ಈರೇಳು ಲೋಕದ ಭವ್ಯ ಜಗತ್ತಿನ
ಸುಮಧುರ ಕನಸಿನರಮನೆಗಿಂತ
ದುಪ್ಪಟ್ಟು ಹೆಚ್ಚು ತಾಯಿಯ ಲಲನೆ
ಮಡಿಲ ಮಮತೆಯ ತುಡಿತ
ಬದುಕಿಗೊಂದು ಮುನ್ನುಡಿಯಾಗಿ
ನುಡಿಯಿತ್ತು ನಡೆಸುವ ತಾಯಿ
ಒಂಭತ್ತು ಮಾಸದಲವಳು ಮಾಸದೇ
ಆಸರೆಯ ನೀಡುವವಳು ತಾಯಿ
ನೂರೆಂಟು ಬಯಕೆಗಳ ಮಡಚಿ
ಎದೆಯೊಳಗೆ ಇರಿಸಿಕೊಂಡು
ತನ್ನ ಕೂಸುಗಳ ಕನಸನ್ನು ಕಣ್ಣಿಟ್ಟು
ಕಾಯುತ್ತಾ ಬಯಕೆಗಳ ಹೊರುವಳು
ಮನೆಯೊಳಗೆ ಕತ್ತಲಾವರಿಸಿದ್ದರೂ
ಮನದ ಬೆಳಕನು ಚೆಲ್ಲಿ ಚೆಲುವಲಿ
ಖಾಲಿ ಜೋಳಿಗೆಯೋ ಸಿಹಿ ಹೋಳಿಗೆಯೋ
ತನ್ನವರ ಆಲೈಸುವವಳು ತಾಯಿ
ಕೈತುತ್ತು ಅಕ್ಷಯಪಾತ್ರೆಯಾಗುವುದು
ಒಡಲ ಕುಡಿಗಳ ಪ್ರೇಮದೆದುರು
ತನ್ನುದರ ಬರಿದಾದ ಮಡಕೆಯಾದರೂ
ನೀರ ತುಂಬಿ ಚೆಂದವಾಗಿಸುವ ತಾಯಿ
ಕಣ್ಣೀರು ಬಂದರೆ ಅಳುವ ಅಳಿಸುವಳು
ಹೆಣ್ಣು ಹೃದಯವದು ಚೈತನ್ಯ ರೂಪವು
ದುಃಖ ತನಗೊದಗಿದರೂ ನಗುನಗುತಲೇ
ಬಾಳುವಳು ಎದುರೆದುರು ಮೌನಗೊಂಡು
ತಾಯಿ ಎಂದರೆ ಮಮತೆ ಪ್ರೀತಿ ವಾತ್ಸಲ್ಯ
ನಗಿಸು ಆಕೆಯ ಮೊಗವ ಹೃದಯದಿಂದ
ಹೆಗಲಾಗು ಕೊನೆಯಲ್ಲಿ ಮಗುವಂತೆ ಕಾಣು
ತೀರದೆಂದಿಗೂ ಋಣದ ಭಾವನೆಯ ಬಂಧ.
-ಶ್ರೀಸುತ
Photo Credit: flicker
ಹೆತ್ತವ್ವ ಹಾಗು ಹೊತ್ತವ್ವಗೆ ನಮನ...
ReplyDeleteನಮನಕ್ಕೊಂದು ನಮನ...
Deleteಹೆತ್ತವ್ವ ಹಾಗು ಹೊತ್ತವ್ವಗೆ ನಮನ...
ReplyDelete