ಹೃದಯದೊಳಗಿಂದ ಅಂದು
ಚಿಮ್ಮುತಿತ್ತು ಚಿಟ್ಟೆಗಳ ಚೆಂಡು
ಹಾರಿ ಹೋಗಿ ಹರಡುತಿತ್ತು
ಹಕ್ಕಿಗಳ ಹಿಂಡು...
ಚಿಗುರಿ ನಿಲ್ಲುತಿತ್ತು ದಿಟನೆ
ಹೂವು ಪಚ್ಚೆ ಹಸಿರು
ಬೇರು ಆಳದಲ್ಲೂರಿತ್ತು
ಸಂ'ಬಂಧನ'ದ ಬದುಕು...
ಮರೀಚಿಕೆ ಅದು ಮರೀಚಿಕೆ!!!
ಈಗ ಚಿಮ್ಮುತಿದೆ ಕಂಡಿರಾ...?
ಹೃದಯದಿಂದ ಕ್ರೂರ
ಕ್ರಿಮಿಕೀಟಗಳು...
ಹಾರುತಿದೆ ಹೃದಯದಿಂದ
ಹಸಿದ ವಿಷ ಹೇಯಕೃತ್ಯಗಳು
ಚಿಗುರುತಿದೆ ಚಿಂತೆಯೆಂಬ
ಚಿತೆಯ ಲತೆಯು ಬದುಕಲಿ
ಬೇರು ಗಟ್ಟಿಯಿಲ್ಲ
ಸೂರಿಗೆ ಬಲವಿಲ್ಲ
ಹಾದಿಯೊಳು ಕಂಡ ಕಲ್ಲೊಂದು
ನಾಲ್ವರಿಗೆ ದೇವರಾಗಬಲ್ಲದು
ಉಳಿದವರಿಗಲ್ಲ!!! ಸ್ವಂತದ್ದು.
ಗುಡಿಯೊಳಗಿನ ಮೂರ್ತಿಯು
ಕಾಣತ್ತಾ ಕುಳಿತಿರುವುದು ಅಶಾಂತಿಯನ್ನು
ಬಂದು ಕೈಮುಗಿವ ಕುರುಡರನ್ನಲ್ಲ...
ನಸುನಗುತ್ತಾ ಕುಳಿತ ಮೂರ್ತಿಯು
ಕೇಳುತ್ತಿರುವುದು ಬಸಿರೊಡೆದ ಧ್ವನಿಯನ್ನು
ಗಂಟೆ ಜಾಗಟೆಗಳ ಸದ್ದನ್ನಲ್ಲ!!!
ಶುದ್ಧಭಾವವಿಲ್ಲದೇ ಭಜನೆಯೇಕೆ?
ದೇವನೊಲಿದನಂದು ಭಕ್ತಿಗೆ
ದೇವನಲಿದನಂದು ಭಕ್ತಿಗೆ
ಇಂದು ಅದಾವುದೂ ಇಲ್ಲ... ಒಳಗೆ
ಎಲ್ಲವೂ ಇದೆಯಲ್ಲಾ? ಹೊರಗೆ!!!
ದೇವನಗುತಿರುವ ಇದೆಲ್ಲವನು ಕಂಡು.
ದಿಗಂತದಂತವನ್ನು ಕಾಣಲು
ಸಾಗುತ್ತಿದೆ ಜೀವಸಂಕುಲ...
ಬಳಿಯಿರುವವರು ಯಾರೂ ನಮ್ಮವರಲ್ಲ.
ದಿಗಂತದಲ್ಲಿರುವ ನಮ್ಮವ...
ಅಪರಿಚಿತರ ಗುಂಪಿನೊಳಗಿನ ಬದುಕು
ಯಾರು ಯಾರಿಗೆ ಸಂಬಂಧದ ಬಂಧದೊಳು?
ಹೃದಯವೇ ಮಂದಿರ?
ಭಕ್ತಿಯಿಲ್ಲದ ಹೃದಯದಲ್ಲಿ ಹರಿವ
ಶುದ್ಧರಕ್ತವದು ಬದ್ಧತೆಯಿರದ ಗೂಡಿನೊಳು
ನರಳಿ ಕೆಂಪು ಕಪ್ಪಾಗುತ್ತಿದೆ... ಕತ್ತಲೆಯಾಗುತ್ತಿದೆ.
ಆವಿಯಾಗುವ ಮುನ್ನ ನೀ ಆವಿಯಾಗುವೆ...
ಹೃದಯದೊಳಗಿನ ಮಾತಿದು....
ಮರೀಚಿಕೆ ಇದು ಮರೀಚಿಕೆ!!!
-ಶ್ರೀಸುತ
Photo Credit: Anusha Koundinya
ಅದ್ಭುತ ನವ್ಯಕಾವ್ಯ ದಿವಾಣರೇ.
ReplyDeleteಧನ್ಯವಾದಗಳು ಹೆಗಡೆಯವರೇ...
ReplyDelete