ಅಮ್ಮ ನಿನ್ನ ಮಡಿಲಲ್ಲಿ


            ಅಮ್ಮಾ ... ನಿನ್ನ ಮಡಿಲಲ್ಲಿ ಮತ್ತೆ ಮಗುವಾಗಿ ಮಲಗುವ ಆಸೆ... ಮತ್ತೆ, ನಿನ್ನ ಕೈಯಿಂದ ಚೆಂದದ ಚಂದಮಾಮನಿಗೆ ಮೋಸ ಮಾಡಿ ಕೈತುತ್ತು ತಿನ್ನುವ ಆಸೆ... ಮತ್ತೆ, ನಿನ್ನ ತೋಳಿನಲ್ಲಿ
ತುಂಟ ಕಂದಮ್ಮನಾಗಿ ಕುಣಿಯುವ ಆಸೆ... ಹೀಗೆ ಹತ್ತು ಹಲವಾರು ಆಸೆ ನನ್ನ ಕಾಡುತ್ತಾ ಇದೆ ಅಮ್ಮ ... ಅಮ್ಮ ನಾನು ಬಿದ್ದಾಗ ಅಮ್ಮ, ಎದ್ದಾಗ ಅಮ್ಮ, ನಕ್ಕಾಗ ಅಮ್ಮ, ಅತ್ತಾಗ ಅಮ್ಮ, ಗೆದ್ದಾಗ ಅಮ್ಮ, ಸೋತಾಗ ಅಮ್ಮ, ಇಷ್ಟೇ ಏಕೆ ...? ನನ್ನ ಜೀವನದ ಪ್ರತಿಯೊಂದು ಹನಿ ರಕ್ತ, ಉಸಿರ ಕಣ ಕಣವು ಅಮ್ಮ ಅಮ್ಮ ಅಮ್ಮ ....
ಹೀಗಿರುವಾಗ ನನ್ನ ನಿನ್ನ ಕರುಳ ಸಂಬಂಧದ , ಜನುಮಜನುಮಾಂತರದ ಪ್ರೀತಿಯ ಅನುಬಂಧವನ್ನು 'ಮದುವೆ' ಎಂಬ ಮೂರಕ್ಷರದ ಗಂಟು ಏಕೆ ನಮ್ಮನ್ನು ಬೇರ್ಪಡಿಸುತ್ತದೆ ...?! ಹೇಳಮ್ಮ...?
          ಅಮ್ಮ ನೀನು ಅಂದು ಒಂದು ಮೂಲೆಯಲ್ಲಿ ಕುಳಿತು, ಛೇ! ನನ್ನ ಮಾತು ನನ್ನ ಗಂಡ ಕೇಳುತ್ತಿಲ್ಲ, ನನ್ನ ಒಳ್ಳೆಯ ಉದ್ದೇಶವನ್ನು ನನ್ನ ಗಂಡ ಕೇಳುತ್ತಿಲ್ಲ ಎಂದು ಕಣ್ಣೀರಿಡುತ್ತಾ ಸೀರೆಯ ಸೆರಗಿನಿಂದ ಕಣ್ಣೀರು ಒರೆಸುತ್ತಾ ಕುಳಿತಾಗ ನನಗೆ ನಿನ್ನ ಬೈದುಬಿಡಬೇಕೆಂದು ಅನ್ನಿಸುತ್ತಿತ್ತು. ಆದರೆ ಆಮೇಲೆ ತಿಳಿಯುತ್ತಿತ್ತು ಅದು ಸಾಧ್ಯವಿಲ್ಲದ ಮಾತೆಂದು.
         ಅಮ್ಮ, ನಿನ್ನ ಅತ್ತೆ (ಅಂದರೆ ನನ್ನ ಅಜ್ಜಿ) ನೀನು ಮಾಡಿದ ಕೆಲಸ ಸರಿ ಆಗುವುದಿಲ್ಲ, ಸಾರಿಗೆ ಉಪ್ಪು ಜಾಸ್ತಿ, ನಾಯಿ ಬೆಕ್ಕು ಕಂಡರೆ ಆಗುವುದಿಲ್ಲ ..ನಿನಗೆ ಇನ್ನೇನು ಹೇಳುವುದು ಒಟ್ಟಿನಲ್ಲಿ ನೀನೆ ಸರಿ ಇಲ್ಲ ... ಎಂದೆಲ್ಲಾ ಬೈಯುವಾಗ ನೀನು ಸುಮ್ಮನೆ ಇರುತ್ತಿದ್ದೆಯಷ್ಟೇ ಹೊರತು, ಏನೂ ಉತ್ತರವಾಗಲಿ ಎದುರುತ್ತರವಾಗಲಿ ಕೊಡಲು ಹೋಗುತ್ತಿರಲಿಲ್ಲ ಬದಲಾಗಿ ಅಳುತ್ತಾ ಸುಮ್ಮನಿರುತ್ತಿದ್ದೆ ಅಷ್ಟೇ. ಅಮ್ಮ..ಆಗೆಲ್ಲಾ ನನಗನ್ನಿಸಿಬಿಡುತ್ತಿತ್ತು, ಛೇ! ಎಂತ ಅಮ್ಮ?  ಅಜ್ಜಿ ಸುಮ್ಮನೆ ಸುಮ್ಮನೇ ಅಷ್ಟೊಂದು ಬೈದು ರಂಪಾಟ ಮಾಡಬೇಕಾದರೆ ಈ ಅಮ್ಮನಿಗೆ ಒಂದು ಉತ್ತರ ಕೊಡಲಾಗದೆ ಸುಮ್ಮನಿದ್ದಾಳಲ್ಲ?  ನಾನಗಿದ್ದರೇ...? ಎಂದು ಮುಂಗೋಪವನ್ನು ನನ್ನಲ್ಲೇ ನುಂಗಿಕೊಂಡು ಸುಮ್ಮನಿರುತ್ತಿದ್ದೆ.

          ಅಮ್ಮ, ನಾನೀಗ ನಿನ್ನಕ್ಕಿಂತ ದೇಹದಲ್ಲಿ ಎತ್ತರ ಬೆಳೆದೆ, ನಿನ್ನಷ್ಟು ಅಲ್ಲದಿದ್ದರೂ, ಸ್ವಲ್ಪ ಬುದ್ಧಿಯನ್ನು ಬೆಳೆದುಕೊಂಡೆ. ಅಮ್ಮ ನನಗೆ ಈಗ ಅರಿವಾಗುತ್ತಿದೆ 'ಹೆಣ್ಣು ಅಂದರೆ ಇಷ್ಟೇ ಗಂಡ ಹೇಳಿದಂತೆ, ಅತ್ತೆ ಹೇಳಿದಂತೆ ಇರಬೇಕು' ಎಂದು ನೀನು ಹೇಳಿದ ಮಾತು ಸತ್ಯವೆಂದು. ಆದರೆ ... ಅಮ್ಮ ನನಗನ್ನಿಸುತ್ತಿದೆ, ನಿನಗೆ ಹಿಂಸೆ ಕೊಟ್ಟ ಆ ಅತ್ತೆಯು ಒಂದು ಹೆಣ್ಣು, ಒಬ್ಬ ಅಮ್ಮ, ನಿನ್ನಂತೆಯೇ ಒಬ್ಬ ಅತ್ತೆಯ ಸೊಸೆ ಎಂಬುದನ್ನು ಏಕೆ ಅರ್ಥೈಸಿಕೊಳ್ಳುತ್ತಿಲ್ಲಾ...?
 
         ಅಮ್ಮ ನನಗೇನಾದರು ಆದರೆ ನಿನ್ನಲ್ಲಿ, ನಿನಗೇನಾದರು ಆದರೆ ನನ್ನಲ್ಲಿ, ಇಬ್ಬರೂ ಸುಖ-ದುಃಖ ಹಂಚಿಕೊಳ್ಳುತ್ತಿದ್ದೆವು, ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಸ್ನೇಹಿತೆಯರಾಗಿದ್ದೆವು ... ಅಮ್ಮ ಇನ್ನು ಮುಂದೆ ಇದೆಲ್ಲಾ ಬಹುಶಃ ಸಾಧ್ಯ ...???!!!
         ಯಾಕಮ್ಮ ಹುಡುಗಿಯರ ಹಣೇಬರಹ ಇಷ್ಟೆಯಾ..? ನಾನು ನಿನ್ನ ಬಿಟ್ಟು ಹೋಗಲೇ ಬೇಕೆನಮ್ಮಾ? ಬಹುಶಃ ಈ ತಳಮಳವನ್ನು ನೀನು ಮದುವೆಯಾಗಬೇಕಾದ ಸಂದರ್ಭದಲ್ಲಿಯೂ ಅನುಭವಿಸಿರುತ್ತೀಯಾ ಅಲ್ಲವೇನಮ್ಮ..?
         ಹಾಗೆಯೇ, ಎಲ್ಲಾ ವಿಷಯವನ್ನು ಗಂಡಸರು ಅವರ ಮೂಗಿನ ನೇರಕ್ಕೆ ನೋಡುವಾಗ ನಮ್ಮ ಭಾವನೆಗಳಿಗೆ ಬೆಲೆ ಎಲ್ಲಿದೆ ಅಮ್ಮ...?
         ಅಮ್ಮ ನೀನು ನನಗೆ ಹೇಳುತ್ತಿದ್ದೆ ಅಲ್ಲವಾ..? ಗಂಡನ ಮನೆಯಲ್ಲಿ ಏನೇ ಆದರೂ ಯಾರಲ್ಲಿಯೂ, ಹೇಳದೆ ಸುಖವೋ, ದುಃಖವೋ, ನಿನ್ನ ಪಾಡಿಗೆ ನೀನು ಇರಬೇಕೆಂದು , ಆದರೆ ಅಮ್ಮ ಎಲ್ಲಾ ವಿಷಯವನ್ನು ಚಾಚೂ ತಪ್ಪದೇ , ಎನೂ ಮುಚ್ಚು ಮರೆ ಇಲ್ಲದೇ ನಿನ್ನಲ್ಲಿ ಹೇಳುತ್ತಿದ್ದ ನಾನು ಇನ್ನು ಮುಂದೆ ಎಲ್ಲಾ ಮುಚ್ಚಿಡಬೇಕಲ್ಲ..?
         ಹೌದಮ್ಮ ಒಂದರ್ಥದಲ್ಲಿ ನೀನು ಹೇಳಿಕೊಟ್ಟ ಪಾಠವೇ ಸರಿ ... ನಾವು ಹೆಂಗಸರು ನಮಗೆ ಬೇಕಾದಂತೆ ಇರಲಾಗುವುದಿಲ್ಲ ಎಂಬುದು...
         ಅಮ್ಮ ಒಂದೇ ಒಂದು ಬಾರಿ ನಿನ್ನ ಗಟ್ಟಿ ಆಗಿ ತಬ್ಬಿ ಜೋರಾಗಿ 'ಅಮ್ಮಾ' ಎಂದು ಕಿರುಚಿ ಬಿಡೋಣ ಎಂದು ಅನಿಸುತ್ತಿದೆ, ಒಂದೇ ಒಂದು ಬಾರಿ ನಿನ್ನ ಮಡಿಲಲ್ಲಿ ಪುಟ್ಟ ಮಗುವಾಗಿ ಮಲಗಿ ಸುಖ ನಿದ್ರೆ ಮಾಡಬೇಕೆಂದು ಅನಿಸುತ್ತಿದೆ, ಅಮ್ಮ ದಯವಿಟ್ಟು ಜೋಗುಳ ಹಾಡುತ್ತೀಯಾ ಅಲ್ಲವಾ...???
 
ಇತಿ,
ನಿನ್ನ ಮುದ್ದಿನ ಮಗಳು,

-ಸಹನಾ.ಪಿ.ಎಸ್

Photo Credit: thestylesymphony


Author image
About the Author
ಹೆಸರು:ಸಹನಾ ಪಿ ಎಸ್.
▪ಕುಮಾರಿ ಸಹನಾ ಪಿ ಎಸ್ ಇವರು ಎಳೆಯ ವಯಸ್ಸಿನಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡವರು. ಲೇಖನ, ನುಡಿಮುತ್ತು ಮುಂತಾದ ಬರಹಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿಯಾದ ಇವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಾಂಗವನ್ನು ಮಾಡುತ್ತಿದ್ದಾರೆ. ಉತ್ತಮ ಕ್ರೀಡಾಪಟುವಾದ ಇವರು ಜಿಲ್ಲಾ, ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಪಂದ್ಯಾಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಶ್ರೀ ಗಣರಾಜ ಕುಂಬ್ಳೆ ಇವರ ಬಳಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆಯನ್ನು ಕಲಿತು ಹಲವಾರು ತಾಳಮದ್ದಳೆ ಕೂಟಗಳಲ್ಲಿ ಅರ್ಥ ಹೇಳಿ ಸೈ ಎನಿಸಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿ, ಪುತ್ತೂರಿನ ಪಾಂಚಜನ್ಯ ರೇಡಿಯೋ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ತನ್ನ ಪ್ರತಿಭೆಯನ್ನು ಹೊರಚೆಲ್ಲಿದ್ದು 2012 ರಲ್ಲಿ ಸುಳ್ಯದಲ್ಲಿ ನಡೆದ ತಾಲ್ಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿ "ಅತ್ಯುತ್ತಮ ಅಭಿನೇತ್ರಿ" ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಮ್ಮ ಜಾಲತಾಣದಲ್ಲಿ ಇವರ ಬರಹಗಳನ್ನು ಓದಬಹುದು

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.