ಕೊನೆ ಎಂದು


           ಮನುಷ್ಯಕೋಟಿ ಇಂದು ಪ್ರಪಂಚದೆಲ್ಲೆಡೆ ಕಿತ್ತು ಕಿತ್ತಾಡಿ ಕತ್ತು ಹಿಸುಕಿಯಾದರೂ ಸರಿ ನಾನು, ನನ್ನದು, ನನ್ನದು ಮೇಲಿರಬೇಕೆಂಬ ತುಡಿತದಲ್ಲಿ ಪ್ರಕೃತಿಯ ನಿಯಮವನ್ನೇ ಉಲ್ಲಂಘಿಸುತ್ತಾ ಧಾಪುಗಾಲಿಡುತ್ತಿದೆ. ಎಲ್ಲಿ ನೋಡಿದರೂ ಹಿಂಸೆ. ಬಾಯಿಯಲ್ಲಿ ಏನು ಹೇಳುತ್ತೇವೆಯೋ ತಲೆಯೊಳಗೆ ಅದರ ಕುರಿತು ಎಳ್ಳಿನಷ್ಟೂ ಜ್ಞಾನವಿಲ್ಲದ ಪರಿಸ್ಥಿತಿ. ಕೇವಲ ನಮ್ಮ ಧರ್ಮವೊಂದಷ್ಟೇ ಶ್ರೇಷ್ಠ ನಾವು ಮಾತ್ರ ಸರಿ ಎನ್ನುವ ಹಾಗೆ ಪ್ರತಿಯೊಂದು ಧರ್ಮದ ಜನರೂ ಬೊಬ್ಬಿಡುತ್ತಾರೆ. ಮಹಾಭಾರತದಲ್ಲಿ ಹೇಳಲಾಗಿರುವ ಉಕ್ತಿಯನ್ನೇ ಬೈಬಲ್ಲಿನಲ್ಲಿ ಬೇರೆ ತೆರನಾಗಿ ಕಾಣಬಹುದು. ಅದನ್ನೇ ಕುರಾನ್ ನಲ್ಲಿ ಇನ್ನೊಂದು ವಿಧದಲ್ಲಿ ಕಾಣಬಹುದು. ದೇವನೊಬ್ಬ ನಾಮ ಹಲವು ಎನ್ನುವ ರೀತಿ ಎಲ್ಲದರ ಸಾರ ಒಂದೇ ಆಗಿದ್ದು ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಇಂದು ಈ ರೀತಿಯ ಅಸಹಾಯಕ ಪರಿಸ್ಥಿತಿಯಲ್ಲಿ ಸಮಾಜ ನರಳುತ್ತಿದೆ. ಎಲ್ಲಿಂದ ಬಂತು ಈ ಜಾತಿ ಧರ್ಮ? ಭೂಮಂಡಲ ರಚನೆಯಾಗುವ ಸಂದರ್ಭದಲ್ಲಿ ಯಾವ ಜೀವಿಗೂ ಜಾತಿಯೆಂಬುದು ಇರಲಿಲ್ಲ ತಾನೆ? ಆ ಸಂದರ್ಭದಲ್ಲಿ ಎಲ್ಲಾ ಜೀವಿಗಳು ಸಮಾನವಾಗಿದ್ದವು. ಒಂದು ಹಂತದವರೆಗೆ ಇಲ್ಲದೇ ಇದ್ದ ಈ ಮತಪಂಥಗಳ ಹುಟ್ಟು ಆದದ್ದು ಮಾನವನಿಂದಲೇ ಹೊರತು ದೇವರ ಸೃಷ್ಟಿ ಅಲ್ಲವೇ ಅಲ್ಲ. ಹಾಗಾಗಿ ಮಾನವನೇ ಈ ಧರ್ಮದ ಹುಟ್ಟಿಗೆ ಕಾರಣ. ಹಾಗೆಯೇ ಈಗ ನಡೆಯುತ್ತಿರುವ ಎಲ್ಲಾ ವೈಮನಸ್ಸುಗಳಿಗೂ ಮಾನವನೇ ಕಾರಣ. ಯಾಕೆ ಹೀಗಾಗುತ್ತಿದೆ? ಮನುಷ್ಯನಿಗೆ ತನ್ನ ಮನೆಯೊಳಗಿನ ಹೆಂಚು ತೂತಾಗಿದ್ದರೂ ಚಿಂತಿಲ್ಲ ಪಕ್ಕದವನ ಮನೆಯ ಬಾಗಿಲು ಚಿಕ್ಕದು ಎಂಬುದೇ ದೊಡ್ಡ ವಿಷಯ....
             ಇಂದು ಈ ಸಮಾಜದಲ್ಲಿ ನಡೆಯುತ್ತಿರುವ ಗಲಭೆಗಳನ್ನು ಕಾಣುವಾಗ ಮನಸ್ಸು ನೋಯುತ್ತದೆ. ಯಾರೋ ಮಾಡಿದ ತಪ್ಪಿಗೆ ಹಲವಾರು ಅಮಾಯಕರು ಬಲಿಯಾಗುತ್ತಿದ್ದಾರಲ್ಲಾ ಎಂಬುದೇ ಶೋಚನೀಯ. ನಾನೂ ಯಾವುದೇ ಸಂಘಟನೆಗಳನ್ನು ಬೆರಳು ಮಾಡಿ ತೋರಿಸುತ್ತಿಲ್ಲ. ಯಾಕೆಂದರೆ ಸಂಘಟನೆ ಯಾವ ತಪ್ಪನ್ನು ಮಾಡದು. ಮಾಡುವುದೆಲ್ಲಾ ಅದರ ಕಂಬಗಳಂತಿರುವ ನಾವುಗಳು. ಒಂದು ಸಮುದಾಯದ ಪೈಕಿ ಯಾವನೋ ಒಬ್ಬ ನೀಚ ಕೆಲಸ ಮಾಡಿದನೆಂದಾದರೆ ಅದರ ವಿರುದ್ಧವಾಗಿ ವಿರೋಧ ಸಮುದಾಯವಿಡೀ ಹಿಂದೆ ಮುಂದೆ ನೋಡದೆ ಆ ಸಮುದಾಯವನ್ನು ದೂಷಿಸುವುದು. ಕಚ್ಚಾಡುವುದು. ತೀರಾ ವಿಕೋಪಕ್ಕೆ ತಿರುಗಿದರೆ ಪ್ರಾಣಹಾನಿ. ಮತ್ತೆ ಅದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಪ್ರವೃತ್ತಿ. ಇದಕ್ಕೆ ಮಾಧ್ಯಮ ವರ್ಗದವರಿಂದ ಅಷ್ಟೋ ಇಷ್ಟೋ ಒಗ್ಗರಣೆ. ಕೊನೆಗೂ ಅಮಾಯಕರ ಜೀವ ಹಿಂಡಿಯೇ ಆ ಗಲಭೆಗೆ ಅಂತ್ಯ. ಆಯಿತಲ್ಲಾ ಇನ್ನು ಇದರ ಬಗೆಗೆ ಸಮರ್ಥನೆಗಳು. ಯಾವನೋ ಒಂದು ಧರ್ಮದ ವ್ಯಕ್ತಿ ಏನೋ ಮಾತನಾಡಿದ ಎಂದು ಇನ್ನೊಂದು ಧರ್ಮದ ವ್ಯಕ್ತಿಯಿಂದ ಅದಕ್ಕಿಂತಲೂ ನೀಚ ಶಬ್ಧಗಳ ಪ್ರಯೋಗ. ತಾಯಿಯನ್ನು ಅತ್ಯಂತ ಕೆಟ್ಟ ಮಾತುಗಳಿಂದ ಉಪಯೋಗಿಸಿದ ಕೆಲವು ಸಂಘಟನೆಗಳ ಹಿಂಬಾಲಕರೂ ಇದ್ದಾರೆ. ಇದನ್ನು ನಾನು ಸ್ವತಃ ಓದಿಯೇ ಬರೆಯುತ್ತಿರುವ ಕಾರಣ ನನಗೆ ಹೇಳಲು ಏನೂ ಹಿಂಜರಿಕೆಯಿಲ್ಲ. ಹಾಗೆಂದು ಕೇವಲ ಸಂಘಟನೆಗಳನ್ನು ದೂಷಿಸಿ ಪ್ರಯೋಜನವಿಲ್ಲ. ಬಲೂನಿಗೆ ಗಾಳಿ ತುಂಬುವ ಮೊದಲು ನಿರ್ಜೀವವಾಗಿದ್ದು ಗಾಳಿ ತುಂಬಿದ ನಂತರ ಹೇಗೆ ಎತ್ತರಕ್ಕೇರುತ್ತದೋ ಹಾಗೆ ಮನುಷ್ಯರೆಂದೆನಿಸಿಕೊಂಡ ನಾವುಗಳು ನಡೆಯುವ ದಾರಿಯಲ್ಲಿ ಸಂಘಟನೆಯ ಹೆಜ್ಜೆ ಇರುತ್ತದೆ. ನಾವು ಒಗ್ಗಟ್ಟನ್ನು ಒಡೆಯುವ ಯೋಚನೆ ಮಾಡಿದರೆ ಎಲ್ಲರೊಳಗೂ ಇದೇ ರೀತಿಯ ಭಾವನೆ ಉಂಟಾಗುತ್ತದೆ.  ನೂಕ್ಲಿಯಾರ್ ಬಂಧಗಳಂತೆ ಪ್ರತಿಯೊಂದು ಘಟನೆ ನಡೆದಾಗಲೂ ಅದು ಇನ್ನೊಂದು ದ್ವೇಷಕ್ಕೆ ಅಂಟಿಕೊಳ್ಳುತ್ತದೆ. ಹೀಗೆ ಮುಂದುವರಿಯುತ್ತಾ ಹೋದರೆ ಇದರ ಕೊನೆಯೆಂದು? ಇನ್ನೂ ಪ್ರತ್ಯೆಕವಾಗಿ ಎಲ್ಲಾ ಕೋಮು ಘಟನೆಗಳನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆಯಿಲ್ಲ.
           ಗಾಳಿ ಬೀಸಿದಷ್ಟೂ ಭೆಂಕಿ ಧಗಧಗಿಸುವಂತೆ ಪ್ರಚೋದನಾಕಾರರು ಪ್ರಚೋದಿಸಿದಷ್ಟೂ ಕೋಮುಪ್ರವಾಹ ಹೆಚ್ಚಾಗುತ್ತದೆ. ಹಾಗಾದರೆ ಇದಕ್ಕೆ ಕೊನೆಯೆಂದು? ಕಚ್ಚಾಟಗಳಿಗೆ ಶಾಶ್ವತವಾದ ಮುಕ್ತಿಯೆಂದು? ನನ್ನ ಪ್ರಕಾರ ಇದಕ್ಕೆ ಮುಕ್ತಿಯಿಲ್ಲವೆಂದು ಅನಿಸುತ್ತದೆ. ಈ ಗಲಭೆ-ಕಚ್ಚಾಟಗಳ ಜಾತಕದಲ್ಲಿ ಮರಣವೇ ಬಾರದಂತೆ ಗೀಚಿ ಎಸೆಯಲಾಗಿದೆ... ಒಂದುವೇಳೆ ಈ ಪ್ರಪಂಚದಲ್ಲಿ ಎಲ್ಲವೂ ಶಾಂತವಾಗಬೇಕೆಂದರೆ ಇಡೀ ಧರಣಿಯೇ ಪ್ರಳಯವಾಗಿ ಮತ್ತೊಮ್ಮೆ ಹೊಸ ಸೃಷ್ಟಿ ಆಗಬೇಕು. ಆಗ ನಾವುಗಳಿರದಿದ್ದರೂ ಇಂತಹ ದ್ವೇಷಯುಕ್ತ ಗಲಭೆಗಳು ಇರದೇ ಹೋಗಲಿ....
ಸಮಾನತೆ ಎನ್ನುವುದು ಸ್ಥಾಪನೆಯಾಗಲಿ. ಒಗ್ಗಟ್ಟಿನಿಂದ ಬಾಳುವಂತಾಗಲಿ ಎಂಬುದೊಂದೇ ನನ್ನ ಆಶಯ....
ಈ ಲೇಖನ ಯಾರ ಪರ-ವಿರೋಧವೂ ಅಲ್ಲ. ವಾಸ್ತವ.

-ಶ್ರೀಸುತ
Photo Credit: DeviantArt


Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.