ಗಮ್ಯ

          

         "ಮಗಳೇ, ಊಟ ಮಾಡೋಣ ಬಾ."  ಕೃಷ್ಣರಾಯರ ಅಕ್ಕರೆಯ ಕರೆ.  " ಅಪ್ಪಾ ನಂಗೆ ಹಸಿವಿಲ್ಲ. ನೀವು ಊಟ ಮಾಡಿ."  ಬೆಳಿಗ್ಗೆಯಿಂದ ಏನೂ ತಿಂದಿಲ್ಲ. ಹಸಿವಾಗ್ತಿಲ್ಲ ಅಂದ್ರೆ ನಂಬಬೇಕಾ? ಎಂದ ತಂದೆಯ ಪ್ರಶ್ನೆಗೆ ಅವಳಲ್ಲಿ ಉತ್ತರವಿರಲಿಲ್ಲ. ಉತ್ತರ ಕೊಡಲು ಸಾಧ್ಯವೂ ಇಲ್ಲ!  " ನೀವು ಊಟ ಶುರು ಮಾಡಿ. ಬಂದೆ "  ಎಂದು ಕಳಿಸಿದಳು. ರೂಮಿನಲ್ಲೀಗ ಆಕೆ ಮತ್ತೆ ಏಕಾಂಗಿ. ಒಮ್ಮೊಮ್ಮೆ ಶಿಕ್ಷೆ ಅನಿಸೋ ಒಬ್ಬಂಟಿತನ ಕೆಲವೊಮ್ಮೆ ಬೇಕೆನಿಸುತ್ತದೆ. ಯೋಚನಾಕೋಟೆಯೊಳಗೆ ಅವಳೀಗ ಬಂಧಿ. ಹೊರಬರಲಾಗುತ್ತಿಲ್ಲ. ಆದರೆ ಹೊರಬರಲೇಬೇಕಿದೆ. ಗೊಂದಲಗಳಲ್ಲಿ ತಲೆ ಕೆಟ್ಟಂತಾಗಿದೆ. ಜೀವನದಲ್ಲಿ ಅತಿಮುಖ್ಯ ಆಯ್ಕೆಯೊಂದನ್ನು ಆಕೆ ಈಗ ಮಾಡಬೇಕಿದೆ. ಆದರೆ ತನ್ನ ಗೊಂದಲಗಳಿಂದ ತಂದೆ ತಾಯಿಯ ಮನ ನೋಯಿಸುವುದು ಕೂಡ ಆಕೆಗೆ ಇಷ್ಟವಿಲ್ಲ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಊಟಕ್ಕೆ ಬಂದಳು. ಕೃಷ್ಣರಾಯರು ಊಟ ಆರಂಭಿಸಿದ್ದರು. ಮೌನವಾಗಿ ಊಟ ಮುಗಿಸಿ ಮತ್ತೆ ತನ್ನ ರೂಮಿಗೆ ಬಂದು ಹಾಸಿಗೆಯ ಮೇಲೆ ಒರಗಿದಳು. ಜೀವನವು ಎಷ್ಟೊಂದು ತಿರುವುಗಳನ್ನು ಪಡೆಯುತ್ತದಲ್ಲವೆ? ಎಂದೆನಿಸಿತವಳಿಗೆ.
             ಅಪ್ಪ, ಅಮ್ಮ, ಅಣ್ಣನ ಪ್ರೀತಿಯ ಮಳೆಯಲ್ಲಿ ನೆನೆದರೂ ನಾನೇಕೆ ಒದ್ದೆಯಾಗಲಿಲ್ಲ?  ಒದ್ದೆಯಾಗಲು ಜಡಿಮಳೆಯೇ ಬರಬರಬೇಕೆ?  ' ಇರುವುದೆಲ್ಲವ ಬಿಟ್ಟು ಇರದುದರ ನೆನೆವುದೇ ಜೀವನ......'  ಎಂಬುದು ನನ್ನ ಬದುಕಿಗೆ ಸರಿಯಾಗಿ ಹೊಂದುತ್ತದೆ. ಚಿಕ್ಕಂದಿನಿಂದಲೂ ಉಜ್ಜೀವನದ ಕನಸು ಕಂಡವಳು ನಾನು. ಪ್ರತಿ ಕ್ಲಾಸಿನಲ್ಲೂ ಉತ್ತಮ ಅಂಕಗಳೊಡನೆ ಪಾಸಾಗುತ್ತಿದ್ದೆ. ಹಿಂದುಸ್ಥಾನಿ ಸಂಗೀತದಲ್ಲಿ ಸೀನಿಯರ್ ಎಕ್ಸಾಂ ಕೂಡ ಮುಗಿದಿದೆ. ಜನರ ಮುಂದೆ ಧೈರ್ಯವಾಗಿ ಮಾತನಾಡಿ, ಮನಗೆಲ್ಲುವ ಕಲೆ ನನಗೊಲಿದಿದೆ. ಇದನ್ನೆಲ್ಲ ಸಾಧಿಸುವಾಗ ನನ್ನ ಮನ ಕಲ್ಲಾಗಿತ್ತು. ಮಾಡುವ ಕಾರ್ಯದಲ್ಲಿ ಶ್ರದ್ಧೆಯಿತ್ತು. ಅಗಾಧ ಪ್ರೀತಿಯಿತ್ತು..... ಈಗ? ಯಾವುದರಲ್ಲೂ ಮನಸಿಲ್ಲ. ಮನಸ್ಸು ಇರುವುದಾದರೂ ಹೇಗೆ? ಅದನ್ನೇ ಇನ್ನೊಬ್ಬರಿಗೆ ಕೊಟ್ಟರೆ.... ಇದು ನನ್ನ ಜೀವನದ ಪ್ರಶ್ನೆ. ಅಲ್ಲ, ನನ್ನ ಕನಸಿನ, ಭವಿಷ್ಯದ ಪ್ರಶ್ನೆ. ನಿಧಾ೯ರ ನಿಧಾನವಾದರೂ ಪಕ್ವವಾಗಿರಬೇಕು. ನಂತರ ಪಶ್ಚಾತ್ತಾಪ ಪಡಬಾರದು.  ಅಷ್ಟಕ್ಕೂ ಒಂದು ಆಯಾಮದಲ್ಲಿ ನೋಡಿದರೆ ನಾನೇನೂ ಯಾರೂ ಮಾಡಿರದ ಘೋರ ಅಪರಾಧವನ್ನೇನೂ ಮಾಡಿಲ್ಲ. ವಯೋಸಹಜ ಕಾಮನೆಗಳನ್ನು ಹತ್ತಿಕ್ಕಲು ಸಾಧ್ಯವಾಗದ ಸಮಯದಲ್ಲೇ ನನಗೆ ಚೇತನ್ ಪರಿಚಯವಾಗಿದ್ದು. ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಮರೆಯಲಾದರೂ ಹೇಗೆ ಸಾಧ್ಯ?
    " ರೀ ಮೇಡಂ, ಸ್ವಲ್ಪ ಪೆನ್ ಕೊಡ್ತೀರಾ? " ಯುವಕನ ಕೋರಿಕೆಯ ದನಿ. ಯೋಚನಾಕೋಟೆಯಿಂದ ಹೊರಬಂದ ನಾನು ಒಮ್ಮೆ ಧ್ವನಿ ಬಂದತ್ತ ತಿರುಗಿದೆ. ಸುಂದರ ಹುಡುಗನೊಬ್ಬ ಪಕ್ಕದಲ್ಲೇ ನಿಂತಿದ್ದಾನೆ. ಮುಖದಲ್ಲಿ ಬೇಡಿಕೆಯ ಚಹರೆಯಿದೆ.  ಅವನನ್ನು ಒಮ್ಮೆ ವಿಚಿತ್ರವಾಗಿ ನೋಡಿದೆ.  " ಒಂದು ಸಣ್ಣ ಪೆನ್ ತರಲಾಗದವರು ಕಾಲೇಜಿಗೆ ಯಾಕೆ ಬರ್ತೀರಾ? "  ಬಾಯಿಂದ ಹೊರಬರಬೇಕೆಂದಿದ್ದ ಮಾತು ಯಾಕೋ ಮೌನದ ಮೊರೆ ಹೊಕ್ಕಿತ್ತು. ಅವಸರದಲ್ಲಿ ಬ್ಯಾಗಿಂದ ಒಂದು ಪೆನ್ ತೆಗೆದು, ಅವನ ಕೈಗಿತ್ತೆ. ಬಳಿಕ ಕ್ಲಾಸಿನಲ್ಲಿ  ಬಂದು ಕುಳಿತೆ. ನೆಚ್ಚಿನ ಗೆಳತಿ ಸುರಭಿಯ ಬಳಿ ಮಾತುಕತೆ ಶುರುವಾಯಿತು. ಮಧ್ಯೆ  " ಸುರು, ಅಣ್ಣ ಕಳಿಸಿದ ಪೆನ್ ತೋರಿಸ್ತೀನಿರು. " ಎನ್ನುತ್ತಾ ಬ್ಯಾಗಿನಲ್ಲಿ ತಡಕಾಡಿದೆ. ಆದರೆ ಆ ಪೆನ್ ಸಿಗಲಿಲ್ಲ. ಏನೋ ನೆನಪಾದಂತೆ ಥಟ್ಟನೆ  ಹಿಂತಿರುಗಿ ನೋಡಿದೆ. ಪ್ರೀತಿಯ ಅಣ್ಣ ತಂಗಿಗಾಗಿ ಇಂಗ್ಲೆಂಡಿಂದ ಕಳಿಸಿದ ಪೆನ್ ಆ ಹುಡುಗನ ಕೈಯಲ್ಲಿ !  ಛೇ... ಅವಸರದಲ್ಲಿ ಆ ಪೆನ್ ಕೊಟ್ಟುಬಿಟ್ಟೆ. ಹೋಗುವಾಗ ವಾಪಸ್ ಕೊಡ್ಲಿ ದೇವರೇ.. ಎಂದು ಪ್ರಾಥಿ೯ಸಿದ್ದೆ. ಕ್ಲಾಸ್ ಮುಗಿಯುವುದನ್ನೇ ಕಾಯುತ್ತಿದ್ದೆ ಎನ್ನಬಹುದು. ಕ್ಲಾಸ್ ಮುಗಿಯಿತು. ದೇವರು ನನ್ನ ಮೊರೆಯನ್ನಾಲಿಸಿದ್ದ. ಆತ ನೇರವಾಗಿ ನನ್ನ ಬಳಿ ಬಂದು  " ಥ್ಯಾಂಕ್ಯೂ ಮೇಡಂ  ನಿಮ್ಮ ಹೆಸರು? " ಎಂದು ಪೆನ್ ಕೊಟ್ಟ.  " ಅನಘಾ " ಎಂದೆ.  " ಅಥ೯ಪೂಣ೯ ಹೆಸರು. ನಾನು ಚೇತನ್ " ಎಂದು ಹೊರನಡೆದಿದ್ದ. ನಾನು ಸುಮ್ಮನೆ ಆತ ಹೋಗುವುದನ್ನೇ ನೋಡುತ್ತ ನಿಂತೆ. ಆತನ ಕಣ್ಣುಗಳಲ್ಲಿ ಏನೋ ಒಂದು ಬಗೆಯ ಸೆಳೆತವಿತ್ತು. ನನಗೇ ತಿಳಿಯದೇ  ಪ್ರತಿದಿನ ಕ್ಲಾಸಿನಲ್ಲಿ ಆತನ ಚಟುವಟಿಕೆ ಗಮನಿಸಲಾರಂಭಿಸಿದ್ದೆ. ಆತ ಬಡವ. ಓದುವುದರಲ್ಲಿ ಆಸಕ್ತಿಯಂತೂ ಇರಲಿಲ್ಲ. ತಂದೆ ತಾಯಿಗಳ ಒತ್ತಾಯಕ್ಕೆ ಕಾಲೇಜಿಗೆ ಬರುತ್ತಿದ್ದ. ಬಡವನಾದರೂ ಚೇತನ್ ಗೆ ದುಡ್ಡಿನ ಬೆಲೆ ತಿಳಿದಿರಲಿಲ್ಲ. ದುಂದುವೆಚ್ಚ ಮಾಡುತ್ತಿದ್ದ. ಹೀಗಿದ್ರೂ ನನಗೆ ಆತನ ಸ್ನೇಹ ಯಾಕೋ  ಇಷ್ಟವಾಗತೊಡಗಿತ್ತು. ಸಲುಗೆ ಅತಿಯಾಗಿ ಸ್ನೇಹ ಪ್ರೇಮವಾಯಿತು. ಚೇತನ್ ಇದೀಗ ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ. ನಾನೂ ಅಷ್ಟೇ. ಅವನೊಂದಿಗೆ ಕೈ ಹಿಡಿದುಕೊಂಡು ಪಾಕ್೯ನಲ್ಲಿ ಓಡಾಡುತ್ತಿದ್ದೆ. ಅವನ ಜೊತೆ ಒಂದೇ ಪ್ಲೇಟಿನಲ್ಲಿ ತಿಂಡಿ ತಿಂದಿದ್ದೆ. ಪ್ರೇಮದ ಅಬ್ಬರದಲ್ಲಿ  ಜೀವನಪೂತಿ೯ ನಿನ್ನ ಮುದ್ದಿನ ಮಡದಿಯಾಗಿರುತ್ತೇನೆಂದು ಮಾತು ಕೊಟ್ಟೂ ಆಗಿತ್ತು. ಇಷ್ಟೆಲ್ಲಾ ಮಾಡುವಾಗ ನನ್ನ ಬುದ್ಧಿ ಎಲ್ಲಿ ಹೋಗಿತ್ತೋ?  ಆದರೆ ಈಗ ಅಪ್ಪ - ಅಮ್ಮನನ್ನು ಕಂಡಾಗಲೆಲ್ಲ ನಾನು ಅವರಿಗೆ ಮೋಸ ಮಾಡುತ್ತಿದ್ದೇನೆ ಅನಿಸುತ್ತಿದೆ. ನನ್ನ ಮೇಲೆ ಬೆಟ್ಟದಷ್ಟು ಕನಸುಗಳನ್ನು ಕಂಡಿದ್ದಾರೆ ಅಪ್ಪ. ಮಗಳು ವಿದೇಶದಲ್ಲಿ ಎಂ.ಎಸ್ ಮಾಡಬೇಕು, ಸಂಗೀತವನ್ನು ಮುಂದುವರಿಸಬೇಕು, ಮನೆತನದ ಕೀತಿ೯ ಹೆಚ್ಚಿಸಬೇಕು..... ಇನ್ನೂ ಏನೇನೋ... ಅವರಿಗೆ ಚೇತನ್ ವಿಷಯ ಹೇಳಿದರೆ ಆಘಾತವಾಗುವುದಂತೂ ನಿಜ. ಇಷ್ಟು ದಿನ ಕಾಪಾಡಿಕೊಂಡು ಬಂದ ನಂಬಿಕೆಯೆಲ್ಲ ಬಿರುಗಾಳಿಗೆ ತೂರಿ ಹೋಗುತ್ತದಷ್ಟೆ !
            ಇಲ್ಲಾ..... ಹಾಗಾಗಬಾರದು. ಅದಕ್ಕಾಗಿ ಚೇತನ್ ಗೆ ವಿಷಯ ತಿಳಿಸಿ, ನನ್ನನ್ನು ಮರೆತುಬಿಡು ಎನ್ನಲಾಗುತ್ತದೆಯೇ? ನೋ..ಅದೂ ಕಷ್ಟ. "ಇಷ್ಟು ದಿನ ನನ್ನೊಂದಿಗೆ ಸುತ್ತಿದ್ದು, ಮದುವೆಯಾಗುತ್ತೇನೆಂದಿದ್ದು ಎಲ್ಲಾ ಬರೀ ನಾಟಕನಾ? ನಿಮ್ಮಂಥ ಶ್ರೀಮಂತ ಹುಡುಗಿಯರಿಗೆ ನಾವೇನು ಆಟದ ಗೊಂಬೆಗಳಾ? ಬೇಕು ಅಂದಾಗ ಪ್ರೀತಿಸೋಕೆ ಬೇಡ ಅಂದಾಗ ಮರೆಯೋಕೆ. ಈಗ ಅಪ್ಪ ಅಮ್ಮನ ಬಗ್ಗೆ  ಮಾತನಾಡುವವಳಿಗೆ ಮಾತು ಕೊಡುವಾಗ ನೆನಪಿರಲಿಲ್ವಾ? "   ಎಂದರೆ ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ಯಾವುದಕ್ಕೂ ಸ್ವಲ್ಪ ಯೋಚಿಸೋಣವೆಂದರೆ ಅದಕ್ಕೂ ಸಮಯವಿಲ್ಲ. ಇನ್ನೊಂದು ವಾರದಲ್ಲಿ ಕ್ಲಾಸ್ ಮುಗಿಯುತ್ತದೆ. ಅದಾದ ಮೇಲೆ ಪರೀಕ್ಷೆ. ಅಲ್ಲಿಗೆ ಈ ಕಾಲೇಜಿನ ಋಣ ತೀರುತ್ತದೆ. ಏನು ಮಾಡಲಿ????  ಇದು ಭಾವನೆಗಳ ತಾಕಲಾಟದ ಪ್ರಶ್ನೆ . ಉತ್ತರ ಹುಡುಕಲೇ ಬೇಕು. ಕೇವಲ ನನ್ನ ಒಳಿತನ್ನು ಪರಿಗಣಿಸುವುದರ ಜೊತೆ ಚೇತನ್ ಅಭಿಪ್ರಾಯ, ಅವನ ಒಳಿತು ಕೂಡಾ ಅಷ್ಟೇ ಮುಖ್ಯ. ಚೇತನ್ ನಾನು ಹೇಳಿದರೆ ಏನು ಮಾಡಲೂ ಬೇಸರಿಸಿಕೊಳ್ಳುವುದಿಲ್ಲ. ಹೇಗೋ ಕಳೆದ ಎಲ್ಲಾ ಸೆಮಿಸ್ಟರ್ ನಲ್ಲಿ ಪಾಸಾಗಿದ್ದಾನೆ. ಅವನಿಗೆ ದುಡ್ಡಿನ ಮಹತ್ವ, ಬದುಕಿನ ರೀತಿ ನೀತಿಗಳು ತಿಳಿದಿಲ್ಲವಷ್ಟೆ. ಒಂದು ರೀತಿಯ ಜವಾಬ್ದಾರಿ ಇಲ್ಲದ ಹುಡುಗ. ಆದರೆ ಪರಿವರ್ತನೆ ಜಗದ ನಿಯಮ. ಇಂದು ಹೀಗಿರುವ ಚೇತನ್ ಮುಂದೆಯೂ ಹೀಗೇ ಇರುತ್ತಾನೆ ಎನ್ನಲಾಗದು. ಆ ಬದಲಾವಣೆ ತರುವ ಹೆಣ್ಣು ನಾನಾದರೆ? ಹೌದು ಆ ಹೆಣ್ಣು ನಾನಾಗಬೇಕು. ಈಗ ಇರುವ ಚೇತನ್ ನ ನಡತೆಯನ್ನು ಬದಲಾಯಿಸಬೇಕು. ಒಳ್ಳೆಯ ಮಾತುಗಾರಿಕೆ ಕಲಿತ ನಾನು ಅವನೆಲ್ಲ ಮೌನಗಳಿಗೆ , ಅವನೆಲ್ಲ ಕನಸುಗಳಿಗೆ ನುಡಿಯಾಗಬೇಕು, ಮುನ್ನುಡಿಯಾಗಬೇಕು. ಸಂಗೀತ ಕಲಿತ ನಾನು ಅವನ ಬದುಕಿನ ಸಾಲುಗಳಿಗೆ ರಾಗ ತುಂಬಬೇಕು. ಹಾಡಾಗಬೇಕು. ವಿದೇಶಕ್ಕೆ ಹೋಗಿ ಸಾಧಿಸುವ ಬದಲು ಸ್ವದೇಶದಲ್ಲೇ ಅದನ್ನು ಮಾಡಬಹುದಲ್ಲವೇ? ನಿಜಕ್ಕೂ ನನ್ನ ಆಲೋಚನೆಗಳು ಶ್ಲಾಘನೀಯವೇ... ಯೋಚನೆಗಳು ಆಲೋಚನೆಗಳಾಗುವುದು ಸುಲಭ. ಆದರೆ ಆ ಆಲೋಚನೆಗಳು ಯೋಜನೆಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಕಷ್ಟ. ನಾನೇನೋ ಕೇವಲ ಚೇತನ್ ಬಗ್ಗೆ ಯೋಚಿಸುತ್ತೇನೆ. ಆದರೆ ಕೊನೆಯ ಕ್ಷಣದಲ್ಲಿ  ಅವನ ಮನೆಯಲ್ಲಿ ಅಪ್ಪ ಅಮ್ಮ ನಮ್ಮ ಮದುವೆಗೆ ಒಪ್ಪದಿದ್ದರೆ? ಇಲ್ಲಾ ಮದುವೆಗೆ ಒಪ್ಪಿಗೆ ನೀಡಬಹುದು. ನಂತರ ವರದಕ್ಷಿಣೆ ಎಂದರೆ?  ಕೊಡುವುದು ಕಷ್ಟವೇ ಅಲ್ಲ. ಆದರೆ ವಧುದಕ್ಷಿಣೆ ಕೊಟ್ಟು ಮದುವೆಯಾಗಬಹುದಾದ ಹುಡುಗಿ ನಾನು ಅಂತ ಎಲ್ಲರೂ ಹೇಳುತ್ತಿದ್ದುದು ಸುಳ್ಳಾಗುತ್ತದೆ. ಅಷ್ಟೇ ಅಲ್ಲ, ಅಕಸ್ಮಾತ್ ಅತ್ತೆ ಮಾವ ಎಲ್ಲರೂ ನನ್ನಲ್ಲಿ ತಪ್ಪುಗಳನ್ನೇ ಹುಡುಕಲಾರಂಭಿಸಿದರೆ? ಶ್ರೀಮಂತ ಮನೆತನದ ಹುಡುಗಿ ಎಂದು ಪದೇ ಪದೇ ಮನೆಯಿಂದ ಹಣ ತರಲು ಹೇಳಿದರೆ? ಮದುವೆಯಾದ ಹೆಣ್ಣು ಅಲ್ಲಿ ಇಲ್ಲಿ ಒಬ್ಬಳೇ ಸ್ಪರ್ಧೆಗಳಿಗೆ ಹೋಗೋದು ಬೇಡ ಎಂದರೆ? ಹೌದು. ಚೇತನ್ ಗೂ ಸಂಗೀತದಲ್ಲಿ ಆಸಕ್ತಿ ಇಲ್ಲವೇ ಇಲ್ಲ. ಇದ್ದಿದ್ದರೆ ನಾನು ಸ್ಟೇಜ್ ನಲ್ಲಿ ಹಾಡುವಾಗ ಎದ್ದು ಹೋಗುತ್ತಿದ್ದನೇ?  ಓ ದೇವರೇ...... ನನ್ನ ಮನದಲ್ಲಿ ಯಾಕಿಷ್ಟು ದ್ವಂದ್ವ? ಈ ಅನಂತ ಪ್ರಶ್ನೆಗಳಿಗೆ ಉತ್ತರ ಸಿಗುವುದೆಂದು? ಅನಘಾಳ ಯೋಚನಾಲಹರಿ ಗತಿ ಬದಲಿಸಿತ್ತು. ದೈವಬಲ ಅವಳ ಜೀವನದ ಗುರಿಯನ್ನು ಬದಲಾಯಿಸಿತ್ತು.
              
    ಹದಿನೈದು ವಷ೯ಗಳ ನಂತರ.....
                       ಅನಘಾ ತವರುಮನೆಗೆ ಬಂದಿದ್ದಾಳೆ. ಅವಳೊಂದಿಗೆ ಪುಟ್ಟ ಅನಘಾ ಶಾರಿ ಕೂಡಾ ಬಂದಿದ್ದಾಳೆ. ಆಕೆಗೀಗ ಹತ್ತು ವಷ೯. ಮುದ್ದು ಮುದ್ದಾಗಿರುವ ಆಕೆ ಅಜ್ಜ - ಅಜ್ಜಿಯರ ನೆಚ್ಚಿನ ಕೂಸು.  " ಅಳಿಯಂದಿರು ಯಾವಾಗ ಬರ್ತಾರೆ? " ಕೃಷ್ಣರಾಯರು ಕೇಳಿದರು.  " ಅಪ್ಪಾ, ಅವರಿಗೀಗ ಕೆಲಸದ ಒತ್ತಡ ಜಾಸ್ತಿ ಇದೆ. ಇನ್ನೊಂದು ತಿಂಗಳಲ್ಲಿ ಬರುತ್ತಾರೆ. " ಅನಘಾ ಉತ್ತರಿಸಿದಳು.  " ಅಪ್ಪಾ, ನಿಮ್ಮ ಮುದ್ದಿನ ಮೊಮ್ಮಗಳಿಗೆ ಮಂತ್ರಿ ಸ್ಕ್ವೇರ್ ನೋಡಬೇಕಂತೆ. ಸಂಜೆ ನಿಮ್ಮ ಕಾರು ಫ್ರೀ ಇದೆಯಲ್ವಾ ? ಇದ್ರೆ ನಾವು ಹೋಗಿ ಬರ್ತೀವಿ. "  ಕೃಷ್ಣರಾಯರು ಆಗಲಿ ಎಂದರು. ಅನಘಾ ವೀಡಿಯೋ ಕಾಲ್ ಮಾಡಿ ಕ್ಯಾಲಿಫೋರ್ನಿಯಾದಲ್ಲಿರುವ ಗಂಡನಿಗೆ ತಾವು ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದರ ಬಗ್ಗೆ ಹೇಳಿದಳು. ಆತ ಇನ್ನೆರಡು ವಾರದಲ್ಲಿ ನಾನೂ ಬರುತ್ತೇನೆಂಬ ಸುದ್ದಿ ಅತ್ತೆ ಮಾವನಿಗೆ ತಿಳಿಸಿದ. ಪ್ರದೀಪ್ ಜೊತೆ ಮಾತಾಡಿ ಎಲ್ಲರಿಗೂ ಸಂತೋಷವಾಯಿತು. ಸಂಜೆ ಅನಘಾ ಮಗಳನ್ನು ಮಂತ್ರಿ ಮಾಲ್ ಗೆ ಕರೆದುಕೊಂಡು ಹೋದಳು. ಅಲ್ಲೆಲ್ಲ ಸುತ್ತಾಡಿ, ಹಲವು ವಸ್ತುಗಳನ್ನು ಖರೀದಿಸಿದರು. ಪುಟ್ಟ ಹುಡುಗಿ ಅಮ್ಮನ ಕೈ ತಪ್ಪಿಸಿಕೊಂಡು ಓಡತೊಡಗಿದಳು. ಅವಳನ್ನು ಹಿಡಿಯುವ ಭರದಲ್ಲಿ ಅನಘಾ ಯಾರಿಗೋ ಢಿಕ್ಕಿ ಹೊಡೆದಳು.  " ಅಯಾಂ ಸಾರಿ " ಎನ್ನುತ್ತಾ ಆ ವ್ಯಕ್ತಿಯನ್ನು ನೋಡಿದಳು. ಸೂಟು ಬೂಟು ಧರಿಸಿದ್ದ, ನೀಟಾಗಿ ಶೇವ್ ಮಾಡಿದ್ದ ಗಂಭೀರ ವದನ. " ನೀನು... ನೀನು...." ಅನಘಾಗೆ ಆಶ್ಚರ್ಯದಿಂದ  ಮಾತು ಮುಂದುವರಿಸಲಾಗಲಿಲ್ಲ. " ನಾನೇ ಚೇತನ್. ಒಂದು ಕಾಲದಲ್ಲಿ ನಿನ್ನ ಪ್ರೀತಿಯ ಗೆಳೆಯನಾಗಿದ್ದವ. ಈಗ ನಿನ್ನ ಜೀವನದಲ್ಲಿ ಅನಾಮಿಕ..ಅದಿರಲಿ ಹೇಗಿದೀಯಾ? " ಎಂದು ಅನಘಾಳನ್ನು ನೋಡಿದ. ಅದೇ ಸ್ನಿಗ್ಧ ಸೌಂದರ್ಯ ಅವಳದು. ಮದುವೆಯಾಗಿದೆಯೆಂದು ಗೊತ್ತೇ ಆಗುವಂತಿರಲಿಲ್ಲ. " ಒನ್ ಸೆಕೆಂಡ್ " ಎಂದು ಅನಘಾ ಶಾರಿ..ಎಂದು ಕರೆದಳು. ಅಮ್ಮ ಯಾರದೋ ಬಳಿ ಮಾತನಾಡುತ್ತಿದ್ದಾರೆಂದು ಶಾರಿ ಕರೆದ ತಕ್ಷಣ ಬಂದು ನಿಂತಳು.  " ಚೇತನ್ ಫ್ರೀ ಇದೀಯಾ? " ಅನಘಾ ಗಂಭೀರವಾಗಿ ಕೇಳಿದಳು.  " ಹಾ. ಇಲ್ಲೇ ಎಲ್ಲಾದರೂ ಕುಳಿತು ಮಾತನಾಡೋಣ. ನಿನ್ನ ನೋಡದೇ ಹದಿನೈದು ವಷ೯ಗಳೇ ಆಯ್ತು. " ಎಂದ. ಮೂವರೂ ಒಂದು ಟೇಬಲ್ ಮುಂದೆ ಕುಳಿತರು. ಎರಡು ನಿಮಿಷ ನೀರವ ಮೌನ. ಅನಘಾಳೇ ಮಾತಿಗಾರಂಭಿಸಿದಳು. " ಚೇತನ್ ನನ್ನ ಜೀವನದ ಕಥೆ ಆಮೇಲೆ ಹೇಳುತ್ತೇನೆ. ಈಗ ನೀನು ಹದಿನೈದು ವಷ೯ ಕಳೆದ ವಿಷಯ ತಿಳಿಸು. " ಎಂದಳು.  ಚೇತನ್ ಮೆಲುವಾಗಿ ನಿಟ್ಟುಸಿರು ಬಿಟ್ಟು ಹೇಳಲಾರಂಭಿಸಿದ...
         ನಿನ್ನನ್ನು ಎಕ್ಸಾಂ ದಿನ ನೋಡಿದ್ದಷ್ಟೆ. ಆಮೇಲೆ ಪತ್ತೆಯೇ ಇಲ್ಲ. ಕಾಲ್ ಮಾಡಿದರೆ ಹೋಗ್ತಾ ಇರಲಿಲ್ಲ. ನಿನ್ನ ಫ್ರೆಂಡ್ಸ್ ಹತ್ರ ಕೇಳ್ದೆ. ಅವರು ಗೊತ್ತಿಲ್ಲ, ಆದರೆ ಅವಳು ಅಮೇರಿಕಾಗೆ ಹೋಗ್ತಿದಾಳೆ. ಇನ್ನು ನಿನಗೆ ಸಿಗೋದು ಕನಸಿನ ಮಾತು. ಅವಳನ್ನು ಮರೆತುಬಿಡೋದು ಒಳ್ಳೆಯದು ಅಂದ್ರು. ಒಂದು ಸಲ ಎದೆಬಡಿತ ನಿಂತಂತಾಯ್ತು. ಭಾರವಾದ ಹೆಜ್ಜೆ ಹಾಕುತ್ತಾ ಮರಳಿ ಮನೆಗೆ ಬಂದೆ. ಎದೆಗೂಡಿನಲ್ಲಿ ಜ್ವಾಲಾಮುಖಿಯೊಂದು ಸಿಡಿದಂತಾಗಿತ್ತು. ಒಂದೆರಡು ದಿನ ಕುಳಿತು ಯೋಚಿಸಿದೆ. ಸುಮ್ಮನೆ ನೆನಪುಗಳ ಸುಳಿಯಲ್ಲಿ ಬೇಯುತ್ತಾ ಬೇಸರದ ಜೀವನ ನಡೆಸುವುದರ ಬದಲು ಏನಾದರೊಂದು ಸಾಧಿಸಬೇಕೆಂಬ ಬಯಕೆ ಮೊಟ್ಟಮೊದಲ ಬಾರಿ ಮೂಡಿದ್ದು ಆಗಲೇ ಅನಘಾ.... ಕಷ್ಟಪಟ್ಟು ಒಂದು ಕಂಪನಿಯಲ್ಲಿ ಕೆಲಸ ಪಡೆದೆ. ದುಡ್ಡಿನ ಬೆಲೆ ಏನೆಂದು ಅರಿವಾಯಿತು. ಒಂದೊಂದು ರೂಪಾಯನ್ನೂ ಉಳಿಸಿ, ಕೆಲವು ಶೇರ್ ಗಳನ್ನು ಖರೀದಿಸಿದೆ. ಹೆಚ್ಚು ಬೆಲೆಗೆ ಮಾರಿದೆ. ಸ್ಟಾಕ್ ಎಕ್ಸಛೇಂಜ್ ನ ವಹಿವಾಟುಗಳ ಬಗ್ಗೆ ಅರಿತೆ. ಒಳ್ಳೆಯ ಲಾಭ ಬರಲಾರಂಭಿಸಿತು. ಜೊತೆಗೆ ಕಷ್ಟಪಟ್ಟು ದುಡಿದು ಪ್ರಮೋಷನ್ ಗಿಟ್ಟಿಸಿಕೊಂಡೆ. ಬಂದ ಹಣವನ್ನೆಲ್ಲ ಜೋಪಾನವಾಗಿ ಹೆಚ್ಚಾಗಿಸುತ್ತ ನಡೆದೆ. ಹತ್ತು ವಷ೯ದಲ್ಲಿ ಆ ಹಣ ಸುಮಾರಾಗಿತ್ತು. ಬ್ಯಾಂಕಿನಿಂದ ಲೋನ್ ಪಡೆದು ನನ್ನದೇ ಆದ ಒಂದು ಕಂಪನಿ ಆರಂಭಿಸಿದೆ. ಐದು ವಷ೯ಗಳಲ್ಲಿ ಲಾಭ  ಹೆಚ್ಚಾಗುತ್ತಿದೆ. ತಂದೆ ತಾಯಿಗೂ ಇದರಿಂದ ಸಂತೋಷವಾಗಿದೆ ಎಂದು ಚೇತನ್ ಮಾತು ಮುಗಿಸಿದ.
         " ಚೇತನ್ ಮದುವೆ? " ಅನಘಾ ಪ್ರಶ್ನಿಸಿದಳು.
     ಅನಘಾ ನಾನು ಜೀವನದಲ್ಲಿ ಪ್ರೀತಿಸಿದ ಮೊದಲ ಹುಡುಗಿ ನೀನು. ಕೊನೆಯವಳೂ ನೀನೆ. ಮದುವೆಯಾದರೆ ನಿನ್ನೊಂದಿಗೇ ಎಂದು ಕನಸು ಕಂಡವನು ನಾನು. ಕಳೆದ ಹದಿನೈದು ವಷ೯ಗಳಲ್ಲಿ ಯಾವ ಹುಡುಗಿಯನ್ನೂ ಇಷ್ಟಪಟ್ಟಿಲ್ಲ. ಹಾಗಾಗಿ  ಮದುವೆಯಾಗಿಲ್ಲ.
    ಚೇತನ್ ನ ಕೊನೆಯ ಮಾತು ಅನಘಾಳ ಹೃದಯಕ್ಕೆ ನಾಟಿತು. ಅದರ ಫಲವಾಗಿ ಕಣ್ಣಿಂದ ಎರಡು ಹನಿಗಳು ತನಗರಿವಿಲ್ಲದಂತೆಯೇ ಜಾರಿತು. ಅದು ಚೇತನ್ ನ ಅರಿವಿಗೆ ಬರುವ ಮುನ್ನ ಕಣ್ಣೊರೆಸಿಕೊಂಡು ಮುಗುಳ್ನಕ್ಕಳು. ಆತನೇ ಕೇಳುವ ಮುನ್ನ ಹೇಳುವುದು ಒಳಿತು ಎಂದು ಮಾತಿಗಾರಂಭಿಸಿದಳು.
            ಎಕ್ಸಾಂ ಮುಗಿದ ಮೇಲೆ ನಿನ್ನ ಭೇಟಿಯಾಗೋಣವೆಂದಿದ್ದೆ. ಆದರೆ ಊರಿನಲ್ಲಿ ತಾತ ತೀರಿಕೊಂಡ ವಿಷಯ ತಿಳಿಯಿತು. ಅಲ್ಲಿಗೆ ಹೋದೆವು. ಅದು ಸಂಪೂಣ೯ ಹಳ್ಳಿ. ಮೊಬೈಲ್ ಗೆ ಸಿಗ್ನಲ್ ಕೂಡ ಸಿಗುವುದಿಲ್ಲ ಅಲ್ಲಿ. ಬೆಂಗಳೂರಿಗೆ ಮರಳಿ ಬಂದ ಮರುದಿನವೇ ನನಗೆ ಅಮೇರಿಕಾಗೆ ಟಿಕೆಟ್ ಬುಕ್ ಆಗಿತ್ತು. ನಾನು ಹೊರಡಲೇಬೇಕಿತ್ತು. ಗಡಿಬಿಡಿಯಲ್ಲಿ ನನ್ನ ಮೊಬೈಲ್ ಇಲ್ಲೇ ಬಿಟ್ಟುಹೋಗಿತ್ತು. ಅಲ್ಲಿಗೆ ಹೋದ ಆರಂಭದಲ್ಲಿ ಒಂದು ವಾರ ನಿನ್ನದೇ ನೆನಪಾಗುತ್ತಿತ್ತು. ನಿನಗೆ ಮೋಸ ಮಾಡಿದೆ ಎಂಬ ಅಪರಾಧೀಭಾವ ಕಾಡುತ್ತಿತ್ತು. ರಾತ್ರಿಯಿಡೀ ಕುಳಿತು ಅಳುತ್ತಿದ್ದೆ ಚೇತನ್. ಇದು ಸುಳ್ಳಲ್ಲ.... ಅನಘಾಳ ಕಣ್ಣಲ್ಲಿ ನೀರು ತುಂಬಿತ್ತು. ಆದರೂ ಅನುಕಂಪ ಗಿಟ್ಟಿಸಿಕೊಳ್ಳುವುದು ಅವಳಿಗೆ ಬೇಕಿರಲಿಲ್ಲ. ಅದಕ್ಕಾಗಿ ಗಂಭೀರವಾಗಿ ಮಾತು ಮುಂದುವರಿಸಿದಳು. ಆಮೇಲೆ ನಾನು ನನ್ನ ಓದಿನಲ್ಲಿ ಬ್ಯುಸಿಯಾದೆ. ಜೊತೆಗೆ ನನ್ನಿಷ್ಟದ ಸಂಗೀತವನ್ನು ಅಲ್ಲಿರುವ ಹೊಸ ಗೆಳೆಯ ಗೆಳತಿಯರಿಗೆ ಕಲಿಸಲು ಯತ್ನಿಸಿದೆ. ಚೆನ್ನಾಗಿ ಮಾತನಾಡುತ್ತೀಯ ಅಂತ ಎಲ್ಲರೂ ಕಾರ್ಯಕ್ರಮದ ನಿರೂಪಣೆಗೆ ಕರೆಯುತ್ತಿದ್ದರು. ಚಿಕ್ಕದರಿಂದ ಆರಂಭವಾಗಿ ಈಗ ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೂ ನಾನೊಬ್ಬಳು ನಿರೂಪಕಿ. ಅಷ್ಟರಲ್ಲಿಯೇ ಅಪ್ಪ ಅಮ್ಮ ಒಂದು ಹುಡುಗನನ್ನು ನೋಡಿ ಮದುವೆಗೆ ಗೊತ್ತು ಮಾಡಿದರು. ನನಗೂ ಪ್ರದೀಪ್ ನನ್ನು ನೋಡಿದ ಮೇಲೆ ಇಲ್ಲವೆನ್ನಲಾಗಲಿಲ್ಲ. ಮದುವೆಯಾದೆ. ನಮ್ಮಿಬ್ಬರ ದಾಂಪತ್ಯದ ಕುರುಹೇ ಈ ಶಾರಿ ಎಂದು ಅನಘಾ ಮಗಳಿಗೆ ಮುತ್ತಿಟ್ಟಳು.
     
   ಚೇತನ್ ಗೆ ಮಾತಾಡಲು ಇನ್ನೇನೂ ಉಳಿದಿರಲಿಲ್ಲ. ಅನಘಾ ಅವನಿಗೀಗ ಗಗನಕುಸುಮವಾಗಿದ್ದಳು. ಅನಘಾಳೇ ಮಾತು ಮುಂದುವರಿಸಿದಳು.
    ಚೇತನ್ ಈಗ ನಿನ್ನ ಜೀವನದ ಗಮ್ಯ ಬೇರೆ. ನನ್ನ ಜೀವನದ ಗಮ್ಯ ಬೇರೆ. ಆದರೂ ಜೀವನವೆಂಬ ಪುಸ್ತಕದಲ್ಲಿ ನಿನ್ನೊಂದಿಗೆ ಕಳೆದ ಪುಟಗಳು ನೆನಪಿನ ಪೆಟ್ಟಿಗೆಯಲ್ಲಿ ಜೋಪಾನವಾಗಿರುತ್ತವೆ. ಪುಣ್ಯವಿದ್ದರೆ ಮುಂದೊಂದು ದಿನ ಮತ್ತೆ ಸಿಗೋಣ. ಈಗ ಲೇಟಾಯ್ತು. ಬಾಯ್. ಎಂದಳು. ಶಾರಿ ಅಂಕಲ್ ಗೆ ಬಾಯ್ ಮಾಡು ಎಂದಳು. ಶಾರಿ ಮುದ್ದಾಗಿ ಬಾಯ್ ಅಂಕಲ್ ಎಂದಳು. ಚೇತನ್ ಶಾರಿಯ ಹಣೆಗೆ ಮುತ್ತನಿಟ್ಟು ‘ ಬಾಯ್ ‘ ಎಂದ. ಅನಘಾ ಮಗಳೊಂದಿಗೆ ಹೊರಟಳು. ಚೇತನ್ ಆಕೆ ಹೋದ ದಾರಿಯನ್ನೇ ನೋಡುತ್ತ ನಿಂತ.

-ಕುಮಾರಿ ರಂಜನಾ ಆರ್ ಭಟ್
Photo Credit: Pinterest


Author image
About the Author
ಹೆಸರು:ರಂಜನಾ ಆರ್ ಭಟ್.
▪ಕುಮಾರಿ ರಂಜನಾ ಆರ್ ಭಟ್ ಇವರು ಚಿಕ್ಕ ಪ್ರಾಯದಲ್ಲೇ ಸಾಹಿತ್ಯದತ್ತ ಆಕರ್ಷಿತರಾದವರು. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಮಾಡಿದ ಇವರು ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ವಿದ್ಯಾಸಂಸ್ಥೆಯಿಂದ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡರು. ಪ್ರಸ್ತುತ ಬೆಂಗಳೂರಿನಲ್ಲಿ ಬಿ.ಕಾಂ ಪದವಿ ವಿದ್ಯಾಭ್ಯಾಸದೊಂದಿಗೆ ಸಿ.ಎ(CA) ಕಲಿಕೆಯನ್ನು ಮಾಡುತ್ತಿದ್ದಾರೆ.
ಕವಿತೆ, ಕಥೆ, ಲೇಖನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಇದುವರೆಗೆ "ಮಕ್ಕಳ ಸಾಹಿತ್ಯ"(ಕಥಾ-ಕವನ ಸಂಕಲನ) ಹಾಗೂ "ಹೊಂಗಿರಣ"(ಕವನ ಸಂಕಲನ) ವನ್ನು ಹೊರತಂದಿದ್ದಾರೆ.
ವಿವಿಧ ಕವಿಗೋಷ್ಟಿಗಳಲ್ಲಿ ತನ್ನ ಕವನ ವಾಚನವನ್ನು ಮಾಡಿದ್ದು "ನಮ್ಮ ಕನ್ನಡ ತಂಡ" ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಬಹುಮಾನವನ್ನು ಪಡೆದಿದ್ದಾರೆ. ಅಲ್ಲದೆ ವಿಜಯ ನೆಕ್ಸ್ಟ್, ಸಂಪದ ಸಾಲು ಮಾಸ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನೂ ಮಾಡಿ ತನ್ನ ಸಾಹಿತ್ಯ ಯಾತ್ರಗೆ ಪುಟಗಳನ್ನು ಜೋಡಿಸುತ್ತಿದ್ದಾರೆ...
ಅವರ ಕಥೆ, ಕವಿತೆ, ಲೇಖನಗಳು ನಮ್ಮ ಜಾಲದಲ್ಲಿ ಪ್ರಕಟವಾಗುತ್ತಿದ್ದು ಸಾಹಿತ್ಯಾಸಕ್ತರು ಓದಬಹುದು.

Please share and support me

5 comments:

  1. ಚೆನ್ನಾಗಿದೆ.

    ReplyDelete
    Replies
    1. ಬರಹಗಾರರನ್ನು ಪ್ರೋತ್ಸಾಹಿಸಿದುದಕ್ಕೆ ಧನ್ಯವಾದಗಳು

      Delete
  2. ಅಭಿನಂದನೆಗಳು raanzz :) ಹೊಸ ಪಯಣಕ್ಕೆ ಶುಭ ಹಾರೈಕೆಗಳು :) :) :)

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.