ಸ್ನೇಹಿತರೇ... ಉತ್ತರ ಕೊಡುವಿರಾ?


ದಿನಾಂಕ 05-08-2017ನೇ ರವಿವಾರದಂದು ಮಂಗಳೂರು ಆಕಾಶವಾಣಿಯ "ಯುವವಾಣಿ-ಸಾಹಿತ್ಯ ಸಂಜೆ" ಕಾರ್ಯಕ್ರಮದಲ್ಲಿ ಪ್ರಸಾರಗೊಂಡ ನನ್ನ ಸ್ವರಚಿತ ಕವನ ವಾಚನದಲ್ಲಿ ವಾಚಿಸಲ್ಪಟ್ಟ ಕವನ -
"ಸ್ನೇಹಿತರೇ... ಉತ್ತರ ಕೊಡುವಿರಾ?"

ಸಾಹಿತ್ಯ ಸಂಜೆ-ಕವನ ವಾಚನ: ಕವಿತೆ ೧

ರಚನೆ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು


ಸ್ನೇಹಿತರೇ... ನಿಮ್ಮಲ್ಲಿ ನನ್ನದೊಂದು ಪ್ರಶ್ನೆ...
ಉತ್ತರ ಕೊಡುವಿರಾ?

ಎಷ್ಟು ತಾಪವಿರಬಹುದು ಭುವಿಗರ್ಭದೊಳಗೆ?
ಸಹಿಸಿ ಸಹಿಸಿ ಜಂತುಗಳ ಪಾಪದ ಕಂತುಗಳನು...
ರಕ್ತದ ಮಡುವಿನಲ್ಲಿ ತೇಯ್ದ ಮಣ್ಣು ಕೆಂಪಾಗಿ
ಪಾದದಡಿಯಲ್ಲಿ ಭರವಸೆಯ ಕಣ್ಣನ್ನು ಕರಗಿಸಿ
ಬೇಯುತ್ತಿರುವ ಬೆವರಹನಿ ಮೈಸುಟ್ಟು ಹಾಕಿರೆ,
ಧಗಿಸುತ್ತಿದೆ ಜ್ವಾಲಾಮುಖಿ ವ್ಯಂಗ್ಯನೋಟದಲ್ಲಿ
ನಗುತ್ತಾ ಬೀಗುತ್ತಾ ಸಾಗುತಿಹ ಕಚ್ಚಾಟದಿಂದ
ಎಷ್ಟು ತಾಪವಿರಬಹುದು ಭುವಿಗರ್ಭದೊಳಗೆ?
ಸ್ನೇಹಿತರೇ... ಉತ್ತರ ಕೊಡುವಿರಾ?

ಕಡಿದು ಮರಗಿಡಬಳ್ಳಿಗಳ ಬುಡದಿಂದ ಬೇರನ್ನು
ತುಂಡರಿಸಿ ಋತುಮಾನಗಳ ಚಕ್ರಬಂಡಿಯನು
ಮಳೆಗಾಲ ಚಳಿಗಾಲ ಸೆಕೆಗಾಲ ಮರೆಯಾಗಿ
ಮಳೆಯಿಲ್ಲ ಧರೆಯಲ್ಲಿ ತಂಪಿನ ಸಹಿಯಿಲ್ಲ
ಸಿಹಿಯಿಲ್ಲ ಮರದಲ್ಲಿ ಪೈರು ಪಚ್ಚೆಗಳಿಲ್ಲ
ಬಿರುಕೊಡೆದ ನೆಲದೊಡೆಯ ಕೊರಳನಳಿಸಿ
ಹಸಿರಾರಿ ಉಸಿರೇರಿ ಬಸಿರೊಡೆದಿರಲು
ಎಷ್ಟು ತಾಪವಿರಬಹುದು ಭುವಿಗರ್ಭದೊಳಗೆ?
ಸ್ನೇಹಿತರೇ... ಉತ್ತರ ಕೊಡುವಿರಾ?

ಜಾತಿವೈರಾಣುಗಳ ಕಲುಶಿತ ನೆಲೆಯಲ್ಲಿ
ರೀತಿನೀತಿಗಳೆಲ್ಲಾ ಕೊಳೆದು ಗಂಧವ ಸಾರಿ
ಶ್ರೀಗಂಧವೂ ತನ್ನ ಪರಿಮಳವ ಕಳಕೊಂಡು
ದುರ್ಗಂಧ ಬೀರುತಿದೆ ಕೊಳಚೆ ಸೇರಿ...
ಮೂಢ ತೋರಣದೊಡನೆ ರಾಜಕಾರಣ ಬೆರೆತು
ಗಾಢಾಂಧಕಾರದಲಿ ಜನತೆ ಭಯವನೆ ಮರೆತು
ಧರ್ಮಾಂಧತೆಯಿಂದ ಜೀವ ಧರೆಗೊರಗುತಿರೆ
ಎಷ್ಟು ತಾಪವಿರಬಹುದು ಭುವಿಗರ್ಭದೊಳಗೆ?
ಸ್ನೇಹಿತರೇ... ಉತ್ತರ ಕೊಡುವಿರಾ?

ಪ್ರಾಣಿಪಕ್ಷಿಗಳನ್ನು ಹಿಚುಕಿ ಹಿಂಡುತ ಹಿಂಸೆ
ಗೂಡು ಬಂಧನದಲ್ಲಿ ಚೆಂದವನು ಕಾಣುತ್ತಾ
ಮತ್ತೆ ಕೆಲವೊಂದನ್ನು ಕತ್ತು ಕೊರೆಯುತಲಿಂದು
ಮಾರಣಾಂತಕರಾಗಿ ದಾನವರ ತೆರದಿ...
ಹಿಂಸೆಯೇ ಕಟುಕರಲ್ಲಿಂದು ಕಲೆತಿರಲಾಗಿ
ಕೋಟಿ ಸಂಖ್ಯೆಯ ಕಣ್ಣ ನೀರು ನೆಲದಲ್ಲಿ ಆರಿ
ಪೃಕೃತಿಯ ಸಮತೋಲನವೇ ಅಂತರ್ಮುಖಿಯಾಗಿರಲು
ಎಷ್ಟು ತಾಪವಿರಬಹುದು ಭುವಿಗರ್ಭದೊಳಗೆ?
ಸ್ನೇಹಿತರೇ... ಉತ್ತರ ಕೊಡುವಿರಾ?

ಸ್ವಾರ್ಥ ಆಲೋಚನೆಗಳಾಚೆ ವ್ಯರ್ಥ ಪ್ರಲಾಪದಡಿ
ಹಲವು ಜನಮನದುರ್ಗುಣಗಳಿಂದು ಬೆಳೆಯುತಿರೆ
ಪಾಪನಾಶಿನಿಯೂ ಪಾಪಕ್ಕೆ ಗುರಿಯಾಗುತಿಹಳು
ತಾಪವಾರಿಸುವಾಕೆಯೂ ತಪ್ತವಾಗಿಹಳು...
ಎಲ್ಲಿಹುದು ಶಾಂತಿ... ಸತ್ಯ ಧರ್ಮ ನೀತಿ...
ಎಲ್ಲಿಹುದು ನ್ಯಾಯ... ಅನ್ಯಾಯದೊಳಗೆ...
ಸುಪ್ತಗಾಮಿನಿಯಾಗಿ ಹರಿಯುತಿರೆ ನೋವಿನಲೆ
ಎಷ್ಟು ತಾಪವಿರಬಹುದು ಭುವಿಗರ್ಭದೊಳಗೆ?
ಸ್ನೇಹಿತರೇ... ಉತ್ತರ ಕೊಡುವಿರಾ?

                                                     -ಶ್ರೀಸುತ

ಆಕಾಶವಾಣಿ ಕಾರ್ಯಕ್ರಮದ ಧ್ವನಿಮುದ್ರಣವನ್ನು ಈ ಕೆಳಗೆ ನೀಡಲಾಗಿದೆ. ಕೇಳುಗರು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ.
ಯುವವಾಣಿ-ಸಾಹಿತ್ಯಸಂಜೆ (click here)




Please share and support me

2 comments:

  1. ಲಾಯ್ಕ್ ಬರದ್ದಿರ ಸೂಪರ್ ಅಯೀದು

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.