ಲೇಖ(ಕ)ನಿಗೊಂದು ನಮನ


         'ಗೆಳೆತನದ ಯಜ್ಞಕ್ಕೆ ತುಪ್ಪ...  ದ್ವೇಷದ ಬೆಂಕಿಗೆ ಬೆಣ್ಣೆ...' ತುಪ್ಪ ಹಾಗೂ ಬೆಣ್ಣೆ ಒಂದರ ಸ್ವರೂಪ ಮತ್ತೊಂದು; ಆದರೂ ಗುಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ.

        ಹೌದು... ಅವೆರಡೂ ಲೇಖನಿಯ ನವಿರಾದ ಸ್ನೇಹಿತರಾಗಬಹುದು. ನಿನ್ನ ಬಗ್ಗೆ ನೀನೇ ಬರೆಯ ಹೊರಟರೆ ಅಥವಾ ನಿನ್ನ ಬಗ್ಗೆ ಇನ್ನೊಬ್ಬರು ಒಳ್ಳೆಯದನ್ನು ಬರೆಯಲು ಹೊರಟರೆ ನೀನು ಗೆಳೆತನದ ಯಜ್ಞಕ್ಕೆ ತುಪ್ಪವಾಗುವೇ... ಅದೇ ರೀತಿ ನಿನ್ನ ಬಗ್ಗೆ ಬೇರೆಯವರು ಖಂಡಿಸಿ ಬರೆದರೆ ನೀನು ದ್ವೇಷದ ಬೆಂಕಿಗೆ ಬೆಣ್ಣೆ ಸವರುವೆ. ಬರೆಯುವವ ಯಾರಾದರೇನು? ಬರೆಯುವುದು ಲೇಖನಿಯ ಅಂದರೆ ನಿನ್ನ ಮೂಲಕವೇ ತಾನೆ? ಹೇಳುವವನು ಒಬ್ಬನಾದರೇನು, ಕೀರ್ತಿ ಪಸರಿಸುವಲ್ಲಿ ಲೇಖನಿಯ ಪಾತ್ರವೇ ಹೆಚ್ಚು ತಾನೇ?

          ಪ್ರಪಂಚದಲ್ಲಿಂದು ಖಡ್ಗ ಹಿಡಿದು ಯುದ್ಧಕ್ಕೆ ನಿಂತ ಕೈಗಳು ಕ್ರಾಂತಿಯನ್ನೇ ಮಾಡಿದ್ದರೂ ಸಹ ಖಡ್ಗ ಹಿಡಿದು ಯುದ್ಧಕ್ಕೆ ನಿಂತ ಕೈಯನ್ನು ಲೋಕಕ್ಕೆ ಪರಿಚಯಿಸಿದ್ದು ಲೇಖನಿ ಹಿಡಿದ ಕೈಗಳೇ ಹೊರತು ಖಡ್ಗ ಹಿಡಿದು ಕೈಚಳಕ ತೋರಿದ ಕೈಗಳಲ್ಲ. ಬಾಯಲ್ಲೇ ಪ್ರಚಾರವಾಗಬಹುದಾದ ವಿಷಯವಾದರೂ ಸಹ ಮುಂದಿನ ಪೀಳಿಗೆಗೆ ತಿಳಿಸಲು ಪುಟ್ಟ ಸಹಾಯ ಮಾಡಿ ದೊಡ್ಡ ಸುದ್ಧಿಯಾಗುವಂತೆ ಮಾಡಿದ್ದು ಲೇಖನಿಯೇ ಸರಿ!!!

          ಕಲಾವಿದನ(ಚಿತ್ರಕಾರನ) ಕುಂಚದಲ್ಲರಳುವ ವಿಷಯಕ್ಕೆ, ನೈಜತೆಗೆ ಜೀವ ತಂದೊಡ್ಡುವ ಲೇಖನಿಯ ವಿಧ ಒಂದಾದರೆ, ದೇಶದ ಆಗುಹೋಗುಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಲೇಖನಿ ಮಗದೊಂದು. ವಿದ್ಯಾರ್ಥಿಯ ಜ್ಞಾನ ಮಟ್ಟವನ್ನಳೆಯುವ ಪರೀಕ್ಷೆ ಎಂಬ ಪ್ರಯೋಗಕ್ಕೆ ಸಹಾಯ ಮಾಡುವ ಲೇಖನಿ ಮತ್ತೊಂದು... ಒಟ್ಟಿನಲ್ಲಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಒಬ್ಬನಿಂದ ಮತ್ತೊಬ್ಬ ಏನೇ ಪಡೆದುಕೊಂಡ್ಡದ್ದರ ಒಪ್ಪಿಗೆಗಾಗಿ ಅಥವಾ ಖಾತರಿಗಾಗಿ ಬೆರಳಚ್ಚಿನಷ್ಟೇ ಪ್ರಮುಖ ಸ್ಥಾನವನ್ನು ಹೊಂದಿರುವ ಸಹಿಯನ್ನು ತೆಗೆದುಕೊಳ್ಳಲು ಸಹಾಯ ಮಾಡುವುದು ಲೇಖನಿಯೇ ಸರಿ...

          ಕಾಲಘಟ್ಟದಲ್ಲಿ ಬದಲಾವಣೆ ಹೊಂದುವ ಪಾತ್ರವರ್ಗದ ಆಗುಹೋಗುಗಳನ್ನು ತಿಳಿಸುತ್ತಿದ್ದ ಪತ್ರಕ್ಕೆ ಬೆನ್ನೆಲುಬಾಗಿ ಬಂದ ಲೇಖನಿಯು ಇಂದು ಎಲ್ಲರ ಮನೆ ಮನದ ಬಂಧು ಲೇಖನಿ ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ, ಮಾರುದ್ದದ ಸುಃಖ-ದುಃಖ ಚೆಲ್ಲುವ ಲೇಖನಿಗೂ, ಒಂದು ದೇಶದ ಚಿತ್ರಣವನ್ನು ಕ್ಷಣ ಮಾತ್ರದ ಸಹಿಯಲ್ಲಿ ಬದಲಾಯಿಸುವ ಲೇಖನಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಎರಡೂ ಹೃದಯಕ್ಕೆ, ಜೀವಕ್ಕೆ ತಟ್ಟುವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

          ಇಂದು ಪ್ರಪಂಚದಲ್ಲಿ ಪ್ರತಿಯೊಂದು ವಸ್ತು ವಿಷಯಕ್ಕೆ ತನ್ನದೇ ಆದ ಸ್ಥಾನಮಾನ ಗೌರವ ಇದೆ. ಅಂತೆಯೇ, ಸರಿ ಇದ್ದರೆ ನಯವಾದ ಬರಹದಲ್ಲಿ, ಮಿಥ್ಯವಾದರೆ ಕೊಂಚ ಖಾರವಾದ ಬರಹದಲ್ಲಿ ತಿದ್ದಿ ತೀಡುವ, ದೇಶದ ಚಿತ್ರಣವನ್ನೇ ಬದಲಿಸುವ ತಾಕತ್ತಿರುವ, ಒಬ್ಬ ವ್ಯಕ್ತಿಯ ಭವಿಷ್ಯವನ್ನು ಅತ್ಯುತ್ತಮ ರೀತಿಯಲ್ಲಿ ಬೆಳಗಿಸುವ ಸಾಮರ್ಥ್ಯ ಇರುವ, ದೇಶದಲ್ಲಾಗುವ ಪ್ರತಿಯೊಂದು ಕೆಲಸದ ಹೊಸ ಸಂಚಯನಕ್ಕೆ ನಾಂದಿ ಹಾಡುವ ಓ ಲೇಖನಿಯೇ... ನಿನಗೆ ನನ್ನ ನಮನ.

-ಕುಮಾರಿ ಸಹನಾ ಪಿ ಎಸ್

Photo Credit: art-of-patient-care


Author image
About the Author
ಹೆಸರು:ಕುಮಾರಿ ಸಹನಾ ಪಿ ಎಸ್.
▪ಕುಮಾರಿ ಸಹನಾ ಪಿ ಎಸ್ ಇವರು ಎಳೆಯ ವಯಸ್ಸಿನಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡವರು. ಲೇಖನ, ನುಡಿಮುತ್ತು ಮುಂತಾದ ಬರಹಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿಯಾದ ಇವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಾಂಗವನ್ನು ಮಾಡುತ್ತಿದ್ದಾರೆ. ಉತ್ತಮ ಕ್ರೀಡಾಪಟುವಾದ ಇವರು ಜಿಲ್ಲಾ, ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಪಂದ್ಯಾಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಶ್ರೀ ಗಣರಾಜ ಕುಂಬ್ಳೆ ಇವರ ಬಳಿ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆಯನ್ನು ಕಲಿತು ಹಲವಾರು ತಾಳಮದ್ದಳೆ ಕೂಟಗಳಲ್ಲಿ ಅರ್ಥ ಹೇಳಿ ಸೈ ಎನಿಸಿಕೊಂಡಿದ್ದಾರೆ. ಮಂಗಳೂರು ಆಕಾಶವಾಣಿ, ಪುತ್ತೂರಿನ ಪಾಂಚಜನ್ಯ ರೇಡಿಯೋ ಚಾನೆಲ್ ನಲ್ಲಿ ಕಾರ್ಯಕ್ರಮಗಳನ್ನು ನೀಡಿ ತನ್ನ ಪ್ರತಿಭೆಯನ್ನು ಹೊರಚೆಲ್ಲಿದ್ದು 2012 ರಲ್ಲಿ ಸುಳ್ಯದಲ್ಲಿ ನಡೆದ ತಾಲ್ಲೂಕು ಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಭಿನಯಿಸಿ "ಅತ್ಯುತ್ತಮ ಅಭಿನೇತ್ರಿ" ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಮ್ಮ ಜಾಲತಾಣದಲ್ಲಿ ಇವರ ಬರಹಗಳನ್ನು ಓದಬಹುದು

Please share and support me

8 comments:

  1. one of the best article alla the best sahana

    ReplyDelete
  2. Dear Sahana, your efforts and talents are much appreciated. And we are happy to see our student to achieve and keep a bench mark. All the best.
    Krishna Prasad Nadsar
    Managing Director
    Aniketana Educational Trust Puttur.

    ReplyDelete
    Replies
    1. Thank you so much for your blessing support. She is a good writer. We will support her always.
      Thank you Krishna Prasad Sir...

      Delete
    2. Thank you sir...in becoming days I will put more efforts on my work.

      Delete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.