ವರ್ಣನಾ ಲಹರಿ - ಭಾಗ ೧


ಬಣ್ಣಿಸುವ ಹಂಬಲ ಮನಸಿನಲ್ಲಿ ಮೂಡುವಾಗ ವರ್ಣನೆಗೆ ಸಿಗುವ ಸಾಲುಗಳ ಗೊಂಚಲು...
         
          "ಏನಿದು... ಅಚ್ಚರಿಯ ಗುಚ್ಛವೇ ಮೈಹಚ್ಚಿ ನಿಂತಿದೆಯಲ್ಲಾ... ಯಾವುದು ಕನಸು ಯಾವುದು ನನಸು ಎಂಬುದೇ ಗೊತ್ತಾಗುತ್ತಿಲ್ಲ... ನಡೆದು ಬರುವ ದಾರಿಯ ಎದುರು ಚೆಲುವಿಕೆಯಿಂದ ಸೊಬಗ ತೋರಣದ ನಡುವೆ ಕುಳಿತಿರುವ ಆ ಕಮಲಕೋಮಲೆಯ ದೃಶ್ಯಸಾದೃಶ್ಯವನ್ನು ಕಾಣುತ್ತಿದ್ದೇನೆ... ಕನಸಿನ ಭ್ರಮೆಯೋ ಮನಸಿನ ರಮೆಯೋ ಅವಳನ್ನು ಕಂಡಾಗ ಒಂದೇಸಮನೆ ಕಣ್ಣು ನೋಡು ನೋಡು ಎಂದು ಚಿತ್ತದ ಮತ್ತನ್ನೇರಿಸುತ್ತಿದೆ. ಪ್ರಚಂಡರಾದ ನಮ್ಮನ್ನೇ ಒಮ್ಮಿಂದೊಮ್ಮೆಗೆ ಮೋಹಪರವಶರನ್ನಾಗಿಸುತ್ತಾಳೆ ಎಂದಾದರೆ ಯಾರಿರಬಹುದು ಆಕೆ? ಹರನ ಹೃತ್ವಿಮಲವೋ, ಹರಿಯ ಹೃತ್ಕಮಲವೋ, ಸೃಷ್ಟಿಕರ್ತನ ರಾಣಿ ವಾಣಿ ಸರಸತಿಯೋ... ಮನುಮಥನ ಮಡದಿಯೋ, ಶೃಂಗಾರ ಬೆಡಗಿಯೋ, ವಿಶ್ವಕರ್ಮನ ವಿಶಿಷ್ಠ ವಿನ್ಯಾಸವೋ... ಕರುಣರಸ ಕಮಲವೋ, ವೀರರಸ ವಿಮಲೆಯೋ, ಶೃಂಗಾರರಸದೊಳಗೆ ಕಲೆತ ಶುಭರೂಪವೋ... ಚೆಲುವಿಕೆಯ ಚಿಗುರೆಲೆಯೋ, ಕೆಂದುಟಿಯ ಹೂಬನವೋ, ಚೆಂದದಿಂದಲಿ ಸೊಬಗ ಚೆಲ್ವ ಊರ್ವಶಿಯೋ... ಎಷ್ಟು ಹೊಗಳಿದರೂ ಮತ್ತೊಂದು ಮಗದೊಂದು ಎನ್ನುವ ಹಾಗೆ ಉಪಮೆಗಳ ಪಾವಟಿಗೆಯೇ ನನ್ನ ಕಣ್ಣ ಮುಂದೆ ತೋರುತ್ತಿದೆ.
         ಬಣ್ಣಿಸಲಸದಳವು ಅವಳ ಚೆಲುವ ಬಲವ ಹೊರುವ ವರ ಎಲ್ಲಿರುವ ಎಂಬ ಆಶ್ಚರ್ಯದ ಭಾವ ಮನಸಿನಲ್ಲಿ ಉಂಟಾಗುತ್ತಿದೆ. ಆಕೆಯ ಮುಖದ ಸೌಂದರ್ಯಕ್ಕೆ ಹೋಲುವ ಮತ್ತೊಂದು ಸೌಂದರ್ಯವೇ ಇಲ್ಲ,ಆಕೆಯ ನಗೆಯ ಭಾವಾಭಿವ್ಯಕ್ತಿಗೆ ಹೋಲುವ ಮತ್ತೊಂದು ನಗೆಪಾವಟಿಗೆಯೇ ಇಲ್ಲ... ಮಾದಕ ಮೋದಕ ಆರಾಧಕ ಸೌಂದರ್ಯದೊಳಿವಳದು ಆರಾಧನೆಗೆ ಮನಹೊಗುವ ವಿಶಿಷ್ಟ ಮುಖವರ್ಚಸ್ಸು ಎದ್ದು ಕಾಣುತ್ತಿದೆ. ಹಸಿರು ವನರಾಶಿಯ ನಡುವೆ ದಟ್ಟ ಕತ್ತಲು ಸುತ್ತಲಿದ್ದರೂ ಬೆಳಕೆಂಬುದು ಆಕೆಯನ್ನು ಆವರಿಸುತ್ತಿದೆ ಎಂದಾದರೆ ಆಕೆ ಸಾಮಾನ್ಯಳಲ್ಲ ಎಂಬುದು ಸ್ಪಷ್ಟ. ಆಕೆಯನ್ನು ತಿಳಿಯಬೇಕೆಂಬ ಮನಸ್ಸಾಗುತ್ತಿದೆ... ಸ್ವಲ್ಪ ಹತ್ತಿರ ಸರಿದು ನೋಡುತ್ತಾ ನಿಂತರೆ ಏನಿದು ಆಶ್ಚರ್ಯ.... ಸೌಂದರ್ಯ ಸಾಗರವನ್ನೇ ತನ್ನ ದೇಹದಲ್ಲಿ ಧಾರಣೆ ಮಾಡಿ ನಗುವೆಂಬ ಅಲೆಯ ಹೊಡೆತಕ್ಕೆ ಮರಳೆಂಬ ನಮ್ಮ ಮನಸ್ಸನ್ನು ಮರುಳು ಮಾಡಿ ಮೋಹವನ್ನು ಅರಳಿಸುತ್ತಿದ್ದಾಳೆ. ಅರರೆ ಇನ್ನವಳೆಂತ ಚೆಲುವ ತಾರೆ... ಪ್ರಜ್ವಲಿಸಿ ಹೊಳೆಯುತಿದೆ ಅವಳ ಮೋರೆ... ಕೇಶರಾಶಿಯ ನೀಳ ಸೊಬಗ ಧಾರೆ... ಯಾರವಳು ಯಾರವಳು ಚಿತ್ತಚೋರೆ...  ಭೃಂಗದಂದದ ಚೆಲುವು ವರ್ಣಕಾಂತಿಯ ಮೆರುಗು ಪ್ರಜ್ವಲಿಸೆ ರೂಪರತಿಸೊಬಗಿನಲಿ ಹಿರಿದು... ಕಣ್ಮನಕೆ ಮೋಹಕದ ದಾಹವನು ಮೋದದಲಿ ಮಾದಕದ ಮತ್ತಿನಲೆ ನೀಡುತಿರ್ಪಳು ಕರೆದು... ಮಾಯೆ ಸುಂದರಕಾಯೆ ಕಾಯೆ ಮಂದಿರಛಾಯೆ... ಅವಳ ಕಣ್ಣಿನ ಅಂಚಿನ ಮಿಂಚಿನ ಸಂಚಿನ ಮಧುರ ಹೊಂಚು ಗೊಂಚಲ ಸಿಂಚನಕ್ಕೆ ನನ್ನ ತನುಕಾಂತಿ ಅರಳಿ ಹೊರಳಿ ನಾನು ಮರುಳಾಗಿ ಹೋದೆ. ಕಂಡೂ ಕಂಡೂ ಹಿಂದೆಂದೂ ಆಗಿರದಂತಹ ದಿವ್ಯ ಮನೋಹರ ಆಲಂಕರಿಕ ಸೊಬಗು ನನ್ನಲ್ಲಿ ಮೂಡುತ್ತಿರಬೇಕಾದರೆ ಯಾರವಳು ಯಾರವಳು? ದೇವಶಿಲ್ಪಿಯಾದ ವಿಶ್ವಕರ್ಮನು ತನ್ನ ಕಲಾಕಂಚುಕದ ಕಣಕಣವ ಕೊರೆದು ಕೂಡಿಸಿ ಕಲ್ಪಿಸಿದ ಕನ್ನಿಕಾಮಣಿಯೋ ಎಂಬ ಹಾಗೆ ಇದೆ ಆಕೆಯ ಸಾದೃಶ್ಯ. ಆಕೆಯನ್ನು ಕಂಡಾಗ ಮನಸ್ಸು ಏಕೋ ಆನಂದದಾಯಕವಾದ ಅನುಭವವನ್ನು ಪಡೆಯುತ್ತಾ ಇದೆ. ಹುಣ್ಣಿಮೆಯ ಬೆಳದಿಂಗಳ ಬೆಳಕನ್ನು ಭರಿಸಿ ತಂಪು ಗಾಳಿಯನ್ನು ಬೀಸುತ್ತಿದ್ದಾಳೆ. ನೋಡಬೇಕು ಆಕೆಯ ನಗುಬಗೆಯ ಮೊಗದ ಚೆಲುವನ್ನು. ಚಂದಿರನ ಕಾಂತಿಗಿಂತಲೂ ಇಮ್ಮಡಿಯುತವಾದ ಪ್ರಕಾಶವನ್ನು ಹೊಮ್ಮಿಸುತ್ತಿದ್ದಾಳೆ. ಅರ್ಧಚಂದ್ರಾಕೃತಿಯಂತೆ ಬಾಗಿಸಲ್ಪಟ್ಟ ನೀಳವಾದ ಹುಬ್ಬುಗಳು. ಕ್ಷೀರಸಾಗರದೊಳಗೆ ಮಾಣಿಕ್ಯಮಣಿಯೊಂದು ತೇಲಿದಂತೆ ಭಾಸವಾಗುವ ಆ ಸ್ಪುಟನೇತ್ರಗಳು. ಬಲಮುರಿ ಶಂಖದಂತೆ ತೋರುವ ಆಕೆಯ ಕೊರಳು... ಎಲ್ಲವನ್ನೂ ಕಾಣುವಾಗ ಆನಂದವಾಗುತ್ತಿದೆ. ಚೆಲುವಿಕೆಯ ಪುಷ್ಕರಿಣಿಯಾಗಿ ಪರಿಮಳದ ಮೊಗ್ಗಾಗಿ ನವಯುಗದ ಸಂಭ್ರಮವನ್ನೇ ಬೀರುತ್ತಿದ್ದಾಳೆ. ಚಂದಿರಕಾಂತಿಯ ಸುಂದರಮೊಗದಲಿ ನಿರ್ಮಲ ನಗುವಿನ ಮಂದಿರ ನಿರ್ಮಾಣವಾಗಿದೆ. ಭವ್ಯತೆಯ ಮೆರುಗನ್ನು ನೋಟದೊಳ್ ಪಸರಿಸುತ, ಮಂದಹಾಸವ ಚಿತ್ತದುಯ್ಯಾಲೆಯಲಿ ತೂಗಿಸುತ, ಪರಿಮಳವ ನಾಸಿಕಕೆ ಮಾರುತದಿ ಹಬ್ಬಿಸುತ, ರಸರಾಗ ಮಳೆಯೊಪ್ಪೊ ವೀಣೆಯನು ನುಡಿಸುತ್ತಾ ಶಶಿಮುಖಿ ಚಿತ್ತಾರರೂಪಿ ಭುವನದೊಳ್ ಅತಿಕುಶಲಸ್ವರೂಪಿಯಾದ ಆಕೆಯ ವದನದೊಳ್ ಮನೆಮಾಡಿದ  ಸ್ಪುರದ್ರೂಪಿ ಚೆಲುವನ್ನು ಬಣ್ಣಿಸಲು ಈ ನಾಲಿಗೆಯೊಳು ಪದಗಳೊಡೆಯದೆ ಮಾತು ಬರಿದಾಗಿದೆ. ಪರಮಸುಂದರ ರೂಪದಿಂ ಕಾಂತಿಬೀರುತ್ತಾ ಮಿರುಗುತಿಹ ಕರ್ಣಕುಂಡಲಿಗಳಂ ಧರಿಸಿಹ ಶಿರದಿ ನವರತ್ನದಿಂ ಶೋಭಿಸುವ ಮುಕುಟವಂ ತಳೆವಧಿಕ ಲಾವಣ್ಯ... ನಾಸಿಕದ ನತ್ತಿನಿಂ ವಿನುತಮುಖಪದ್ಮದಿಂ ಸೂಸುವಾ ಕಾಂತಿಗಳು ಥಳಥಳಿಸುತಿರೆ ಶಿರದಿ ಚಿನ್ನವರ್ಣಾಂಬರದ ಕಂಚುಕದಿ ಶೋಭಿಸುವ ಉನ್ನತಗುಣೋದಯೆಯ ಸನ್ನುತಿಗಳಂ ಏನೆಂದು ಪೊಗಳಲಿ...
            ಪುಷ್ಪದೆಸಳ ಎಸೆವ ಕೂಸಿನ ನಸುನಗೆಯ ನಗುಮಲ್ಲಿಗೆಯ ಗಂಧ ಚೆಂದದಿ ಬಂಧನವಾಗಿರುವಾಗ ಆಯಾಸವೆಲ್ಲವೂ ಮಾಯವಾಗುತ್ತಿದೆ. ಬಾನಿನ ಭಾನೊಮ್ಮೆ ಬುವಿಯ ಬೇಗೆಯನು ಕಂಡು ತಾಪವ ಕೊಂದು ಚಂದ್ರನ ತಂಪಿನಂಗಳಕ್ಕೆ ತುಸು ಜಾಗವನ್ನು ಕೊಟ್ಟಂತಿದೆ ಆಕೆಯ ಸನ್ನಿಧಾನದ ವಾತಾವರಣ. ತರುಣಿ ಮಣಿಯ ಅಗಣಿತ ಚೆಲುವ ಗಣಿಯ ಎಣಿಸುತ ನಿಂತರೆ ಪರಿಣಿತ ಗಣಿತವೂ ಸಾಕಾಗದು... ಮದನ ಮದವು ಮೋದದಲಿ ಮಿಂದೆದ್ದು ಬಂದು ನನ್ನೆದುರು ನಿಂತಂತೆ ಭಾವಪೂರ್ಣಗೊಳ್ಳುತ್ತಿದೆ ನನ್ನ ಭಾವ. ಜಗದಲ್ಲಿ ಸಿಗದವುಗಳೆಲ್ಲಾ ಆಕೆಯ ಮೊಗದಲ್ಲಿ ಕಲೆತು ಹೊಳೆದೊಳೆದು ತೋರುತಿರೆ ಸಿಗಲಾರದ ಗುರುತು ಯಾವುದಿರಬಹುದು ಎಂಬಂತಹ ತವಕ... ವನದ ಶೃಂಗಾರ ವೃಕ್ಷದಡಿ ಹಿಂಗಾರ ಬಳ್ಳಿಯಲಿ ಅಂಬರದ ಉಯ್ಯಾಲೆಯ ಮೇಲೆ ಕುಳಿತು ರಮಿಸುವ ಭ್ರಮರ ರವದ ಝೇಂಕಾರವನ್ನು ತನ್ನ ಮುಗುಳ್ನಗೆಯೊಳಗೆ ಚೆಲ್ಲುತ್ತಿರುವ ಆ ವಾಣಿ ಯಾರು... ಕಣ್ಣನಲಗಿಸಿ ನೋಡಿದರೆ ಬಣ್ಣಿಸುವ ಪದಗಳು ಹಣ್ಣಾಗಿ ಉದುರಿ ಹೆಣ್ಣೆಂಬ ಈ ಹೊನ್ನಿನರಮನೆಯೊಳಗೆ ಬಂಧಿಯಾಗುತ್ತಿದೆ. ಚಿಗುರೊಡೆದ ಸುರಲತೆಯೊಳ್ ಮೃದುವಾದ ಮೊಗ್ಗೊಂದು ಅರಳಿ ಧರೆಗೆ ಇಳಿದು ಬಂದ ಕುಸುಮ ಕನ್ಯೆ. ಕಣ್ಣಿನೊಳ್ ಹೊಳೆವ ಕೋಲ್ಮಿಂಚಿನ ಆ ಸುಳಿಸಂಚಿಗೆ ಯಾರು ತಾನೇ ಮರುಳಾಗಲಾರರು... ಹೂವಿನ ಮಧುರ ಮಕರಂದಕ್ಕೆ ದುಂಬಿಗಳು ಅರಸಿಬಂದಂತೆ ಆಕೆಯ ಸೌಂದರ್ಯವೆಂಬ ಸೌಗಂಧಕ್ಕೆ ನನ್ನ ತನುಕದಪಿನಂಗಳ ತೆರೆದು ಆಕೆಯನ್ನೇ ದಿಟ್ಟಿಸುತ್ತಿದ್ದೇನೆ. ಕಣ್ಣಿನೊಳ್ ಶರದಂತೆಸೆದ ನೋಟದ ಶಿಖರ ಅದರೊಳ್ ಪವಣಿಸಿದ ರತ್ನದಾಗರ... ಪ್ರದ್ಯೋತ ಪಯೋನಿಧಿಯ ಸ್ಪುರದ್ರೂಪಿ ನೀರೆ... ಆಕೆಯ ಚೆಲುವಿಗೆ ನಾಚಲೇ ಬೇಕು ರಂಭಾದಿ ಅಪ್ಸರೆ. ಪರಭೃತದ ಪುಗಿಲೊಡೆದು ಕೇಳುವ ಇಂಪಿನ ಕಂಪು... ಆಕರ್ಣಿಸಿದಂತೆ ಎಸಗುತಿದೆ ಮೈಮನಕೆ ತಂಪು .. ಸಿರಿಯರಸಿ ಸುಪ್ರೀತೆ ಅನುಪಮದಿ ಚಾರಿತ್ರ್ಯೆ ಗುರುಮೂರ್ತಿ ಸುಖದಾತೆ ಸದ್ಗುಣ ವಿಖ್ಯಾತೆ... ಕೋಗಿಲೆಯ ಕೊರಳಾಗಿ ಕಾಮಿನಿಯ ಕಣ್ಣಾಗಿ ಕಡು ನಡು ಕಾಂತಾರದೊಳಗೆ ಕಂಪಿಸುವ ಹೂನಗೆಯ ಚೆಲ್ಲುತ್ತ ಕುಳಿತಿರುವ ಕನಕದುಯ್ಯಾಲೆಯ ರಾಣಿ ಅಂಬರವೇಣಿ ಯಾರವಳು... ಮಂದಹಾಸದ ಮಧುಮಲ್ಲಿಗೆಯ ಗಂಧ... ಚಂದ್ರಬಿಂಬದ ಚೆಲುಮೊಗದ ಅಂದ... ಕಲ್ಪನೆಯ ಕನ್ನಡಿಯ ಬಿಂಬಕಿವಳಂದ... ಏನೆಂದು ವರ್ಣಿಸಲಿ... ಅಗಣಿತ ಚೆಲುವಿನಂದದಿ ಚೆಲ್ಲುವ ಚೆಲುವನದ ಚೆಲುವೆಯ ಚಿತ್ರವ್ಯೂಹ ಎನ್ನನ್ನು ಚೆಲುವನದಿ ಬಂಧಿಯಾಗಿಸಿದೆ. ಹಿತವಾದ ಸ್ಮಿತವನ್ನು ಮಿತವಾಗಿ ಶೃತಿಗೊಳಿಸಿ ರಾಗದಲಿ ಸಂಗೀತ ಪಾಡುತಿಹ  ಲತೆಯವಳು... ಯಾರು ಯಾರು ಎಂಬುದೇ ತೋರುತ್ತಿಲ್ಲವಲ್ಲಾ... ಗಾನಾದಿ ದೇವಿ ಬ್ರಹ್ಮನ ರಾಣಿಯೇ, ಅಲ್ಲಾ, ಶಿವನರಸಿ ಶಿವೆಯೇ, ಹರಿಸುಪ್ರೀತೆ ನಾರಾಯಿಣಿಯೇ...ಏನಿದು... ಅಚ್ಚರಿಯ ಗುಚ್ಛವೇ ಮೈಹಚ್ಚಿದೆಯಲ್ಲಾ... ಅವಳನ್ನು ಕಾಣುವಾಗ ಗೊಂದಲದ ಹಂದರವೇ ಮನದೊಳಗೆ ಮನೆ ಮಾಡುತ್ತಿದೆ... ಅವಳಲ್ಲೇ ಕೇಳುವ ಮನಮಾಡುವದು ಉಚಿತವೇ ಹೌದು... ಕೇಳುತ್ತೇನಂತೆ..."

                                                                                                                                             -ಶ್ರೀಸುತ

Photo Credit: Shri Kiran Vitla


ಓದುಗರಲ್ಲಿ...
[ಮೇಲೆ ಬರೆದಿರುವ ವರ್ಣನೆಗಳು ಯಕ್ಷಗಾನದ ಸಂಭಾಷಣೆಗಾಗಿ ಬರೆದಿದ್ದು ಇದರ ಸಂಪೂರ್ಣ ಹಕ್ಕು ಲೇಖಕರದ್ದೇ(ದಿವಾಣ ದುರ್ಗಾಪ್ರಸಾದ್ ಭಟ್) ಆಗಿರುತ್ತದೆ. ಭಾಗ ೧ ರಲ್ಲಿ ಇವಿಷ್ಟು ವರ್ಣನೆಗಳನ್ನು ಬರೆದಿದ್ದು ಭಾಗ ೨ ರಲ್ಲಿ ಮತ್ತಷ್ಟು ಸಾಲುಗಳನ್ನು ಬರೆಯಲಾಗುವುದು. ಕೇವಲ ಕಲ್ಪನೆಯ ದೃಷ್ಟಿಯಿಂದಷ್ಟೇ ಈ ವರ್ಣನೆಗಳನ್ನು ಬರೆಯಲಾಗಿದೆ.... ಯಾವುದೇ ಋಣಾತ್ಮಕ ಚಿಂತನೆಗಳಿಗೆ ಇಲ್ಲಿ ಅವಕಾಶ ಮಾಡಿಕೊಟ್ಟಿಲ್ಲವಾದ್ದರಿಂದ ಓದುಗರು ಸಾಹಿತ್ಯದ ದೃಷ್ಟಿಯಿಂದಷ್ಟೇ ಸ್ವೀಕರಿಸಿ.
ಓದಿ... ಇತರರಿಗೂ ಹಂಚಿ. ಧನ್ಯವಾದಗಳು.]

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.