ಬಿಡುಗಡೆಯ ಕವಿತೆ


ಹಾಡುವೆ ಬಡಿದೆಬ್ಬಿಸೆ ಬಿಡುಗಡೆಯ
ಬೇಡಿಯ ಕವಿತೆ
ಪೊಡಮಡುವೆ ನಿನ್ನಡಿಗೆ ವಿಖ್ಯಾತೆ
ಓ ಭಾರತ ಮಾತೆ
ಸ್ವಯಮೇವ ಮೃಗೇಂದ್ರತಾ ಓ ಭಾರತದ ಪೌರುಷ
ಇಂದು ನಿರ್ಭಂಧದ ಪರ್ವವು ಚಿಮ್ಮಿದೆ ಅಮಿತ ಹರುಷ...

ಉತ್ತರೆತ್ತರದಿ ಬಿತ್ತರಕೆ ಹಬ್ಬಿದೆ ತುಹಿನಗಿರಿ
ಸಾಲು ಸಾಲು...
ಮಕುಟಮಣಿ ಕಾಶ್ಮೀರವು ಅರುಣಾಚಲವು,
ನಮ್ಮ ಪಾಲು...
ಎಡಬಲ ತಲದಲಿ ನೀಲ ನೀಳ ಆಳ
ಮೊರೆಯುವ ಕಡಲು...
ಕೇಳಿದೆ ಸಂಕಲೆಯ ಸಂಕಟವನಳಿಸೆ
ಪ್ರಾಣ ತೆತ್ತ ಹೆತ್ತವರ ಅಳಲು...

ಯೋಧರ ರುಧಿರತೈಲದಲಿ ಸ್ವಾತಂತ್ರ್ಯ
ಜ್ಯೋತಿ ಬೆಳಗಿದೆ
ಸಾಧಕರ ನರಗಳ ಎಳೆದು ಹೊಸೆದು
ಬತ್ತಿಯಾಗಿ ಉರಿದಿದೆ
ಯಜ್ಞದೀಕ್ಷೆಯಲಿ ನೆತ್ತರೊತ್ತರಿಸಿ ಮಣ್ಣಲ್ಲಿ ಬೆರೆತಿದೆ
ಶಸ್ತ್ರ ಶಾಸ್ತ್ರಗಳು ನಮ್ಮ ಸೂತ್ರಗಳು
ಭಾರತ ಮೆರೆದಿದೆ

ನಮ್ಮ ನೆಲ ಜಲ ಉಸಿರ ಕಸಿಯೆ, ಕಾದಿಹರು ಭೂದಾಹಿಗಳು...
ಗಡಿಯಲ್ಲಿ ಅಡಿಗಡಿಗೆ, ಗಟ್ಟಿಯಾಗಲಿ
ನಮ್ಮ ರಟ್ಟೆತೋಳು
ಏನೇ ಇರಲಿ ಬರಲಿ, ನಾವು ವಿಶ್ವನಾಯಕರಾಗಬೇಕು...
ಎದೆ ಮುಟ್ಟಿ ತೋಳ್ತಟ್ಟಿ ವೈರಿಗಳ ಅಟ್ಟಾಡಿಸಿ,
ಹುಡಿ ಹುಡಿಗಟ್ಟಿ ನಾವು ಶಿರವೆತ್ತಿ ನಿಂತರೆ ಸಾಕು...

                                 -ಗುಣಾಜೆ ರಾಮಚಂದ್ರ ಭಟ್

Photo Credit: webdunia

ದಿನಾಂಕ 15-08-2017ರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳೂರಿನ ರಾಧಾಕೃಷ್ಣ ಸಭಾಂಗಣದಲ್ಲಿ ಜರಗಿದ ದೇಶಪ್ರೇಮ-2017ರ ಕವಿಗೋಷ್ಠಿಯಲ್ಲಿ ಶ್ರೀ ಗುಣಾಜೆ ರಾಮಚಂದ್ರ ಭಟ್ ಇವರು ವಾಚಿಸಿದ ಕವಿತೆ "ಬಿಡುಗಡೆಯ ಕವಿತೆ"...


Author image
About the Author

ಹೆಸರು : ಶ್ರೀ ಗುಣಾಜೆ ರಾಮಚಂದ್ರ ಭಟ್.
▪ಶ್ರೀಯುತರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಈಗ ಸಾಹಿತ್ಯದೊಂದಿಗೆ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
ಅದಲ್ಲದೆ ಚುಟುಕ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗಿರುವ ಇವರು 2014 ರಲ್ಲಿ "ಎದೆಯ ದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದರ 300 ಪ್ರತಿಗಳನ್ನು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯು ಆಯ್ಕೆ ಮಾಡಿಕೊಂಡುದು ಇವರ ಹಿರಿಮೆಗೊಂದು ಗರಿ. ಅತ್ಯುತ್ತಮ ಶಿಕ್ಷಕರಾಗಿದ್ದ ಇವರು 2014ನೇ ಸಾಲಿನ ದಕ್ಷಿಣಕನ್ನಡ ಜಿಲ್ಲಾ ಮಟ್ಟದ "ಅತ್ಯುತ್ತಮ ಜಿಲ್ಲಾ ಶಿಕ್ಷಕ" ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಕವಿಗೊಷ್ಟಿಗಳಲ್ಲಿ ಭಾಗವಹಿಸಿರುವ ರಾಮಚಂದ್ರ ಭಟ್ಟರು ಕನ್ನಡ, ಹವಿಗನ್ನಡ ಹಾಗೂ ತುಳು ಭಾಷೆಗಳಲ್ಲಿ ತಮ್ಮದೇ ಶೈಲಿಯ ಸಾಹಿತ್ಯ ಸಿಂಚನವನ್ನು ಪಸರಿಸುತ್ತಿದ್ದಾರೆ.
ಇದೀಗ ನಮ್ಮ ಈ ಜಾಲದಲ್ಲಿ "ಗುಣಾಜೆ ಚಂದ್ರಮ" ಎಂಬ ಹೆಸರಿನಲ್ಲಿ ಅವರ ಚುಟುಕಗಳನ್ನು ನೀವು ಓದಬಹುದು...
ವಿಳಾಸ:
ಕವನ ಸದನ
ದೇರಳಕಟ್ಟೆ ಅಂಚೆ
ಬೆಲ್ಮ ಗ್ರಾಮ
ಮಂಗಳೂರು ತಾಲೂಕು
ದ.ಕ 575018
ದೂರವಾಣಿ : +919743902522

Please share and support me

1 comment:

  1. ನಾಗರಾಜ ಅಡಿಗ1/27/18, 7:49 AM

    ಮತ್ತೆ ಮತ್ತೆ ಓದಬೇಕೆನಿಸುವ ಕವನ,ಚುಟುಕುಗಳು.

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.