ಹಸುವನ್ನು ಕಂಡಾಗ ನಿಮ್ಮ ಮನೆಯ
ಕೂಸು ಎಂದು ತಿಳಿಯಿರಿ ಬಂಧುಗಳೇ
ಅದು ಹುಲ್ಲು ತಿನ್ನುದ್ದರೆ ತಿನ್ನಲು ಬಿಡಿ,
ಕೈಯಲ್ಲಿ ಬೆತ್ತ ಹಿಡಿದು ಓಡಿಸಬೇಡಿ....
ಪ್ರಕೃತಿಯ ಸ್ವತ್ತಾದ ಹುಲ್ಲನ್ನು ತಿಂದರೆ
ಉರಿದುರಿದು ಕಾರುತ್ತೀರಿ
ತನ್ನ ಕರುವಿಗಾಗಿಟ್ಟ ಹಾಲನ್ನು ಕಸಿವಾಗ
ಹಸುಗೂಸು ಅಳುವುದೇ? ನೀಡದೇ?
ತಾಯಿಯ ಸುಖ ಗೋಗಳ ಮುಖ
ಗೋಗಳ ಸುಖ ತಾಯಿಯ ಮುಖ
ಇವೆರಡೂ ಹಸಿರಾದರೆ ನೀವೂ ನಾವೂ;
ತೆಗೆದ ಹಾಲಿಗೆ ನೀರು ಬೆರೆಸಿ ಮಾರುತ್ತೀರಿ
ಹಾಲಿನಿಂದ ಮೊಸರುಮಜ್ಜಿಗೆಗಳ ಹೀರುತ್ತೀರಿ
ಬೆಣ್ಣೆ ತೆಗೆದು ವ್ಯಾಪಾರವ ಮಾಡುತ್ತೀರಿ
ಸಗಣಿ ತಟ್ಟಿ ಇಟ್ಟು ಗೋಬರವ ಹಾಕುತ್ತೀರಿ
ಗೋಮೂತ್ರವ ಹಿಡಿದು ಔಷಧಿಯ ಕಡೆಯುತ್ತೀರಿ
ಅಶನ ವಸನಕ್ಕಾಗಿ ಇಷ್ಟೆಲ್ಲಾ ಮಾಡುತ್ತೀರಿ!...
ಆದರೆ ಗೋವಿಗಾಗಿ ನೀವು ಏನು ಮಾಡಿದ್ದೀರಿ?
ಕಸಾಯಿಖಾನೆ... ಕಸಾಯಿಖಾನೆ... ಬಂಧೀಖಾನೆ!
ಹಾಲಿಡುವ ತನಕ ಹಟ್ಟಿಯಲ್ಲಿ; ಖಾಲಿಯಾದೊಡನೆ?
ಆಕಳುಗಳ ಅಳಲನ್ನು ಕೇಳುವವರಾರು?
ಮಳೆಯಲ್ಲಿ ಜಡಿಮಳೆಯ ಸಹಿಸಿಕೊಂಬುದು
ಬಿಸಿಲಲ್ಲಿ ಸುಡುಧಗೆಯ ಸಹಿಸಿಕೊಂಬುದು
ಛಳಿಯಲ್ಲಿ ಕಡುಛಳಿಯ ಸಹಿಸಿಕೊಂಬುದು
ಅಷ್ಟಾದರೂ ಪ್ರತಿನಿತ್ಯ ಹಾಲನ್ನು ಕೊಡುವುದು
ಸ್ವಾರ್ಥವಿಲ್ಲದ ಜೀವನ ನಡೆಸುವ ಹಸುವಿಗೆ
ಕೊನೆಯಲ್ಲಿ ಸಿಗುವುದು? ನಿಮ್ಮ ಕೊಡುಗೆ!
ಹಲವು ಒರತೆಗಳ ನೀಡಿದರೂ ಕೊರತೆ...
ಕಾನೂನು ಮತ್ತೊಂದು ಏನು ಮಾಡೀತು
ನೀವು ಬದಲಾಗದಿರೆ!
ಬದಲಾಗಬಾರದೇ? ಬದುಕಲು ಬಿಡಬಾರದೇ?
ಅಳಿವ ಮುನ್ನ ಗೋಗಳ ಉಳಿಸಿ ಬೆಳೆಸಿ
ಹರಸಿ ಹೊಸೆಯುವುದು ಕೊನೆಯ ತನಕ...
ತುತ್ತನೀವ ಹಸುವಿನ ಕತ್ತು ಹಿಸುಕಬೇಡಿ
ಮುಗ್ಧತೆಯ ಮನಸನ್ನು ಮಸಣದಂಚಿಗೆ ತಳ್ಳದಿರಿ
ಬದುಕಲು ಬಿಡಿ ಹಸುವ ಮೇಯಲು ಬಿಡಿ
ಹಸುಗೂಸು ನಗುನಗುತ ಬಾಳಲು ಬಿಡಿ.
-ಶ್ರೀಸುತ
Photo Credit: News18
Good work DP..keep it up
ReplyDeleteThank you Sudeeksh... Happy for your support.
Delete