ಮುಗಳ್ನಕ್ಕಳು.
      ಮುಖದಲ್ಲಿ ಸ್ವಲ್ಪ ನಾಚಿಕೆಯ ಭಾವ ತೋರುತ್ತಾ, " ಮುಂದಿನ ವಾರ ನನ್ಮ ಮದುವೆ ಇದೆ. ಅದಕ್ಕೇ ಊರಿಗೆ ಹೊರಟಿದ್ದೇನೆ. ಅಷ್ಟೇ. " ಎಂದು ಸುಮ್ಮನಾಗಿಬಿಟ್ಟಳು. ಪ್ರಕೃತಿ ಮತ್ತೇನೂ ಕೇಳಲಿಲ್ಲ. ಓ ಮನದಿನಿಯನ ಕನಸು ಕಾಣುತ್ತಿರಬೇಕು ಎಂದು ಮೌನವಾದಳು. ಅದೇ ಬೋಗಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಅತ್ತಿತ್ತ ಓಡಾಡುತ್ತ  ಆಟವಾಡುತ್ತಿದ್ದಳು. ಆಕೆ ಪ್ರಕೃತಿಯ ಬಳಿ ಬಂದಳು. ಪ್ರಕೃತಿ ಆ ಹುಡುಗಿಯನ್ನು ಎತ್ತಿ ತನ್ನ ಕಾಲಮೇಲೆ ಕುಳ್ಳಿರಿಸಿಕೊಂಡಳು. " ಹಾಯ್ ಪುಟ್ಟಾ.. ತುಂಬಾ ಖುಷಿಲಿರೋ ಹಾಗಿದೆ. ನನ್ನತ್ರ ಚಾಕೊಲೇಟ್ ಇದೆ ಬೇಕಾ? " ಎಂದು ಕೇಳಿದಳು. " ಆಂಟೀ ನಾನು ಅಪ್ಪನ ಹತ್ರ ಹೋಗ್ತಿದೀನಿ. ತುಂಬಾ ದಿನ ಆಗಿತ್ತು ಡ್ಯಾಡಿ ಜೊತೆ ಮಾತಾಡಿ..." ಎಂದು ಮುದ್ದಾಗಿ ಹೇಳಿ ಚಾಕೊಲೇಟ್ ತೆಗೆದುಕೊಂಡು ಓಡಿದಳು. ಆ ಎಳೆಯ ಕಂಗಳಲಿ ಸಂತಸದ ಹೊನಲಿತ್ತು. ಸ್ಪಂದನಾ ತನ್ನದೇ ಆದ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಳು. ಪ್ರಕೃತಿ ಕಿಟಕಿಯ ಬಳಿ ಹೋಗಿ ಕುಳಿತು ಹೊರನೋಡತೊಡಗಿದಳು. ಕತ್ತಲಾಗಿದ್ದರಿಂದ ಏನೂ ಕಾಣಿಸಲಿಲ್ಲ. ಸುಮ್ಮನೆ ಅತ್ತಿತ್ತ ನೋಡುತ್ತ ಕುಳಿತಳು.  ಅದಾಗಲೇ ರಾತ್ರಿ ಒಂಭತ್ತು ದಾಟಿತ್ತು. ಪ್ರಯಾಣಿಕರೆಲ್ಲ ತಮ್ಮ ಪಾಡಿಗೆ ತಾವು ಊಟ ಮುಗಿಸಿ ಮಲಗಿದರು. ಕೆಲವರಲ್ಲಿ ಹೊಸ ಜೀವನದ ಕನಸಿತ್ತು, ಕೆಲವರಲ್ಲಿ ಕನಸು ನನಸಾದ ಸಂತೃಪ್ತಿಯಿತ್ತು, ಕೆಲವರಲ್ಲಿ ಕುಟುಂಬವನ್ನು ಸೇರುವ ತವಕವಿತ್ತು, ಇನ್ನು ಕೆಲವರಲ್ಲಿ ಜೀವನದ ತಿರುವುಗಳನ್ನು ನೋಡುವ ಹಂಬಲವಿತ್ತು. ಇನ್ನೂ ಏನೇನೋ..... ಭಾವಗಳು ಅಪರಿಮಿತ, ಅಲೋಚನೆಗಳೋ ಎಂದೂ ಅನಂತ... ಯಾಕಂದ್ರೆ ಹಾಕೋದು ಬಿತ್ತೋದು ನಮ್ಮಿಷ್ಟ.....
      ಮಧ್ಯರಾತ್ರಿಯ ವೇಳೆ. ಹನ್ನೆರಡು ದಾಟಿರಬಹುದು. ವೇಗವಾಗಿ ಚಲಿಸುತ್ತಿದ್ದ ರೈಲು ಒಮ್ಮೆಲೇ ಹಳಿ ತಪ್ಪಿತ್ತು. ದುರಂತ ಸಂಭವಿಸಿತ್ತು. ಹಳಿ ತಪ್ಪಿದ ಬೋಗಿಗಳಲ್ಲಿನ  ಪ್ರಯಾಣಿಕರು ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ ಹಲವಾರು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ನೂರಾರು ಕಣ್ಣಲ್ಲಿ ಕಟ್ಟಿದ್ದ ಕನಸಿನ ಗೋಪುರ ಧರೆಗುರುಳಿತ್ತು. ಊಹಿಸಲಾರದಂತದ ಘಟನೆಯೊಂದು ಜರುಗಿ ಹೋಗಿತ್ತು. ಸಿಹಿನಿದ್ರೆಯಲ್ಲಿದ್ದ ಕೆಲ ಪ್ರಯಾಣಿಕರು ಈಗ ಚಿರನಿದ್ರೆಗೆ ಜಾರಿದ್ದರು. ಯಮದೂತನ ಸೇವಕರು ಸದ್ದಿಲ್ಲದಂತೆ ತಮ್ಮ ಕೆಲಸ ಮುಗಿಸಿದ್ದರು.
ವಿಧಿಲಿಖಿತಕ್ಕೆ ಹೊಣೆ ಯಾರು?..... ಹೊಸ ಕೆಲಸ ಸಿಕ್ಕ ಖುಷಿಯಲ್ಲಿ ಹಾರಾಡುತ್ತಿದ್ದ ಪ್ರಕೃತಿ ಶವವಾಗಿ ಪ್ರಕೃತಿಯ ಮಡಿಲಲ್ಲಿ ಮಲಗಿದ್ದಳು. ಮದುವೆಯ ಕನಸು ಕಂಡ ಸ್ಪಂದನಾ ಕೈ - ಕಾಲುಗಳೆರಡನ್ನೂ ಕಳೆದುಕೊಂಡು ಜೀವ ಹೋಗುವ ಸ್ಥಿತಿಯಲ್ಲಿದ್ದಳು. ಅಪ್ಪನ ಕಾಣಲು ಹೊರಟ ಪುಟ್ಟ ಹುಡುಗಿ ದೇವರ ಪಾದ ಸೇರಿದ್ದಳು.... ಏನೂ ತಪ್ಪೇ ಮಾಡದ ಅದೆಷ್ಟೋ ಜೀವಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಅವರೆಲ್ಲರ ಬದುಕಿಗೆ ಮುಂದಿನ ನಿಲ್ದಾಣ ಬರಲೇ ಇಲ್ಲ...! ಪಯಣ ಪೂರ್ಣಗೊಳ್ಳಲೂ ಇಲ್ಲ...! ರೈತ ಕಷ್ಟಪಟ್ಟು ಹೊಲವನ್ನು ಉತ್ತಿ, ಬೀಜ ಬಿತ್ತಬಹುದು. ಕ್ರಿಮಿ ಕೀಟಗಳು ಬರದಂತೆ ಔಷಧಿ ಸಿಂಪಡಿಸಬಹುದು. ಆದರೆ ಮಳೆಯೇ ಬಾರದಿದ್ದರೆ ಅಥವಾ ಅಕಾಲಿಕ ಮಳೆ ಬಂದರೆ ಬೆಳೆ ಬರಲು ಸಾಧ್ಯವೇ? ಹಾಗೆಯೇ ಜೀವನದ ಬಗ್ಗೆ ಕನಸು ಕಾಣುವುದು, ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸುವುದು ಮಾತ್ರ ನಮ್ಮ ಕೈಯಲ್ಲಿದೆ. ಉಳಿದಿದ್ದೆಲ್ಲ ದೈವೇಚ್ಛೆ... ಅದಕ್ಕೇ ಬಹುಶಃ ದೊಡ್ಡವರ ಮಾತು ನಿಜ - ಹಾಕೋದು ಬಿತ್ತೋದು ನನ್ನಿಚ್ಛೆ. ಆಗೋದು ಹೋಗೋದು ಅವನಿಚ್ಛೆ....!
                                        
                                           -ರಂಜನಾ ಆರ್ ಭಟ್

Photo Credit: DeviantArt

Author image
About the Author
ಹೆಸರು:ರಂಜನಾ ಆರ್ ಭಟ್.
▪ಕುಮಾರಿ ರಂಜನಾ ಆರ್ ಭಟ್ ಇವರು ಚಿಕ್ಕ ಪ್ರಾಯದಲ್ಲೇ ಸಾಹಿತ್ಯದತ್ತ ಆಕರ್ಷಿತರಾದವರು. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಮಾಡಿದ ಇವರು ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಿಂದ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ಪ್ರಸ್ತುತ ಬೆಂಗಳೂರಿನಲ್ಲಿ ಬಿ.ಕಾಂ ಪದವಿ ವಿದ್ಯಾಭ್ಯಾಸದೊಂದಿಗೆ ಸಿ.ಎ(CA) ಕಲಿಕೆಯನ್ನು ಮಾಡುತ್ತಿದ್ದಾರೆ.
ಕವಿತೆ, ಕಥೆ, ಲೇಖನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಇದುವರೆಗೆ "ಮಕ್ಕಳ ಸಾಹಿತ್ಯ"(ಕಥಾ-ಕವನ ಸಂಕಲನ) ಹಾಗೂ "ಹೊಂಗಿರಣ"(ಕವನ ಸಂಕಲನ) ವನ್ನು ಹೊರತಂದಿದ್ದಾರೆ.
ವಿವಿಧ ಕವಿಗೋಷ್ಟಿಗಳಲ್ಲಿ ತನ್ನ ಕವನ ವಾಚನವನ್ನು ಮಾಡಿದ್ದು "ನಮ್ಮ ಕನ್ನಡ ತಂಡ" ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದಿದ್ದಾರೆ. ಅಲ್ಲದೆ ವಿಜಯ ನೆಕ್ಸ್ಟ್, ಸಂಪದ ಸಾಲು ಮಾಸ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನೂ ಮಾಡಿ ತನ್ನ ಸಾಹಿತ್ಯ ಯಾತ್ರಗೆ ಪುಟಗಳನ್ನು ಜೋಡಿಸುತ್ತಿದ್ದಾರೆ...
ಅವರ ಕಥೆ, ಕವಿತೆ, ಲೇಖನಗಳು ನಮ್ಮ ಜಾಲದಲ್ಲಿ ಪ್ರಕಟವಾಗುತ್ತಿದ್ದು ಸಾಹಿತ್ಯಾಸಕ್ತರು ಓದಬಹುದು.

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.