ಕೊನೆಯದಾಗಿ ಮುದ್ದಿಸಲೇ
ಓ ನನ್ನ ಪ್ರೇಯಸಿಯೇ
ಬಿಡುಗಡೆಯ ನೋವಿದನು
ತಾಳಲಾರೆ
ಮುಂಜಾನೆ ನಾ ಬರಲು
ನಸುನಗೆಯ ಲಜ್ಜೆಯಲಿ
ಪ್ರೇಮದಾರತಿ ಬೆಳಗಿದವಳು
ನೀನಲ್ಲವೇ
ಹಗಲಿನಲಿ ಜೊತೆಯಾದೆ
ನೀ ನನ್ನ ಪಯಣಕ್ಕೆ
ಬಿಟ್ಟು ತೆರಳಲಾರದೆ
ತೊಳಲುತಿರುವೆ
ನನ್ನ ಮನಸನೇ ನೀ
ಸೂರೆಗೊಂಡೆ
ನನ್ನ ಕನಸಿನಲೇ ನೀ
ಸೆರೆಯಾಗಿ ನಿಂತೇ
ನಿನ್ನ ನುಣ್ಗದಪಿನಲಿ
ನಾನಿಟ್ಟ ಹೂ ಮುತ್ತು
ಈಗಲೂ ಮಿರುಗುತಿದೆ
ರತ್ನದಂತೆ
ಇರುಳ ಸೆರಗದು
ಕೈ ಚಾಚಿ ಕರೆಯುತಿದೆ
ಸೃಷ್ಟಿ ಲೀಲೆಗೆ ನಾ
ಶರಣಾಗಲೇ
ನಿಶೆಯ ಸೆರಗನು ಸರಿಸಿ
ಉಷೆಯ ಕಿಟಿಕಿಯ ತೆರೆದು
ನಾಳೆಯಾ ನಸುಕಲೇ
ನಾ ಓಡಿ ಬರುವೆ
ಉಸಿರಲಿ ಉಸಿರಿಟ್ಟು
ಕಾದಿರುವೆ ನಾನೆಂದು
ನೀನುಸುರಿದ ಮಾತುಗಳ
ಮರೆಯಲಾರೆ
ಯಾವುದೋ ಆತಂಕ
ಕಾಡುತಿದೆ ಪ್ರಿಯ ಗೆಳತಿ
ನಾಳೆಯ ದಿನ ನಮಗೆ
ದೊರಕಬಹುದೇ
ಹೊಂಗಡಲ ಅಲೆಗಳನು
ಎಣಿಸುತಲಿ ನೀನಿರಲು
ನಾಳೆಯೇ ನಿನ್ನ
ಬಳಿಗೋಡಿ ಬರುವೆ
ನಿಯತಿಯನು ಮೀರಲು
ಸಾಧ್ಯವೇ ನಮಗೆಂದೂ
ವಿಧಿಯಾಟವದನು
ದಾಟಲಾರೆ
ನಿನ್ನ ಮುದ್ದು ಮೊಗ ಕಾಣ-
ಬಯಸುತ ನಾಳೆ
ಬೇಗನೆ ಓಡೋಡಿ
ನಾ ಬಂದರೂ
ನೀನಲ್ಲಿ ಇರಲಾರೆ
ಎಂಬ ಸತ್ಯವನಿಂದು
ಉಸುರಲಾರದೆ ಕಂಬನಿಯ
ಸುರಿಸುವೆನು ನಾನು
ಹೋಗಿ ಬರಲೇ ನಲ್ಲೆ
ಕಾದಿರು ನೀನಿಲ್ಲೇ
ನಿನಗಿದೋ ನನ್ನ
ಶುಭ ವಿದಾಯ....
-ಪ್ರಸನ್ನಾ ವಿ ಚೆಕ್ಕೆಮನೆ
 Photo Credit: fortwhyte
 


 
									 
 
 
 
 
Very nice, vidaaya nu ishtu sogasaagi helidira, well done mam
ReplyDeleteThank you for Supporting our Writer...
Deleteಸೊಗಸಾದ ಕವನ.
ReplyDeleteThank you for supporting our Writer...
Delete