ಕಣ್ಣಾಗಬಲ್ಲವಳು ಹೆಣ್ಣು


ಹೆಣ್ಣು ಎಲ್ಲದಕ್ಕೂ ಕಣ್ಣಾಗಬಲ್ಲವಳು
ತನ್ನ ಭಾವನೆಗಳನ್ನು ಬದಿಗೊತ್ತಿ ನಿಂತು
ತನ್ನವರ ಮನದಿಂಗಿತಕ್ಕೆ ತನುವಾಗಿ
ತಾರೆಯಂದದಿ ಮೆರೆವವಳು ಹೆಣ್ಣು...

ಜನನದಿಂ ಮೊದಲಾಗಿ ಜರೆಯಲ್ಪಟ್ಟು
ಜನಕೆ ಒಳಿತ ಬಯಸಿದರೂ ಒಳಿತಿಲ್ಲ
ಕುಳಿತಲ್ಲೇ ಕೂರುವ ಕಡೆಯುವ ಕಲ್ಲು...
ಬಾಲ್ಯದಲಿ ನೂರಾರು ಕಟ್ಟುಪಾಡುಗಳಿದ್ದು
ಸ್ಥಾನಮಾನದ ಕೊರಗು ಆಕೆಯನೂ ಬಿಡದು
ನೀ ಹೆಣ್ಣು ನೀ ಹೆಣ್ಣು ಮನೆಯೊಳಗಿನವಳು-
ಎನ್ನುತಿರೆ ಎಲ್ಲಿ ಹೋಯಿತು ಆ ಗಾದೆ?
ಹೆಣ್ಣು ಸಮಾಜದ ಕಣ್ಣು; ಹಣ್ಣಾದಮೇಲೆ ಮಣ್ಣು.

ವರ್ಷ ಏರುತಿರೆ ಏರುವುದು ಹೆತ್ತವರೊಡಲು
ಎಲ್ಲಿ ಆರುವುದೋ ಎಂಬ ಭೀತಿಯ ನೆರಳಲ್ಲಿ
ಸಾಗಿ ಹಾಕುವ ಚಿಂತೆಯೊಳಗೆ ಚಿತ್ತವಿಲ್ಲದೆ-
ಚಾಮರವಾಗುವಳು ಯಾರದೋ ಮನೆಗೆ...
ಸಂಸಾರ ಸಾಗರದ ಸುಳಿಯೊಳಗೆ ಸರಿಯುತ್ತ
ಸರಿ ತಪ್ಪುಗಳ ತಿದ್ದಿ ಪತಿಗೆ ಹೆಗಲೊತ್ತಿದರೂ
ನೋವು ಅವಳಿಗೇ ಸ್ವಂತ ಪ್ರತಿನಿತ್ಯ ಹೊಗೆಯಾರಿ
ಬೂದಿಯೊಳಗಿನ ಕೆಂಡ ಅವಳ ಮನಸು...

ಸಂತಾನದೊಳಗೆ ಮುದ್ದು ಮಕ್ಕಳ ಹೊಂದಿ
ತನ್ನೆಲ್ಲಾ ಕನಸುಗಳ ಅವರ ಮುಖದಲಿ ಕಂಡು
ದಿನನಿತ್ಯ ಪೂಜೆಕೈಂಕರ್ಯಗಳು ನೂರಾರು
ಕಡೆಗವಳು ಕರಿಬೆಕ್ಕು ಮನೆಯ ಹೊಸ್ತಿಲಿಗೆ...
ಮಗುವಾಗಿ ಮಗಳಾಗಿ ಕಡೆಗೆ ಮಕ್ಕಳ ತಾಯಿ
ಪತಿಗೆ ಸರಿ ಸತಿಯಿವಳು ಗೆಳತಿಯಾ ತೆರದಿ
ಎಷ್ಟು ಸವೆದರೂ ತನ್ನ ಜೊತೆಯವರ ಜೊತೆಯಾಗಿ
ಜೀವನದ ಅರ್ಥಕ್ಕೆ ನೆಲೆಕೊಡುವ ಒಡಲು.

ದೇಶವೂ ಹೆಣ್ಣು ಕರುನಾಡು ನಮ್ಮಯ ತಾಯಿ
ಕಾವೇರಿ ನೀರಿನೊಳೂ ಮಾತೃತ್ವದ ಛಾಯೆ
ಎಲ್ಲವನೂ ಪೊರೆವವಳ ಏಕೆ ಜರೆಯುವಿರೇಕೆ
ಜನನಿಯಿಲ್ಲದೆ ಇಲ್ಲ ಜನನ ಮನದೊಳಗಿರಲಿ
ಅವನಿಯಾಗಿಹಳಾಕೆ ಎಂದೂ ಮರೆಯದಿರಿ.

ಇರಲಿ ಗೌರವವು ಬದಿಯ ಗೆಳತಿಯರಲ್ಲಿ
ಪ್ರೀತಿಯಿಂದಲಿ ಸಲಹಿ ಅಕ್ಕತಂಗಿಯರ
ಸಾಂತ್ವನದ ನುಡಿಯಿರಲಿ ಹೆತ್ತಬ್ಬೆಗೊಂದಿಷ್ಟು
ಮನದಲ್ಲಿ ಒಲವಿರಲಿ ಮಡದಿ ಸಲಹುವಳು.
ಸ್ವಚ್ಛವಾಗಿರೆ ಹೃದಯ ಎಲ್ಲರೂ ನಿಮ್ಮವರು....

                                                 -ಶ್ರೀಸುತ

ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

ಚಿತ್ರ: ಶ್ರೀಮತಿ ಸಹನಾ ವಿರೂಪಾಕ್ಷ


ಯುಗಪುರುಷ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡ ಕವಿತೆ:



Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.