ಸಂಗೀತದಲ್ಲಿ ದೈವಿಕ ಚಿಂತನೆಗೀತಂ ವಾದ್ಯಂ ತಥಾ ನೃತ್ಯಂ
ತ್ರಯಂ ಸಂಗೀತಮುಚ್ಯತೇ|
ಗೀತವಾದ್ಯೋsಭಯಂ ಯತ್ರ
ಸಂಗೀತಮಿತಿ ಕೇಚನ||
          
             "ಗಾಯನ, ಅದಕ್ಕೆ ಪೋಷಕವಾಗಿರುವಂತಹ ವಾದ್ಯವಾದನ, ತನ್ಮೂಲಕ ಪ್ರದರ್ಶಿಸಲ್ಪಡುವಂತಹ ನೃತ್ಯ"- ಈ ಮೂರರ ಸಹಯೋಗವನ್ನು  "ಸಂಗೀತ" ಎಂದು ಹೇಳಲಾಗುತ್ತದೆ. ಕೇವಲ ಗಾಯನ ಹಾಗೂ ಅದಕ್ಕೆ ಸಾಥಿಯಾಗಿ ವಾದ್ಯವಾದನ, ಇವಿಷ್ಟು ಮೇಳೈಸಿದರೂ ಕೆಲವರು ಅಷ್ಟನ್ನೇ ಸಂಗೀತವೆಂದು ಅಂಗೀಕರೀಸುವುದೂ ಉಂಟು. ಇದು ಈ ಮೇಲಿನ ಶ್ಲೋಕದ ತಾತ್ಪರ್ಯ...
         
           ಈ ರೀತಿ ನಮ್ಮ ಹಿಂದಿನ ಶಾಸ್ತ್ರಕಾರರು ಸಂಗೀತಕ್ಕೆ ಒಂದು ಖಡಾಖಂಡಿತವಾದ ನಿರ್ವಚನವನ್ನು ಕೊಟ್ಟಿರುತ್ತಾರೆ. ನಮ್ಮ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಭರತನಾಟ್ಯವು ಸರ್ವತಂತ್ರ ಸ್ವತಂತ್ರ ಹಾಗೂ ಸರ್ವಾಂಗೀಣ ಸುಂದರವಾದ ಸಂಗೀತವೆಂದು ನಾವು ಪ್ರಸ್ತುತ ನಿರ್ವಚನದಿಂದ ಅರ್ಥಮಾಡಿಕೊಳ್ಳಬಹುದು. ಆದರೆ ರೂಢಿಯಲ್ಲಿ ಗೀತವಾದ್ಯ ಸಮ್ಮಿಲಿತವಾದ ಗೋಷ್ಠಿಯನ್ನು ನಾವು ಸಾಮಾನ್ಯವಾಗಿ ಸಂಗೀತವೆಂದು ಪರಿಗಣಿಸುತ್ತೇವೆ. ಉತ್ತಮ ಸಾಹಿತ್ಯವು ಹೇಗೆ ವ್ಯಕ್ತಿಯ, ಕುಟುಂಬದ, ಜನಪದದ, ದೇಶದ, ಮೇಲಾಗಿ ಸಮಗ್ರ ಜಗತ್ತಿನ ಹಿತವನ್ನು ಸಾಧಿಸುತ್ತದೋ, ಹಾಗೆಯೇ ಉತ್ತಮ ಸಂಗೀತವು ಜನಕೋಟಿಯ ಹೃನ್ಮನಗಳನ್ನು ತನ್ನಲ್ಲಿಗೆ ಆಕರ್ಷಿಸುವುದು ಮಾತ್ರವಲ್ಲ, ಚತುರ್ವಿಧ ಪರಮ ಪುರುಷಾರ್ಥಗಳಲ್ಲಿ ಕಟ್ಟಕಡೆಯ ಯಾವ ಕೈವಲ್ಯ ಪದವಿದೆಯೋ ಅದು ಪ್ರಾಪ್ತವಾಗುವಂತೆ ಮಾಡುತ್ತದೆ. ಸಂಗೀತವು ವಾಗ್ದೇವಿಯ ಸ್ತನಯುಗಲ ಒಂದರಿಂದ ನಿರರ್ಗಳವಾಗಿ ಹೊರಹೊಮ್ಮುವ ಪೀಯೂಷ ಸದೃಶವಾದ ಸ್ತನ್ಯವೆಂಬುದು ಬಲ್ಲವರ ಅಂಬೋಣವಾಗಿದೆ.

ಸಂಗೀತಮಪಿ ಸಾಹಿತ್ಯ
ಸರಸ್ವತಿ ಸ್ತನದ್ವಯಮ್|
ಪಾನಮಪಾತಿ ಮಧುರಂ
ಅನ್ಯದಾಲೋಚನಾಮೃತಮ್||

        -ಈ ಸಾಲುಗಳು ಪ್ರಸ್ತುತ ನಿರ್ವಚನಕ್ಕೆ ಸೂಕ್ತ ಆಧಾರವಾಗಿರುತ್ತದೆ.

         ಸಂಗೀತವು ಭಾರತೀಯವಾದ ಚತುಃಷಷ್ಠಿ ಕಲೆಗಳಲ್ಲಿ ಅಗ್ರಮಾನ್ಯ ಸ್ಥಾನವನ್ನು ಪಡೆದಿರುತ್ತದೆ. ಅದು ಯಾವದೇ ಪರಿಕರಗಳಿಲ್ಲದೇ ಸ್ವಯಂ ಆತ್ಮಾನಂದವನ್ನು ಹೊಂದಲು ಎಡೆಮಾಡಿಕೊಡುವ ಸರಳ ಸುಂದರ ಹಾಗೂ ವಿಶ್ವಾವಶ್ಯ ಕಲೆ.
         ಒಮ್ಮೆ ದಕ್ಷಿಣಾದಿ ಸಂಗೀತದ ಮೂರ್ತಿತ್ರಯರಲ್ಲಿ ಮೊದಲಿಗರೂ, ಅಗ್ರಗಣ್ಯರೂ, ಪ್ರಭು ಶ್ರೀರಾಮನನ್ನು ಕಂಡು "ಅಗ್ನೇಪಶ್ಯಾಮಿ" ಎಂದು ಉದ್ಗರಿಸುವಷ್ಟು ಪರಮ ಭಾಗ್ಯಶಾಲಿಗಳೂ ಆದ ಪರಮಪೂಜ್ಯ ತ್ಯಾಗರಾಜ ಸ್ವಾಮಿಗಳನ್ನು ತಮಿಳುನಾಡಿನ ಒಬ್ಬ ಮಹಾರಾಜ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ಸರ್ವವಿಧವಾದಂತಹ ರಾಜಮರ್ಯಾದೆಗಳನ್ನು ಯಥೋಚಿತಗೈದು, ರತ್ನಕನಕಾಭರಣಾದಿ ವಸ್ತುಗಳಿಂದ ಸತ್ಕರಿಸಿ ತನ್ನ ಆಸ್ಥಾನ ಪಂಡಿತರನ್ನಾಗಿ ನೇಮಿಸುವ ಮಹತ್ವಾಕಾಂಕ್ಷೆಯನ್ನು ದೂತನ ಮೂಲಕ ಸ್ವಾಮಿಗಳಿಗೆ ಅರುಹಿದರಂತೆ. ಅದಕ್ಕೆ ತ್ಯಾಗರಾಜ ಸ್ವಾಮಿಗಳ ಪ್ರತಿಕ್ರಿಯೆಯಾದರೋ ಅತ್ಯದ್ಭುತವನ್ನು ಉಂಟುಮಾಡುವಂತಿತ್ತು. "ನಿಧಿ ಜಾಲ ಸುಖಮಾ? ಶ್ರೀರಾಮ ಸನ್ನಿಧಿ ಸುಖಮಾ?" ಇದರ ವಾಚ್ಯ ಮತ್ತು ಅಪರಾರ್ಥಗಳು ಬಹಳ ಗಹನವಾದವುಗಳು. ನಶ್ವರವಾದ ಸುಖಭೋಗವಸ್ತುಗಳಿಗೆ ದಾಸನಾಗುವ ಜಾಯಮಾನ ಸ್ವಾಮಿಗಳದ್ದಾಗಿರಲಿಲ್ಲ. ಅವರು ಶಾಶ್ವತವಾದ ಸುಖದ ಅನ್ವೇಶಕರಾಗಿದ್ದರು. ರಾಜರಿಂದ ಕೊಡಮಾಡಲ್ಪಟ್ಟ ಬಿರುದು ಬಾವಲ್ಲಿಗಳಲ್ಲಿ ಆಸ್ಥೆಯಾಗಲಿ, ಗೌರವವಾಗಿಲಿ ಇರಲಿಲ್ಲ. ತ್ಯಾಗರಾಜರು ಆಶಿಸುತ್ತಿದ್ದ ಸುಖವು ಶ್ರೀರಾಮಚಂದ್ರನ ಸನ್ನಿಧಿಯ ಸುಖವೇ ಹೊರತು ಬೇರಾವುದೂ ಆಗಿರಲಿಲ್ಲ. ತ್ಯಾಗರಾಜರು ತನ್ನ ಹೃದಯಮೂರ್ತಿ ಪ್ರಭು ಶ್ರೀರಾಮಚಂದ್ರನ ಕುರಿತು ಸಹಸ್ರ ಸಹಸ್ರ ಕೀರ್ತನೆಗಳನ್ನು ರಚಿಸಿ ತನ್ಮೂಲಕ ಪರಮಾತ್ಮನ ಆರಾಧನೆಗೈದು ತಮ್ಮ ಕೀರ್ತನಕುಸುಮಗಳಿಂದಲೇ ಆತನನ್ನು ಅರ್ಚಿಸಿ ಮೆಚ್ಚಿಸಿದ ಮಹಾನುಭಾವರು. ತ್ಯಾಗರಾಜ ಸ್ವಾಮಿಗಳ ಪ್ರತಿಯೊಂದು ಕೃತಿಯೂ ಭಕ್ತಿ ನಿರ್ಭರವಾಗಿದ್ದು ಧರ್ಮ ಪ್ರಬೋಧಕವಾದವುಗಳು. ಅದರಲ್ಲಿ ರೂಢಮೂಲವಾಗಿರುವ ಸಂಗೀತವಾದರೋ ಅದು ಅನನ್ಯ! ಮತ್ತೆಲ್ಲೂ ಅಲಭ್ಯ.
          ಮಾನವನು ಜನ್ಮಸಾಫಲ್ಯವನ್ನು ಪಡೆಯುವುದು ಎಂದರೆ ಪುರುಷಾರ್ಥಗಳಲ್ಲಿ ಕಡೆಯದಾದ ಮೋಕ್ಷ ಅರ್ಥಾತ್ ಜನನ ಮರಣ ದುಃಖದಿಂದ ವಿಮೋಚನೆ ಹೊಂದಿ ನಿತ್ಯಸತ್ಯವಾದ ಕೈವಲ್ಯವನ್ನು ಪಡೆಯುವುದೇ ಆಗಿರುತ್ತದೆ. ಇದಕ್ಕೆ ಸುಲಭೋಪಾಯವು, " ಜಿಹ್ವೇ ಶ್ರೀರಾಮ ಮಂತ್ರಂ ಜಪ ಜಪ ಸತತಂ ಜನ್ಮಸಾಫಲ್ಯ ಮಂತ್ರಮ್" ಎಂಬ ವಚನಾಮೃತದಲ್ಲಿ ಹೇಳಿರುವಂತೆ ದಿನವೂ ರಾಮನಾಮ ಸಂಕೀರ್ತನೆ ಮಾಡುವುದೇ ಆಗಿದೆ. ಸಂಗೀತವು ಇಂತಹ ಸತ್ಕಾರ್ಯಕ್ಕೆ ಮಾಧ್ಯಮವೆಂದರೆ ತಪ್ಪಾಗಲಾರದು. ಸಂಗೀತಕಲೆಯು ಚತುರ್ವಿಧ ಪುರುಷಾರ್ಥಗಳಲ್ಲಿ ಕಡೆಯದಾದ ಮೋಕ್ಷ ಪ್ರಾಪ್ತಿಗೆ ಪೂರಕವಾದ ಧರ್ಮ, ಅರ್ಥ, ಕಾಮವನ್ನು ಸಾಧಿಸುವುದಕ್ಕೆ ಉತ್ತಮ ಮಾಧ್ಯಮವಾಗಿರುತ್ತದೆ.

          ಸಂಗೀತದಲ್ಲಿ ಉತ್ತರಾದಿಯಾಗಲಿ ಅಥವಾ ದಕ್ಷಿಣಾದಿಯಾಗಲಿ, ಅದರ ಪ್ರತಿಯೊಬ್ಬ ಸಾಧಕರೂ, ವಾಗ್ಗೇಯಕಾರರೂ, ದಾಸಶ್ರೇಷ್ಠರೂ ಮನುಷ್ಯರನ್ನು ಉತ್ತಮ ಮಾನವರನ್ನಾಗಿ ಬದುಕಲು ಪ್ರೇರೆಪಿಸಿದ್ದು ಮಾತ್ರವಲ್ಲದೆ ಕಡೆಗೆ ಮನುಷ್ಯನು ಹೊಂದಬೇಕಾದ ಯಾವ ಉತ್ತುಂಗ ಪದವಿ ಇದಯೋ ಅದನ್ನು ಪಡೆಯಲು ಬೇಕಾದುದು ರುಜುವಾದ ಸದ್ಧರ್ಮಾನುಷ್ಠಾನವದೊಂದೇ ಎಂದು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟು ಮೇರು ಸಮಾನರಾದ ಚೇತನರಾದರು. ಅಂಥವರಲ್ಲಿ ಪುರಂದರದಾಸರು, ತ್ಯಾಗರಾಜರು, ಬಸವೇಶ್ವರರು, ಕನಕದಾಸರು ಇವರನ್ನು ಮಾತ್ರ ಸೂಕ್ಷ್ಮಾತಿಸೂಕ್ಷ್ಮವಾಗಿ ಉದಾಹರಿಸಿ ತೃಪ್ತಿಪಡುವಷ್ಟಕ್ಕೆ ಈ ಲೇಖನ ಸೀಮಿತವಾದರೂ ಮಿಕ್ಕುಳಿದ ವಾಗ್ಗೇಯಕಾರರ, ದಾಸಪುಂಗವರ ಕೊಡುಗೆಯನ್ನು ಬಣ್ಣಿಸಿ ಸಂಗೀತದಲ್ಲಿ ಧರ್ಮ ಎಷ್ಟರಮಟ್ಟಿಗೆ ಜಾತಪ್ರೋತವಾಗಿ ನೆಲೆಯೂರಿದೆ ಎಂದು ವಿವರಿಸಲು ಉದ್ಯುಕ್ತನಾದರೆ ಹೆಳವನು ಗಿರಿಕಂದರಗಳನ್ನೇರಹೊರಟಂತೆ ಸಾರ್ಥಕವಾಗಲಾರದು ಎಂಬ ಭೀರುತ್ವದಿಂದ ಆ ಸಾಹಸಕ್ಕೆ ಮೊದಲು ಮಾಡದೆ ಅವರೆಲ್ಲರಿಗೂ ನಮೋಃನಮಃ ಎಂದು ತಲೆಬಾಗುವುದು ಸಧ್ಯಕ್ಕೆ ಸೂಕ್ತದಾಯಕವೆಂದು ತೃಪ್ತನಾಗುವೆ.

-ಶ್ರೀ ಪಾರ್ಥಸಾರಥಿ ಶರ್ಮ ಉಂಡೆಮನೆ

Photo Credit: pragyata
Author image
About the Author
ಹೆಸರು:ಪಾರ್ಥಸಾರಥಿ ಶರ್ಮ ಉಂಡೆಮನೆ.
▪ಶ್ರೀ ಪಾರ್ಥಸಾರಥಿ ಶರ್ಮ ಇವರು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ವಾಸವಾಗಿದ್ದು, ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಲ್ಲಿ ಡಿಪ್ಲಮೊ ಮಾಡಿರುವ ಇವರು ಒಬ್ಬ ಬಹುಮುಖ ಪ್ರತಿಭೆ. ವೃತ್ತಿಯ ಜೊತೆಜೊತೆಗೆ ಹವ್ಯಾಸಿ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದು ಈ ಕ್ಷೇತ್ರವನ್ನು ಪ್ರವೃತ್ತಿಯನ್ನಾಗಿ ರೂಢಿಸಿಕೊಂಡಿದ್ದಾರೆ. ಇವರ ತಂದೆಯವರಾದ ವಿದ್ವಾನ್ ನಾರಾಯಣ ಶರ್ಮ ಉಂಡೆಮನೆ ಇವರು ಹಿರಿಯ ಸಂಗೀತಗಾರ ಹಾಗೂ ವಯಲಿನ್ ವಾದಕರಾಗಿದ್ದು ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದವರು. ಶರ್ಮರು ಪ್ರಸ್ತುತ ತನ್ನ ತಂದೆಯವರನ್ನೇ ಗುರುವಾಗಿಸಿಕೊಂಡು ಸಂಗೀತ ಹಾಗೂ ವಯಲಿನ್ ಅಭ್ಯಾಸವನ್ನು ಮಾಡುತ್ತಿದ್ದಾರೆ.ಬಾಲ್ಯದಿಂದಲೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಇವರು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿಯೂ ಕಾರ್ಯಕ್ರಮಗಳನ್ನು ನೀಡಿ ತಮ್ಮ ಪ್ರತಿಭೆಯ ಹೊನಲನ್ನು ಹೊರಸೂಸಿದ್ದಾರೆ. ಇದೀಗ ನಮ್ಮ ಜಾಲತಾಣದಲ್ಲಿ ಅವರ ಸಾಹಿತ್ಯ ಬರಹಗಳನ್ನು ಓದಬಹುದು.

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.