ವಿದಾಯ


ಕೊನೆಯದಾಗಿ ಮುದ್ದಿಸಲೇ
ಓ ನನ್ನ ಪ್ರೇಯಸಿಯೇ
ಬಿಡುಗಡೆಯ ನೋವಿದನು
ತಾಳಲಾರೆ

ಮುಂಜಾನೆ ನಾ ಬರಲು
ನಸುನಗೆಯ ಲಜ್ಜೆಯಲಿ
ಪ್ರೇಮದಾರತಿ ಬೆಳಗಿದವಳು
ನೀನಲ್ಲವೇ

ಹಗಲಿನಲಿ ಜೊತೆಯಾದೆ
ನೀ ನನ್ನ ಪಯಣಕ್ಕೆ
ಬಿಟ್ಟು ತೆರಳಲಾರದೆ
ತೊಳಲುತಿರುವೆ

ನನ್ನ ಮನಸನೇ ನೀ
ಸೂರೆಗೊಂಡೆ
ನನ್ನ ಕನಸಿನಲೇ ನೀ
ಸೆರೆಯಾಗಿ ನಿಂತೇ

ನಿನ್ನ ನುಣ್ಗದಪಿನಲಿ
ನಾನಿಟ್ಟ ಹೂ ಮುತ್ತು
ಈಗಲೂ ಮಿರುಗುತಿದೆ
ರತ್ನದಂತೆ

ಇರುಳ ಸೆರಗದು
ಕೈ ಚಾಚಿ ಕರೆಯುತಿದೆ
ಸೃಷ್ಟಿ ಲೀಲೆಗೆ ನಾ
ಶರಣಾಗಲೇ

ನಿಶೆಯ ಸೆರಗನು ಸರಿಸಿ
ಉಷೆಯ ಕಿಟಿಕಿಯ ತೆರೆದು
ನಾಳೆಯಾ ನಸುಕಲೇ
ನಾ ಓಡಿ ಬರುವೆ

ಉಸಿರಲಿ ಉಸಿರಿಟ್ಟು
ಕಾದಿರುವೆ ನಾನೆಂದು
ನೀನುಸುರಿದ ಮಾತುಗಳ
ಮರೆಯಲಾರೆ

ಯಾವುದೋ ಆತಂಕ
ಕಾಡುತಿದೆ ಪ್ರಿಯ ಗೆಳತಿ
ನಾಳೆಯ ದಿನ ನಮಗೆ
ದೊರಕಬಹುದೇ

ಹೊಂಗಡಲ ಅಲೆಗಳನು
ಎಣಿಸುತಲಿ ನೀನಿರಲು
ನಾಳೆಯೇ ನಿನ್ನ
ಬಳಿಗೋಡಿ ಬರುವೆ

ನಿಯತಿಯನು ಮೀರಲು
ಸಾಧ್ಯವೇ ನಮಗೆಂದೂ
ವಿಧಿಯಾಟವದನು
ದಾಟಲಾರೆ

ನಿನ್ನ ಮುದ್ದು ಮೊಗ ಕಾಣ-
ಬಯಸುತ ನಾಳೆ
ಬೇಗನೆ ಓಡೋಡಿ
ನಾ ಬಂದರೂ
ನೀನಲ್ಲಿ ಇರಲಾರೆ
ಎಂಬ ಸತ್ಯವನಿಂದು
ಉಸುರಲಾರದೆ ಕಂಬನಿಯ
ಸುರಿಸುವೆನು ನಾನು

ಹೋಗಿ ಬರಲೇ ನಲ್ಲೆ
ಕಾದಿರು ನೀನಿಲ್ಲೇ
ನಿನಗಿದೋ ನನ್ನ
ಶುಭ ವಿದಾಯ....

-ಪ್ರಸನ್ನಾ ವಿ ಚೆಕ್ಕೆಮನೆ

 Photo Credit: fortwhyte

Author image
About the Author
ಹೆಸರು:ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ.
▪ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಇವರು ಕೇರಳದ ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದಲ್ಲಿ ವಾಸವಾಗಿದ್ದು ಕನ್ನಡ, ಮಲಯಾಳಮ್, ಹವಿಗನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರು. ಗೃಹಿಣಿಯಾಗಿ ಮನೆಯಂಗಳವನ್ನು, ಬರಹಗಾರ್ತಿಯಾಗಿ ಮನದಂಗಳವನ್ನು ಬೆಳಗಿಸಿದ ಇವರು ತಮ್ಮದೇ ಶೈಲಿಯ ಬರವಣಿಗೆಯಲ್ಲಿ ಸಾಗುತ್ತಿದ್ದಾರೆ. 2014ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಇದರ ಸಹಕಾರದೊಂದಿಗೆ "ಇನಿದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಅಲ್ಲದೇ ಇವರು ಬರೆದ "ನನ್ನ ಕೃಷಿ" ಎಂಬ ಕವನವು ಕೇರಳ ಸರಕಾರದ ಎರಡನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ಆಯ್ಕೆಯಾಗಿರುವುದು ಇವರ ಸಾಹಿತ್ಯ ಜಾತ್ರೆಗೊಂದು ಮೆರುಗು. 2010ರಲ್ಲಿ ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, 2012ರಲ್ಲಿ ಒಪ್ಪಣ್ಣ.ಕಾಮ್ ನ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಚುಟುಕು ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ 2014ರಲ್ಲಿ ತೃತೀಯ ಹಾಗೂ 2015ರಲ್ಲಿ ಪ್ರಥಮ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಇವರ ಹಲವಾರು ಲೇಖನಗಳು, ಕಥೆ-ಕವಿತೆಗಳು ಉದಯವಾಣಿ, ಹೊಸದಿಗಂತ, ವಿಜಯ ಕರ್ನಾಟಕ, ಮಂಜುವಾಣಿ, ಕನ್ನಡ ಕೈರಳಿ, ಬಾಲಮಂಗಳ, ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕಥೆ-ಲೇಖನ ಹಾಗೂ ಕವಿತೆಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.

Please share and support me

4 comments:

  1. Preethi Prasad5/31/17, 1:34 PM

    Very nice, vidaaya nu ishtu sogasaagi helidira, well done mam

    ReplyDelete
  2. ಸೊಗಸಾದ ಕವನ.

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.