ನಾವೇಕೆ ಹೀಗೆ ಬದುಕುತ್ತಿದ್ದೇವೆ?


ನಾವೇಕೆ ಹೀಗೆ ಬದುಕುತ್ತಿದ್ದೇವೆ?
ಸಣ್ಣ ಮನೆಯೋ ದೊಡ್ಡರಮನೆಯೋ
ಮನದ ತೋಷದಲ್ಲಿ ಬಡವರಾಗಿ
ಹಣದ ವಿಷಯದಲ್ಲಿ ಕಟುಕರಾಗಿ
ಮಣ್ಣಿನಾಸೆಯಲ್ಲೇ ಮಣ್ಣಾಗಿ
ಕೊನೆಗೆ ಜಗದಾಂತರ್ಯದೊಳಗೆ ಬೆತ್ತಲಾಗಿ
ನಾವೇಕೆ ಹೀಗೆ ಬದುಕುತ್ತಿದ್ದೇವೆ?

ಹಿಂದೆ ಇರಲಿಲ್ಲ ಜನರಲ್ಲಿ ಪುಸ್ತಕದ ಜಗತ್ತು
ಆದರೆ ಅರಿತವರಲ್ಲಿ ಶ್ರೇಷ್ಠ ಮನುಕುಲವಿತ್ತು
ಅವರ ಅಡಿಗೆಯನ್ನುಣ್ಣುವ ನಾವುಗಳು
ಇಂದು ಮಾಡಿದ್ದೆಷ್ಟು? ಮಾಡಿ ತೇಗಿದ್ದೆಷ್ಟು?
ದುರ್ಬಲರಲ್ಲ ನಾವು, ನಟನಾ ಕೌಶಲರು
ಭಕ್ತಿಯೆಂಬ ಮುಖವಾಡವನ್ನು ಹೊತ್ತು
ನಾವೇಕೆ ಹೀಗೆ ಬದುಕುತ್ತಿದ್ದೇವೆ?

ಸತ್ಯ-ಮಿಥ್ಯಗಳ ಬೇಧವರಿತರೂ ಪಥ್ಯವಿಲ್ಲ
ನಮಗೆ ನಮ್ಮೊಳಗೆ ನಮ್ಮದೇ ತುಡಿತ
ಭಾವನೆಗಳ ಬಂಧನದೊಳಗೆ ನುಂಗಲಾರದ ಬದುಕು
ಸಮಾಜದ ಹುಳುಕು ತಲ್ಲಣಕ್ಕೆ ಎಲ್ಲಿಲ್ಲದ ಅಳುಕು
ಮುಂಬರುವ ಕನಸಿದ್ದರೂ ಮನಸಿಲ್ಲ
ಕೋಣೆಯೊಳಗಿನ ಬದುಕೆಮದು ಸತ್ಯವನು ತೊರೆದು
ನಾವೇಕೆ ಹೀಗೆ ಬದುಕುತ್ತಿದ್ದೇವೆ?

ಜಗದಗಲ ಎದೆಯಗಲ ಧರ್ಮಕರ್ಮಗಳು
ನಿಜರೂಪದೊಳಗೂ ಹಲವು ಮರ್ಮಗಳು
ಎಲುಬಿಲ್ಲದ ಜಿಹ್ವೆಗೂ ಎಲುಬು ಮುರಿಯುವ ತವಕ
ಏಟಿಗೆದಿರೇಟಿಟ್ಟು ಜೀವಗಳ ಕಳೆಯುತ್ತಾ
ವಿಷಜ್ವಾಲೆ ಹಾಯಿಸುತ ಹಲವು ಮನ ನೋಯಿಸುತ
ಹಿಡಿತವಿಲ್ಲದೇ ಹೊಡೆತಗಳ ಕ್ರಮಿಸುತ್ತಾ
ನಾವೇಕೆ ಹೀಗೆ ಬದುಕುತ್ತಿದ್ದೇವೆ?

ಗಲ್ಲಿಗಲ್ಲಿಗಳಲ್ಲಿ ಬೀದಿಗಿಳಿದು ಬೂದಿಯಾಗಿ
ಅರ್ಥವಿಲ್ಲದ ವ್ಯರ್ಥ ಹೇಳಿಕೆಗಳಡಿ ಹುಗಿದು
ಸಮರ್ಥವೋ ಅಸಮರ್ಥವೋ ಅಪರಿಪೂರ್ಣವಾಗಿ
ಕಲೆತಿರುವ ಹಲವು ಕೊಳಕು ಚೆಲುವಿನ ನಡುವೆ
ಮೂಕ ಪ್ರೇಕ್ಷಕರಾಗಿ ಎಲ್ಲವನ್ನೂ ವೀಕ್ಷಿಸುತ್ತಾ
ಯಾಕೆ ಬದುಕುತ್ತಿದ್ದೇವೆ ಹೀಗೆ ಸ್ಮೃತಿಯ ತೊರೆದು
ಆತ್ಮವಳಿದರೂ ಮತಿಯು ಬರದು ಸದ್ಗತಿಯು ಸಿಗದು

-ಶ್ರೀಸುತ

Photo Credit: Artnet

ದಿನಾಂಕ 03-06-2017ರ ಶನಿವಾರದಂದು ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ವತಿಯಿಂದ ಜರಗಿದ ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಾನು ವಾಚಿಸಿದ ನವ್ಯ ಕವಿತೆ "ನಾವೇಕೆ ಹೀಗೆ ಬದುಕುತ್ತಿದ್ದೇವೆ?"...
ಸಮ್ಮೇಳನಾಧ್ಯಕ್ಷರು: ಶ್ರೀಮತಿ ಶಕುಂತಳಾ ಭಟ್ ಹಳೆಯಂಗಡಿ.
ಕವಿಗೋಷ್ಠಿ ಅಧ್ಯಕ್ಷರು: ಶ್ರೀ ಉದಯಕುಮಾರ್ ಹಬ್ಬು.

Photo Credit: Shrinidhi Asranna

Please share and support me