ಚಿಟ್ಟಾಣಿ ಎಂಬ ಯಕ್ಷಮಣಿ...


■ ಚಿಟ್ಟಾಣಿ ರಾಮಚಂದ್ರ ಹೆಗಡೆ

ರಂಗದ ನೇಪಥ್ಯಕ್ಕೆ ಹೆಜ್ಜೆ ಹಾಕಿದ ಯಕ್ಷಮಣಿ...

        ಹೌದು... ಚಿಟ್ಟಾಣಿ ಎಂಬ ಹೆಸರು ಕೇಳಿದೊಡನೆ ಮನದೊಳಗೆ ಎದ್ದು ಬರುವ ನಗುಮೊಗದ ವ್ಯಕ್ತಿ "ಚಿಟ್ಟಾಣಿ ರಾಮಚಂದ್ರ ಹೆಗಡೆ"ಯವರು. ೧೪ ಸೆಪ್ಟೆಂಬರ್ ೧೯೩೫ ರಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಶ್ರೀ ಸುಬ್ರಾಯ ಈಶ್ವರ ಹೆಗಡೆ ಹಾಗೂ ಗಣಪಿ ಸುಬ್ರಾಯ ಹೆಗಡೆಯವರಿಗೆ ಮಗನಾಗಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ೨ನೇ ತರಗತಿಗೆ ಕೊನೆಗೊಳಿಸಿ ಬಾಹ್ಯ ಲೋಕದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಣ್ಣ ವಯಸ್ಸಿನಲ್ಲಿಯೇ ಯಕ್ಷಗಾನ ಅಭಿರುಚಿಯಿದ್ದ ಚಿಟ್ಟಾಣಿಯವರಿಗೆ ಆಗಿನ ಹಿರಿಯ ಕಲಾವಿದರುಗಳೇ ಪ್ರೇರಣೆ. ಮುಂದಕ್ಕೆ ಬಾಳೆಗದ್ದೆ ರಾಮಕೃಷ್ಣ ಭಟ್ಟರಿಂದ ಯಕ್ಷಗಾನದ ಮೂಲಪಾಠವನ್ನರಿತ ಚಿಟ್ಟಾಣಿಯವರು ಕೊಂಡದಕುಳಿ, ಕೆರೆಮನೆ ಮುಂತಾದ ಕಲಾವಿದರುಗಳಿಂದ ಇನ್ನಷ್ಟು ಪ್ರೇರೇಪಣೆಗೊಂಡರು.ಈ ರೀತಿ ಯಕ್ಷಲೋಕಕ್ಕೆ
ಅಂದು ಒಬ್ಬ ಭೀಷಣನ ಪ್ರವೇಷವಾಯಿತು ಎಂದರೆ ತಪ್ಪಾಗಲಾರದು.

(ಚಿತ್ರಕೃಪೆ: ಭಾಗ್ವತ್)

         ಚಿಕ್ಕ ಪ್ರಾಯದಲ್ಲೇ ಎಲ್ಲಿಲ್ಲದ ಗಾಂಭೀರ್ಯ ಚುರುಕುನಡೆಯನ್ನು ಹೊಂದಿದ್ದ ಚಿಟ್ಟಾಣಿಯವರು ತಮ್ಮ ೧೪ನೇ ವಯಸ್ಸಿನಲ್ಲಿ ಪ್ರಥಮಬಾರಿ ಶ್ರೀಕೃಷ್ಣ ಪಾರಿಜಾತ ಪ್ರಸಂಗದ ಅಗ್ನಿಯ ಪಾತ್ರವನ್ನು ಮಾಡಿ ರಂಗದಲ್ಲಿ ಸಂಚಲನ ಮೂಡಿಸಿದ್ದರು. ಅಲ್ಲಿಂದ ಹಚ್ಚಿದ ಜ್ವಾಲೆ ಇಂದಿನವರೆಗೂ ಉರಿಯುತ್ತಲೇ ಇತ್ತು ಎಂಬುದು ಅವರ ತೇಜಸ್ಸಿಗೆ ಹಿಡಿದ ಕನ್ನಡಿ. ಗುಂಡಬಾಳ, ಅಮೃತೇಶ್ವರೀ, ಸಾಲಿಗ್ರಾಮ, ಕೊಳಗಿಬೀಸ್, ಮೂರೂರು, ಮೂಡ್ಕಣಿ, ಪೆರ್ಡೂರು, ಇಡಗುಂಜಿ ಮೊದಲಾದ ಬಡಗುತಿಟ್ಟು ಯಕ್ಷಗಾನ ಮೇಳಗಳಲ್ಲಿ ಸುಮಾರು 68 ವರ್ಷಗಳ ಕಾಲ ಸತತ ರಂಗಸೇವೆಯನ್ನು ಮಾಡಿದರು. ಬಡಗುತಿಟ್ಟು ಯಕ್ಷಗಾನ ವಲಯದಲ್ಲಿ ಚಿಟ್ಟಾಣಿಯವರು ಚಿನ್ನದ ಮುಕುಟ. ಅವರ ನಗುವಿಗೆ ಇನ್ನೊಂದು ನಗುವಿನ ಸ್ಪರ್ಧೆಯಿಲ್ಲ. ಅವರ ಪಾದಚಲನೆಯ ಮೀರುವ ಇನ್ನೊಂದು ಚಲನವಲನವಿಲ್ಲ. ಅವರ ಭಾವಾಭಿವ್ಯಕ್ತಿಯ ಹೋಲುವ ಮತ್ತೊಂದು ಭಾವಭಂಗಿಯಿಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಅವರ ರಂಗಪಯಣದಲ್ಲಿ ಅವರೆದುರು ಮತ್ತೊಬ್ಬರಿಲ್ಲ. ಅವರ ದುಷ್ಟಬುದ್ಧಿ, ಕೌರವ, ಕೀಚಕ, ರುದ್ರಕೋಪ, ಭಸ್ಮಾಸುರ, ಕಂಸ ಮೊದಲಾದ ಪಾತ್ರಗಳು ರಂಗದಲ್ಲಿ ಪರಕಾಯ ಪ್ರವೇಶ ಪಡೆಯುತ್ತಿದ್ದವು. ತನ್ನ ಇಳಿವಯಸ್ಸಿನಲ್ಲೂ ಭಸ್ಮಾಸುರನಾಗಿ ಮೈಗೆ ಭಸ್ಮ ಹಚ್ಚಿದರೆ ಅದೇ ೨೦ರ ಹರೆಯದ ಚುರುಕುತನ ರಂಗದಲ್ಲಿ ಎದ್ದು ನಿಲ್ಲುತ್ತಿತ್ತು. ಅದೇ ನಗು, ಅದೇ ಭಾವ, ಅದೇ ನೋಟ, ಅದೇ ಅಭಿನಯ.
ಭಾಗವತರ ಪದ್ಯದ ಲಯತಾಳಕ್ಕೆ-ಏರಿಳಿತಕ್ಕೆ ಚೊಕ್ಕದಾಗಿ ಪಾದವಿರಿಸುವ ಮೃದುನಾಟ್ಯ. ಇದರಿಂದಲೇ ಏನೋ... ಚಿಟ್ಟಾಣಿ ಶೈಲಿ ಎಂಬ ಶೈಲಿ ತನ್ನಿಂದ ತಾನೇ ಚಿಗುರೊಡೆಯಿತು.
(೮೦ರ ಹರೆಯದಲ್ಲಿ ದ್ರೋಣಾಚಾರ್ಯರಾಗಿ...
 ಚಿತ್ರಕೃಪೆ: ಪ್ರಶಾಂತ್ ಮಲ್ಯಾಡಿ) 

         ಯಕ್ಷಗಾನದ ರಂಗವ್ಯತ್ಯಾಸದಲ್ಲಿ ಮೊದಲು ಕಾಣಿಸಿಕೊಳ್ಳುವುದು ತೆಂಕು ಹಾಗೂ ಬಡಗು ಎಂಬ ಒಂದೇ ನಾಣ್ಯದ ಎರಡು ಮುಖಗಳು. ಅರ್ಥ ಒಂದೇ ಆದರೂ ಶೈಲಿ ವಿಭಿನ್ನ. ತೆಂಕು ತಿಟ್ಟಿನ ದಿಗ್ಗಜರಲ್ಲಿ ಅನೇಕ ಮಂದಿ ತೆಂಕುಯಕ್ಷನಾಟ್ಯಕ್ಕೆ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ಕೊಟ್ಟವರಿದ್ದಾರೆ. ಅದೇ ರೀತಿ ಬಡಗುತಿಟ್ಟಿಗೆ ಮುಖ ಮಾಡಿ ನಿಂತಾಗ ಕೋಟ ಶಿವರಾಮ ಕಾರಂತ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕುಷ್ಟ ಗಾಣಿಗರು ಮೊದಲಾದವರು ಕಾಣಸಿಗುತ್ತಾರೆ. ಅದೇ ಸಾಲಿನಲ್ಲಿ ಇಂದು ಚಿಟ್ಟಾಣಿಯವರ ಹೆಸರು ತೇಲಲು ಕಾರಣ ಅವರ ಕಲೆಯ ಮೇಲಿನ ಅತೀವ ಪ್ರೀತಿ-ಅಭಿಮಾನ-ಶ್ರದ್ಧೆ ಹಾಗೂ ಭಕ್ತಿ. ತನ್ನ 82ನೇ ಇಳಿ ವಯಸ್ಸಿನಲ್ಲಿಯೂ ಗೆಜ್ಜೆ ಕಟ್ಟಿ ರಂಗವೇರಬೇಕೆಂದರೆ ಸಾಮಾನ್ಯರಿಂದ ಆಗುವಂಥದ್ದಲ್ಲ. ಹಾಗಾಗಿ ಚಿಟ್ಟಾಣಿಯವರು ಒಬ್ಬ ಅಸಾಮಾನ್ಯ ಕಲಾವಿದರಾಗಿದ್ದರು ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರ ವಿಶೇಷವಾದಂತಹ ನಾಟ್ಯಪ್ರಕಾರದಿಂದ ಯಕ್ಷಗಾನದ ಸ್ಟೈಲ್ ಕಿಂಗ್ ಎಂದೇ ಪ್ರಖ್ಯಾತರಾದವರು ಚಿಟ್ಟಾಣಿಯವರು.
(ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಗುಂಡ್ಮಿಕಾಳಿಂಗ ನಾವಡರು
ಚಿತ್ರಕೃಪೆ: ಶ್ರೀ ಸುದೇಶ್ ಶೆಟ್ಟಿ)

          ಚಿಟ್ಟಾಣಿಯವರದು ಚೊಕ್ಕ ಸಂಸಾರ. ಪತ್ನಿ ಸುಶೀಲ ರಾಮಚಂದ್ರ ಹೆಗಡೆ ಹಾಗೂ ಮಕ್ಕಳಾದ ಲಲಿತಾ ಹೆಗಡೆ, ಸುಭ್ರಮಣ್ಯ ಹೆಗಡೆ, ನಾರಾಯಣ ಹೆಗಡೆ ಹಾಗೂ ನರಸಿಂಹ ಹೆಗಡೆಯವರನ್ನು ಕೂಡಿದ ಚೆಂದದ ಮನೆ. ತಮ್ಮ ಕಲಾಸೇವೆಯೊಂದಿಗೆ ಮನೆಯವರ ಪ್ರೋತ್ಸಾಹದ ನುಡಿಯೂ ಸೇರಿದ ಕಾರಣ ಅವರ ಈ ಕಲಾಪಯಣಕ್ಕೆ ಬಲ ಬಂದಿತ್ತು. ಸುಧೀರ್ಘ ಅವಧಿಯ ಕಲಾಸೇವೆಯಲ್ಲಿ ಚಿಟ್ಟಾಣಿಯವರು ಗಳಿಸಿದ ಬರುದು ಸಂಮಾನಗಳು ಸಾವಿರಕ್ಕೂ ಮಿಗಿಲು. ಮೊತ್ತಮೊದಲ ಬಾರಿಗೆ ಯಕ್ಷಗಾನ ಕಲಾವಿದನೊರ್ವ ರಾಷ್ಟ್ರದ ಪ್ರತಿಷ್ಠಿತ "ಪದಶ್ರೀ" ಪ್ರಶಸ್ತಿಗೆ ಭಾಜನರಾದ ಹೆಗ್ಗಳಿಕೆ ಚಿಟ್ಟಾಣಿಯವರದು. ಅದೇ ರೀತಿ ೧೯೯೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೪ರಲ್ಲಿ ಜನಪದಶ್ರೀ ಅವಾರ್ಡ್, ೨೦೧೩ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಅವಾರ್ಡ್, ೨೦೦೯ರಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರೀ ಅವಾರ್ಡ್ ಹಾಗೂ ಆರ್ಯಭಟ್ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಧೀಮಂತ ಕಲಾಸಾಧಕ. ಯಕ್ಷಗಾನ ಕ್ಷೇತ್ರದಲ್ಲಿ ಭಾರತ ಹಾಗೂ ಹೊರದೇಶಗಳಲ್ಲಿ ಅತ್ಯಂತ ಹೆಚ್ಚು ಪ್ರದರ್ಶನ ನೀಡಿದ ಕಲಾವಿದ ಎಂಬ ಹೆಗ್ಗಳಿಕೆ ಚಿಟ್ಟಾಣಿಯವರದು. ಇವರು ತಮ್ಮ ಅತ್ಯಮೋಘ ನಾಟ್ಯವೈಖರಿಯ ಮೂಲಕ ಚಿಟ್ಟಾಣಿ ಶೈಲಿಯ ಹರಿಕಾರ ಎಂದೆನಿಸಿಕೊಂಡರು.
(ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕಾರ)

          ಕಣ್ಣ ಹುಬ್ಬೇರಿಸುವ ಇವರ ನಾಟ್ಯ ರಂಗದಲ್ಲಿ ಕೊನೆಯಾಯಿತು ಎಂಬುವುದು ಮನಸ್ಸಿಗೆ ಬಹಳಷ್ಟು ಬೇಸರ ತರುವ ವಿಷಯ. ದಿನಾಂಕ ೦೩ ಅಕ್ಟೋಬರ್ ೨೦೧೭ರಂದು ಶ್ರೀಯುತರು ಇಹಲೋಕವನ್ನು ತ್ಯಜಿಸಿದ್ದು ಅಪಾರ ಯಕ್ಷ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಗಲಿಕೆ ಯಕ್ಷಲೋಕಕ್ಕೆ ತುಂಬಲಾರದ ನಷ್ಟ. ಶುದ್ಧ ನಾಟ್ಯ, ಯಕ್ಷಗಾನದ ಚೌಕಟ್ಟಿನೊಳಗೆ ತಮ್ಮ ಪಾತ್ರದ ಚಲನೆ, ಚೊಕ್ಕದಾದ ಅರ್ಥಗಾರಿಕೆ, ಸಾಂದರ್ಭಿಕ ಹಾಸ್ಯ ಹಾಗೂ ಯಾರದ್ದೂ ಮನನೋಯಿಸದಂತಹ ಮುಗ್ಧ ಭಾವ... ಇವೆಲ್ಲವೂ ಒಟ್ಟಾಗಿ ಸೇರಿ ಓರ್ವ ಚಿಟ್ಟಾಣಿ....

ಅಭಿಮಾನಿಗಳನ್ನು ಕಲೆಹಾಕುವುದು ಸುಲಭ. ಆದರೆ ಅದೇ ಅಭಿಮಾನಿಗಳನ್ನು ಸತತ 68 ವರ್ಷಗಳ ಕಾಲ ತನ್ನೊಂದಿಗೆ ಸಾಗಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಚಿಟ್ಟಾಣಿಯವರದು ಎತ್ತಿದ ಕೈ. ಇದಕ್ಕೆಲ್ಲಾ ಕಾರಣ ಅವರ ಕಲಾಸೇವೆ. ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದ ಕಲಾಸೇವೆಗೆ ಜನರು ಅವರನ್ನು ಉತ್ತುಂಗದ ಶಿಖರದಲ್ಲಿಟ್ಟರು. ಇಂದು ಅದೇ ಶಿಖರವೇರಿ ಕುಳಿತ ಚಿಟ್ಟಾಣಿಯವರು ಅದೇ ಶಿಖರದಲ್ಲಿ ಯಕ್ಷಮಣಿಯಾಗಿ ನೆಲೆಯಾದರು. ಆ ಯಕ್ಷಮಣಿಯ ಹೊಳಪು ಮಾತ್ರ ಇನ್ನು ನಮ್ಮೊಂದಿಗೆ... ಅಗಲಿದ ದಿವ್ಯಚೇತನಕ್ಕೆ ಕಲಾಮಾತೆ ಶಾಂತಿಯನ್ನು ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಯಕ್ಷಮಣಿ ಚಿಟ್ಟಾಣಿಯವರಿಗೆ ಈ ನನ್ನ ನುಡಿನಮನ...

                                                        -ಶ್ರೀಸುತ

■ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು

"ಲೇಖನಕ್ಕೆ ವಿಷಯಗಳನ್ನು ಕಟೀಲು ಸಿತ್ಲ ರಂಗನಾಥ ರಾವ್ ಹಾಗೂ 'ಸಂಪದ' ಅಂತರ್ಜಾಲ ತಾಣದಿಂದ ಸ್ವೀಕರಿಸಲಾಗಿದೆ..."

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕುರಿತಾದ ಸಾಕ್ಷ್ಯಚಿತ್ರದ Youtube Link ಅನ್ನು ನೀಡಲಾಗಿದೆ. ವೀಕ್ಷಣೆಗೆ ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಸಾಕ್ಷ್ಯಚಿತ್ರ ಮೂಲ: ಕಟೀಲು ಸಿತ್ಲ ರಂಗನಾಥ ರಾವ್

Click Here:

https://youtu.be/KzKRTFw4Eio



(ದಿ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಚಿಟ್ಟಾಣಿಯವರು ಸಾಲ್ವನಾಗಿ ಹಾಗೂ ಮಂಟಪ ಪ್ರಭಾಕರ ಉಪಾಧ್ಯಾಯರು ಅಂಬೆಯಾಗಿ...
ಚಿತ್ರಕೃಪೆ: ನಟರಾಜ ಉಪಾಧ್ಯಾಯ)


(ಚಿಟ್ಟಾಣಿಯವರ ಭಸ್ಮಾಸುರ)

(ಚಿತ್ರಕೃಪೆ: ದಿನೇಶ್ ಮನೀರ್)

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.